ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ರಾಗಿಮುದ್ದೆ ಉಣ್ಣುವ ಸ್ಪರ್ಧೆ: 30 ನಿಮಿಷದಲ್ಲಿ 10 ಮುದ್ದೆ ತಿಂದ ಈರೇಗೌಡ

Published 2 ಜನವರಿ 2024, 10:13 IST
Last Updated 2 ಜನವರಿ 2024, 10:13 IST
ಅಕ್ಷರ ಗಾತ್ರ

ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆಯ ಈರೇಗೌಡ ಇಲ್ಲಿನ ಅಂಬೇಡ್ಕರ್‌ ಭವನದಲ್ಲಿ ಮಂಗಳವಾರ ಸಿರಿಧಾನ್ಯ ಹಬ್ಬದ ಅಂಗವಾಗಿ ನಡೆದ ನಾಟಿಕೋಳಿ ಸಾರು–ರಾಗಿಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಬರೋಬ್ಬರಿ 2.7 ಕೆ.ಜಿ. ತೂಕದ ಮುದ್ದೆ ಹೊಟ್ಟೆಗೆ ಇಳಿಸುವ ಮೂಲಕ ಅಗ್ರ ಸ್ಥಾನ ತಮ್ಮದಾಗಿಸಿಕೊಂಡರು.

ಸ್ಪರ್ಧಿಗಳಿಗೆ ಮುದ್ದೆ ತಿನ್ನಲು 30 ನಿಮಿಷಗಳ ಕಾಲಾವಕಾಶ ನೀಡಲಾಯಿತು. ಪ್ರತಿ ಮುದ್ದೆಯನ್ನೂ ತೂಕ ಹಾಕಿ ಬಡಿಸಲಾಯಿತು. ಅದರೊಟ್ಟಿಗೆ ಬಿಸಿ ನಾಟಿಕೋಳಿ ಸಾರು, ನೆಂಚಿಕೊಳ್ಳಲು ನಾಟಿ ಕೋಳಿಯ ಮಾಂಸ ಹಾಗೂ ಮೊಟ್ಟೆ ನೀಡಲಾಯಿತು. ಹತ್ತು ಸ್ಪರ್ಧಿಗಳು ಉತ್ಸಾಹದಿಂದ ಮುದ್ದೆ ಮುರಿದರು. 62 ವರ್ಷ ಪ್ರಾಯದ ಹುರಿಮೀಸೆಯ ಸರದಾರ ಈರೇಗೌಡ ಎಲ್ಲರಿಗಿಂತ ಮುಂದಾಗಿ ಮುದ್ದೆ ಮುರಿಯುತ್ತ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು. ನಿಗದಿತ ಸಮಯದಲ್ಲಿ ಬರೋಬ್ಬರಿ 10 ಮುದ್ದೆ ಉಂಡು ಸೈ ಎನಿಸಿಕೊಳ್ಳುವ ಮೂಲಕ ಪ್ರಶಸ್ತಿಗೆ ಕೊರಳೊಡ್ಡಿದರು.

ಅರಕೆರೆಯವರೇ ಆದ ದಿಲೀಪ್‌ ಪೈಪೋಟಿ ನೀಡಿದ್ದು, 1.682 ಕೆ.ಜಿ. ಮುದ್ದೆ ತಿನ್ನುವ ಮೂಲಕ ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು. ಟಿ.ಎಂ. ಹೊಸೂರು ನಿವಾಸಿ ರವೀಂದ್ರ 1.544 ಕೆ.ಜಿ. ಮುದ್ದೆ ತಿನ್ನುವ ಮೂಲಕ ತೃತೀಯ ಸ್ಥಾನ ಪಡೆದರು. ಸ್ಪರ್ಧೆಯ ಮೂರು ಬಹುಮಾನಗಳು ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಾದವು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ಅವರೂ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಅವರೂ ಆರು ಮುದ್ದೆ ತಿನ್ನುವ ಮೂಲಕ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT