ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮೇಗೌಡರ ಪ್ರಕೃತಿ ಸೇವೆ ದೇಶಕ್ಕೆ ಮಾದರಿ: ಜಿಲ್ಲಾಧಿಕಾರಿ ವೆಂಕಟೇಶ್‌

ಸಿಎಂ ಘೋಷಿಸಿದ್ದ ₹ 1 ಲಕ್ಷ ಚೆಕ್‌ ವಿತರಣೆ; ಡಿ.ಸಿ. ಡಾ.ಎಂ.ವಿ.ವೆಂಕಟೇಶ್‌ ಹೇಳಿಕೆ
Last Updated 3 ಅಕ್ಟೋಬರ್ 2020, 12:56 IST
ಅಕ್ಷರ ಗಾತ್ರ

ಮಂಡ್ಯ: ‘ಕಾಮೇಗೌಡರು ದಾಸನದೊಡ್ಡಿ ಕುಂದನಿ ಬೆಟ್ಟದಲ್ಲಿ ಮಾಡಿರು ಪ್ರಕೃತಿ ಸೇವಾ ಕಾರ್ಯ ಇಡೀ ದೇಶಕ್ಕೆ ಮಾದರಿಯಾದುದು. ಅವರ ನಿಸ್ವಾರ್ಥ ಸೇವೆ ಯುವ ಜನರಿಗೆ ಅನುಕರಣೀಯವಾದುದು’ ಎಂದು ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

ಕಾಮೇಗೌಡರ ಸೇವೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಈಚೆಗೆ ಘೋಷಣೆ ಮಾಡಿದ್ದ ₹ 1 ಲಕ್ಷ ಗೌರವಧನ ಚೆಕ್‌ ವಿತರಣೆ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕಾಮೇಗೌಡರು ಶಾಲೆಯ ಮೆಟ್ಟಲು ಹತ್ತಿದವರಲ್ಲ, ಹಣ ಉಳ್ಳವರೂ ಅಲ್ಲ. ಬಡತನದಲ್ಲೇ ತಾವು ಕಷ್ಟ ಪಟ್ಟು ಸಂಪಾದನೆ ಮಾಡಿದ ಅಲ್ಪಸ್ವಲ್ಪ ಹಣವನ್ನು ಅವರು ಬೆಟ್ಟದ ಮೇಲೆ ಕಟ್ಟೆಗಳನ್ನು ತೋಡಿಸಲು ವಿನಿಯೋಗ ಮಾಡಿದ್ದಾರೆ. ಪ್ರಕೃತಿ ಸೇವೆಗೆ ಇದಕ್ಕಿಂತ ಮಾದರಿ ಇನ್ನೊಂದು ಇರಲಾರದು. ಸಮಾಜದಲ್ಲಿ ಕೆಲವರು ಮಾತ್ರ ನಿಸ್ವಾರ್ಥ ಸೇವೆ ಮಾಡಲು ಸಾಧ್ಯ. ಅಂಥವರಲ್ಲಿ ಕಾಮೇಗೌಡರೂ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತಾರೆ’ ಎಂದರು.

‘ಮನುಷ್ಯ ಪ್ರಕೃತಿಯ ಶಿಶು. ಮನುಷ್ಯ ಹಾಗೂ ಪ್ರಕೃತಿಯ ಸಂಬಂಧ ತಾಯಿ– ಮಗನ ಸಂಬಂಧದಂತೆ ಇರುತ್ತದೆ. ಹೀಗಾಗಿ ನಾವು ಯಾವಾಗಲೂ ಪ್ರಕೃತಿಯ ಸಂರಕ್ಷಣೆ ಹಾಗೂ ಸೇವೆ ಮಾಡಬೇಕು. ಕಾಮೇಗೌಡರು ಬೆಟ್ಟದ ಮೇಲೆ ಕಟ್ಟೆ ತೋಡುವುದರ ಜೊತೆಗೆ ಸಸಿಗಳನ್ನು ಬೆಳೆಸಿದ್ದಾರೆ. ಮುಂದಿನ ಪೀಳಿಗೆಯ ಮಕ್ಕಳಿಗೆ ಇದು ಬಲುದೊಡ್ಡ ಪಾಠವಾಗಬೇಕು’ ಎಂದು ಹೇಳಿದರು.

‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮನದ ಮಾತು ಸರಣಿಯಲ್ಲಿ ಕಾಮೇಗೌಡರು ಸಲ್ಲಿಸಿರುವ ಸೇವೆಯ ಉಲ್ಲೇಖ ಮಾಡಿದ್ದರು. ಇದಾದ ನಂತರ ಮುಖ್ಯಮಂತ್ರಿಗಳು ಕಾಮೇಗೌಡರಿಗೆ ಕರೆ ಮಾಡಿ, ಅಭಿನಂದಿಸಿ ₹ 1 ಲಕ್ಷ ಗೌರವ ಧನ ಘೋಷಣೆ ಮಾಡಿದ್ದರು. ಮುಖ್ಯಮಂತ್ರಿಗಳ ಸೂಚನೆಯಂತೆ ಕಾಮೇಗೌಡರನ್ನು ಕಚೇರಿಗೆ ಆಹ್ವಾನಿಸಿ, ಅವರನ್ನು ಗೌರವಿಸಿ, ಚೆಕ್ ವಿತರಣೆ ಮಾಡಿದ್ದೇವೆ’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಜುಲ್ಫಿಕರ್‌ ಉಲ್ಲಾ ಮಾತನಾಡಿ ‘ಸಾಮಾಜಿಕ ಕಳಕಳಿಯೊಂದಿಗೆ ಪ್ರಕೃತಿ ಸಂರಕ್ಷಣೆ ಮಾಡಿರುವ ಕಾಮೇಗೌಡರನ್ನು ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇವರ ಸೇವೆ ಮುಂದಿನ ಪೀಳಿಗೆಯ ಜನರಿಗೆ ಮಾದರಿಯಾಗಿದೆ’ ಎಂದರು.

ಸನ್ಮಾನ ಸ್ವೀಕರಿಸಿದ ಕಾಮೇಗೌಡ ಮಾತನಾಡಿ ‘ಯಾರನ್ನೂ ಮೆಚ್ಚಿಸುವುದಕ್ಕಾಗಿ, ಸನ್ಮಾನ, ಪ್ರಶಸ್ತಿಗಾಗಿ ನಾನು ಕಟ್ಟೆ ಕಟ್ಟಿಸಿಲ್ಲ. ಬೆಟ್ಟದ ಮೇಲೆ ನೀರು ಸಿಗದೇ ಕಷ್ಟ ಪಡುತ್ತಿದ್ದ ಪ್ರಾಣಿ ಪಕ್ಷಿಗಳಿಗಾಗಿ ಕಟ್ಟೆ ತೋಡಿಸಿದೆ. ಅದಕ್ಕಾಗಿ ನಾನು ಯಾರ ಬಳಿಯೂ ಬೇಡಿಲ್ಲ, ನಾನು ಮಾಡಿದ ಕೆಲಸ ಸಮಾಜಕ್ಕೆ ಸೇವೆಯಾಗಿ ಕಂಡಿದೆ’ ಎಂದು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌, ಹೆಚ್ಚುವರಿ ಜಿಲ್ಲಾಧಿಕಾರಿ ಶೈಲಜಾ, ಜಿಲ್ಲಾ ವಾರ್ತಾಧಿಕಾರಿ ಟಿ.ಹರೀಶ್‌ ಇದ್ದರು.

ಸಮಸ್ಯೆಗೆ ಸ್ನೇಹಯುತ ಪರಿಹಾರ

‘ಕಾಮೇಗೌಡರ ಸೇವೆ ಬಗ್ಗೆ ಯಾವುದೇ ಅನುಮಾನಗಳಿಲ್ಲ. ಆದರೆ ದಾಸನದೊಡ್ಡಿ ಗ್ರಾಮದ ಕೆಲವರಲ್ಲಿ ಕಾಮೇಗೌಡರ ಬಗ್ಗೆ ಇರುವ ಅಸಮಾಧಾನವನ್ನು ಸ್ನೇಹಯುತವಾಗಿ ಬಗೆಹರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಹಲವು ಸುತ್ತಿನ ಶಾಂತಿ ಸಭೆ ನಡೆಸಲಾಗಿದೆ. ಸಮಿತಿ ವರದಿ ಸಲ್ಲಿಸಿದ ನಂತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT