ಬುಧವಾರ, ನವೆಂಬರ್ 13, 2019
18 °C
ನಾಗರಿಕರಿಗೊಂಡು ಸವಾಲು ಕಾರ್ಯಕ್ರಮ; ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಸೂಚನೆ

ಡೆಂಗಿ, ಚಿಕೂನ್‌ ಗುಕನ್ಯಾ ಮುಕ್ತ ಜಿಲ್ಲೆ ರೂಪಿಸಿ

Published:
Updated:
Prajavani

ಮಂಡ್ಯ: ‘ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಶುಚಿಯಾಗಿಟ್ಟುಕೊಂಡು ಡೆಂಗಿ, ಚಿಕೂನ್‌ಗುನ್ಯಾ ಹಾವಳಿ ನಿಯಂತ್ರಿಸಬೇಕು. ಡೆಂಗಿ, ಚಿಕೂನ್‌ಗುನ್ಯಾ ಮುಕ್ತ ಜಿಲ್ಲೆ ರೂಪಿಸಲು ಎಲ್ಲರೂ ಶ್ರಮಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ‘ನಾಗರಿಕರಿಗೊಂದು ಸವಾಲು’ ಸಮಾರಂಭದಲ್ಲಿ ಜಾಗೃತಿ ಸಾಮಗ್ರಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಮಳೆ ಸಂದರ್ಭದಲ್ಲಿ ಟೈರ್‌, ತೆಂಗಿನಕಾಯಿ ಚಿಪ್ಪು, ಮಡಿಕೆ, ತೆರೆದ ಜಾಗದಲ್ಲಿ ನೀರು ಶೇಖರಗೊಂಡು ಈಡಿಸ್‌ ಸೊಳ್ಳೆಗಳು ಮೊಟ್ಟೆ ಇಡುವುದರ ಮೂಲಕ ಲಾರ್ವಾ ಉತ್ಪಾದನೆ ಆಗುತ್ತದೆ. ನವೆಂಬರ್‌, ಡಿಸೆಂಬರ್‌ನಲ್ಲಿ ಹೆಚ್ಚಿನ ಲಾರ್ವಾ ಉತ್ಪಾದನೆಯಾಗುತ್ತದೆ. ಸಾರ್ವಜನಿಕರು ನೀರು ನಿಲ್ಲದಂತೆ ಎಚ್ಚರ ವಹಿಸಬೇಕು’ ಎಂದು ಸಲಹೆ ನೀಡಿದರು.

‘ಡೆಂಗಿ ಜ್ವರ ಬಂದರೆ ಮನೆಯವರಿಗಲ್ಲದೆ ಇಡೀ ಊರಿನ ಜನರಿಗೆ ಹರಡುವ ಸಾಧ್ಯತೆ ಇರುತ್ತದೆ. ರಾಷ್ಟ್ರೀಯ ಆರೋಗ್ಯ ಸಂಸ್ಥೆ ಹೇಳಿರುವ ಪ್ರಕಾರ ಕೀಟಗಳು ಗಾತ್ರದಲ್ಲಿ ಚಿಕ್ಕದಾದರೂ, ಅವುಗಳಿಂದಾಗುವ ನಷ್ಟ ಮತ್ತು ಹಾನಿ ಬೃಹತ್ ಪ್ರಮಾಣದಲ್ಲಿರುತ್ತದೆ. ನಮ್ಮ ಸುತ್ತಮುತ್ತಲ ವಾತಾವರಣ, ಸಮುದಾಯ ಹಾಗೂ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು’ ಎಂದರು.

‘ನಾಗರಿಕರಿಗೊಂದು ಸವಾಲು ಕಾರ್ಯಕ್ರಮದ ಅಡಿ ಗ್ರಾಮೀಣ, ನಗರ ಪ್ರದೇಶಗಳಲ್ಲಿರುವ ಮನೆಗಳು ಮತ್ತು ಸರ್ಕಾರಿ ಹಾಗೂ ಎಲ್ಲಾ ಖಾಸಗಿ ಸಂಸ್ಥೆಗಳಿಗೆ ಆರೋಗ್ಯ ಸಹಾಯಕರು,ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಡೆಂಗಿ, ಚಿಕೂನ್‌ಗುನ್ಯಾ ಸೇರಿ ಇತರ ರೋಗಗಳ ಬಗ್ಗೆ ಅವರಲ್ಲಿ ಪ್ರಶ್ನೆಗಳನ್ನು ಕೇಳಿ, ಸರಿಯಾದ ಉತ್ತರ ನೀಡಿದವರಿಗೆ ಪ್ರಮಾಣ ಪತ್ರವನ್ನು ಕೊಡುವುದರ ಮೂಲಕ ರೋಗ ನಿಯಂತ್ರಣದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಲಾಗುತ್ತದೆ’ ಎಂದು ಸಲಹೆ ನೀಡಿದರು.

‘ನಾಗರಿಕರೆಲ್ಲರೂ ಪ್ರಜ್ಞಾವಂತರಾಗಿ ಶುಷ್ಕದಿನವನ್ನು ಆಚರಿಸಬೇಕು. ‌ಮನೆಯಲ್ಲಿ ಹಾಗೂ ಸುತ್ತಮುತ್ತಲಿನ ಜಾಗದಲ್ಲಿ ಯಾವುದೇ ಕಾರಣಕ್ಕೂ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡದ ರೀತಿಯಲ್ಲಿ ಕ್ರಮವಹಿಸಬೇಕು. ಒಂದು ವೇಳೆ ಲಾರ್ವ ಕಂಡುಬಂದರೆ ಅವುಗಳನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸರ್ಕಾರದ ಜತೆಗೆ ಸಾರ್ವಜನಿಕರು ಕೈಜೋಡಿಸಬೇಕು’ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಚೇಗೌಡ, ಜಿಲ್ಲಾ ವಾರ್ತಾಧಿಕಾರಿ ಹರೀಶ್, ಡಾ.ಭವಾನಿ ಶಂಕರ್, ಡಾ.ಬಾಲಕೃಷ್ಣ, ಡಾ.ಅಶ್ವಥ್, ಡಾ.ಆಶಾ ಲತಾ ಇದ್ದರು.

ಪ್ರತಿಕ್ರಿಯಿಸಿ (+)