ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲುಕೋಟೆ: ಭಕ್ತರ ಮೇಲೆ ಹೆಜ್ಜೇನು ದಾಳಿ– 17 ಜನರ ಸ್ಥಿತಿ ಗಂಭೀರ– 80 ಜನರಿಗೆ ಗಾಯ

ತೊಟ್ಟಿಲುಮಡು ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಭಕ್ತರ ಮೇಲೆ ಬುಧವಾರ ಹೆಜ್ಜೇನು ದಾಳಿ
Published 22 ನವೆಂಬರ್ 2023, 13:03 IST
Last Updated 22 ನವೆಂಬರ್ 2023, 13:03 IST
ಅಕ್ಷರ ಗಾತ್ರ

ಮೇಲುಕೋಟೆ (ಮಂಡ್ಯ): ಧಾರ್ಮಿಕ ಕ್ಷೇತ್ರ ಮೇಲುಕೋಟೆ ತೊಟ್ಟಿಲುಮಡು ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಭಕ್ತರ ಮೇಲೆ ಬುಧವಾರ ಹೆಜ್ಜೇನು ದಾಳಿ ಮಾಡಿದ್ದು 80 ಮಂದಿ ಅಸ್ವಸ್ಥರಾಗಿದ್ದಾರೆ. 17 ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರತಿವರ್ಷದಂತೆ ಶ್ರೀಕ್ಷೇತ್ರದಲ್ಲಿ ತೊಟ್ಟಿಲುಮಡು ಜಾತ್ರೆ ಮಂಗಳವಾರ ಆರಂಭಗೊಂಡಿದೆ. ಮೊದಲ ದಿನ ರಾಜಮುಡಿ ಉತ್ಸವದೊಂದಿಗೆ ಜಾತ್ರೆ ಆರಂಭಗೊಂಡಿತ್ತು. ಬುಧವಾರ ತೊಟ್ಟಿಲುಮಡು ಉತ್ಸವ ನಡೆಯುತ್ತಿದ್ದ ವೇಳೆ ಹೆಜ್ಜೇನು ದಾಳಿ ನಡೆಸಿವೆ. ರಾಜ್ಯದ ವಿವಿಧ ಭಾಗದಿಂದ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಬಂದಿದ್ದರು, ಬಹುಕೇಕ ಜನರು ಉಪವಾಸ ವ್ರತಾಚರಣೆಯೊಂದಿಗೆ ಅಷ್ಟತೀರ್ಥೋತ್ಸವದಲ್ಲಿ ಭಾಗಿಯಾಗಿದ್ದರು.

ಉತ್ಸವದ ಅಂಗವಾಗಿ ಚಲುವರಾಯಸ್ವಾಮಿ ಪಾದುಕೆ ಮೆರವಣಿಗೆ ಕಲ್ಯಾಣಿಗಳ ಮೂಲಕ ಸಾಗುತ್ತಿತ್ತು. ಭಕ್ತರು ಪ್ರತಿ ಕಲ್ಯಾಣಿಗಳಲ್ಲೂ ಪವಿತ್ರ ತೀರ್ಥ ಸ್ನಾನ ಮಾಡುತ್ತಾ ಸಾಗುತ್ತಿದ್ದರು. ಉತ್ಸವ ನಾಗರತೀರ್ಥದ ಬಳಿ ಸಾಗುತ್ತಿದ್ದಾಗ ಹೆಜ್ಜೇನು ಏಕಾಏಕಿ ದಾಳಿ ನಡೆಸಿವೆ. ದಾಳಿಯಿಂದ ಭಯಪೀಡಿತರಾದ ಸಾವಿರಾರು ಭಕ್ತರು ದಿಕ್ಕಾಪಾಲಾಗಿ ಓಡಿದರು.

ಅಸ್ವಸ್ಥಗೊಂಡ ಭಕ್ತರನ್ನು ಮೇಲುಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತು. ಆದರೆ ಅಲ್ಲಿ ವೈದ್ಯರಿಲ್ಲದ ಕಾರಣ ಎಲ್ಲರನ್ನೂ ಪಾಂಡವಪುರ ತಾಲ್ಲೂಕು ಆಸ್ಪತ್ರೆಗೆ ಸಾಗಿಸಲಾಗಿಯಿತು. ತೀವ್ರ ಅಸ್ವಸ್ಥಗೊಂಡಿದ್ದ 17 ಮಂದಿಯನ್ನು ಮೈಸೂರು ಆಸ್ಪತ್ರೆಗೆ ಕಳುಹಿಸಲಾಗಿದೆ.

ಭಕ್ತರ ಆಕ್ರೋಶ

ಪ್ರಸಿದ್ಧ ಪ್ರವಾಸಿ ತಾಣದ ಪಿಎಚ್‌ಸಿಯಲ್ಲಿ ವೈದ್ಯರಿಲ್ಲದ ಕಾರಣಕ್ಕೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು. ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರ ಮಂಜೂರಾತಿ ಇದ್ದು ಒಬ್ಬರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಬುಧವಾರ ಅವರೂ ಇಲ್ಲದ ಕಾರಣ ಹೆಜ್ಜೇನು ದಾಳಿಗೆ ಒಳಗಾದ ಭಕ್ತರು ಪರದಾಡಬೇಕಾಯಿತು. ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್‌ ಕೂಡ ಬಾರದ ಕಾರಣ ಭಕ್ತರು ತಮ್ಮ ಕಾರು, ಬೈಕ್‌ಗಳಲ್ಲೇ ಆಸ್ಪತ್ರೆಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT