ಮಂಗಳವಾರ, ನವೆಂಬರ್ 19, 2019
23 °C
ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿಕೆ

ಬಿಜೆಪಿ ಬೆಂಬಲಿಸುವ ವಿಚಾರ ಅಲ್ಲಗಳೆಯಲಾಗದು: ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ

Published:
Updated:

ಶ್ರೀರಂಗಪಟ್ಟಣ: ಸದ್ಯದ ಪರಿಸ್ಥಿತಿಯಲ್ಲಿ ಯಾರಿಗೂ ಚುನಾವಣೆ ಬೇಡವಾದ್ದರಿಂದ ರಾಜ್ಯದಲ್ಲಿರುವ ಸರ್ಕಾರ ಉಳಿಸಲು ಜೆಡಿಎಸ್‌ ಪಕ್ಷ ಆಡಳಿತಾರೂಢ ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎಂದು ಜೆಡಿಎಸ್‌ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.

ತಾಲ್ಲೂಕಿನ ವಿವಿಧೆಡೆ ಸೋಮವಾರ ರಸ್ತೆ, ಪ್ರಯಾಣಿಕರ ತಂಗುದಾಣ, ಚರಂಡಿ, ಕುಡಿಯುವ ನೀರಿನ ಟ್ಯಾಂಕ್‌, ಅಂಗನವಾಡಿ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ‌

ಪ್ರವಾಹ ಪರಿಸ್ಥಿತಿಯಿಂದ ಜನರು ದಿಕ್ಕೆಟ್ಟಿದ್ದಾರೆ. ಅವರಿಗೆ ನೆರವಾಗುವುದು ಸರ್ಕಾರದ ಮುಂದಿರುವ ಆದ್ಯತೆಯ ಕೆಲಸ. ಹಾಗಾಗಿ ಈಗಿನ ಸರ್ಕಾರ ಮುಂದುವರಿಯಬೇಕು. ಸಂದರ್ಭ ಬಂದರೆ ಬಿಜೆಪಿಗೆ ಜೆಡಿಎಸ್‌ ಬೆಂಬಲವಾಗಿ ನಿಲ್ಲಬೇಕಾಗುತ್ತದೆ. ರಾಜಕಾರಣದಲ್ಲಿ ಎಲ್ಲ ಸಾಧ್ಯತೆಗಳೂ ಉಂಟು’ ಎಂದು ತಿಳಿಸಿದರು.

’ಟಿಪ್ಪು ಸುಲ್ತಾನ್‌ ಪಠ್ಯ ತೆಗೆಯುವ ಸರ್ಕಾರದ ನಿರ್ಧಾರ ರಾಜಕೀಯ ಪ್ರೇರಿತ. ರಾಜಕೀಯ ಲಾಭದ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲು ಮುಂದಾದಂತೆ ಕಾಣುತ್ತಿದೆ. ಟಿಪ್ಪು ಮಹಾನ್ ದೇಶ ಭಕ್ತ, ಸ್ವಾತಂತ್ರ್ಯ ಹೋರಾಟಗಾರ. ನಾಡಿನ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುರುವ ರಾಜ. ರಾಜಪ್ರಭುತ್ವದಲ್ಲಿ ಸರಿ, ತಪ್ಪು ಎನ್ನಬಹುದಾದ ಐತಿಹಾಸಿ ಘಟನೆಗಳು ನಡೆದಿರುತ್ತವೆ. ಅವುಗಳನ್ನು ಹಾಗೇ ನೋಡಬೇಕು. ಸರ್ಕಾರ ಟಿಪ್ಪು ಬಗೆಗಿನ ಪಠ್ಯವನ್ನು ತೆಗೆಯುವ ಪ್ರಸ್ತಾಪದಿಂದ ಹಿಂದೆ ಸರಿಯಬೇಕು’ ಎಂದು ಅವರು ಒತ್ತಾಯಿಸಿದರು.
’ಜಿಲ್ಲೆಯ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕಬ್ಬು ಸರಬರಾಜು ಮಾಡಿದ ಬಾಡಿಗೆ ಹಣ ಕೊಡುವುದಾಗಿ ಸಚಿವ ಅಶೋಕ್‌ ಭರವಸೆ ನೀಡಿದ್ದರು. ಅವರು ತಮ್ಮ ಮಾತಿನಂತೆ ನಡೆದುಕೊಳ್ಳಬೇಕು. ಉಳಿದಿರುವ ಕಬ್ಬನ್ನು ಕಾರ್ಖಾನೆಗಳಿಗೆ ಸಾಗಿಸಲು ತಕ್ಷಣ ಮುಂದಾಗಬೇಕು’ ಎಂದು ಅವರು ಆಗ್ರಹಿಸಿದರು.

ಕಾಮಗಾರಿಗಳಿಗೆ ಚಾಲನೆ: ತಾಲ್ಲೂಕಿನ ಮೊಗರಹಳ್ಳಿ ₹1 ಕೋಟಿ ವೆಚ್ಚದಲ್ಲಿ ರಸ್ತೆ ಹಾಗೂ ಕುಡಿಯುವ ನೀರಿನ ಟ್ಯಾಂಕ್‌, ಪಿ. ಹೊಸಹಳ್ಳಿಯಲ್ಲಿ ರಸ್ತೆ ನಿರ್ಮಾಣ, ಪಾಲಹಳ್ಳಿಯಲ್ಲಿ ರಸ್ತೆ ಮತ್ತು ಅಂಗನವಾಡಿ ಕಟ್ಟಡ ನಿರ್ಮಾಣ, ಶ್ರೀರಂಗಪಟಟ್ಣದಲ್ಲಿ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣ, ಕಿರಂಗೂರಿನಲ್ಲಿ ಪ್ರಯಾಣಿಕರ ತಂಗುದಾಣ, ರಾಂಪುರದಲ್ಲಿ ರಸ್ತೆ ಹಾಗೂ ಪ್ರಯಾಣಿಕರ ತಂಗುದಾಣ, ಲಾಲಿಪಾಳ್ಯ ಹಾಗೂ ಅಚ್ಚಪ್ಪನಕೊಪ್ಪಲು ಗ್ರಾಮದಲ್ಲಿ ಪ್ರಯಾಣಿಕರ ತಂಗುದಾಣ ಕಾಮಗಾರಿಗೆ ರವೀಂದ್ರ ಶ್ರೀಕಂಠಯ್ಯ ಭೂಮಿ ಪೂಜೆ ನೆರವೇರಿಸಿದರು.

ಹೊಸಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸವಿತಾ ಲೋಕೇಶ್‌, ತಾ.ಪಂ. ಸದಸ್ಯೆ ಸರಸ್ವತಿ, ಪಿಡಿಒ ಚೆಂದಿಲ್‌, ಗ್ರಾ.ಪಂ. ಮಾಜಿ ಅಧ್ಯಕ್ಷ ವಾಸು, ಪಾಲಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್‌ ತಾಲ್ಲೂಕು ಅಧ್ಯಕ್ಷ ಮುಕುಂದ, ಗ್ರಾ.ಪಂ. ಅಧ್ಯಕ್ಷ ಸುನಿಲ್‌ಕುಮಾರ್‌, ನಾರಾಯಣಪ್ಪ, ನಾಗರಾಜು, ಟೆಂಪೋ ಪ್ರಕಾಶ್‌; ರಾಂಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಬಿ.ಎಸ್‌. ವಾಸು, ಶ್ರೀಕಂಠು, ನಿಜಗುಣ, ಡಾ.ನಾಗರಾಜು, ಕಿರಂಗೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹೇಂದ್ರ, ಅನಿಲ್‌ಕುಮಾರ್‌ ಇತರರು ಇದ್ದರು.

ಪ್ರತಿಕ್ರಿಯಿಸಿ (+)