ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜೀಯರ್ ಆಯಿ ಸನ್ನಿಧಿಯಲ್ಲಿ ಸಂಭ್ರಮ

ಮೇಲುಕೋಟೆಯಲ್ಲಿ ಆಯಿಜನನ್ಯಾಚಾರ್ಯರ 675ನೇ ಜಯಂತ್ಯುತ್ಸವ ನಾಳೆ, ವಿಚಾರಗೋಷ್ಠಿ
Last Updated 29 ನವೆಂಬರ್ 2019, 10:43 IST
ಅಕ್ಷರ ಗಾತ್ರ

ಮೇಲುಕೋಟೆ: ಆಯಿಜನನ್ಯಾ ಚಾರ್ಯರ 675ನೇ ಜಯಂತ್ಯುತ್ಸವ ನ. 29ರಂದು ಮೇಲುಕೋಟೆಯಲ್ಲಿ ನಡೆಯಲಿದ್ದು, ನಂಜೀಯರ್ ಆಯಿ ಸನ್ನಿಧಿಯಲ್ಲಿ ಸಂಭ್ರಮ ಮನೆ ಮಾಡಿದೆ.

ವೈಷ್ಣವ ಪರಂಪರೆಯ ಪ್ರಮುಖ ವೈಷ್ಣವ ಸಂತರಾದ ಸ್ವಾಮಿ ಆಯಿ ಜನನ್ಯಾಚಾರ್ಯರು ಕ್ರಿ.ಶ. 1344ರಲ್ಲಿ ಮೇಲುಕೋಟೆಯಲ್ಲಿ ಜನಿಸಿ, ಚೆಲುವನಾರಾಯಣನ ಕೈಂಕರ್ಯ ನಡೆಸುವ ಜೊತೆಗೆ ಭಾರತಾದ್ಯಂತ ವೈಷ್ಣವ ಭಕ್ತಿಸಿದ್ಧಾಂತ ಪಸರಿಸಲು ಶ್ರಮಿಸಿದ್ದಾರೆ.

ರಾಮಾನುಜಾರ ಪರಂಪರೆಯ 74ನೇ ಸಿಂಹಾಸನಾಧಿಪತಿಗಳಲ್ಲಿ ಒಬ್ಬರಾದ ಆಸೂರಿಪೆರುಮಾಳ್, ರಾಮಾನುಜಾ ಚಾರ್ಯರು ಚೆಲುವ ನಾರಾಯಣನ ಕೈಂಕರ್ಯ ಮುಗಿಸಿ ಮೇಲುಕೋಟೆಯಿಂದ ಶ್ರೀರಂಗಕ್ಕೆ ಹಿಂದಿರುಗಿದ ನಂತರವೂ ಇಲ್ಲೇನೆಲೆಸಿ ಚೆಲುವನ ಕೈಂಕರ್ಯದಲ್ಲಿ ತೊಡಗಿದ್ದರು. ಇದೇ ವಂಶದಲ್ಲಿ 13ನೇ ಶತಮಾನದಲ್ಲಿ ಆಸೂರಿ ಲಕ್ಷಣಾಚಾರ್ಯರ ಸತ್ಪುತ್ರರಾಗಿ ಆಸೂರಿ ದೇವರಾಜಪೆರುಮಾಳ್ ಅವತರಿಸಿದರು.

ಶಾಸ್ತ್ರಪಾರಂಗತರಾದ ದೇವರಾಜ ಪೆರುಮಾಳ್ ಚೆಲುವನಾರಾಯಣ ಸ್ವಾಮಿಗೆ ಪ್ರತಿನಿತ್ಯ ಹೂವಿನ ಮಾಲೆ ಗಳನ್ನು, ರಾತ್ರಿ ವೇಳೆ ಪಚ್ಚಕರ್ಪೂರ ಕೇಸರಿ ಮಿಶ್ರಿತ ಹಸುವಿನ ಹಾಲನ್ನು ಅರ್ಪಿಸುತ್ತಿದ್ದರು. ಒಂದು ದಿನ ದೇಹಾಲಸ್ಯದಿಂದ ಹಾಲು ಕೊಂಡೊ ಯ್ಯುವುದು ವಿಳಂಬವಾದಾಗ ಸಾಕ್ಷಾತ್‌ ತಿರುನಾರಾಯಣನೇ ಇಂದೇಕೆ ಆಯಿ (ತಾಯಿ) ಹಾಲಿಲ್ಲ ಎಂದು ಕೇಳಿದನಂತೆ. ಅಂದಿನಿಂದ ದೇವರಾಜರಿಗೆ ಆಯಿ ಜನನ್ಯಾಚಾರ್ಯ ಎಂದೇ ಹೆಸರಾಯಿತು.

ರಾಮಾನುಜಾಚಾರ್ಯರ ಕಾಲದ ನಂತರ ಜೀರ್ಣಾವಸ್ಥೆ ತಲುಪಿದ್ದ ನೂರಾರು ವೈಷ್ಣವ ದೇಗುಲ ಗಳನ್ನು ಜೀರ್ಣೋದ್ಧಾರ ಮಾಡಿದ ಸಂತ ಮಣವಾಳ ಮಾಮುನಿಗೆ ಆಯಿ ಜನನ್ಯಾಚಾರ್ಯರು ಗುರುವಾಗಿ, ವೈಷ್ಣವ ಸಂಪ್ರದಾಯದ ವಿಚಾರಧಾರೆಗಳನ್ನು ಬೋಧಿಸಿದರು. ತಮಿಳುನಾಡಿನ ಆಳ್ವಾರ್ತಿರುನಗರಿಯಲ್ಲಿ ದಿವ್ಯಪ್ರಬಂಧದ ಸಾರತಿಳಿಸುವ ಗ್ರಂಥವಾದ ಆಚಾರ್ಯ ಹೃದಯವೆಂಬ ಸಕಲಾರ್ಥಗಳನ್ನೂ ವಿವರಿಸಿ ಕಾಲಕ್ಷೇಪ ನೀಡುತ್ತಿದ್ದರು.

ಪರಮ ಕಾರುಣಿಕರಾದ ಆಯಿಸ್ವಾಮಿ ಗಳು ಆಚಾರ್ಯಹೃದಯ, ತಿರುಪ್ಪಾವೈ, ಶ್ರೀವಚನಭೂಷಣ, ತಿರುಮಾಲೈ, ಪೆರಿಯತಿರುಮೊಳಿ ವಾಖ್ಯಾನಗಳು ಮತ್ತು ಉಪನಿಷದ್ ಸಾರವಾದ ಕುರಂಗಿ ಪಂಚಕವೆಂಬ ಅದ್ಭುತವಾದ ಸ್ತೋತ್ರ ಮತ್ತು ಮುಕ್ತಶ್ಲೋಕಗಳಲ್ಲದೆ, ಪದ್ಯಗಳನ್ನೂ ರಚಿಸಿದ್ದಾರೆ. ಮಣವಾಳ ಮಾಮುನಿ ರಚಿಸಿದ ಶ್ರೀಶಾನುದಾಸ ಗುರುಪ್ರಪತ್ತಿ ಮತ್ತು ಶ್ರೀಶಾನುದಾಸ ಮುನಿಮಂಗಳಮ್ ಆಯಿಯವರ ಹಿರಿಮೆಯನ್ನು ಸಾರುತ್ತದೆ.

ಶ್ರೀಭಾಷ್ಯದ ವಿಚಾರಗೋಷ್ಠಿ

ಆಚಾರ್ಯರ ಗ್ರಂಥಗಳ ವ್ಯಾಖ್ಯಾನಗಳ ಕುರಿತಂತೆ ನ.28 ಮತ್ತು 29ರಂದು ರಾಷ್ಟ್ರಮಟ್ಟದ ವಿಚಾರಗೋಷ್ಠಿ ನಡೆಯಲಿದೆ. ತಿರುಪತಿ, ಶ್ರೀರಂಗಂ, ತಿರುವಲ್ಲಿಕೇಣಿ, ಆಂಧ್ರದ ವಿದ್ವಾಂಸರು ಆಯಿಸ್ವಾಮಿಗಳು ರಚಿಸಿದ ಆಚಾರ್ಯಹೃದಯ, ಶ್ರೀವಚನಭೂಷಣ ವ್ಯಾಖ್ಯಾನ ಗ್ರಂಥಗಳ ಉಪನ್ಯಾಸ ಮತ್ತು ಶ್ರೀಭಾಷ್ಯಮತಿಮನ್ಮಥ ಮಂಥನ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಜಯಂತಿಯಂದು ಸಂಜೆ ಚೆಲುವನಾರಾಯಣಸ್ವಾಮಿ ಉತ್ಸವವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT