ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳಲ್ಲಿ ಸಮನ್ವಯದ ಕೊರತೆ: ಆಕ್ರೋಶ

ಮುರಿದು ಬೀಳುತ್ತಿರುವ ಮರದ ಕೊಂಬೆಗಳು, ಸೆಸ್ಕ್‌– ಅರಣ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ ಆರೋಪ
Last Updated 1 ಏಪ್ರಿಲ್ 2021, 5:31 IST
ಅಕ್ಷರ ಗಾತ್ರ

ಮಂಡ್ಯ: ಅರಣ್ಯ ಇಲಾಖೆ ಹಾಗೂ ಸೆಸ್ಕ್‌ ಅಧಿಕಾರಿಗಳ ನಡುವೆ ಸಮನ್ವಯತೆ ಕೊರತೆಯಿಂದಾಗಿ ನಗರದ ಮುಖ್ಯರಸ್ತೆಗಳಲ್ಲಿ ಮರದ ಕೊಂಬೆಗಳು ಮುರಿದು ಬೀಳುತ್ತಿವೆ. ಒಬ್ಬರ ಮೇಲೆ ಒಬ್ಬರು ಹೇಳುತ್ತಾ ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಬುಧವಾರ ನಡೆದ ನಗರ ಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯೆ ಮಂಜುಳಾ ವಿಷಯ ಪ್ರಸ್ತಾಪಿಸಿ, ನೂರು ಅಡಿ ರಸ್ತೆಯಲ್ಲಿ ಮಂಗಳವಾರ ಮರದ ಕೊಂಬೆಯೊಂದು ಮುರಿದು ಬಿದ್ದಿದೆ. ಅದೃಷ್ಟವಶಾತ್‌ ಯಾರಿಗೂ ಪ್ರಾಣಾಪಾಯ ಉಂಟಾಗಲಿಲ್ಲ. ಸೆಸ್ಕ್‌ ಅಥವಾ ಅರಣ್ಯಾಧಿಕಾರಿಗಳು ಕೊಂಬೆಗಳು ಬಾಗಿದ್ದಾಗಲೇ ಗುರುತಿಸಿ ಅವುಗಳನ್ನು ತೆರವು ಮಾಡಬೇಕು. ಮಳೆಗಾಲ ಆರಂಭವಾಗುತ್ತಿದ್ದು ಹಳೆಯ ಮರಗಳು ಬೀಳುವ ಸಂಭವವಿರುತ್ತದೆ. ಜನರ ಸುರಕ್ಷತೆ ದೃಷ್ಟಿಯಿಂದ ಅಪಾಯಕಾರಿ ಕೊಂಬೆಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

ಸದಸ್ಯೆ ವೈ.ಜಿ.ಮೀನಾಕ್ಷಿ ಮಾತನಾಡಿ ‘ಶಂಕರೇಗೌಡ ಉದ್ಯಾನದಲ್ಲಿ ಮರಗಳ ಕೊಂಬೆಗಳು ಅಪಾಯಕ್ಕೆ ಆಹ್ವಾನಿಸುತ್ತಿವೆ. ವಾಯುವಿಹಾರಿಗಳಿಗೆ ತೊಂದರೆಯಾಗುತ್ತಿದೆ. ಅಲ್ಲಿರುವ ಹೈಮಾಸ್ಟ್‌ ದೀಪದ ಸುತ್ತಲೂ ಕೊಂಬೆಗಳು ಬೆಳೆದಿದ್ದು, ತೆರವು ಗೊಳಿಸಬೇಕು’ ಎಂದು ಒತ್ತಾಯಿಸಿದರು.

ಸಿ.ಕೆ.ರಜನಿ ಮಾತನಾಡಿ ‘ಅಧಿಕಾರಿಗಳು ಅನಾಹುತ ನಡೆದ ನಂತರ ಬರುತ್ತಾರೆ. ಮೊದಲೇ ನಗರ ಪ್ರದಕ್ಷಿಣೆ ಮಾಡಿ ಕೊಂಬೆಗಳನ್ನು ತೆರವು ಮಾಡಬೇಕು’ ಎಂದು ಒತ್ತಾಯಿಸಿದರು. ನಾಗೇಶ್‌ ಮಾತನಾಡಿ ‘ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲ. ಹಲವು ಬಾರಿ ಕರೆ ಮಾಡಿದರೂ ಪ್ರಯೋಜನವಿಲ್ಲ. ಒಬ್ಬರ ಮೇಲೆ ಒಬ್ಬರು ಹೇಳುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಲಯ ಅರಣ್ಯಾಧಿಕಾರಿ ಶಿಲ್ಪಾ ಪ್ರತಿಕ್ರಿಯಿಸಿ, ನಾವು ಮೊದಲೇ ಮಹಜರು ಮಾಡುವುದಿಲ್ಲ. ಮಾಹಿತಿ ನೀಡಿದರೆ ಕೊಂಬೆ ತೆರವುಗೊಳಿಸಲಾಗುವುದು. ಒಣಗಿ ಹೋಗಿರುವ ಮರದ ಕೊಂಬೆಗಳನ್ನು ಕಡಿಯುವ ಟೆಂಡರ್‌ ಪ್ರಕ್ರಿಯೆ ತಡವಾಗಿದೆ. ಕೊಂಬೆಗಳನ್ನು ಈಗಾಗಲೇ ಹರಾಜು ಹಾಕಲಾಗಿದೆ. ಕೊಂಬೆಗಳ ತೆರವಿಗೆ ಜಿಲ್ಲಾಧಿಕಾರಿ ಅನುಮತಿ ಪಡೆದಿದ್ದೇವೆ. ಈ ಕುರಿತು ಸೆಸ್ಕ್‌ ಸಿಬ್ಬಂದಿಗೂ ಸಹಕಾರ ನೀಡಲಾಗುವುದು’ ಎಂದರು.

ಸೆಸ್ಕ್‌ ಕಿರಿಯ ಎಂಜಿನಿಯರ್‌ ಯೋಗೇಶ್‌ ಮಾತನಾಡಿ ‘ಕೆಲವು ವೇಳೆ ಕೊಂಬೆಗಳನ್ನು ತೆರವು ಮಾಡಲು ಅರಣ್ಯಾಧಿಕಾರಿಗಳ ಅನುಮತಿ ಪಡೆಯಬೇಕು. ಹೀಗಾಗಿ ನಾವು ಕೊಂಬೆ ಕಡಿಯಲು ಸಾಧ್ಯವಾಗುತ್ತಿಲ್ಲ’ ಎಂದರು.

ಅಧ್ಯಕ್ಷ ಎಚ್‌.ಎಸ್‌.ಮಂಜು ಮಾತನಾಡಿ, ‘ನೂರು ಅಡಿ ರಸ್ತೆ, ಡಿ.ಸಿ ಕಚೇರಿ ರಸ್ತೆ, ಪಿಇಎಸ್‌ ಎಂಜಿನಿಯರಿಂಗ್‌ ಕಾಲೇಜು ರಸ್ತೆ, ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ, ಬೀಡಿ ಕಾರ್ಮಿಕರ ಕಾಲೊನಿ ಮುಂತಾದೆಡೆ ಮುರಿದು ಬೀಳುತ್ತಿರುವ ಕೊಂಬೆ ತೆರವುಗೊಳಿಸಬೇಕು. ಅರಣ್ಯ ಇಲಾಖೆ ಹಾಗೂ ಸೆಸ್ಕ್‌ ಅಧಿಕಾರಿಗಳು ಒಟ್ಟಾಗಿ ಪರಿಶೀಲನೆ ನಡೆಸಬೇಕು’ ಎಂದು ಸೂಚಿಸಿದರು.

ನಗರದ ವಿವಿಧೆಡೆ ವಿದ್ಯುತ್‌ ಕಂಬಗಳು ವಾಲಿಕೊಂಡಿವೆ. ಕಬ್ಬಿಣದ ಕಂಬಗಳನ್ನು ಸ್ಥಳಾಂತರ ಮಾಡಬೇಕಾಗಿದೆ. ಹಲವು ಬಾರಿ ಈ ವಿಚಾರವನ್ನು ಸೆಸ್ಕ್‌ ಎಂಜಿನಿಯರ್‌ಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದು ಸದಸ್ಯರು ಆರೋಪಿಸಿದರು.

ಎಂಜಿನಿಯರ್‌ ಯೋಗೇಶ್‌ ಮಾತನಾಡಿ, ‘ಮುರಿದು ಹೋದ, ಹಳೆಯದಾದ ಕಂಬಗಳನ್ನು ನಾವು ಬದಲಾಯಿಸಿಕೊಡುತ್ತೇವೆ. ಆದರೆ, ಕಂಬಗಳ ಸ್ಥಳಾಂತರವನ್ನು ಇಲಾಖೆ ವತಿಯಿಂದ ಮಾಡುವುದಿಲ್ಲ. ಹೊಸದಾಗಿ ಹಣ ಪಾವತಿಸಿ ಸ್ಥಳಾಂತರ ಮಾಡಿಸಿಕೊಳ್ಳಬೇಕು’ ಎಂದು ಅವರು ಹೇಳಿದರು.

ರಸ್ತೆಯ ಜಾಗದಲ್ಲಿ ವಿದ್ಯುತ್‌ ಕಂಬ ನೆಟ್ಟಿದ್ದು ಅವುಗಳನ್ನು ಸ್ಥಳಾಂತರ ಮಾಡಬೇಕು. ಈ ಕುರಿತು ಸಭೆ ನಿರ್ಣಯ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಉಪಾಧ್ಯಕ್ಷೆ ಇಶ್ರತ್‌ ಫಾತಿಮಾ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್‌.ಶಿವಲಿಂಗು, ಪೌರಾಯುಕ್ತ ಎಸ್‌.ಲೋಕೇಶ್‌ ಇದ್ದರು.

ರಸ್ತೆ ದುಸ್ಥಿತಿ: ಅಸಮಾಧಾನ

ನಗರದ ಬಹುತೇಕ ಮುಖ್ಯರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳಿವೆ. ಆದರೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ದುರಸ್ತಿ ಮಾಡಲು ವಿಫಲರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

1ನೇ ವಾರ್ಡ್‌ ಸದಸ್ಯ ನಾಗೇಶ್‌ ಪ್ರಸ್ತಾಪಿಸಿ, ವಿವಿಧ ರಸ್ತೆಗಳ ಬದಿಯಲ್ಲಿ ಚರಂಡಿ ನಿರ್ಮಿಸಿಲ್ಲ. ಹೀಗಾಗಿ ನೀರು ರಸ್ತೆಯಲ್ಲೇ ಹರಿಯುವ ಪರಿಸ್ಥಿತಿ ಇದೆ. ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದೀಪಗಳಿಲ್ಲ ಕಾರಣ ಜನರಿಗೆ ತೊಂದರೆಯಾಗುತ್ತಿದೆ’ ಎಂದರು.

ಶ್ರೀಧರ್‌ ಮಾತನಾಡಿ ‘ಚೀರನಹಳ್ಳಿ ರಸ್ತೆ ಜಿಲ್ಲಾ ಮುಖ್ಯ ರಸ್ತೆಯಾಗಿದ್ದರೂ ಅಲ್ಲಿಯ ದುಸ್ಥಿತಿಯಿಂದ ಓಡಾಡಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಆರೋಪಿಸಿದರು.

ಮಿಮ್ಸ್‌ನಲ್ಲಿ ಬಿ.ಪಿ ಪರೀಕ್ಷೆ ಯಂತ್ರವಿಲ್ಲ!

ಸದಸ್ಯ ರಾಮಲಿಂಗಯ್ಯ ಮಾತನಾಡಿ ‘ಮಿಮ್ಸ್‌ ಆಸ್ಪತ್ರೆಯಲ್ಲಿ ರೋಗಿಗಳ ಬಿ.ಪಿ ಪರೀಕ್ಷೆ ಮಾಡಲು ಯಂತ್ರಗಳಿಲ್ಲ. ಸರ್ಕಾರದಿಂದ ಬರುವ ಕೋಟ್ಯಂತರ ರೂಪಾಯಿ ಅನುದಾನ ಏನಾಗುತ್ತಿದೆ’ ಎಂದು ಪ್ರಶ್ನಿಸಿದರು.

ಸದಸ್ಯರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡರ ವಿರುದ್ಧ ಮುಗಿಬಿದ್ದರು. ‘ಮಿಮ್ಸ್‌ ಅವ್ಯವಸ್ಥೆ ಕುರಿತು ಇನ್ನೊಂದು ದಿನ ಚರ್ಚಿಸೋಣ’ ಎಂದು ಅಧ್ಯಕ್ಷ ಮಂಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT