ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳವಳ್ಳಿ| ಶುದ್ಧ ನೀರಿನ ಘಟಕ ಬಳಕೆಗೆ ಅಲಭ್ಯ

ಸಿದ್ಧವಾಗಿ 6 ವರ್ಷ, ಉದ್ಘಾಟನೆಗೆ ಮೀನಮೇಷ, ಅಂಕನಹಳ್ಳಿ ಜನರ ಪರದಾಟ
Published 18 ಜೂನ್ 2023, 23:40 IST
Last Updated 18 ಜೂನ್ 2023, 23:40 IST
ಅಕ್ಷರ ಗಾತ್ರ

ಮಳವಳ್ಳಿ: ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ತಾಲ್ಲೂಕಿನ ಅಂಕನಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ನೀರಿನ ಘಟಕ 6 ವರ್ಷಗಳೇ ಕಳೆದರೂ ಉದ್ಘಾಟನೆಗೊಳ್ಳದೇ ಜನರು ನೀರಿಗಾಗಿ ಅಲೆದಾಡುತ್ತಿದ್ದಾರೆ.

ಕಂದೇಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಕನಹಳ್ಳಿ ಗ್ರಾಮದ ಮುಖ್ಯರಸ್ತೆ ಬದಿಯಲ್ಲಿ ಗ್ರಾಮೀಣ ಕುಡಿಯುವ ನೀರು ಪೂರೈಕೆ ಹಾಗೂ ನೈರ್ಮಲ್ಯ ಇಲಾಖೆಯ ವತಿಯಿಂದ 2017-18ನೇ ಸಾಲಿನಲ್ಲಿ ಅಂದಾಜು ₹12 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ಘಟಕ ನಿರ್ಮಿಸಲಾಗಿದೆ.  ಉದ್ಘಾಟನೆ ಆಗಿಲ್ಲ ಎಂಬ ಕಾರಣದಿಂದ ಇಷ್ಟೂ ವರ್ಷ ಗ್ರಾಮದ ಜನರಿಗೆ ಇಲ್ಲಿ ಶುದ್ಧ ಕುಡಿಯುವ ನೀರು ದೊರೆತಿಲ್ಲ. 2–3 ಕಿ.ಮೀ. ದೂರದಿಂದ ಕುಡಿಯುವ ನೀರು ತರಬೇಕಾಗಿದೆ.

2017ರಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ನಿರ್ಮಾಣ ಜವ್ದಾಬಾರಿಯನ್ನು ಹೊಂದಿದ್ದ ಅಹಮದಾಬಾದ್‌ನ ‘ಪ್ರೇಮ್ ಚಕ್ರವರ್ತಿ ಡೆಮೋವೇರಿ ಈಶವೇಶ ಟೆಕಾಲ್ನಜಿ ಪ್ರೈ. ಲಿ.’ ಸಂಸ್ಥೆಯು ಘಟಕವನ್ನು ಗ್ರಾಮೀಣ ಕುಡಿಯುವ ನೀರು ಪೂರೈಕೆ ಹಾಗೂ ನೈರ್ಮಲ್ಯ ಇಲಾಖೆಗೆ ಹಸ್ತಾಂತರ ಮಾಡಿಲ್ಲ. ಕಟ್ಟಡ ಹಾಗೂ ಯಂತ್ರಗಳನ್ನು ಸ್ಥಾಪಿಸಿ ಆರು ವರ್ಷ ಕಳೆದರೂ ಇದುವರೆಗೂ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರಿನ ಭಾಗ್ಯ ಇಲ್ಲದಂತಾಗಿದೆ. ಯಂತ್ರಗಳು ತುಕ್ಕು ಹಿಡಿಯುತ್ತಿವೆ. ಘಟಕದ ಸುತ್ತ ಗಿಡಗಂಟಿಗಳು ಬೆಳೆದಿವೆ ಎಂಬುದು ಜನರ ದೂರು.

ಜನರ ಪರದಾಟ ಕಂಡು ಅಧಿಕಾರಿಗಳು ಹಾಗೂ ಹಿಂದಿನ ಶಾಸಕರ ಗಮನಕ್ಕೆ ಹತ್ತಾರು ಬಾರಿ  ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜನರ ತೆರಿಗೆ ಹಣ ಸರ್ಕಾರ ಖರ್ಚು ಮಾಡಿ , ಸಾರ್ವಜನಿಕರ ಉಪಯೋಗಕ್ಕೆಲಭ್ಯವಾಗದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಗಮನ ಹರಿಸಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರಾರಂಭಿಸಿ ಜನರಿಗೆ ನೀರು ಕೊಡಿಸಲಿ ಎಂದು ಗ್ರಾಮದ ಮಂಜೇಶ್ ಒತ್ತಾಯಿಸಿದ್ದಾರೆ.

ಬೇಸಿಗೆಯಲ್ಲಿ ಜನರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಶುದ್ಧ ನೀರು ಕುಡಿಯುವುದು ಉತ್ತಮ. ಇಲಾಖೆಯವರು ಎಚ್ಚೆತ್ತು ನೀರಿನ ಘಟಕಕ್ಕೆ ಚಾಲನೆ ನೀಡಬೇಕು. 6 ವರ್ಷಗಳ ಹಿಂದೆಯೇ ಲೋಕಾರ್ಪಣೆಗೆ ಸಜ್ಜಾಗಿದ್ದರೂ ಇನ್ನೂ ಜನರ ಬಳಕೆಗೆ ಲಭಿಸಿಲ್ಲ. ಘಟಕದ ಸಮಸ್ಯೆ ಬಗೆಹರಿಸಬೇಕಾದ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ.

ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದು ಕೂಡಲೇ ಅಧಿಕಾರಿಗಳಿಂದ ಮಾಹಿತಿ ಪಡೆದು ಘಟಕದ ಉದ್ಘಾಟನೆಗೆ ಇರುವ ಅಡೆತಡೆಗಳನ್ನು ನಿವಾರಿಸಲಾಗುವುದು.
ಮಹದೇವಸ್ವಾಮಿ ಪ್ರಭಾರ ಎಇಇ. ಗ್ರಾಮೀಣ ಕುಡಿಯುವ ನೀರು ಪೂರೈಕೆ ಹಾಗೂ ನೈರ್ಮಲ್ಯ ಇಲಾಖೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT