ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳವಳ್ಳಿ ಹುಚ್ಚೇಗೌಡರ ಸೊಸೆ ಎಲ್ಲಿದ್ದಾರೆ?ಸಂಸದೆ ಸುಮಲತಾ ಅಂಬರೀಶ್‌ಗೆ ಜನ ಪ್ರಶ್ನೆ

Last Updated 13 ಅಕ್ಟೋಬರ್ 2022, 14:11 IST
ಅಕ್ಷರ ಗಾತ್ರ

ಮಂಡ್ಯ: ಟ್ಯೂಷನ್‌ಗೆ ತೆರಳಿದ್ದ ಮಳವಳ್ಳಿ ಬಾಲಕಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಳವಳ್ಳಿ ಜನ ಮಂಡ್ಯಾ ಸಂಸದೆ ಸುಮಲತಾ ಅಂಬರೀಶ್ ಅವರ ಮೇಲೆ ಗರಂ ಆಗಿದ್ದಾರೆ.

ಘಟನೆ ನಡೆದು 3 ದಿನ ಕಳೆದರೂ ಸಂಸದೆ ಸುಮಲತಾ ಸ್ಥಳಕ್ಕೆ ಬಂದು ಪೋಷಕರಿಗೆ ಸಾಂತ್ವನ ಹೇಳದಿರುವುದಕ್ಕೆ ಜಿಲ್ಲೆಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಚುನಾವಣೆ ಸಂದರ್ಭದಲ್ಲಿ ಸುಮಲತಾ ಹೇಳಿದ್ದ ‘ನಾನು ಮಳವಳ್ಳಿ ಹುಚ್ಚೇಗೌಡ ಸೊಸೆ’ ಹೇಳಿಕೆ ಎಲ್ಲೆಡೆ ಹರಿದಾಡಿತ್ತು. ಈಗ ಇದೇ ಹೇಳಿಕೆ ಬಳಸುತ್ತಿರುವ ಜನರು ‘ಮಳವಳ್ಳಿ ಹುಚ್ಚೇಗೌಡರ ಸೊಸೆ ಎಲ್ಲಿದ್ದಾರೆ’ ಎಂದು ಪ್ರಶ್ನಿಸುತ್ತಿದ್ದಾರೆ.
ಸುಮಲತಾ ಅವರ ಹೇಳಿಕೆ ಪಡೆಯಲು ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಲಿಲ್ಲ.

ಮಳವಳ್ಳಿ (ಮಂಡ್ಯ):ಶಾಲೆಗೆ ತೆರಳಿದ್ದರೆ ನನ್ನ ಕಂದಮ್ಮ ಬದುಕುತ್ತಿದ್ದಳು, ದಸರಾ ರಜೆ ಮುಗಿಯದ ಕಾರಣ ಮನೆಯಲ್ಲೇ ಇದ್ದ ಕಂದಮ್ಮನನ್ನು ಆ ಕಿರಾತಕ ಬೆಳಿಗ್ಗೆಯೇ ಕರೆಸಿಕೊಂಡು ಹಾಳು ಮಾಡಿ, ಕೊಂದು ಹಾಕಿದ್ದಾನೆ...

ಟ್ಯೂಷನ್‌ ಕೇಂದ್ರದ ಕೆಲಸಗಾರನಿಂದ ಅತ್ಯಾಚಾರಕ್ಕೊಳಗಾಗಿ, ಕೊಲೆಯಾದ ಪಟ್ಟಣದ 10 ವರ್ಷದ ಬಾಲಕಿಯ ತಾತನ ಗೋಳು ಮುಗಿಲು ಮುಟ್ಟಿತ್ತು. ಸಂಜೆ 5ರಿಂದ 6.30ರವರೆಗೆ ಟ್ಯೂಷನ್‌ ನಡೆಯುತ್ತಿತ್ತು, ಪ್ರತಿದಿನ ಮೊಮ್ಮಗಳನ್ನು ತಾತನೇ ಟ್ಯೂಷನ್‌ಗೆ ಕರೆದೊಯ್ದು ಮನೆಗೆ ಕರೆದುಕೊಂಡು ಬರುತ್ತಿದ್ದರು. ಆದರೆ ಮಂಗಳವಾರ (ಅ.11) ಮಾತ್ರ ಆರೋಪಿ ಬಾಲಕಿಯೊಬ್ಬಳನ್ನು ಬೆಳಿಗ್ಗೆಯೇ ಕರೆಸಿಕೊಂಡಿದ್ದ.

ದಸರಾ ರಜೆ ಮುಗಿದು ವಿವಿಧೆಡೆ ಶಾಲೆಗಳು ಪುನರಾರಂಭಗೊಂಡಿವೆ, ಜಿಲ್ಲೆಯಲ್ಲಿ ರಜೆ ಅ.16ರವರೆಗೂ ಇದೆ. ಆದರೆ ಕೆಲವು ಖಾಸಗಿ ಶಾಲೆಗಳು ಆರಂಭಗೊಂಡಿದ್ದರೂ ಕೆ.ಆರ್.ಪೇಟೆ ತಾಲ್ಲೂಕಿನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಶಾಲಾ ಬಸ್‌ಗಳನ್ನು ಕಳುಹಿಸಲಾಗಿದೆ. ಹೀಗಾಗಿ ಖಾಸಗಿ ಶಾಲೆಗಳೂ ಬಂದ್‌ ಆಗಿವೆ.

ಬಾಲಕಿ ಓದುತ್ತಿದ್ದ ಖಾಸಗಿ ಶಾಲೆಗೂ ರಜೆ ಇತ್ತು. ರಜೆ ಎಂದು ತಿಳಿದ ಆರೋಪಿ ‘ಇಲ್ಲೇ ಕುಳಿತು ಹೋಂ ವರ್ಕ್‌ ಮಾಡು ಬಾ’ ಎಂದು ತಿಳಿಸಿ ಕರೆಸಿಕೊಂಡಿದ್ದಾನೆ.

‘ನಾನು ಬೆಳಿಗ್ಗೆಯೇ ಹೊಲಕ್ಕೆ ತೆರಳಿದ್ದೆ, ನಾನು ಮನೆಯಲ್ಲಿ ಇದ್ದದ್ದಿರೆ ನಾನೂ ಮೊಮ್ಮಗಳ ಜೊತೆಯಲ್ಲೇ ಹೋಗುತ್ತಿದ್ದೆ. ವಾಪಸ್‌ ಬರುವಷ್ಟರಲ್ಲಿ ಕಂದಮ್ಮ ಮನೆಯಲ್ಲಿ ಇರಲಿಲ್ಲ. ಬೆಳಿಗ್ಗಿನ ಹೊತ್ತಲ್ಲಿ ಟ್ಯೂಷನ್‌ ಇರುತ್ತದೆಯೇ ಎಂಬ ಪ್ರಶ್ನೆ ಮೂಡಿತು. ಆಗಲೇ ನಾನು ಟ್ಯೂಷನ್‌ ಕೇಂದ್ರಕ್ಕೆ ಹೋಗಬೇಕಾಗಿತ್ತು.‌ ನನ್ನ ಕೈಯೊಳಗೆ ಆಡಿದ ಮಗಳು ಈಗಿಲ್ಲವಲ್ಲ ದೇವರೇ’ ಎಂದು ಅವರು ದುಖಿಃಸಿದರು.

ಹಲವು ಬಾರಿ ಎಚ್ಚರಿಕೆ

ಆರೋಪಿಯು ಇದಕ್ಕೂ ಮೊದಲು ಟ್ಯೂಷನ್‌ ಕೇಂದ್ರದ ಮಕ್ಕಳಿಗೆ, ಶಿಕ್ಷಕಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ಈ ಹಿಂದೆ ಆತನಿಗೆ 2 ಬಾರಿ ಎಚ್ಚರಿಕೆ ನೀಡಲಾಗಿತ್ತು, ಒಮ್ಮೆ ಪೋಷಕರೊಬ್ಬರು ಏಟನ್ನೂ ಹಾಕಿದ್ದರು. ಜೊತೆಗೆ ಟ್ಯೂಷನ್‌ ಕೇಂದ್ರಕ್ಕೆ ಪಾಠ ಮಾಡಲು ಬರುತ್ತಿದ್ದ ಇಬ್ಬರು ಶಿಕ್ಷಕಿಯರ ವಿರುದ್ಧವೂ ಇದೇ ರೀತಿ ನಡೆದುಕೊಂಡಿದ್ದ. ಹೀಗಾಗಿ ಅವರು 4 ತಿಂಗಳ ಹಿಂದೆ ಕೆಲಸ ಬಿಟ್ಟಿದ್ದರು.

ಶಿಕ್ಷಕರು ಬಾರದ ಕಾರಣ ಆರೋಪಿ ಮಕ್ಕಳಿಗೆ ತಾನೇ ಪಾಠ ಮಾಡುತ್ತಿದ್ದ. ಟ್ಯೂಷನ್‌ ಕೇಂದ್ರದ ಫಲಕದಲ್ಲಿ ತನ್ನ ಹೆಸರಿನ ಜೊತೆ ಎಂ.ಎ, ಬಿಇಡಿ ಎಂದು ಹಾಕಿಕೊಂಡಿದ್ದ. ಈತ ಶಿಕ್ಷಕನೋ ಅಥವಾ ಟ್ಯೂಷನ್‌ ಕೇಂದ್ರದ ಉಸ್ತುವಾರಿಯೋ ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಕಟ್ಟಡದ ಮಾಲೀಕ ಲಿಂಗೇಗೌಡ ಮೈಸೂರಿನಲ್ಲಿ ನೆಲೆಸಿದ್ದರು. ಹೀಗಾಗಿ ಆರೋಪಿ ಆಡಿದ್ದೇ ಆಟವಾಗಿತ್ತು ಎಂದು ಸ್ಥಳೀಯರು ತಿಳಿಸುತ್ತಾರೆ.

ಪಟ್ಟಣದಲ್ಲಿ 5 ವರ್ಷಗಳಿಂದ ನಡೆಯುತ್ತಿದ್ದ ಟ್ಯೂಷನ್‌ ಕೇಂದ್ರ ಅನಧಿಕೃತವಾಗಿದ್ದು ಯಾವುದೇ ಅನುಮತಿ ಪಡೆದಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT