ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸೆಗೆ ಸ್ಪಂದಿಸುತ್ತಿರುವ ಕಾಮೇಗೌಡರು: ಮಂಡ್ಯ ಜಿಲ್ಲಾಧಿಕಾರಿ

Last Updated 25 ಜುಲೈ 2020, 13:10 IST
ಅಕ್ಷರ ಗಾತ್ರ

ಮಂಡ್ಯ: ‘ಬಲಗಾಲಿನ ಗಾಯದ ಸೋಂಕು ಹಾಗೂ ಕೋವಿಡ್‌–19ನಿಂದ ಬಳಲುತ್ತಿರುವ ಪ್ರಕೃತಿ ಸಂರಕ್ಷಕ ಕಲ್ಮನೆ ಕಾಮೇಗೌಡರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಆರೋಗ್ಯದಿಂದ ಇದ್ದಾರೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಶನಿವಾರ ತಿಳಿಸಿದರು.

ಕಾಮೇಗೌಡರ ಸ್ಥಿತಿ ಗಂಭೀರವಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ ಅವರು ‘ಕಾಲಿನಲ್ಲಿ ಸೈಲ್ಯುಲೈಟಿಸ್‌ (ಜೀವಕೋಶಗಳ ಉರಿಯೂತ) ಸೋಂಕಾಗಿದ್ದು ಗಾಯದ ಕೀವು ತೆಗೆದು ಹೊಸದಾಗಿ ಬ್ಯಾಂಡೇಜ್‌ ಹಾಕಲಾಗಿದೆ. ಆರಂಭದಲ್ಲಿ ಅವರು ಚಿಕಿತ್ಸೆಗೆ ನಿರಾಕರಣೆ ಮಾಡಿದ್ದರು. ಕೋವಿಡ್‌–19 ದೃಢಪಟ್ಟ ನಂತರ ವೈದ್ಯರು ಅವರ ಮನವೊಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ಯಾರೂ ಭಯ ಪಡುವ ಅಗತ್ಯವಿಲ್ಲ’ ಎಂದು ಹೇಳಿದರು.

ಊಟ, ತಿಂಡಿ ಬಿಟ್ಟಿದ್ದಾರೆ: ಕಾಮೇಗೌಡರು ಊಟ, ತಿಂಡಿ ಬಿಟ್ಟಿದ್ದು ಅವರ ಆರೋಗ್ಯದ ಬಗ್ಗೆ ವೈದ್ಯರು ಮಾಹಿತಿ ನೀಡುತ್ತಿಲ್ಲ ಎಂದು ಅವರ ಮಗ ಬಲರಾಮ್‌ ಆರೋಪಿಸಿದ್ದಾರೆ.

‘ಅಪ್ಪನ ಕಾಲಿಗೆ ಗಾಯವಾಗಿರುವ ಕಾರಣ ಅವರಿಗೆ ಬಾತ್‌ರೂಂಗೆ ಹೋಗಲು ಸಾಧ್ಯವಾಗುತ್ತಿಲ್ಲ. ಬಾತ್‌ರೂಂಗೆ ಹೋಗಬೇಕಾಗುತ್ತದೆ ಎಂದು ಅವರು ನೀರು, ಊಟ, ತಿಂಡಿ ಬಿಟ್ಟಿದ್ದಾರೆ. ಕೋವಿಡ್‌ ಬಂದಿರುವ ಕಾರಣ ಅವರ ಬಳಿ ಯಾರೂ ಹೋಗುತ್ತಿಲ್ಲ’ ಎಂದು ಬಲರಾಮ್‌ ತಿಳಿಸಿದರು.

‘ವೈದ್ಯರು ಅವಕಾಶ ನೀಡಿದರೆ ನಾನೇ ಅಪ್ಪನನ್ನು ನೋಡಿಕೊಳ್ಳುತ್ತೇನೆ, ಬಾತ್‌ರೂಂಗೆ ಕರೆದುಕೊಂಡು ಹೋಗುತ್ತೇನೆ’ ಎಂದು ತಿಳಿಸಿದ್ದಾರೆ. ಸದ್ಯ ಕಾಮೇಗೌಡರ ಕುಟುಂಬ ಸದಸ್ಯರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ.

‘ವೈದ್ಯರು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಊಟ ತಿಂಡಿ ಚೆನ್ನಾಗಿ ಕೊಡುತ್ತಿದ್ದಾರೆ. ಯಾರೂ ಗಾಬರಿಯಾಗಬೇಕಾಗಿಲ್ಲ’ ಎಂದು ಕಾಮೇಗೌಡರು ತಿಳಿಸಿದ್ದಾರೆ.

ಎಚ್‌ಡಿಕೆ, ಸುಧಾಕರ್‌ ಟ್ವೀಟ್‌

ಕಾಮೇಗೌಡರ ಆರೋಗ್ಯ ಕುರಿತು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದು, ಕಾಮೇಗೌಡರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಅವರನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ರಾಜ್ಯ ಸರ್ಕಾರ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

‘ಮನ್‌ ಕಿ ಬಾತ್‌ ನಲ್ಲಿ ಪ್ರಧಾನಿ ಕೊಂಡಾಡಿದ್ದಾರೆ. ಮುಖ್ಯಮಂತ್ರಿಗಳೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹೊಗಳಿ ಹೊನ್ನಶೂಲಕ್ಕೆ ಏರಿಸಿದರೆ ಸಾಲದು, ಅನಾರೋಗ್ಯದಿಂದ ಅವರು ಸೋತು ಸುಣ್ಣವಾಗಿರುವಾಗ ಒಳ್ಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಸರ್ಕಾರ ಮುಂದಾಗಬೇಕಿದೆ’ ಎಂದು ತಿಳಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಕೂಡ ಟ್ವೀಟ್‌ ಮಾಡಿದ್ದು ‘ಕಾಮೇಗೌಡರ ಆರೋಗ್ಯ ಸ್ಥಿತಿ ಗಂಭೀರವಾಗಿರುವುದು ನನ್ನ ಗಮನಕ್ಕೆ ಬಂದ ಕೂಡಲೇ ಮಂಡ್ಯ ವೈದ್ಯಕೀಯ ಕಾಲೇಜು ನಿರ್ದೇಶಕರಿಗೆ ಕರೆ ಮಾಡಿ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದೇನೆ. ಇಡೀ ದೇಶಕ್ಕೆ ಸ್ಫೂರ್ತಿಯಾರಿಗುವ ಕಾಮೇಗೌಡರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ತಿಳಿಸಿದ್ದಾರೆ.

ಕಾಮೇಗೌಡರು ಬೇಗ ಗುಣಮುಖರಾಗಲಿ ಎಂದು ಹಾರೈಸಿ ಸಂಸದೆ ಎ.ಸುಮಲತಾ ಕೂಡ ಫೇಸ್‌ಬುಕ್‌ನಲ್ಲಿ ಸಂದೇಶ ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT