ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೂಳೆಬ್ಬಿಸಿದ ‘ಗೌರಿ’ ಚಿತ್ರದ ಹಾಡು: ನಿರ್ದೇಶಕ ಇಂದ್ರಜಿತ್‌ ಲಂಕೇಶ್

ಚಲನಚಿತ್ರ ನಿರ್ದೇಶಕ ಇಂದ್ರಜಿತ್‌ ಲಂಕೇಶ್ ಹೇಳಿಕೆ
Published 19 ಜೂನ್ 2024, 7:27 IST
Last Updated 19 ಜೂನ್ 2024, 7:27 IST
ಅಕ್ಷರ ಗಾತ್ರ

ಮಂಡ್ಯ: ‘ಗೌರಿ’ ಚಲನಚಿತ್ರದಲ್ಲಿ ಹಾಡುಗಳಲ್ಲೇ ಕತೆ ಹೇಳುವ ಪ್ರಯತ್ನ ಮಾಡಿದ್ದೇವೆ. ಈಗಾಗಲೇ ಎರಡು ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಕನ್ನಡ ಪ್ರತಿಭೆಗಳಾದ ಸಮರ್ಜಿತ್‌ ಲಂಕೇಶ್‌ ಮತ್ತು ಸಾನ್ಯಾ ಅಯ್ಯರ್‌ ನಾಯಕ–ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರ ಉತ್ತಮವಾಗಿ ಮೂಡಿಬಂದಿದೆ’ ಎಂದು ಚಲನಚಿತ್ರ ನಿರ್ದೇಶಕ ಇಂದ್ರಜಿತ್‌ ಲಂಕೇಶ್ ಹೇಳಿದರು. 

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ನನ್ನ ಅಕ್ಕ ಗೌರಿ ಮೇಲಿನ ಅಭಿಮಾನದಿಂದಾಗಿ ಸಿನಿಮಾಕ್ಕೆ ಈ ಹೆಸರು ಇಡಲಾಗಿದೆ. ಇದರಲ್ಲಿ ಗೌರಿಯ ಸೂಕ್ಷ್ಮ ಅಂಶಗಳನ್ನು ಅಳವಡಿಸಿದ್ದೇವೆಯೇ ಹೊರತು ಅವರ ಜೀವನ ಚರಿತ್ರೆಯಂತೂ ಖಂಡಿತಾ ಅಲ್ಲ ಎಂದು ಹೇಳಿದರು. 

ಗೌರಿ ಚಿತ್ರದಲ್ಲಿ ಯುವ ಪ್ರತಿಭೆ ಮತ್ತು ಅನುಭವಿ ನಟರನ್ನು ಒಳಗೊಂಡ 80ಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿದ್ದಾರೆ. ಮಂಡ್ಯ ಜಿಲ್ಲೆಯ ಪ್ರತಿಭೆಯೊಬ್ಬನನ್ನು ಚಿತ್ರದಲ್ಲಿ ಪರಿಚಯಿಸಲಾಗಿದ್ದು, ಆತನೇ ಚಿತ್ರದ ಸ್ಫೂರ್ತಿಯಾಗಿದ್ದಾನೆ. ಮುಂದಿನ ದಿನಗಳಲ್ಲಿ ಅವನಿಗೆ ಒಳ್ಳೆಯ ಭವಿಷ್ಯವಿದೆ. ಇದನ್ನು ಚಿತ್ರ ಬಿಡುಗಡೆಯಾದ ಮೇಲೆಯೇ ತಿಳಿಸುತ್ತೇನೆ ಎಂದರು.

ನಟಿ ಸಾನ್ಯಾ ಅಯ್ಯರ್ ಮಾತನಾಡಿ, ಮಂಡ್ಯಕ್ಕೂ ನನಗೂ ಉತ್ತಮವಾದ ನಂಟು ಇದೆ. ಇಲ್ಲೂ ನನ್ನ ಸ್ನೇಹಿತರು ಇದ್ದಾರೆ. ಸಾಕಷ್ಟು ನಿಷ್ಠೆ, ಪ್ರಾಮಾಣಿಕತೆ, ಬದ್ಧತೆಯಿಂದ ಕೆಲಸ ಮಾಡಿದ್ದೇವೆ. ನಿರ್ದೇಶಕ ಇಂದ್ರಜಿತ್ ಅವರು ಹೊಸ ಕಲಾವಿದರನ್ನು ಪರಿಚಯಿಸಿದ್ದು, ಅವರೀಗ ಉನ್ನತ ಸ್ಥಾನದಲ್ಲಿದ್ದಾರೆ. ಅದೇ ರೀತಿ ನನಗೂ ಒಂದು ಅವಕಾಶ ನೀಡಿದ್ದಾರೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದರು.

ನಾಯಕ ನಟ ಸಮರ್ಜಿತ್‌ ಲಂಕೇಶ್ ಮಾತನಾಡಿ, ‘ನಮ್ಮ ತಂದೆಯ ನಿರ್ದೆಶನದ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿರುವುದು ನನಗೆ ಖುಷಿ ನೀಡಿದೆ. ದೊಡ್ಡ ಸಿನಿಮಾ ಮಾಡಿದ್ದೇವೆ. ಸಾಕಷ್ಟು ಪ್ರಯತ್ನದಿಂದ ಉತ್ತಮ ಚಿತ್ರವಾಗಿ ಮೂಡಿ ಬಂದಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT