ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿ ಸಾಕಣೆಯಲ್ಲಿ ಮಕ್ಬೂಲ್ ಪಟೇಲ ಕಮಾಲ್‌!

ಹೆಗ್ಗನದೊಡ್ಡಿಯ ಪ್ರಗತಿಪರ ರೈತನ ಯಶೋಗಾಥೆ; ಪಶುಮೇಳದಲ್ಲಿ ಸನ್ಮಾನ ಇಂದು
Last Updated 4 ಜನವರಿ 2019, 20:15 IST
ಅಕ್ಷರ ಗಾತ್ರ

ಸುರಪುರ: ಅತ್ಯಾಧುನಿಕ ಪದ್ಧತಿಯಲ್ಲಿ ಕೆಂಗೂರಿ ಸಾಕಾಣಿಕೆ ಮಾಡಿ ತಾಲ್ಲೂಕಿನ ಹೆಗ್ಗನದೊಡ್ಡಿ ಗ್ರಾಮದ ಮಕ್ಬೂಲ್ ಪಟೇಲ ಯಶಸ್ಸು ಕಂಡಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಮನೆ ಮಾತಾಗಿದ್ದಾರೆ.

ಕೆಂಪು ಬಣ್ಣದ ಕುರಿಗೆ ಈ ಭಾಗದಲ್ಲಿ ಕೆಂಗೂರಿ ಎನ್ನುತ್ತಾರೆ. ಈ ಕುರಿಗೆ ಆಂಧ್ರಪ್ರದೇಶ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಹೆಚ್ಚಿನ ಬೇಡಿಕೆ ಇದೆ. ಹೈದರಾಬಾದ್‍ನ ದಲ್ಲಾಳಿಗಳು ಸ್ಥಳಕ್ಕೇ ಬಂದು ಕುರಿಗಳನ್ನು ಖರೀದಿಸುತ್ತಾರೆ.

ಮೂರು ಎಕರೆ ಜಮೀನಿನಲ್ಲಿ 130/70 ಅಡಿ ಪ್ರದೇಶದಲ್ಲಿ ಕುರಿ ಶೆಡ್ ನಿರ್ಮಾಣ ಮಾಡಿದ್ದಾರೆ. ಶೆಡ್‍ನ ಎಂಟು ಅಡಿಗಳ ಎತ್ತರದಲ್ಲಿ ಕುರಿಗಳ ಸಾಕಾಣಿಕೆ ನಡೆಯುತ್ತದೆ. ಕುರಿಗಳ ಮೇಯಿಸುವಿಕೆ, ನೀರು ಕುಡಿಸುವುದು, ವಿಶ್ರಾಂತಿಗಾಗಿ ಅಧುನಿಕ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಕುರಿಗಳ ಹಿಕ್ಕೆ, ಮೂತ್ರ ಕೆಳಗೆ ಬೀಳುವುದರಿಂದ ನೈರ್ಮಲ್ಯ ಕೂಡ ಇರುತ್ತದೆ.

ಎರಡು ಎಕರೆ ಜಮೀನಿನಲ್ಲಿ ಕುರಿಗಳಿಗೆ ಆಹಾರಕ್ಕಾಗಿ ಮೆಕ್ಕೆಜೋಳ, ಜೋಳ ಬೆಳೆಯಲಾಗುತ್ತದೆ. ಚಾಪ್ ಕಟರ್‌ನಿಂದ ಮೇವು ಕತ್ತರಿಸಲಾಗುತ್ತದೆ. ನಿಯಮಿತವಾಗಿ ಪಶು ವೈದ್ಯರಿಂದ ತಪಾಸಣೆ ಮಾಡಿಸುತ್ತಾರೆ.

ಕರ್ಣಾಟಕ ಬ್ಯಾಂಕ್‌ನಿಂದ ₹30 ಲಕ್ಷ ಸಾಲ ತೆಗೆದುಕೊಂಡಿದ್ದಾರೆ. ನಬಾರ್ಡ್ 2.5 ಲಕ್ಷ ಸಹಾಯಧನ ನೀಡಿದೆ. ಮೂರುಜನ ಕಾರ್ಮಿಕರೊಂದಿಗೆ ಮಕ್ಬೂಲ್ ಕುರಿಗಳ ತೀವ್ರ ನಿಗಾ ವಹಿಸುತ್ತಾರೆ. ಕುರಿಗಳಿಗೆ ತಗಲುವ ಮಾರಕ ರೋಗಗಳಾದ ಪಿಪಿಆರ್ ಮತ್ತು ಕರಳು ಬೇನೆ ತಗುಲದಂತೆ ಮುಂಜಾಗ್ರತೆ ವಹಿಸುತ್ತಾರೆ.

‘ಸುತ್ತಮುತ್ತಲಿನ ಸಂತೆಗಳಲ್ಲಿ ಮೂರು ತಿಂಗಳು ವಯಸ್ಸಿನ ಕೆಂಗೂರಿಗಳನ್ನು ಪ್ರತಿಯೊಂದಕ್ಕೆ ₹3,500 ರಿಂದ 4 ಸಾವಿರ ಕೊಟ್ಟು ಖರೀದಿಸುತ್ತೇನೆ. ನಾಲ್ಕು ತಿಂಗಳು ಸಾಕಾಣಿಕೆ ಮಾಡುತ್ತೇವೆ. ನಂತರ ಕುರಿಗಳನ್ನು ₹8 ಸಾವಿರದಿಂದ 8,500 ಸಾವಿರದವರೆಗೆ ಮಾರಾಟ ಮಾಡುತ್ತೇನೆ. ಒಂದು ಕುರಿಗೆ ಸಾಕಾಣಿಕೆ ವೆಚ್ಚ ₹1,500 ರೂ ತಗಲುತ್ತದೆ‘ ಎನ್ನುತ್ತಾರೆ ಮಕ್ಬೂಲ್.

‘ಒಂದು ಕುರಿಯಿಂದ ಕನಿಷ್ಠ ₹2 ಸಾವಿರ ಲಾಭ ದೊರಕುತ್ತದೆ. ಸದ್ಯ ನಮ್ಮಲ್ಲಿ 350 ಕುರಿಗಳು ಇವೆ. ಶೆಡ್ 800 ಕುರಿಗಳನ್ನು ಸಾಕುವ ಸಾಮರ್ಥ್ಯ ಹೊಂದಿದೆ. ಈಗಾಗಲೇ ಒಂದು ಬಾರಿ 200 ಕುರಿಗಳನ್ನು ಸಾಕಿ ಮಾರಾಟ ಮಾಡಿದ್ದೇನೆ. ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಲಾಭ ಬಂದಿದೆ’ ಎಂದು ಸಂತೋಷ ವ್ಯಕ್ತಪಡಿಸುತ್ತಾರೆ.

ವೀಕ್ಷಿಸಲು ರೈತರ ದಂಡು:ಕುರಿ ಸಾಕಾಣಿಕೆ ವೀಕ್ಷಿಸಲು ವಿವಿಧೆಡೆಯಿಂದ ರೈತರು ಬರುತ್ತಾರೆ. ಮಕ್ಬೂಲ್ ಅವರ ಅಧುನಿಕ ಪದ್ಧತಿ ಸಾಕಾಣಿಕೆ ಕಂಡು ಮಾರುಹೋಗಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಕುರಿ ಸಾಕಾಣಿಕೆಯ ಬಗ್ಗೆ ಮಾಹಿತಿ ನೀಡುವುದೇ ಮಕ್ಬೂಲ್ ಅವರ ಕೆಲಸವಾಗಿಬಿಟ್ಟಿದೆ.

ಕುರಿ ಸಾಕಾಣಿಕೆಯನ್ನು ಮಕ್ಬೂಲ್ ಮಾಡಿದರೆ ಮಾರುಕಟ್ಟೆ, ಆರ್ಥಿಕ ವ್ಯವಹಾರ ಇತರ ಕೆಲಸಗಳನ್ನು ಅವರ ಅಣ್ಣ ಲಾಳೆ ಪಟೇಲ ನೋಡಿಕೊಳ್ಳುತ್ತಾರೆ. ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿರುವ ಸಹೋದರರಿಬ್ಬರೂ ಇತರ ರೈತರಿಗೆ ಮಾದರಿಯಾಗಿದ್ದಾರೆ.

‘ಪಶುಮೇಳದಲ್ಲಿ ಸನ್ಮಾನ’
ಅತ್ಯಾಧುನಿಕ ಪದ್ಧತಿಯ ಕುರಿ ಸಾಕಾಣಿಕೆಯಲ್ಲಿ ಯಶಸ್ಸು ಸಾಧಿಸಿದ್ದನ್ನು ಗುರುತಿಸಿ ರಾಜ್ಯ ಸರ್ಕಾರ ಮಕ್ಬೂಲ್ ಅವರನ್ನು ಜಿಲ್ಲೆಯ ಪ್ರಗತಿಪರ ರೈತ ಎಂದು ಆಯ್ಕೆ ಮಾಡಿದೆ. ಜ.5ರಂದು ಶನಿವಾರ ಸಿಂಧನೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಪಶುಮೇಳದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಕ್ಬೂಲ್ ಅವರನ್ನು ಸನ್ಮಾನಿಸಲಿದ್ದಾರೆ.
*
ವಿಶ್ವಾಸ ಮತ್ತು ಪರಿಶ್ರಮದಿಂದ ಯಶಸ್ಸು ಸಾಧಿಸಬಹುದೆಂಬುದಕ್ಕೆ ನಾವು ಮಾಡುತ್ತಿರುವ ಕುರಿ ಸಾಕಾಣಿಕೆ ಉತ್ತಮ ನಿದರ್ಶನ.
-ಲಾಳೆ ಪಟೇಲ, ರೈತನ ಅಣ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT