ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ ರೈತರಿಗೆ ಚೊಂಬುಕೊಟ್ಟ ಕಾಂಗ್ರೆಸ್‌: ಸಿ.ಟಿ.ರವಿ

ಬಿಜೆಪಿ– ಜೆಡಿಎಸ್‌ ಯುವ ಸಮಾವೇಶ; ರಾಜ್ಯ ಸರ್ಕಾರದ ವಿರುದ್ಧ ಸಿ.ಟಿ.ರವಿ ಆಕ್ರೋಶ
Published 23 ಏಪ್ರಿಲ್ 2024, 14:44 IST
Last Updated 23 ಏಪ್ರಿಲ್ 2024, 14:44 IST
ಅಕ್ಷರ ಗಾತ್ರ

ಮಂಡ್ಯ: ‘ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿರುವ ಜಿಲ್ಲೆಯ ರೈತರು ನೀರು ಕೊಡಿ ಎಂದು ಕೇಳುತ್ತಿದ್ದಾರೆ. ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವ ಕಾಂಗ್ರೆಸ್‌ ಸರ್ಕಾರ ಜಿಲ್ಲೆಯ ರೈತರಿಗೆ ಚೊಂಬು ಕೊಟ್ಟಿದೆ’ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಆರೋಪಿಸಿದರು.

ನಗರದ ಎಸ್.ಬಿ.ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಬಿಜೆಪಿ– ಜೆಡಿಎಸ್ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಮಂಡ್ಯ ಜಿಲ್ಲೆಯಲ್ಲಿ ರೈತರಿಗೆ ನೀರಿಲ್ಲ, ಬೆಂಗಳೂರಿಗೆ ಕುಡಿಯುವ ನೀರಿಲ್ಲ. ಆದರೆ ತಮಿಳುನಾಡಿನ ಸ್ಟಾಲಿನ್‌ಗೆ ನೀರು ಬಿಟ್ಟಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರ ಕೈ ಬಲಪಡಿಸಿದರೆ ಅವರು ಜಿಲ್ಲೆಯ ರೈತರ ಹಿತ ಕಾಯುವ ಕೆಲಸ ಮಾಡುತ್ತಾರೆ. ದೇಶಕ್ಕಾಗಿ ಮೋದಿ, ಕಾವೇರಿಗಾಗಿ ಕುಮಾರಣ್ಣ ಎಂಬ ಘೋಷಣೆ ಜಿಲ್ಲೆಯ ರೈತರ ಮನೆಯಲ್ಲಿ ಮೊಳಗಬೇಕು’ ಎಂದರು.

‘ನಾವು ಜೆಡಿಎಸ್‌ನ ಮೂವರನ್ನು ಗೆಲ್ಲಿಸಿದರೆ ರಾಜ್ಯದ ಉಳಿದೆಡೆ ಅವರು ಬಿಜೆಪಿಯ 25 ಜನರಿಗೆ ಬೆಂಬಲ ನೀಡುತ್ತಾರೆ. ಇದರಿಂದ ದೇಶಕ್ಕೆ ಒಂದು ಶಕ್ತಿ ದೊರೆಯುತ್ತದೆ. ಕಾಂಗ್ರೆಸ್‌ಗೆ ಮತ ನೀಡಿದರೆ ವಿಧಾನಸೌಧವನ್ನೇ ಮಾರಿಬಿಡುತ್ತಾರೆ. ಈ ಲೋಕಸಭಾ ಚುನಾವಣೆ ದೇಶ ಉಳಿಸುವ ಚುನಾವಣೆಯಾಗಿದೆ. ಜಾತಿ, ಹಣವನ್ನು ನೋಡಿಕೊಂಡು ಮತ ಹಾಕಿದರೆ ದೇಶ ಕಳೆದುಕೊಳ್ಳುತ್ತೇವೆ’ ಎಂದರು.

‘ಮತದಾನ ಎಂಬುದು ಒಂದು ಬ್ರಹ್ಮಾಸ್ತ್ರ ಎಂದು ಅಂಬೇಡ್ಕರ್ ಹೇಳಿದ್ದರು. ಇದು ನಮ್ಮ ದೇಶವನ್ನು ಉಳಿಸುವ ಅಸ್ತ್ರವಾಗಿದೆ. ಕಾಂಗ್ರೆಸ್‌ನ ಆಡಳಿತದಲ್ಲಿ ದೇಶ ದಿವಾಳಿಯ ಸ್ಥಿತಿಗೆ ಹೋಗಿತ್ತು. ಭೂಮಿ, ಆಕಾಶ, ಪಾತಾಳದಲ್ಲಿ ಭ್ರಷ್ಟಾಚಾರ ವ್ಯಾಪಿಸಿತ್ತು. ಆದರೆ ಕಳೆದ 10 ವರ್ಷಗಳಲ್ಲಿ ಒಂದೇ ಒಂದು ಭ್ರಷ್ಟಾಚಾರದ ಹಗರಣ ಇಲ್ಲ’ ಎಂದರು.

‘ಕಾಂಗ್ರೆಸ್ ಆಡಳಿತದಲ್ಲಿ ಪ್ರತಿದಿನ ಬಾಂಬ್ ಸ್ಫೋಟದ ಸುದ್ದಿ ಬರುತ್ತಿತ್ತು. ಮೋದಿ ಅವರು ಬಂದ ನಂತರ ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತು ಹಾಕಲಾಗಿದೆ. ನಮ್ಮ ಸರ್ಕಾರ ದೇಶ ವಿರೋಧಿಗಳ ಬಾಲ ಕತ್ತರಿಸುವ ಕೆಲಸ ಮಾಡುತ್ತಿದೆ. ನರೇಂದ್ರ ಮೋದಿ ಅವರ ಬಡವರ ಪರವಾದ ಯೋಜನೆಗಳಾದ ಜನಧನ್, ಗ್ಯಾಸ್ ಸಿಲಿಂಡರ್ ಪೂರೈಕೆ, ವಿದ್ಯುತ್ ಸಂಪರ್ಕ, ಜಲಜೀವನ್ ಮಿಷನ್ ಯೋಜನೆಗಳಿಂದ ದೇಶ ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ’ ಎಂದರು.

‘ಈಗ ವಿದೇಶಗಳಲ್ಲಿ ನಮ್ಮ ದೇಶದ ಪಾಸ್‌ ಪೋರ್ಟ್‌ಗೆ ಗೌರವ ಹೆಚ್ಚಿದೆ. ನಾಯಕತ್ವದ ತಾಕತ್ತು ಏನು ಎಂಬುದನ್ನು ಮೋದಿ ಅವರು ತೋರಿಸಿದ್ದಾರೆ. ವಿದೇಶಗಳಲ್ಲಿನ ಹಲವು ಕ್ಲಿಷ್ಟ ಸಂದರ್ಭಗಳಲ್ಲಿ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆತರಲಾಗಿದೆ. ನರೇಂದ್ರ ಮೋದಿ ಇದ್ದರೆ ರಕ್ಷಣೆ ಇದೆ ಎಂಬ ಭಾವನೆ ಜನರಲ್ಲಿದೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಇಂದ್ರೇಶ್, ಕಾರ್ಯಕಾರಿಣಿ ಸದಸ್ಯ ಸಿದ್ದರಾಮಯ್ಯ, ರಾಷ್ಟ್ರೀಯ ಕೋಶದ ಅಧ್ಯಕ್ಷ ಸಿದ್ದಾರ್ಥ್, ರಾಷ್ಟ್ರೀಯ ಯುವ ಮೋರ್ಚಾ ಕಾರ್ಯದರ್ಶಿ ಸ್ವಾಮಿ, ರೈತ ಮೋರ್ಚ ಅಧ್ಯಕ್ಷರಾದ ಅಶೋಕ್ ಜಯರಾಮ್, ಸಿ.ಪಿ.ಉಮೇಶ್‌, ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಂ. ರಘುಗೌಡ, ಅರುಣ್‌ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT