ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ| ರಸ್ತೆಯೇ ಚರಂಡಿ; ದುರ್ವಾಸನೆ, ರೋಗಭೀತಿ

ಮಳೆ ನಿರ್ವಹಣೆಗೆ ಸಿದ್ಧಗೊಳ್ಳದ ನಗರಸಭೆ, ಪುರಸಭೆ ಆಡಳಿತ, ಸಾರ್ವಜನಿಕರ ಆಕ್ರೋಶ
Published 4 ಜೂನ್ 2023, 23:56 IST
Last Updated 4 ಜೂನ್ 2023, 23:56 IST
ಅಕ್ಷರ ಗಾತ್ರ

ಮಂಡ್ಯ: ಮುಂಗಾರು ಮಳೆ ಆರಂಭವಾಗುತ್ತಿದ್ದು ಜಿಲ್ಲೆಯಾದ್ಯಂತ ನಗರ, ಪಟ್ಟಣ ಪ್ರದೇಶಗಳಲ್ಲಿ ಚರಂಡಿ, ರಾಜಕಾಲುವೆ, ಮ್ಯಾನ್‌ ಹೋಲ್‌ ಉಕ್ಕಿ ಹರಿಯುವ ಸಮಸ್ಯೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ನಗರಸಭೆ, ಪುರಸಭೆ ಆಡಳಿತದ ವೈಫಲ್ಯದಿಂದಾಗಿ ಸ್ಥಳೀಯ ನಿವಾಸಿಗಳಿಗೆ ತೊಂದರೆ ತಪ್ಪಿಲ್ಲ.

ನಗರದ ಬಹುತೇಕ ಕಡೆಗಳಲ್ಲಿ ತೆರೆದ ಚರಂಡಿಗಳಿಂದಾಗಿ ಜನರು ದುರ್ವಾಸನೆ, ರೋಗ ಭೀತಿ ಅನುಭವಿಸುತ್ತಿದ್ದಾರೆ. 1ನೇ ವಾರ್ಡ್‌ ವ್ಯಾಪ್ತಿಯ ಆನೆಕೆರೆ ಬೀದಿ, ನಾಲಾಬಂದಿ ವಾಡೆ, ಕಾಳಿಕಾಂಬ ದೇವಾಲಯದ ಹಿಂಭಾಗದ ಕೊಳೆಗೇರಿ ಮುಂತಾದೆಡೆ ತೆರೆದ ಚರಂಡಿಗಳ ಕಾಟ ಹೆಚ್ಚಾಗಿದೆ. ಕೊಂಚ ದೊಡ್ಡ ಚರಂಡಿಯಾಗಿರುವ ಕಾರಣ ಸ್ಥಳೀಯರು ಅವುಗಳನ್ನು ರಾಜಾಕಾಲುವೆ ಎಂದೇ ಪರಿಗಣಿಸಿದ್ದಾರೆ.

ಮಳೆ ಬಂದಾಗ ಇಲ್ಲಿ ಸೃಷ್ಟಿಯಾಗುವ ಅವಾಂತರಗಳಿಗೆ ಸ್ಥಳೀಯ ನಗರಸಭೆ ಇಲ್ಲಿಯವರೆಗೂ ಪರಿಹಾರ ಕಂಡುಕೊಂಡಿಲ್ಲ. ನಾಲಾಬಂದಿವಾಡೆ ಜನರು ಮಳೆಗಾಲದಲ್ಲಿ ತೀವ್ರ ಸಮಸ್ಯೆ ಅನುಭವಿಸುತ್ತಾರೆ. ಮಳೆಗಾಲದಲ್ಲಿ ಚರಂಡಿ ಕಟ್ಟಿಕೊಂಡು ರಸ್ತೆಯಲ್ಲಿ ನೀರು ಹರಿಯುವ ಕಾರಣ ಸ್ಥಳೀಯರಿಗೆ ರೋಗಭೀತಿ ಹೆಚ್ಚಾಗುತ್ತದೆ.

3ನೇ ವಾರ್ಡ್‌ ವ್ಯಾಪ್ತಿಯ ಬೀಡಿ ಕಾರ್ಮಿಕರ ಕಾಲೊನಿ ಮಂಡ್ಯ ನಗರದ ನರಕವಾಗಿದ್ದು ಅಲ್ಲಿಯ ಜನರು ನರಕ ಸದೃಶ ಜೀವನ ಕಾಣುತ್ತಿದ್ದಾರೆ. ಮಳೆ ಎಂದರೆ ಅಲ್ಲಿಯ ಮಕ್ಕಳು, ಮಹಿಳೆಯರು ಭೀತಿ ವ್ಯಕ್ತಪಡಿಸುತ್ತಾರೆ. ಸ್ವಂತ ಸೂರಿನ ಕನಸಿನಿಂದ ಮನೆಕಟ್ಟಿಕೊಂಡ ಬೀಡಿ ಕಾರ್ಮಿಕರ ಕಾಲೊನಿ ನಿವಾಸಿಗಳು ನಿತ್ಯವೂ ಮಳೆ, ಚರಂಡಿ ನೀರಿನ ಭಯದಲ್ಲಿ ಬದುಕುತ್ತಿದ್ದಾರೆ. ಮಳೆ ಬಂದಾಗ ಮನೆಯೊಳಗೆ ಮಂಡಿಯುದ್ದ ನೀರು ತುಂಬಿಕೊಳ್ಳುತ್ತಿದ್ದು, ಜನ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

ಇಲ್ಲಿಯ ಸಮಸ್ಯೆ ಇಂದು, ನಿನ್ನೆಯದಲ್ಲ. ಹಲವು ವರ್ಷಗಳಿಂದಲೂ ಜನರು ಸಮಸ್ಯೆ ಅನುಭವಿಸುತ್ತಿದ್ದರೂ ನಗರಸಭೆ, ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಈಚೆಗೆ ನೂತನ ಶಾಸಕ ಗಣಿಗ ರವಿಕುಮಾರ್‌ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಜನರು ಹೊಸ ಶಾಸಕರ ಮಾತಿನ ಮೇಲೆ ಭರವಸೆ ಇಟ್ಟಿದ್ದಾರೆ.

ನಗರಸಭೆ ಸಿಬ್ಬಂದಿ ಸಮರ್ಪಕವಾಗಿ ಕಸ ವಿಲೇವಾರಿ ಮಾಡದ ಕಾರಣ ಚರಂಡಿ, ರಾಜಾಕಾಲುವೆ ನೀರಿನ ಸಮಸ್ಯೆಯಾಗುತ್ತಿದೆ. ನಗರಸಭೆಯಲ್ಲಿ 250 ಮಂದಿ ಪೌರಕಾರ್ಮಿಕರಿದ್ದಾರೆ, ಆಟೊ ಟಿಪ್ಪರ್‌ 30, ಟ್ರ್ಯಾಕ್ಟರ್‌ 10, ಟಿಪ್ಪರ್‌ 1, ಕಾಂಪೆಕ್ಟರ್‌ 2 ಇಟ್ಯಾಚಿ 1, ಜೆಸಿಬಿ 2, ಚಾಲಕರು 48 ಇದ್ದಾರೆ. ಇಷ್ಟೆಲ್ಲಾ ಇದ್ದರೂ ಕಸ ವಿಲೇವಾರಿ ಸರಿಯಾಗಿ ನಡೆಯುತ್ತಿಲ್ಲ ಎಂದು ಸಾರ್ವಜನಿರಕು ಆರೋಪಿಸುತ್ತಾರೆ.

‘ನಗರಸಭೆ ಆರೋಗ್ಯ ಹಾಗೂ ತಾಂತ್ರಿಕ ವಿಭಾಗದಲ್ಲಿ ತಂಡವೊಂದರನ್ನು ರಚನೆ ಮಾಡಲಾಗಿದ್ದು ಮಳೆಯಿಂದ ಉಂಟಾಗುವ ಸಮಸ್ಯೆಗಳನ್ನು ಪರಿಹಾರ ಮಾಡಲಾಗುವುದು. ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ನಗರಸಭೆ ಪೌರಾಯುಕ್ತ ಆರ್‌.ಮಂಜುನಾಥ್‌ ಹೇಳಿದರು.

ಮಳವಳ್ಳಿ ಪಟ್ಟಣದ ಹೃದಯ ಭಾಗವಾಗಿರುವ ಅನಂತ್ ರಾಂ ವೃತ್ತದ ಬಳಿ ಮಳೆ ನೀರು ಅಂಗಡಿ ಮುಗ್ಗಟ್ಟುಗಳಿಗೆ ನುಗ್ಗುವ ಪರಿಸ್ಥಿತಿ ನಿಯಂತ್ರಿಸಲು ಪುರಸಭೆ ಹಲವು ವರ್ಷಗಳಿಂದ ಸನ್ನದ್ಧವಾಗಿಲ್ಲ. ಮಳೆಗಾಲದಲ್ಲಿ ಮೈಸೂರು ರಸ್ತೆ, ಪೇಟೆ ಬೀದಿಯ ಆರಂಭದ ಸ್ಥಳ ಹಾಗೂ ಶಾಲಾ ಕಾಲೇಜಿಗೆ ಮಳೆ ನೀರು ನುಗ್ಗಿ ದೊಡ್ಡ ಅವಾಂತರ ಸೃಷ್ಟಿಯಾಗುತ್ತಿತ್ತು.

ಕಳೆದ ಆರು ತಿಂಗಳ ಹಿಂದೆ ಸಮಸ್ಯೆಗೆ ಕಾರಣವಾಗಿದ್ದ ಮದ್ದೂರು ಕುಡಿಯುವ ನೀರಿನ ಪೈಪ್ ಲೈನ್ ಹಾಗೂ ಕೇಬಲ್ ಗಳನ್ನು ಬದಲಾವಣೆ ಮಾಡಿರುವುದು ಸಮಸ್ಯೆ ಸ್ವಲ್ಪಮಟ್ಟದ ಪರಿಹಾರ ನೀಡಿದಂತಿದೆ. ಆದರೆ ಡಕ್ ತೆಗೆದು ದೊಡ್ಡಪ್ರಮಾಣದ ಡಕ್ ನಿರ್ಮಾಣ ಕಾರ್ಯ ಮಾತ್ರ ಹಾಗೆಯೇ ಉಳಿದಿರುವುದರಿಂದ ಸಮಸ್ಯೆ ಇನ್ನೂ ಜೀವಂತವಾಗಿಯೇ ಇದೆ.

ಕೆ.ಆರ್‌.ಪೇಟೆ ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ 23 ಬಡಾವಣೆಗಳಿದ್ದ ಸೂಕ್ತವಾದ ಒಳಚರಂಡಿ ವ್ಯವಸ್ಥೆ ಮರೀಚಿಕೆಯಾಗಿದೆ. ಡಿಸಿಸಿ ಬ್ಯಾಂಕ್ ಹಿಂಭಾಗದ ಬಡಾವಣೆಯಲ್ಲಿ ನೀರು ನಿಲ್ಲುತ್ತಿದ್ದು ಪಕ್ಕದ ಸಾರಿಗೆ ಬಸ್ ನಿಲ್ದಾಣಕ್ಕೂ ನುಗ್ಗುತ್ತಿದೆ. ಹೀಗಾಗಿ ಮಳೆಗಾಲದಲ್ಲಿ ಬಸ್ ನಿಲ್ದಾಣ ಕೆರೆಯಾಗುತ್ತದೆ. ಹಲವು ವರ್ಷಗಳಿಂದ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ.

ಮದ್ದೂರಿನಲ್ಲಿ ದಶಪಥ ಹೆದ್ದಾರಿ ಕಾಮಗಾರಿಯಿಂದ ಉಂಟಾಗಿರುವ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ಹೆದ್ದಾರಿ ಉದ್ಘಾಟನೆಗೊಂಡು 3 ತಿಂಗಳು ಕಳೆದರೂ ಮದ್ದೂರು ಪಟ್ಟಣದ ವ್ಯಾಪ್ತಿಯಲ್ಲಿ ಸರ್ವಿಸ್ ರಸ್ತೆ ಪೂರ್ಣಗೊಂಡಿಲ್ಲ. ಬಸ್‌ ನಿಲ್ದಾಣದ ಬಳಿ ಮೇಲ್ಸೇತುವೆಯ ಕೆಳಗಿನ ಹೆದ್ದಾರಿಯ ಎರಡು ಕಡೆಯಿಂರುವ ಚರಂಡಿ ಕಾಮಗಾರಿ ಪೂರ್ಣಗೊಂಡಿಲ್ಲ. ಹೀಗಾಗಿ ನೀರು ನಿಂತು ರಸ್ತೆಯೇ ಕೊಳಚೆ ಗುಂಡಿಯಂತಾಗುತ್ತದೆ.

ಪಾಂಡವಪುರ ಪಟ್ಟಣದಲ್ಲಿ ಒಳಚರಂಡಿಯ ಮಲಿನ ನೀರು ಸಂಸ್ಕರಣಾ ಘಟಕ ನಿರ್ಮಾಣ ವಾಗದಿರುವುದರಿಂದ ಕೊಳಚೆ ನೀರಿನ ಸಮಸ್ಯೆ ಬಗೆಹರಿದಿಲ್ಲ. ಮಳೆ ಬಂದರೆ ಒಳಚರಂಡಿಯ ಮ್ಯಾನ್ ಹೋಲ್‌ಗಳು ಉಕ್ಕಿಹರಿಯುತ್ತಿವೆ. ಒಳಚರಂಡಿ ಮಲಿನ ನೀರು ರಸ್ತೆಯಲೆಲ್ಲ ಹರಿದಾಡುವುದರಿಂದ ಜನರಿಗೆ ತುಂಬಾ ತೊಂದರೆಯಾಗುತ್ತದೆ.

ಶ್ರೀರಂಗಪಟ್ಟಣದ ಕಾವೇರಿಪುರ (ಸಂತೆ‌ ಮಾಳ) ಮತ್ತು ಬೂದಿ ಗುಂಡಿ ಪ್ರದೇಶದಲ್ಲಿ ಮಳೆ ನೀರು‌ ಜಮಾಯಿಸುತ್ತದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುತ್ತದೆ. ಮಳೆಗಾಲ ನಿಲ್ಲುವವರೆಗೆ ಈ ಎರಡೂ ಪ್ರದೇಶದ ಜನರು ಸಮಸ್ಯೆ ಅನುಭವಿಸುತ್ತಾರೆ. ನೀರು ನಿಲ್ಲುವುದರಿಂದ ಸೊಳ್ಳೆಗಳ ಹಾವಳಿ ಸಹಜವಾಗಿ ಹೆಚ್ಚುತ್ತದೆ.

----

 ಪ್ರಜಾವಾಣಿ ತಂಡ: ಎಂ.ಎನ್‌.ಯೋಗೇಶ್‌, ಗಣಂಗೂರು ನಂಜೇಗೌಡ, ಬಲ್ಲೇನಹಳ್ಳಿ ಮಂಜುನಾಥ್‌, ಹಾರೋಹಳ್ಳಿ ಪ್ರಕಾಶ್‌, ಟಿ.ಕೆ.ಲಿಂಗರಾಜು, ಎಂ.ಆರ್‌.ಅಶೋಕ್‌ ಕುಮಾರ್‌, ಉಲ್ಲಾಸ್‌

ಆನೆಕೆರೆ ಬೀದಿ ಅಕ್ಕಪಕ್ಕದಲ್ಲಿ ತೆರೆದ ಚರಂಡಿಗಳದ್ದೇ ಕಾರುಬಾರು
ಆನೆಕೆರೆ ಬೀದಿ ಅಕ್ಕಪಕ್ಕದಲ್ಲಿ ತೆರೆದ ಚರಂಡಿಗಳದ್ದೇ ಕಾರುಬಾರು
ಮದ್ದೂರು ಪಟ್ಟಣದ ಕೆಎಸ್ಸಾರ್ಟಿಸಿ ನಿಲ್ದಾಣದ ಮುಂದೆ ಅಪೂರ್ಣ ಹೆದ್ದಾರಿ ಕಾಮಗಾರಿಯಿಂದಾಗಿ ಗುಂಡಿಯಲ್ಲಿ ಕೊಳಚೆ ನೀರು ನಿಂತಿರುವುದು
ಮದ್ದೂರು ಪಟ್ಟಣದ ಕೆಎಸ್ಸಾರ್ಟಿಸಿ ನಿಲ್ದಾಣದ ಮುಂದೆ ಅಪೂರ್ಣ ಹೆದ್ದಾರಿ ಕಾಮಗಾರಿಯಿಂದಾಗಿ ಗುಂಡಿಯಲ್ಲಿ ಕೊಳಚೆ ನೀರು ನಿಂತಿರುವುದು

ಚರಂಡಿ, ಕಸದ ಸಮಸ್ಯೆಗೆ ಪರಿಹಾರ ಇಲ್ಲವೇ? ಮಳೆ ನಿರ್ವಹಣೆಗೆ ಅಧಿಕಾರಿಗಳ ನಿರ್ಲಕ್ಷ್ಯ ನಗರ, ಪಟ್ಟಣಗಳಲ್ಲಿ ಸೊಳ್ಳೆಗಳ ಕಾಟ

ಮಳೆ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ನಿರ್ವಹಣೆ ಮಾಡಬೇಕು. ಮಳೆಯಿಂದ ಉಂಟಾಗುವ ತೊಂದರೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

- ಡಾ.ಎಚ್‌.ಎನ್‌.ಗೋಪಾಲಕೃಷ್ಣ ಜಿಲ್ಲಾಧಿಕಾರಿ

ಮೇಲ್ಸೇತುವೆ; ಕೊಳಚೆಯ ಮಜ್ಜನ ಮಂಡ್ಯ ಹೊಳಲು ರಸ್ತೆ ರೈಲ್ವೆ ಮೇಲ್ಸೇತುವೆ ಮೇಲಿಂದ ಕೊಳಚೆ ನೀರು ಸೋರಿಕೆಯಾಗುತ್ತಿದ್ದು ಅಲ್ಲಿ ಓಡಾಡುವ ಜನರಿಗೆ ತಾಗುತ್ತಿದೆ. ಪೇಟೆಬೀದಿ ಸಿಹಿನೀರು ಕೊಳ ಭಾಗದ ಕೊಳಚೆ ನೀರು ಸಾರಾಗವಾಗಿ ಹರಿಯದೇ ಮೇಲ್ಸೇತುವೆ ಬಳಿ ಕೆಳಗಿಳಿಯುತ್ತಿವೆ. ಇದು ಮೇಲ್ಸೇತುವೆ ನಿರ್ಮಾಣವಾದ ದಿನದಿಂದ ಇಂದಿನವರೆಗೂ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ. ಚರಂಡಿ ನೀರು ಕೆಳಗೆ ಜಿನುಗದಂತೆ ತಡೆಗೋಡೆ ನಿರ್ಮಿಸಬೇಕು ಎಂದು ಒತ್ತಾಯಿಸಿ ರೈಲ್ವೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೂ ಸಮಸ್ಯೆ ಬಗೆಹರಿದಿಲ್ಲ. ರೈಲ್ವೆ ಅಧಿಕಾರಿಗಳು ಸ್ಥಳೀಯರ ಮನವಿಯನ್ನು ನಿರ್ಲಕ್ಷ್ಯ ಮಾಡುತ್ತಲೇ ಬಂದಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ. ‘ಮಳೆ ಬಂದರೆ ನೀರಿನ ಜೊತೆ ಕೊಳಚೆಯೂ ಸೋರುತ್ತದೆ. ನಿತ್ಯವೂ ಅಲ್ಲಿ ಓಡಾಡುವ ಜನರಿಗೆ ಕೊಳಚೆಯ ಮಜ್ಜನವಾಗುತ್ತದೆ. ಅಧಿಕಾರಿಗಳೂ ಈಗಲಾದರೂ ಈ ಸಮಸ್ಯೆ ಪರಿಹಾರ ಹುಡುಕಿಕೊಡಬೇಕು’ ಎಂದು ಸಿಹಿನೀರು ಕೊಳದ ವ್ಯಾಪಾರಿ ರಮೇಶ್‌ ಒತ್ತಾಯಿಸಿದರು.

ಕೆರೆ ಸೇರುತ್ತಿರುವ ಕೊಳಚೆ ನೀರು ಯತ್ತಗದಹಳ್ಳಿ ಬಳಿ ಇರುವ ಕೊಳಚೆ ಶುದ್ಧೀಕರಣ ಘಟಕದಲ್ಲಿ ಕೊಳಚೆ ಸಮರ್ಪಕವಾಗಿ ಶುದ್ಧಗೊಳ್ಳುತ್ತಿಲ್ಲ. ಹೀಗಾಗಿ ಕೊಳಚೆ ನೀರು ನೇರವಾಗಿ ಗುತ್ತಲು ಕರೆಗೆ ಹರಿಸಲಾಗುತ್ತಿದೆ. ಘಟಕದಲ್ಲಿ 2 ಮೋಟರ್‌ಗಳು ಇದ್ದರೂ ಅವು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ಯಂತ್ರ ಹಾಳಾಗಿದೆ ಎಂಬ ಸಿದ್ಧ ಉತ್ತರ ನೀಡುತ್ತಾರೆ. ಹೀಗಾಗಿ ಲಕ್ಷಾಂತರ ಲೀಟರ್‌ ಕೊಳಚೆ ನೀರು ಗುತ್ತಲು ಕರೆಯನ್ನು ಮಲಿನಗೊಳಿಸಿದೆ. ಗುತ್ತಲು ಕರೆ ನೀರು ಕಲುಷಿತವಾಗಿರುವ ಕಾರಣ ಅಲ್ಲಿ ಮೀನು ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಆ ಭಾಗದಲ್ಲಿ ವಾಸಿಸುವ ಜನರಿಗೆ ಕೆಮ್ಮು ನೆಗಡಿ ಜ್ವರ ಸಾಮಾನ್ಯ ಎಂಬಂತಾಗಿದೆ. ಕೆರೆಯ ಕೊಳಚೆ ನೀರು ಕೃಷಿ ಭೂಮಿಗೆ ಹರಿಯುತ್ತಿದ್ದು ಗದ್ದೆಯಲ್ಲಿ ಕೆಲಸ ಮಾಡುವ ಜನರಿಗೂ ರೋಗಭೀತಿ ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT