ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

100 ಅಡಿ ತಲುಪಿದ ‘ಕನ್ನಂಬಾಡಿ’ ನೀರಿನಮಟ್ಟ; ನಾಲೆಗೆ ನೀರು ಬಿಡುವ ನಿರೀಕ್ಷೆ

ಭತ್ತದ ಒಟ್ಲು ಹಾಕಲು ಜಿಲ್ಲೆಯ ರೈತರ ಸಿದ್ಧತೆ
Published 4 ಜುಲೈ 2024, 23:16 IST
Last Updated 4 ಜುಲೈ 2024, 23:16 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್‌.ಎಸ್‌ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದುಬರುತ್ತಿದ್ದು, ಅಣೆಕಟ್ಟೆಯ ನೀರಿನ ಮಟ್ಟ ಗುರುವಾರ 100 ಅಡಿ ತಲುಪಿದೆ.  

ಕೊಡಗು ಜಿಲ್ಲೆ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕೆ.ಆರ್‌.ಎಸ್‌. ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಬುಧವಾರ 14 ಸಾವಿರ ಕ್ಯುಸೆಕ್‌ ಮತ್ತು ಗುರುವಾರ 11 ಸಾವಿರ ಕ್ಯುಸೆಕ್‌ ಒಳಹರಿವು ಇದ್ದು, ಹೊರ ಹರಿವಿನ ಪ್ರಮಾಣ 540 ಕ್ಯುಸೆಕ್‌ ಇದೆ. 

ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಇದ್ದು, 49.452 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿದೆ. ಗುರುವಾರ ಜಲಾಶಯದಲ್ಲಿ 22.267 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯ ಭರ್ತಿಯಾಗಲು ಇನ್ನೂ 27 ಟಿಎಂಸಿ ನೀರು ಹರಿದು ಬರಬೇಕಿದೆ. 8 ಟಿ.ಎಂ.ಸಿ ನೀರನ್ನು ‘ಡೆಡ್‌ ಸ್ಟೋರೇಜ್‌’ ಎಂದು ಪರಿಗಣಿಸಲಾಗುತ್ತದೆ. ಉಳಿದ ನೀರನ್ನು ಮಾತ್ರ ಕುಡಿಯಲು ಮತ್ತು ಕೃಷಿ ಚಟುವಟಿಕೆಗೆ ಬಳಸಬಹುದು.

ನಾಲ್ಕು ವರ್ಷಗಳಿಂದ ಜುಲೈ ತಿಂಗಳಲ್ಲೇ ಕೆ.ಆರ್‌.ಎಸ್‌ ಡ್ಯಾಂ ನೀರಿನಮಟ್ಟ 100 ಅಡಿ ತಲುಪುತ್ತಿದೆ. 2018ರಲ್ಲಿ ಅತಿವೃಷ್ಟಿಯಾದ ಕಾರಣ ಜೂನ್‌ 17ರಂದೇ ತಲುಪಿತ್ತು. 2019ರಲ್ಲಿ ಮಳೆಯ ಕೊರತೆಯಿಂದ ಆಗಸ್ಟ್‌ 10ರಂದು ತೀರಾ ತಡವಾಗಿ 100 ಅಡಿ ಮುಟ್ಟಿತ್ತು. 

ಸೋರಿಕೆ ತಡೆಗಟ್ಟಲು ಕ್ರಮ: ‘ಜಲಾಶಯದ 80 ಅಡಿ ಮಟ್ಟದ 16 ಗೇಟ್‌ಗಳಿಗೆ ಗ್ರೀಸಿಂಗ್‌ ಮಾಡಲಾಗಿದೆ. ಸೋರಿಕೆ ತಡೆಗಟ್ಟಲು ಅಣೆಕಟ್ಟೆಯ 136 ಗೇಟ್‌ಗಳನ್ನು ₹69.52 ಕೋಟಿ ವೆಚ್ಚದಲ್ಲಿ ಬದಲಿಸಲಾಗಿದೆ’ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹೇಳಿದ್ದಾರೆ.

ಕಳೆದ ವರ್ಷ ಮಳೆಯ ತೀವ್ರ ಕೊರತೆಯಿಂದ ಅಣೆಕಟ್ಟೆ ಭರ್ತಿಯಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಬಾರಿ ಹವಾಮಾನ ಮುನ್ಸೂಚನೆ ಪ್ರಕಾರ, ಉತ್ತಮ ಮಳೆಯಾಗುವ ಸಾಧ್ಯತೆಯಿ ದ್ದು, ಕೆಆರ್‌ಎಸ್‌ ಅಣೆಕಟ್ಟೆ ಭರ್ತಿಯಾಗುವ ನಿರೀಕ್ಷೆಯಿದೆ. 

ಭತ್ತದ ಒಟ್ಲು ಬಿಡಲು ಸಿದ್ಧತೆ: ವಿ.ಸಿ.ನಾಲೆಯ ಆಧುನೀಕರಣ ಕಾಮಗಾರಿ ನಡೆಯುತ್ತಿರುವ ಕಾರಣ ನಾಲ್ಕೈದು ತಿಂಗಳಿಂದ ನಾಲೆಗಳಿಗೆ ನೀರು ಹರಿಸಿಲ್ಲ. ಬೇಸಿಗೆ ಬೆಳೆಗೂ ನೀರು ಕೊಟ್ಟಿರಲಿಲ್ಲ. ಫೆಬ್ರುವರಿ ತಿಂಗಳಲ್ಲಿ ಮಾತ್ರ ಒಂದು ಕಟ್ಟು ನೀರು ಹರಿಸಲಾಗಿತ್ತು. ಕೆ.ಆರ್‌.ಎಸ್‌ ಜಲಾಶಯ 100 ಅಡಿ ತಲುಪಿದರೆ ನಾಲೆಗಳಿಗೆ ನೀರು ಬಿಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಭರವಸೆ ನೀಡಿದ್ದರು. ಡ್ಯಾಂಗೆ ಹೆಚ್ಚಿನ ನೀರು ಬಂದಿರುವ ಕಾರಣ ರೈತರು ಖುಷಿಯಿಂದ ಭತ್ತದ ಒಟ್ಲು ಬಿಡಲು ಮತ್ತು ಕಬ್ಬು ನಾಟಿ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

‘ಕನ್ನಂಬಾಡಿ ಕಟ್ಟೆ 100 ಅಡಿ ತಲುಪಿದರೆ ಒಂದು ಬೆಳೆಗೆ ಮೋಸವಿಲ್ಲ. ಮುಂಗಾರು ಹಂಗಾಮಿನ ‘ಹೈನು ಬೆಳೆ’ ಕೈಸೇರುತ್ತದೆ. ಡ್ಯಾಂ ಪೂರ್ತಿ ತುಂಬಿದರೆ ಹಿಂಗಾರು ಹಂಗಾಮಿನ ‘ಕಾರ್‌ ಬೆಳೆ’ ಫಸಲು ಕಣಜ ತುಂಬಿಸುತ್ತದೆ’ ಎನ್ನುತ್ತಾರೆ ರೈತ ಜಗದೀಶ್‌ ಕನ್ನಂಬಾಡಿ.

..
..
ಕೆಆರ್‌ಎಸ್‌ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಿದರೆ ಜಿಲ್ಲೆಯ 40–50 ಕೆರೆಗಳು ಭರ್ತಿಯಾಗುತ್ತವೆ. ಭತ್ತ ಮತ್ತು ಕಬ್ಬು ಬೆಳೆಯಲು ರೈತರಿಗೆ ಅನುಕೂಲವಾಗುತ್ತದೆ.
– ಎ.ಎಲ್‌.ಕೆಂಪೂಗೌಡ ಜಿಲ್ಲಾ ಘಟಕದ ಅಧ್ಯಕ್ಷ ರೈತ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT