ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ ಕೊಡಲು ಪರದಾಡುವ ಮಾರಮ್ಮ!

‘ಗಮ್ಯ’ ಮಕ್ಕಳಿಂದ ‘ದೊಡ್‌ಮಾರಿ– ಚಿಕ್‌ಮಾರಿ’ ನಾಟಕ ಪ್ರದರ್ಶನ
ಎಂ.ಎನ್‌.ಯೋಗೇಶ್‌
Published 14 ಫೆಬ್ರುವರಿ 2024, 6:36 IST
Last Updated 14 ಫೆಬ್ರುವರಿ 2024, 6:36 IST
ಅಕ್ಷರ ಗಾತ್ರ

ಮಂಡ್ಯ: ಜನಪದ ಕತೆಗಳಲ್ಲಿ ಜನಜೀವನದ ಭಾಗವೇ ಆಗಿದ್ದ ದೈವಗಳು ನೆಲ ಸಂಸ್ಕೃತಿಯ ಪ್ರತೀಕವಾಗಿದ್ದವು. ಮಾರಮ್ಮ, ಕಾಳಮ್ಮ, ಪುರದಮ್ಮನಂತರ ಹಳ್ಳಿ ದೇವಿಯರು ಜನರ ಜೊತೆಯಲ್ಲಿ ಅಂತರ್ಗತವಾಗಿದ್ದರು. ಮಡಿ, ಮೈಲಿಗೆಯ ಬೇಲಿ ಇರಲಿಲ್ಲ, ಹೋಮ ಹವನಗಳ ಸೋಂಕಿರಲಿಲ್ಲ, ಕಡ್ಡಿ ಕರ್ಪೂರಗಳ ಅವಶ್ಯಕತೆ ಇರಲಿಲ್ಲ, ಮಂತ್ರ ಘೋಷಗಳ ಪಠಣ ಬೇಕಿರಲಿಲ್ಲ, ವ್ರತಾಚರಣೆಯ ನಿಯಮಗಳಿರಲಿಲ್ಲ.

ಆದರೆ, ಶಿಷ್ಟ ವ್ಯವಸ್ಥೆಯಲ್ಲಿ ‘ದೇವರು’ ಎಂಬ ಪರಿಕಲ್ಪನೆ ಜನಜೀವನದಿಂದ ದೂರವೇ ಸಾಗಿದ್ದು ಕಟ್ಟುಪಾಡು, ಕಂದಾಚಾರ, ಮೂಢನಂಬಿಕೆಗಳ ದಾಸ್ಯಕ್ಕೆ ಒಳಗಾಗಿದೆ. ದೇವರು ಕೊಟ್ಟರು ಪೂಜಾರಿ ಕೊಡದಂತಹ ಸ್ಥಿತಿ ನಿರ್ಮಾಣವಾಗಿದೆ.

ಶ್ರೀರಂಗಪಟ್ಟಣದ ಗಮ್ಯ ಸಂಸ್ಥೆ ಮಕ್ಕಳು ತಮ್ಮ ಮುಗ್ಧತೆಯೊಂದಿಗೆ, ತಿಳಿಹಾಸ್ಯ ಲೇಪನದೊಂದಿಗೆ ಅಭಿನಯಿಸಿದ ‘ದೊಡ್‌ ಮಾರಿ– ಚಿಕ್‌ ಮಾರಿ’ ರಂಗಪ್ರಯೋಗ ನೋಡುಗರನ್ನು ಗಂಭೀರ ಚಿಂತನೆಗೆ ಹಚ್ಚಿತು. ಈಚೆಗೆ ನಗರದ ಮಹಿಳಾ ಕಾಲೇಜು ವನರಂಗದಲ್ಲಿ ನಡೆದ ಕೋಟಿಗಾನಹಳ್ಳಿ ರಾಮಯ್ಯ ಅವರ ‘ನೆಲಸಂಸ್ಕೃತಿ ನಾಟಕೋತ್ಸವ’ದಲ್ಲಿ ಮಕ್ಕಳ ಅಭಿನಯ ಮನಸೂರೆಗೊಂಡಿತು.

ಶೇರು, ಮಾಲ್‌ ಸಂಸ್ಕೃತಿ, ಆನ್‌ಲೈನ್‌ ಮಾರುಕಟ್ಟೆಯ ನಡುವೆ ಸೌದೆ ಮಾರುವವನ ಹೊಟ್ಟೆ ತುಂಬುವುದಿಲ್ಲ. ಅವನ ಇಷ್ಟಾರ್ಥ ಈಡೇರಿಸಲು ಸಾಧ್ಯವಾಗದ ದೊಡ್‌ಮಾರಿ– ಚಿಕ್‌ಮಾರಿ ಇಕ್ಕಟ್ಟಿಗೆ ಸಿಲುಕುತ್ತಾರೆ, ಅಸಹಾಯಕರಾಗಿ ಪರದಾಡುತ್ತಾರೆ. ರಂಗರೂಪದ ತಿರುಳು ಸಮಕಾಲೀನ ವ್ಯವಸ್ಥೆಗೆ ಕನ್ನಡಿ ಹಿಡಿಯುತ್ತದೆ.

ಹಳ್ಳಿಜನರ ನಡುವೆ ಇರುವ ಜನಪದೀಯ ಮಾರಮ್ಮನಿಗೂ ಇಂದಿನ ರಾಮ, ಕೃಷ್ಣರಿಗೂ ಇರುವ ವೈರುಧ್ಯಗಳ ದರ್ಶನವಾಗುತ್ತವೆ. ಹಳ್ಳಿಗಳಲ್ಲಿ ಬೀಳು ಸುರಿಯುತ್ತಿರುವ ಮಾರಿ ಗುಡಿ, ನಗರಗಳ ಮಹಲುಗಳಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿರುವ ರಾಮ, ಕೃಷ್ಣರು ಯಾರಿಗಾಗಿ ಇದ್ದಾರೆ ಎಂಬ ಪ್ರಶ್ನೆ ಕಾಡುತ್ತದೆ. ಪ್ರಸ್ತುತ ವ್ಯವಸ್ಥೆಯಲ್ಲಿ ದೇವರು, ಭಕ್ತಿ ಎಂಬುದು ಆಡಳಿತಗಾರರ ಕೈಯೊಳಗಿನ ಅಸ್ತ್ರವಾಗಿರುವುದು ಅನಾವರಣಗೊಳ್ಳುತ್ತದೆ.

ಜನರ ನಾಲಗೆಯಲ್ಲಿದ್ದ ಜನಪರ ಬ್ರಹ್ಮ ಮಳವಳ್ಳಿ ದುಂಡಯ್ಯ ಅವರ ಕತೆಗೆ ಕೋಟಿಗಾನಹಳ್ಳಿ ರಾಮಯ್ಯ ವ್ಯವಸ್ಥೆಯ ತಲ್ಲಣಗಳನ್ನು ಪ್ರಶ್ನಿಸುತ್ತಾ ರಂಗರೂಪ ಕೊಟ್ಟಿದ್ದಾರೆ. ಆನ್‌ಲೈನ್‌ ಯುಗದಲ್ಲಿ ಬಡವನ ಪಾಡೇನು, ಸರ್ಕಾರದ ಉಜ್ವಲಾ ಯೋಜನೆಯಿಂದ ಎಷ್ಟು ಬಡವರ ಬದುಕು ಬಂಗಾರವಾಯಿತು, ಅವರಿಗೆ ಸಬ್ಸಿಡಿ ಸಿಗುತ್ತಿದೆಯೇ, ಸ್ವಚ್ಛಭಾರತ ಯೋಜನೆಯಲ್ಲಿ ಎಷ್ಟು ಜನರ ಮನಸ್ಸು ಶುದ್ಧವಾಯ್ತು ಮುಂತಾದ ಪ್ರಶ್ನೆಗಳೊಂದಿಗೆ ರಂಗಪ್ರಯೋಗ ಸಾಗುತ್ತದೆ.

ಪ್ರಸ್ತುತ ಸಂದರ್ಭವನ್ನು ಓರೆಗೆ ಹಚ್ಚುತ್ತಲೇ, ವೈರುಧ್ಯಗಳನ್ನು ಪ್ರಶ್ನಿಸುತ್ತಲೇ ನಾಟಕಕಾರ ನೆಲಸಂಸ್ಕೃತಿ, ನುಡಿ ಸಂಸ್ಕೃತಿಯ ಉಳಿವಿನತ್ತ ಹೆಜ್ಜೆ ಇಡುತ್ತಾರೆ.

ಗಮ್ಯ ಸಂಸ್ಥೆಯ ಯುವ ರಂಗ ನಿರ್ದೇಶಕ ಆದಿತ್ಯ ತಮ್ಮ ಸೃಜನಶೀಲತೆಯ ವಿನ್ಯಾಸ– ನಿರ್ದೇಶನದಿಂದ ಗಮನ ಸೆಳೆದರು. ಸ್ವತಃ ಗಾಯನ, ವಾದ್ಯ ಸಾಂಗತ್ಯದ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದರು. ಮಕ್ಕಳ ಪುಟಾಣಿ ಹೆಜ್ಜೆ, ಮುಗ್ಧತೆಯ ನಡುವಲ್ಲೇ ಹೊರಬಂದ ಪ್ರೌಢ ಅಭಿನಯ ನೋಡುಗರ ಮನಸ್ಸಿನಲ್ಲುಳಿಯಿತು.

ಶಾಂತಿಯ ತೋಟದ ಹೂಗಳ ಸೃಷ್ಟಿ ಮಳವಳ್ಳಿ ತಾಲ್ಲೂಕಿನ ಮಾದರಹಳ್ಳಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಅಭಿನಯಿಸಿದ ‘ಕೀಜ್‌ ಕೀಚ್‌ ಇಲಿ ಮತ್ತು ವ್ಯಾನಿಟಿ ಬ್ಯಾಗ್‌’ ರಂಗಪ್ರಯೋಗ ಶಾಂತಿ ಸೌಹಾರ್ದ ಸ್ನೇಹಪರತೆಯ ಸಂದೇಶ ಸಾರಿತು. ರಂಗದ ಮೇಲೆ ಕಾಡಿನ ಸೌಂದರ್ಯ ಪ್ರಾಣಿ ಪಕ್ಷಿಗಳ ಕಲರವ ಸೃಷ್ಟಿಸಿದ ಚಿಣ್ಣರು ಆನಂದದ ಹೊನಲು ಸೃಷ್ಟಿಸಿದರು. ತಾನು ಕಂಡ ವಿಶೇಷ ಸೂರಿನಲ್ಲಿ ಇತರ ಪ್ರಾಣಿಗಳಿಗೂ ಆಶ್ರಯ ಕೊಡುವ ಇಲಿಯ ಉದಾರತೆಯಲ್ಲಿ ಶಾಂತಿಯ ತೋಟದ ಹೂಗಳ ದರ್ಶನವಾಗುತ್ತದೆ. ಕರಡಿಗಳು ಸೂರಿಗೆ ದಾಳಿಯಿಟ್ಟಾಗ ಒಗ್ಗಟ್ಟು ಮುರಿಯಲು ಸಾಧ್ಯವೇ ಎಂಬ ಪ್ರಶ್ನೆ ಸೃಷ್ಟಿಯಾಗುತ್ತವೆ. ಸಂವಿಧಾನದ ಸೂರಿನಡಿಯಲ್ಲಿ ಎಲ್ಲರೂ ಒಂದೇ ಎಂಬ ಸಂದೇಶ ಮಕ್ಕಳ ಹೆಜ್ಜೆಗಳಿಂದ ಅನಾವರಣಗೊಂಡಿತು. ಸಂವಿಧಾನದ ಮುನ್ನುಡಿಯ ಗಾಯನ ಮನಸ್ಸಿಗೆ ಹತ್ತಿರವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT