ಶುಕ್ರವಾರ, ನವೆಂಬರ್ 27, 2020
21 °C
ಕೊರೊನಾ ವರದಿ ತಡವಾಗದಂತೆ ಕ್ರಮ ಕೈಗೊಳ್ಳಿ: ಸಭೆಯಲ್ಲಿ ಸುಮಲತಾ ಸೂಚನೆ

ಮಿಮ್ಸ್‌ ಅವ್ಯವಸ್ಥೆ: ಸಂಸದೆ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಮಿಮ್ಸ್‌ನಲ್ಲಿ ಮೂಲಸೌಲಭ್ಯ ಕೊರತೆಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ, ಅಶುಚಿತ್ವ, ಹೆರಿಗೆ ವಾರ್ಡ್‌ನಲ್ಲಿ ಬೆಡ್‌ಗಳ ಕೊರತೆ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಆರೋಗ್ಯ ಸಚಿವ ಡಿ.ಸುಧಾಕರ್‌ ಅವರ ಗಮನಕ್ಕೆ ತರಲಾಗುವುದು’ ಎಂದು ಸಂಸದೆ ಎ.ಸುಮಲತಾ
ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ವತಿಯಿಂದ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೇಂದ್ರ ವಲಯ, ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್‌)ಯ ಹೆರಿಗೆ ವಾರ್ಡ್‌ನಲ್ಲಿ ನಾಲ್ವರು ಗರ್ಭಿಣಿಯರಿಗೆ ಒಂದೇ ಹಾಸಿಗೆ ನೀಡುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಮಿಮ್ಸ್‌ ಪ್ರಭಾರ ನಿರ್ದೇಶಕ ಡಾ.ಎಂ.ಆರ್‌.ಹರೀಶ್‌ ಅವರಿಗೆ ಸೂಚನೆ ನೀಡಿದರು. ‌

ಇದಕ್ಕೆ ದನಿಗೂಡಿಸಿದ ದಿಶಾ ಸಮಿತಿ ಸದಸ್ಯರಾದ ಸೋಮಶೇಖರ್‌, ಅರುಣಾಕುಮಾರಿ ಅವರು, ‘ಮಿಮ್ಸ್‌ನಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿದ್ದು, ಅದರ ಬಗ್ಗೆ ಯಾವುದೇ ತಕರಾರಿಲ್ಲ. ಆದರೆ ಹೆರಿಗೆ ವಾರ್ಡ್‌ ಬಳಿ ಸಾಕಷ್ಟು ಸಮಸ್ಯೆಗಳಿವೆ. ಶೌಚಾಲಯದ ಪಕ್ಕದಲ್ಲೇ ಕ್ಯಾಂಟೀನ್‌ ಇದ್ದು, ಕೊಳೆಗೇರಿ ಪ್ರದೇಶದಲ್ಲಿ ಇದ್ದಂತೆ ಭಾಸವಾಗುತ್ತದೆ. ಅವ್ಯವಸ್ಥೆಯ ಆಗರ ಆಗಿರುವುದನ್ನು ಕೂಡಲೇ ಸರಿಪಡಿಸಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್‌ ಮಾತನಾಡಿ, ‘ಅವಧಿ ಮುಗಿದಿದ್ದರೂ ಅವರು ಹೇಗೆ ಕ್ಯಾಂಟೀನ್‌ ಮುಂದುವರೆಸುತ್ತಾರೆ? ಕೂಡಲೇ ಅದನ್ನು ತೆರವುಗೊಳಿಸಬೇಕು. ದಿನಕ್ಕೆ ನಾಲ್ಕು ಬಾರಿ ಸ್ವಚ್ಛಗೊಳಿಸುವ ಮೂಲಕ ಶುಚಿತ್ವ ಕಾಯ್ದುಕೊಳ್ಳಬೇಕು. ಕಿದ್ವಾಯಿ, ಜಯದೇವ ಮಾದರಿಯಲ್ಲಿ ಆಸ್ಪತ್ರೆ ಆವರಣದಲ್ಲಿ ಧರ್ಮಶಾಲೆ ತೆರೆಯುವ ಮೂಲಕ ರೋಗಿಗಳು, ಸಂಬಂಧಿಕರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಸೂಚನೆ ನೀಡಿದರು.

ಡಾ. ಹರೀಶ್‌ ಮಾತನಾಡಿ, ‘ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್‌ಗೆ 90 ಹಾಸಿಗೆಗಳ ಅಗತ್ಯವಿದ್ದು, ಪ್ರಸ್ತುತ 190 ಬೆಡ್‌ಗಳಿವೆ. ಯಾವುದೇ ಸಮಸ್ಯೆಯಿಲ್ಲ. ಕೋವಿಡ್‌ಗೂ ಮುನ್ನ ಬೆಡ್‌ಗಳ ಕೊರತೆ ಉಂಟಾಗಿತ್ತು. ಸಿಬ್ಬಂದಿ ಕೊರತೆ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಅಲ್ಲಿಂದ ಉತ್ತರ ಬಂದ ನಂತರ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ಕ್ಯಾಂಟೀನ್‌ ಮಾಲೀಕರು ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದು, ಕಾನೂನಾತ್ಮಕ ಸಮಸ್ಯೆ ಬಗೆಹರಿದ ನಂತರ ಖಾಲಿ ಮಾಡಿಸಲಾಗುವುದು’ ಎಂದು ಹೇಳಿದರು.

ಸಂಸದೆ ಸುಮಲತಾ ಮಾತನಾಡಿ, ‘ಶ್ರೀರಂಗಪಟ್ಟಣದ ಕೊಡಿಯಾಲ ಆರೋಗ್ಯ ಕೇಂದ್ರ ಮುಚ್ಚಿದ ಸ್ಥಿತಿಯಲ್ಲಿದ್ದು, ವೈದ್ಯರು, ನರ್ಸ್‌ ಯಾರೂ ಇಲ್ಲವೇ’ ಎಂದು ಪ್ರಶ್ನಿಸಿದರು. 

ಇದಕ್ಕೆ ಉತ್ತರಿಸಿದ ಜಿಲ್ಲಾ ವೈದ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ, ‌‘ಅದು ಹಳೇ ಕಟ್ಟಡದಲ್ಲಿ ನಡೆಯುತ್ತಿದೆ’ ಎಂದು ಹೇಳಿದರು.

‘ಕೂಡಲೇ ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಿ ಉತ್ತಮ ಸೇವೆ ನೀಡಬೇಕು’ ಎಂದು ಸುಮಲತಾ ಸೂಚನೆ ನೀಡಿದರು.

ಕೊರೊನಾ ಪರೀಕ್ಷಾ ವರದಿ ತಡವಾಗುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸುಮಲತಾ, ‘ವರದಿ ತಡವಾಗುತ್ತಿರುವುದಕ್ಕೆ ಕಾರಣ ಏನು? ಸರಿಯಾದ ಸಮಯಕ್ಕೆ ವರದಿ ಬಾರದ ಕಾರಣ ಜನ ಖಿನ್ನತೆಗೆ ಒಳಗಾಗುತ್ತಿದ್ದು, ಕೂಡಲೇ ಸಮಸ್ಯೆ ಬಗೆಹರಿಸಬೇಕು’ ಎಂದು ತಾಕೀತು ಮಾಡಿದರು.

‘ನಾಗಮಂಗಲ ತಾಲ್ಲೂಕಿನ ಚೆನ್ನಾಪುರದಲ್ಲಿ 1,277 ಎಕರೆ ಭೂಸ್ವಾಧೀನ ಪ್ರಕ್ರಿಯೆಗೆ ವಿರೋಧ ವ್ಯಕ್ತವಾಗಿದ್ದು, ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆ ಬಗೆಹರಿಸಬೇಕು. ಅನ್ನಭಾಗ್ಯ ಅಕ್ಕಿ ಬೇರೆಡೆಗೆ ಸಾಗಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಆಹಾರ ಇಲಾಖೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಸ್‌.ನಾಗರತ್ನಾ ಸ್ವಾಮಿ, ಸಿಇಒ ಜುಲ್ಫೀಕರ್‌ ಉಲ್ಲಾ, ಮಂಡ್ಯ ಉಪವಿಭಾಗಾಧಿಕಾರಿ ನೇಹಾ ಜೈನ್‌, ಪಾಂಡವಪುರ ಉಪವಿಭಾಗಾಧಿಕಾರಿ, ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು