ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೇಬಿಬೆಟ್ಟ; ಪರೀಕ್ಷಾರ್ಥ ಸ್ಫೋಟ ನಡೆಯಕೂಡದು: ಸಂಸದೆ ಸುಮಲತಾ

ಗಣಿ ಪ್ರದೇಶದಲ್ಲಿ ನಡೆಯದ ಡ್ರೋಣ್‌ ಸರ್ವೆ; ಗಣಿ ಇಲಾಖೆ ಅಧಿಕಾರಿಗಳ ವಿರುದ್ಧ ಸಂಸದೆ ಆಕ್ರೋಶ
Published 23 ಫೆಬ್ರುವರಿ 2024, 13:56 IST
Last Updated 23 ಫೆಬ್ರುವರಿ 2024, 13:56 IST
ಅಕ್ಷರ ಗಾತ್ರ

ಮಂಡ್ಯ: ‘ಕೆಆರ್‌ಎಸ್‌ ಜಲಾಶಯ ಉಳಿವಿಗಾಗಿ ನಿರಂತರವಾಗಿ ಹೋರಾಟ ನಡೆಸಿದ್ದೇನೆ, ಹೋರಾಟದ ಫಲವಾಗಿಯೇ ಜಲಾಶಯದ 20 ಕಿ.ಮೀ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆಯನ್ನು ಹೈಕೋರ್ಟ್‌ ನಿಷೇಧಿಸಿದೆ. ಪರಿಸ್ಥಿತಿ ಹೀಗಿರುವಾಗ ಬೇಬಿಬೆಟ್ಟದ ಅರಣ್ಯ ಪ್ರದೇಶದಲ್ಲಿ ಪರೀಕ್ಷಾರ್ಥ ಸ್ಫೋಟ ನಡೆಸುವುದು ಸರಿಯಲ್ಲ, ಇದಕ್ಕೆ ಅವಕಾಶ ನೀಡಬಾರದು’ ಎಂದು ಸಂಸದೆ ಸುಮಲತಾ ಹೇಳಿದರು.

ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಗಣಿ ವಿರುದ್ಧದ ನನ್ನ ಹೋರಾಟಕ್ಕೆ ಯಾರ ಬೆಂಬಲವೂ ಇರಲಿಲ್ಲ. ಗಣಿ ಹೋರಾಟಕ್ಕೆ ಇಳಿದಾಗ ನನಗೆ ನಿರಂತರವಾಗಿ ಒತ್ತಡ ಬರುತ್ತಿತ್ತು. ಗಣಿಗಾರಿಕೆ ಹೋರಾಟ ನಿಲ್ಲಿಸಬೇಕೆಂದು ಪ್ರಾಣ ಬೆದರಿಕೆಯನ್ನೂ ಹಾಕಿದ್ದರು, ಆದರೂ ನಾನು ಎದೆಗುಂದಲಿಲ್ಲ. ಅಕ್ರಮ ಗಣಿಗಾರಿಕೆ ನಡೆಯುವ ಸ್ಥಳಗಳಿಗೆ ಭೇಟಿ ನೀಡಿದ್ದೆ, ಆಗ ನನ್ನ ಮೇಲೆ ಹಲ್ಲೆ ಪ್ರಯತ್ನವೂ ನಡೆದಿತ್ತು. ಆಗ ಕೆಲವು ಮಹಿಳೆಯರು ನನ್ನ ರಕ್ಷಣೆಗೆ ನಿಂತಿದ್ದರು’ ಎಂದರು.

‘ಯಾವ ಉದ್ದೇಶಕ್ಕಾಗಿ ಪರೀಕ್ಷಾರ್ಥ ನಡೆಸಬೇಕು ಎಂಬುದು ತಿಳಿಯುತ್ತಿಲ್ಲ. ಪರೀಕ್ಷೆ ಹೆಸರಿನಲ್ಲೂ ಕೆಆರ್‌ಎಸ್‌ ಆಸುಪಾಸಿನಲ್ಲಿ ಸ್ಫೋಟ ನಡೆಸಬಾರದು. ಅಧಿಕಾರಿಗಳು, ಸಂಘಟನೆಗಳ ಮುಖಂಡರು ಇದಕ್ಕೆ ಅವಕಾಶ ನೀಡಬಾರದು. ಜಿಲ್ಲೆಯ ಜೀವನಾಡಿಯಾಗಿರುವ ಜಲಾಶಯದ ರಕ್ಷಣೆಗಾಗಿ ಕಲ್ಲು ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧಿಸುವ ಅವಶ್ಯಕತೆ ಇದೆ’ ಎಂದರು.

ಡ್ರೋಣ್‌ ಸರ್ವೆ ಏಕೆ ಮಾಡಿಲ್ಲ: ‘ಗಣಿಗಾರಿಕೆಯಿಂದ ಉಂಟಾಗಿರುವ ನಷ್ಟ ಅಂದಾಜು ಮಾಡಲು ಮಾರ್ಚ್‌ 20ರೊಳಗೆ ಡ್ರೋಣ್‌ ಸರ್ವೆ ಮಾಡುವಂತೆ ಹೈಕೋರ್ಟ್‌ ಆದೇಶಿಸಿದೆ’ ಎಂದು ಗಣಿ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸುಮಲತಾ ‘ಕಳೆದೆರಡು ವರ್ಷಗಳಿಂದ ಇದೇ ಮಾತನ್ನೇ ಹೇಳುತ್ತಿದ್ದೀರಿ. ಕಳೆದ ನಾಲ್ಕರಿಂದ ಐದು ದಿಶಾ ಸಭೆಗಳಿಂದಲೂ ಇದನ್ನು ಕೇಳುತ್ತಲೇ ಇದ್ದೇನೆ. ಇಲ್ಲಿಯವರೆಗೆ ಡ್ರೋಣ್‌ ಸರ್ವೆ ನಡೆಸಲು ಏಕೆ ಸಾಧ್ಯವಾಗಿಲ್ಲ’ ಎಂದು ಪ್ರಶ್ನಿಸಿದರು.

ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಕುಮಾರ ‘ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರ (ಕೆಎಸ್‌ಆರ್‌ಎಸ್‌ಎಸಿ)ದ ಮೂಲಕ ರಾಜ್ಯ ಮಟ್ಟದಲ್ಲೇ ಟೆಂಡರ್‌ ಆಹ್ವಾನಿಸಿ ಡ್ರೋನ್ ಸರ್ವೆ ನಡೆಸಲಾಗುತ್ತಿದೆ. ತಂತ್ರಜ್ಞರು ಮಾರ್ಚ್‌ 20 ರೊಳಗೆ ಡ್ರೋನ್ ಸರ್ವೆ ನಡೆಸಲಿದ್ದಾರೆ’ ಎಂದರು.

ಗಣಿ ಮಾಲೀಕರಿಂದ ರಾಜಧನ ಸಂಗ್ರಹಿಸುವಲ್ಲಿ ಹಿನ್ನಡೆಯಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ‘ರಾಜಧನ ಸಂಗ್ರಹಕ್ಕೆ ಈಗಾಗಲೇ ಹಲವು ಬಾರಿ ನೋಟಿಸ್‌ ನೀಡಿದ್ದೇವೆ. ಆದರೂ ಅವರು ಹಣ ಪಾವತಿಸಿಲ್ಲ’ ಎಂದು ಅಧಿಕಾರಿಗಳು ತಿಳಿಸಿದರು.

‘ನೋಟಿಸ್‌ ನೀಡುವುದರಿಂದ ಏನು ಪ್ರಯೋಜನ, ರಾಜಧನ ಪಾವತಿಸದವರ ವಿರುದ್ಧ ಕ್ರಮ ಕೈಗೊಳ್ಳುವುದು ಯಾವಾಗ? ಅಭಿವೃದ್ಧಿಗೆ ಅನುದಾನದ ಕೊರತೆ ಇದೆ ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ. ಹೀಗಿರುವಾಗ ಸರ್ಕಾರಕ್ಕೆ ಬರಬೇಕಾದ ರಾಜಧನ ವಸೂಲಿಯಲ್ಲಿ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಸರ್ಕಾರ ಮತ್ತು ಅಧಿಕಾರಿಗಳಿಂದಲೇ ಅಕ್ರಮ ಗಣಿ ಮಾಲೀಕರಿಗೆ ರಕ್ಷಣೆ ಸಿಗುತ್ತಿರುವಂತೆ ಕಾಣಿಸುತ್ತಿದೆ’ ಎಂದು ಸಂಸದೆ ತರಾಟೆ ತೆಗೆದುಕೊಂಡರು.

ಇದೇ ಸಂದರ್ಭದಲ್ಲಿ ಅವಧಿಯ ಕೊನೇ ದಿಶಾ ಸಮಿತಿ ಸಭೆ ನಡೆಸಿದ ಸಂಸದೆ ಸುಮಲತಾ ಅವರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು. ಸಭೆಯಲ್ಲಿ ಜಿಪಂ ಸಿಇಒ ಶೇಖ್ ತನ್ವೀರ್‌ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಶಾಸಕ ಗಣಿಗ ರವಿಕುಮರ್‌ ಇದ್ದರು.

ದಿಶಾ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು
ದಿಶಾ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು

ಗಣಿ ಹೋರಾಟಕ್ಕೆ ಯಾರ ಬೆಂಬಲವೂ ಇರಲಿಲ್ಲ ಕಲ್ಲು ಗಣಿ ಪ್ರದೇಶಗಳಲ್ಲಿ ಹಲ್ಲೆಗೆ ಯತ್ನ ರಾಜಧನ ವಸೂಲಾತಿಯಲ್ಲಿ ಅಧಿಕಾರಿಗಳ ವೈಫಲ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT