ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ ಉಸ್ತುವಾರಿ ಸಚಿವ ಸ್ಥಾನದಿಂದ ಅಶೋಕ್‌ ಬಿಡುಗಡೆ; ಕಾರ್ಯಕರ್ತರಲ್ಲಿ ನಿರಾಳ

ಸ್ವಪಕ್ಷೀಯರ ವಿರೋಧಕ್ಕೆ ಮಣಿದ ಕಂದಾಯ ಸಚಿವ, ಮುಕ್ತಗೊಳಿಸಲು ಕೋರಿ ಸಿ.ಎಂಗೆ ಪತ್ರ
Last Updated 10 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ಮಂಡ್ಯ: ಕಂದಾಯ ಸಚಿವ ಆರ್‌.ಅಶೋಕ್‌ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಬಿಡುಗಡೆಗೊಂಡಿರುವುದು ಸ್ಥಳೀಯ ಬಿಜೆಪಿ ಕಾರ್ಯಕರ್ತರಲ್ಲಿ ನಿರಾಳ ಭಾವ ಮೂಡಿಸಿದೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಮಾಹಿತಿ ನೀಡಿದ್ದು ಕಾರ್ಯಕರ್ತರು, ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್‌ ಜೊತೆ ಹೊಂದಾಣಿಕೆ ರಾಜಕಾರಣಕ್ಕೆ ಹೆಸರುವಾಸಿಯಾಗಿರುವ ಆರ್‌.ಅಶೋಕ್‌ ನೇಮಕಾತಿಯಿಂದ ಸ್ಥಳೀಯ ಕಾರ್ಯಕರ್ತರಲ್ಲಿ ಆತಂಕ ಸೃಷ್ಟಿಯಾಗಿತ್ತು. ಪಕ್ಷ ಸಂಘಟನೆ ನಡೆಯುವ ಸಂದರ್ಭದಲ್ಲಿ ಆರ್‌.ಅಶೋಕ್‌ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಂದಿದ್ದು ಮುಖಂಡರಲ್ಲಿ ಗೊಂದಲ ಮೂಡಿಸಿತ್ತು.

ಅವರ ನೇಮಕಾತಿಯನ್ನು ಹಲವರು ಪ್ರಶ್ನಿಸಿದ್ದರು, ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದರು. ವಿವಿಧೆಡೆ ಕಾರ್ಯಕರ್ತರು ‘ಗೋಬ್ಯಾಕ್‌’ ಪ್ರತಿಭಟನೆಯನ್ನೂ ನಡೆಸಿದ್ದರು. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಅಶೋಕ್‌ ವಿರುದ್ಧ ದೊಡ್ಡಮಟ್ಟದ ಪ್ರತಿರೋಧ ವ್ಯಕ್ತವಾಗಿತ್ತು. ‘ಈ ಬಾರಿ ಹೊಂದಾಣಿಕೆ ರಾಜಕಾರಣಕ್ಕೆ ಅವಕಾಶವಿಲ್ಲ’ ಎಂದು ಅವರು ಸ್ಪಷ್ಟವಾಗಿ ತಿಳಿಸಿದ್ದರು.

ಈ ಎಲ್ಲಾ ಬೆಳವಣಿಗೆಯಿಂದ ಎಚ್ಚೆತ್ತುಕೊಂಡ ಅಶೋಕ್‌ ಅನ್ಯ ಕಾರಣ ನೀಡಿ ಬಿಡುಗಡೆ ಕೋರಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಅದನ್ನು ಪರಿಗಣಿಸಿ ಮುಖ್ಯಮಂತ್ರಿ ಬಿಡುಗಡೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಸ್ಥಳೀಯ ಬಿಜೆಪಿ ಮುಖಂಡರು ಮಾತ್ರವಲ್ಲದೇ ರಾಜ್ಯ ಮುಖಂಡರು ಕೂಡ ಅಶೋಕ್‌ ನೇಮಕಾರಿಗೆ ವಿರೋಧ ವ್ಯಕ್ತಪಡಿಸಿದ್ದರು. ಅಶೋಕ್‌ ಅವರೇ ಒತ್ತಾಯಪೂರ್ವಕವಾಗಿ ಸ್ಥಾನ ಪಡೆದುಕೊಂಡಿದ್ದರು. ಕಾರ್ಯಕರ್ತರು, ಮುಖಂಡರು ಅವರನ್ನು ಒಪ್ಪದ ಕಾರಣ ಈಗ ಹಿಂದೆ ಸರಿದಿದ್ದಾರೆ. ಜೆಡಿಎಸ್‌ ಜೊತೆ ಹೊಂದಾಣಿಕೆ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ’ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

ಅಶೋಕ್‌ ಪತ್ರದಲ್ಲಿ ಏನಿದೆ?: ಜಿಲ್ಲೆಯಲ್ಲಿ ಅಶೋಕ್‌ ವಿರುದ್ಧ ನಡೆದ ಪ್ರತಿಭಟನೆಗಳ ನಂತರ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದು ಶೀಘ್ರ ಸ್ಥಾನದಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು.

‘ಕಂದಾಯ ಇಲಾಖೆಯ ಗ್ರಾಮ ವಾಸ್ತವ್ಯ, ಬಸವೇಶ್ವರ, ಕೆಂಪೇಗೌಡ ಪುತ್ಥಳಿ ಸ್ಥಾಪನೆ, ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಜವಾಬ್ದಾರಿ ಇದ್ದು ಮಂಡ್ಯ ಜಿಲ್ಲೆಗೆ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಂಡ್ಯ ಉಸ್ತುವಾರಿ ಸಚಿವ ಸ್ಥಾನದಿಂದ ಬಿಡುಗಡೆ ಮಾಡಬೇಕು’ ಎಂದು ಕೋರಿದ್ದರು.

ಯಾರಾಗ್ತಾರೆ ಉಸ್ತುವಾರಿ ಸಚಿವ?
ಆರ್‌.ಅಶೋಕ್‌ ಬಿಡುಗಡೆ ನಂತರ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಯಾರಿಗೆ ಸಿಗಲಿದೆ ಎಂಬ ಕುತೂಹಲ ಜಿಲ್ಲೆಯ ಜನರಲ್ಲಿದೆ. ಅಬಕಾರಿ ಸಚಿವ ಗೋಪಾಲಯ್ಯ ಅವರೇ ಮತ್ತೆ ಸಚಿವರಾಗುತ್ತಾರೆ ಎಂಬ ಅಭಿಪ್ರಾಯವಿದೆ. ಜೊತೆಗೆ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರು ಮಂಡ್ಯ ಜಿಲ್ಲಾ ಉಸ್ತುವಾರಿಯೂ ಆಗುವ ಸಾಧ್ಯತೆ ಇದೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.

‘ಮಂಡ್ಯ ಜಿಲ್ಲೆಯ ಮೊಮ್ಮಗನೂ ಆಗಿರುವ ಅಶ್ವತ್ಥನಾರಾಯಣ ಅವರು ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಅವರೇ ಉಸ್ತುವಾರಿ ಸಚಿವರಾಗಬೇಕು’ ಎಂದು ಕಾರ್ಯಕರ್ತರೊಬ್ಬರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT