ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ವ ಜನಾಂಗದ ನಾಯಕ ಕೆಂಪೇಗೌಡ: ಪ್ರಸನ್ನನಾಥ ಸ್ವಾಮೀಜಿ

Published 30 ಜೂನ್ 2024, 14:29 IST
Last Updated 30 ಜೂನ್ 2024, 14:29 IST
ಅಕ್ಷರ ಗಾತ್ರ

ನಾಗಮಂಗಲ: ನಾಡಪ್ರಭು ಕೆಂಪೇಗೌಡರು ಜನಪರ ಆಡಳಿತ ನಡೆಸುವ ಜೊತೆಗೆ ಸರ್ವರ ಅಭ್ಯುದಯಕ್ಕಾಗಿ ಶ್ರಮಿಸಿದ್ದು,  ಒಂದು ಸಮುದಾಯಕ್ಕೆ ಸೀಮಿತರಾಗದೇ ಸರ್ವ ಜನಾಂಗದ ನಾಯಕರಾಗಿದ್ದಾರೆ ಎಂದು ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ನಾಥ ಸ್ವಾಮೀಜಿ ಹೇಳಿದರು.

ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಅವರ ಜಯಂತೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬೆಂಗಳೂರು ಇಂದು ವಿಶ್ವದರ್ಜೆ ರಾಜಧಾನಿಯಾಗಿದ್ದು, ವಿಶ್ವವಿಖ್ಯಾತಿ ಪಡೆದಿದೆ. ನಾಡಪ್ರಭು ಕೆಂಪೇಗೌಡರು ಭವಿಷ್ಯದ ದೃಷ್ಟಿಯನ್ನು ಇಟ್ಟು ನಗರವನ್ನು ಕಟ್ಟಿರುವುದು ವಿಶೇಷವಾಗಿದೆ. ದೇಶದ ಮತ್ತು ರಾಜ್ಯದ ಅಭಿವೃದ್ಧಿಗೆ ನೀರಾವರಿಯ ಅಗತ್ಯವನ್ನು. ಮನಗಂಡಿದ್ದ ಕೆಂಪೇಗೌಡರು ಕೆರೆಕಟ್ಟೆಗಳನ್ನು ಕಟ್ಟಿಸಿ ಕೃಷಿಗೆ ಆದ್ಯತೆ ನೀಡಿದ್ದರು’ ಎಂದು ಸ್ಮರಿಸಿದರು.

ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ‘ಇತಿಹಾಸವನ್ನು ಸೃಷ್ಟಿಸಿದವರನ್ನು ನಮ್ಮ‌ ಜೀವನಕ್ಕೆ ದಾರಿ ತೋರಿದ ಮತ್ತು ನಾಡಿನ‌ ಅಭಿವೃದ್ಧಿಗಾಗಿ ದುಡಿದ ಮಹನೀಯರನ್ನು ಮರೆಯಬಾರದು ಎಂಬ ನಿಟ್ಟಿನಲ್ಲಿ ಇಂತಹ ಜಯಂತಿ  ಮುಖ್ಯವಾಗಿದೆ.  ಮೈಸೂರಿನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಬೆಂಗಳೂರಿನಲ್ಲಿ ಕೆಂಪೇಗೌಡರನ್ನು ಇತರೆ ರಾಜರುಗಳಿಗೆ ಹೋಲಿಸಲು ಸಾಧ್ಯವಿಲ್ಲ. ಅವರಲ್ಲಿದ್ದ ಬದ್ಧತೆಯ ಫಲವಾಗಿ ಶ್ರೇಷ್ಠ ಮತ್ತು ಜನಪರ ಆಡಳಿತವನ್ನು ನೀಡಿದ್ದಾರೆ. ಅವರು ತೆಗೆದುಕೊಂಡ ತೀರ್ಮಾನಗಳಿಂದ ಇಂದು ಸರ್ಕಾರಗಳೂ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಅವರು ಹಾಕಿಕೊಟ್ಟ ದಾರಿಯಲ್ಲಿ ಎಲ್ಲರೂ ಸಾಗೋಣ’ ಎಂದರು.

ಸಾಹಿತಿ ತಿಮ್ಮರಾಯೀಗೌಡ ಅವರು ನಾಡಪ್ರಭು ಕೆಂಪೇಗೌಡರ ಜೀವನ, ಆಡಳಿತ, ಜ‌ನಪರ ಕಾರ್ಯಗಳು ಮತ್ತು ಸಾಧನೆಗಳನ್ನು ಕುರಿತು ಉಪನ್ಯಾಸ ನೀಡಿದರು. ನಂತರ ಕೆಂಪೇಗೌಡರ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮುದಾಯದ ಸಾಧಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಸೌಮ್ಯಕೇಶವ ಸ್ವಾಮಿ ದೇವಾಲಯದ ಆವರಣದಿಂದ ಎತ್ತಿನ ಗಾಡಿ ಮತ್ತು ರಾಸುಗಳ ಜೊತೆಗೆ ಸಿಂಗರಿಸಿದ್ದ ವಾಹನದಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರವನ್ನು ಮುಖ್ಯಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ವೇದಿಕೆಗೆ ತರಲಾಯಿತು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನಯೀಂ‌ ಉನ್ನೀಸಾ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ. ರಾಜೇಶ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್, ಮೂಡಾ ಅಧ್ಯಕ್ಷ ನಯೀಂ ಪಾಷ, ಮುಖಂಡರಾದ ಸುನೀಲ್ ಲಕ್ಷ್ಮೀಕಾಂತ್, ಎಚ್.ಟಿ.ಕೃಷ್ಣೇಗೌಡ, ಪುಟ್ಟಮ್ಮ ಮಾಯಣ್ಣಗೌಡ, ಹನುಮಂತು, ವಕೀಲ ಕೊಣನೂರು ಧನಂಜಯ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜ್ ಮೂರ್ತಿ, ತಾಲ್ಲೂಕು ಪಂಚಾಯಿತಿ ಇಒ ಚಂದ್ರಮೌಳಿ, ಸಿಡಿಪಿಒ ಕೃಷ್ಣಮೂರ್ತಿ, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್. ಮಂಜುನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT