ಸೋಮವಾರ, ಫೆಬ್ರವರಿ 24, 2020
19 °C
ಭತ್ತ, ರಾಗಿ ಖರೀದಿಯಲ್ಲಿ ತಾಂತ್ರಿಕ ಸಮಸ್ಯೆ ಕುರಿತು ಚರ್ಚೆ

ಮಂಡ್ಯ: ಕೆಡಿಪಿ ಸಭೆಯಲ್ಲಿ ಅಧ್ಯಕ್ಷರಿಂದ ಅಧಿಕಾರಿಗಳ ತರಾಟೆ

ಪ್ರಜಾವಾಣಿ ವಾರ್ತೆ‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ, ರಾಗಿ ಖರೀದಿಸುವಲ್ಲಿ ಉಂಟಾಗುತ್ತಿರುವ ತಾಂತ್ರಿಕ ಸಮಸ್ಯೆಗಳ ಬಗ್ಗೆ ಜಿ.ಪಂ ಅಧ್ಯಕ್ಷೆ ಎಸ್‌.ನಾಗರತ್ನಾ ಸ್ವಾಮಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮಂಗಳವಾರ ನಗರದ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಭತ್ತ, ರಾಗಿ ಮಾರಾಟ ಮಾಡಲು ಫ್ರೂಟ್ಸ್‌ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳುವಾಗ ಭತ್ತ ಅಥವಾ ರಾಗಿ ಬದಲಿಗೆ ಕಬ್ಬು ಎಂದು ಬರುತ್ತಿದ್ದು, ಎಫ್‌ಐಡಿ ನಂಬರ್‌ ತೆಗೆದುಕೊಂಡು ಖರೀದಿ ಕೇಂದ್ರಕ್ಕೆ ತೆರಳಿದಾಗ ಮಾರಾಟ ಮಾಡಲು ಸಮಸ್ಯೆಯಾಗುತ್ತಿದೆ. ಈ ಬಾರಿ ಮಳೆ ಚೆನ್ನಾಗಿ ಆಗಿದ್ದು, ಇಳುವರಿ ಹೆಚ್ಚಾಗಿ ಬಂದಿದೆ. ಆದರೆ, ಪ್ರತಿ ಎಕರೆಗೆ 16 ಕ್ವಿಂಟಲ್‌ ಖರೀದಿಸಲಾಗುತ್ತದೆ ಎಂದು ಹೇಳುತ್ತಿದ್ದೀರಿ. ಉಳಿದ ಭತ್ತವನ್ನು ರೈತ ಏನು ಮಾಡಬೇಕು’ ಎಂದು ಜಂಟಿ ಕೃಷಿ ನಿರ್ದೇಶಕರನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ನಿರ್ದೇಶಕ ಡಾ.ಬಿ.ಎಸ್‌.ಚಂದ್ರಶೇಖರ್‌, ‘ಇದು ಉಗ್ರಾಣ ನಿಗಮಕ್ಕೆ ಸಂಬಂಧ ಪಟ್ಟಿದೆ. ಖರೀದಿಸುವ ಭತ್ತ, ರಾಗಿಯ ಗುಣಮಟ್ಟ ಪರಿಶೀಲಿಸುವುದು ನಮ್ಮ ಕೆಲಸ. ಆತ್ಮಹತ್ಯೆ ಮಾಡಿಕೊಂಡ ಐವರು ರೈತರಿಗೆ ಇನ್ನೆರಡು ದಿನದಲ್ಲಿ ಪರಿಹಾರವನ್ನು ಇಲಾಖೆಯಿಂದ ನೀಡಲಾಗುವುದು’ ಎಂದು ಹೇಳಿದರು.

ಬೆಳೆ ಸಮೀಕ್ಷೆ ಸಂದರ್ಭದಲ್ಲಿ ಸರಿಯಾದ ಮಾಹಿತಿ ಕ್ರೋಡೀಕರಿಸದ ಕಾರಣ, ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಇದಕ್ಕೆ ಯಾರು ಹೊಣೆ ಎಂದು ನಾಗರತ್ನಾ ಪ್ರಶ್ನಿಸಿದಾಗ, ಈಗಾಗಲೇ ಆರ್‌ಟಿಸಿಯಲ್ಲಿ ತಪ್ಪು ಬೆಳೆ ನಮೂದಾಗಿರುವ 7,800 ಪ್ರಕರಣಗಳಲ್ಲಿ 2,200 ಪ್ರಕರಣಗಳನ್ನು ಸರಿಪಡಿಸಲಾಗಿದೆ. ಇನ್ನು ಕೆಲ ದಿನಗಳಲ್ಲೇ ಸಮಸ್ಯೆ ಪರಿಹರಿಸುವ ಭರವಸೆಯನ್ನು ಚಂದ್ರಶೇಖರ್‌ ನೀಡಿದರು.

ಅಲ್ಲದೆ, ಈ ವರ್ಷ 16 ಕ್ವಿಂಟಲ್‌ ಭತ್ತ ಮಾತ್ರ ಖರೀದಿಸುತ್ತಿದ್ದೀರಿ. ಹಿಂದಿನ ವರ್ಷದಂತೆ 40 ಕ್ವಿಂಟಲ್‌ ಭತ್ತ ಖರೀದಿಸಲು ಸರ್ಕಾರಕ್ಕೆ ಪ್ರಸ್ತಾವ ಕಳುಹಿಕೊಟ್ಟು ಸಮಸ್ಯೆ ಬಗೆಹರಿಸುವಂತೆ ನಾಗರತ್ನಾ ಸ್ವಾಮಿ ಉಗ್ರಾಣ ನಿಗಮದ ಅಧಿಕಾರಿಗೆ ಸೂಚನೆ ನೀಡಿದರು.

‘ಪ್ರಜಾವಾಣಿ’ ವರದಿ ಉಲ್ಲೇಖಿಸಿದ ಸಿಇಒ ಕೆ.ಯಾಲಕ್ಕಿಗೌಡ: ಕಟ್ಟಡಗಳ ಪ್ರಾರಂಭಕ್ಕೆ ಭೂಮಿ ಪೂಜೆ, ವೇಗ ಪಡೆಯದ ಕಟ್ಟಡ ಕಾಮಗಾರಿಗಳ ಬಗ್ಗೆ ‘ಪ್ರಜಾವಾಣಿ’ ವರದಿ ಮಾಡಿದೆ. ಈ ಬಗ್ಗೆ ಅಧಿಕಾರಿಗಳು ಏನು ಕ್ರಮ ಕೈಗೊಂಡಿದ್ದೀರಿ ಎಂದು ಭೂಸೇನಾ ನಿಗಮದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಧ್ವನಿಗೂಡಿಸಿದ ನಾಗರತ್ನಾ, ಸಾಕಷ್ಟು ಬಾರಿ ಸಭೆಯಲ್ಲಿ ಹೇಳಿದರೂ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ಮಾತನಾಡಿ, ಚೀನಾದಿಂದ 3 ಮಂದಿ ಜಿಲ್ಲೆಗೆ ಬಂದಿದ್ದಾರೆ. ಅವರಿಗೆ ಪರೀಕ್ಷೆಗಳನ್ನು ನಡೆಸಲಾಗಿದ್ದು, ಕೊರೊನಾ ಲಕ್ಷಣಗಳು, ಯಾವುದೇ ತೊಂದರೆ ಇಲ್ಲ. ಆದರೂ, ನಿಗಾ ಇಟ್ಟು ಮನೆಯಲ್ಲೇ ಪ್ರತಿದಿನ ಪರೀಕ್ಷೆ ನಡೆಸಲಾಗುತ್ತಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆಗೆ ಪ್ರತ್ಯೇಕ ವಿಶೇಷ ವಾರ್ಡ್‌ ತೆರೆಯಲಾಗಿದೆ. ಈಗಾಗಲೇ, ಜಾಗೃತಿ ಮೂಡಿಸುವ ಕಾರ್ಯಗಳು ನಡೆಯುತ್ತಿದೆ. ಸಾರ್ವಜನಿಕರು ಸ್ವಚ್ಛತೆ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಜು ಮಾತನಾಡಿ, ಜಿಲ್ಲೆಯಲ್ಲಿ ಈ ಬಾರಿ ತೆಂಗಿನ ಬೆಳೆ 2,800 ಹೆಕ್ಟೇರ್‌ನಷ್ಟು ಹೆಚ್ಚಿದೆ. ಸಸಿಗಳಿಗೂ ಬೇಡಿಕೆ ಹೆಚ್ಚಿದ್ದು, ಅಗತ್ಯಕ್ಕೆ ತಕ್ಕಂತೆ ಪೂರೈಸಲಾಗುತ್ತಿದೆ. ತೆಂಗು ಬೆಳೆಯುವ ರೈತರಿಗೆ ಅಗತ್ಯ ನೆರವು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. 

ಉಪಾಧ್ಯಕ್ಷೆ ಗಾಯತ್ರಿ, ಯೋಜನಾ ನಿರ್ದೇಶಕ ಧನುಷ್‌ ಇದ್ದರು.

ನಾಯಿಗಳ ಕಡಿತಕ್ಕೊಳಗಾದವರು 13,576!
ಜಿಲ್ಲೆಯಲ್ಲಿ 2019ರ ಜನವರಿಯಿಂದ ಡಿಸೆಂಬರ್‌ ಅಂತ್ಯದವರೆಗೆ 13,576 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ ಎಂದ ಡಿಎಚ್‌ಒ ಡಾ.ಎಚ್‌.ಪಿ.ಮಂಚೇಗೌಡ ಹೇಳಿದರು.

ಇದಕ್ಕೆ ಅಧ್ಯಕ್ಷೆ, ಅಧಿಕಾರಿಗಳು ಆಶ್ಚರ್ಯ ವ್ಯಕ್ತಪಡಿಸಿದರು. ಮತ್ತದೇ ಮಾಹಿತಿ ಹೇಳಿದ ಅವರು ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಲಸಿಕೆಗಳು ಲಭ್ಯವಿದ್ದು, ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. ಔಷಧಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು