ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಂಪೇಗೌಡ ನಿರ್ಮಿಸಿದ ಕೆರೆಗಳು ನಾಶ: ತೈಲೂರು ವೆಂಕಟಕೃಷ್ಣ ಕಳವಳ

Published 30 ಜೂನ್ 2024, 13:38 IST
Last Updated 30 ಜೂನ್ 2024, 13:38 IST
ಅಕ್ಷರ ಗಾತ್ರ

ಮಂಡ್ಯ: ‘ನಾಡಪ್ರಭು ಕೆಂಪೇಗೌಡ ಅವರು ದೂರದೃಷ್ಟಿಯಿಂದ ಬೆಂಗಳೂರಿನಲ್ಲಿ ಕೆರೆಗಳನ್ನು ನಿರ್ಮಾಣ ಮಾಡಿದ್ದರು. ಅಭಿವೃದ್ಧಿ ಹೆಸರಿನಲ್ಲಿ ಆ ಎಲ್ಲ ಕೆರೆಗಳನ್ನು ನಾಶ ಮಾಡಲಾಗಿದೆ. ನೀರಿನ ಅಭಾವ ಎದುರಿಸುವ ಕಾಲ ಸನಿಹದಲ್ಲಿದೆ. ಈಗಲೇ ಎಚ್ಚೆತ್ತುಕೊಂಡು ಅಲ್ಲಿ ಕೆರೆ ಉಳಿವು ಆಗಬೇಕು’ ಎಂದು ಸಾಹಿತಿ ತೈಲೂರು ವೆಂಕಟಕೃಷ್ಣ ಸಲಹೆ ನೀಡಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಕೆಂಪೇಗೌಡರು ನಿರ್ಮಿಸಿದ್ದ ಕೆರೆ ಪ್ರದೇಶಗಳು ಈಗ ಬಸ್ ನಿಲ್ದಾಣ, ಕ್ರೀಡಾಂಗಣ, ಬಡಾವಣೆಯಾಗಿ ಪರಿವರ್ತನೆಯಾಗಿವೆ. ಹಲವು ಕೆರೆಗಳು ಒತ್ತುವರಿಯಾಗಿವೆ. ಬೆರಳೆಣಿಕೆ ಕೆರೆಗಳಷ್ಟೇ ಉಳಿದುಕೊಂಡಿವೆ. 1985ರಲ್ಲಿ ಬೆಂಗಳೂರಿನಲ್ಲಿರುವ ಕೆಂಪೇಗೌಡರ ಕಾಲದ ಕೆರೆಗಳನ್ನು ಸಮೀಕ್ಷೆ ನಡೆಸಿದಾಗ 390 ಕೆರೆಗಳಿದ್ದವು ಎಂದು ವಿಷಾದಿಸಿದರು.

ಕೆಂಪೇಗೌಡರು ಬೆಂಗಳೂರನ್ನು ರಾಜಧಾನಿಯನ್ನಾಗಿ ಮಾಡುವುದರೊಂದಿಗೆ ಎಲ್ಲ ಜಾತಿ, ಸಮುದಾಯದ ಜನರಿಗೆ ಆರ್ಥಿಕ ಶಕ್ತಿಯನ್ನು ತುಂಬಲು ಪ್ರತ್ಯೇಕವಾದ ಪೇಟೆಗಳನ್ನು ತೆರೆದಿದ್ದರು. ರಾಜಧಾನಿಗೆ ಪೂರಕವಾಗಿ ನೀರಿನ ಸೌಲಭ್ಯಕ್ಕೆ ನೂರಾರು ಕೆರೆಗಳನ್ನು ನಿರ್ಮಿಸಿದ್ದರು. ಆಗ ಯಾವುದೇ ಯಂತ್ರೋಪಕರಣಗಳು, ಸಾಧನ-ಸಲಕರಣೆಗಳಿಲ್ಲದಿದ್ದರೂ ವೈಜ್ಞಾನಿಕವಾಗಿ ಕೆರೆಗಳನ್ನು ನಿರ್ಮಿಸಿ ನಿರ್ವಹಣೆ ಮಾಡುತ್ತಿದ್ದರು ಎಂದರು.

ಮಣ್ಣು ತೋಡುವುದರಿಂದ ಅಪಾಯ:

ಪ್ರಸ್ತುತದಲ್ಲಿ ಕೆರೆಗಳನ್ನು ನಿರ್ಮಿಸುವ ಆಲೋಚನೆಯೂ ಇಲ್ಲ, ಅಳಿದುಳಿದಿರುವ ಕೆರೆಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಬೇಕೆಂಬ ಚಿಂತನೆಯೂ ಇಲ್ಲ. ಕಳೆದ ಮೂರು ತಿಂಗಳಲ್ಲಿ ಜಿಲ್ಲೆಯ ಎಲ್ಲ ಕೆರೆಗಳಿಂದ ರೈತರು ಮನಸೋಇಚ್ಛೆ ಮಣ್ಣನ್ನು ತೆಗೆದು ಹಾಳುಗೆಡವಿದ್ದಾರೆ. ಕೆರೆಗಳಲ್ಲಿ 3 ರಿಂದ 4 ಅಡಿಯವರಗಷ್ಟೇ ಮಣ್ಣನ್ನು ತೆಗೆಯಬೇಕು. ಜಿಗಟು ಮಣ್ಣು ಕೆರೆಯಲ್ಲೇ ಉಳಿದರೆ ನೀರು ಇಂಗುವಿಕೆಯನ್ನು ತಪ್ಪಿಸುತ್ತದೆ. ಆದರೆ, ಕೆರೆಗಳಲ್ಲಿ 10 ರಿಂದ 15 ಅಡಿಯವರೆಗೆ ಮಣ್ಣನ್ನು ತೆಗೆದಿರುವುದು ಕೆರೆಗಳ ಸುರಕ್ಷತೆಗೆ ಅಪಾಯ ತಂದೊಡ್ಡಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಕೆಂಪೇಗೌಡರು ಉತ್ತಮ ಆಡಳಿತ ಮತ್ತು ಅಭಿವೃದ್ಧಿಗೆ ಒತ್ತು ನೀಡಿದ್ದರು. ಅವರ ಕಾಲದಲ್ಲಿ ಎಲ್ಲ ಜನರಿಗೂ ಜವಾಬ್ದಾರಿ ಎನ್ನುವುದಿತ್ತು. ಆಡಳಿತ ನಡೆಸುವವರನ್ನೇ ಗುರಿಯಾಗಿಸಿಕೊಂಡು ಜವಾಬ್ದಾರರನ್ನಾಗಿ ಮಾಡುತ್ತಿರಲಿಲ್ಲ. ಈಗಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ನಡೆಸುವವರನ್ನೇ ಎಲ್ಲದಕ್ಕೂ ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೊಮ್ಮೇರಹಳ್ಳಿ ಆದಿಚುಂಚನಗಿರಿ ಶಾಖಾ ಮಠದ ಪುರುಷೋತ್ತಮಾನಂದ ಸ್ವಾಮೀಜಿ ಮಾತನಾಡಿದರು. ಜಿಲ್ಲಾಧಿಕಾರಿ ಕುಮಾರ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜು, ಜಿ.ಪಂ. ಸಿಇಒ ಶೇಖ್ ತನ್ವೀರ್‌ ಆಸಿಫ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಕೃಷ್ಣ, ಜಿಲ್ಲಾ ಘಟಕದ ಅಧ್ಯಕ್ಷ ಕೆ.ಸಿ.ರವೀಂದ್ರ, ನೇಗಿಲ ಯೋಗಿ ಟ್ರಸ್ಟ್‌ನ ರಮೇಶ್, ಕೀಲಾರ ಕೃಷ್ಣೇಗೌಡ, ಎಲ್‌.ಕೃಷ್ಣ, ಕೆಂಪೇಗೌಡ ವೇಷಧಾರಿ ಕುಮಾರ್‌ ಭಾಗವಹಿಸಿದ್ದರು.

ಸಾಧಕರಿಗೆ ಸನ್ಮಾನ

ಸಂಘಟನೆಯ ವಿಭಾಗ- ಜ್ಯೋತಿ ನಾಗಣ್ಣಗೌಡ, ರೈತ ಚಳವಳಿ ನಾಯಕ- ಎ.ಎಲ್‌.ಕೆಂಪೂಗೌಡ, ಯುವ ಸಂಘಟನೆಯ- ತಗ್ಗಳ್ಳಿ ವೆಂಕಟೇಶ್, ರಕ್ತದಾನ ಶಿಬಿರ ಸಂಘಟನೆ- ಎನ್.ಕೆ.ಯುವ ಬ್ರಿಗೇಡ್, ಕ್ರೀಡಾ ಕ್ಷೇತ್ರ- ಅರವಿಂದ್ ಅವರನ್ನು ಸನ್ಮಾನಿಸಲಾಯಿತು.

ಬಹುಮಾನ ವಿತರಣೆ: ಕೆಂಪೇಗೌಡ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಜೊತೆಗೆ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಸಹಾಯ ಧನ ನೀಡಲಾಯಿತು.

ಮೆರವಣಿಗೆಗೆ ಕಲಾತಂಡಗಳ ಮೆರುಗು

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕೆಂಪೇಗೌಡರ ಪ್ರತಿಮೆಯ ಮೆರವಣಿಗೆಗೆ ಕೊಮ್ಮೇರಹಳ್ಳಿ ಆದಿಚುಂಚನಗಿರಿ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ ಭಾನುವಾರ ಚಾಲನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ಹೊರಟ ಕೆಂಪೇಗೌಡರ ಭಾವಚಿತ್ರ ಹೊತ್ತ ಮೆರವಣಿಗೆಯು ನಗರದ ಜೆ.ಸಿ.ವೃತ್ತ, ಮಹಾವೀರ ವೃತ್ತ, ವಿ.ವಿ. ರಸ್ತೆ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಭವನ ತಲುಪಿತು. ಮೆರವಣಿಗೆಯಲ್ಲಿ ಪೂಜಾ ಕುಣಿತ, ಡೊಳ್ಳು ಕುಣಿತ, ಬೊಂಬೆ ಕುಣಿತ, ಕೋಲಾಟ, ತಮಟೆ, ವೀರಗಾಸೆ, ಎತ್ತಿನ ಗಾಡಿ ಮೆರವಣಿಗೆ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ಪೂರ್ಣ ಕುಂಭ ಹೊತ್ತ ಮಹಿಳೆಯರು ಮೆರವಣಿಗೆಗೆ ಮೆರುಗು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT