ಪಿಒಪಿ ಮೂರ್ತಿ ನಿಷೇಧದ ಪರಿಣಾಮ: ಮಂಡ್ಯಕ್ಕೆ ಬಂದ ‘ತಮಿಳುನಾಡಿನ ಪೇಪರ್‌ ಗಣಪ’

7
ಮಣ್ಣಿನ ಗಣೇಶನಿಗೆ ಬೇಡಿಕೆ, ಕಲಾವಿದರಲ್ಲಿ ಜಾಗೃತಿ

ಪಿಒಪಿ ಮೂರ್ತಿ ನಿಷೇಧದ ಪರಿಣಾಮ: ಮಂಡ್ಯಕ್ಕೆ ಬಂದ ‘ತಮಿಳುನಾಡಿನ ಪೇಪರ್‌ ಗಣಪ’

Published:
Updated:
Deccan Herald

ಮಂಡ್ಯ: ಪ್ಲಾಸ್ಟರ್ ಆಫ್‌ ಪ್ಯಾರಿಸ್‌ನಿಂದ ಗಣೇಶ ಮೂರ್ತಿ ತಯಾರಿಕೆಯನ್ನು ನಿಷೇಧಿಸಿದ ಕಾರಣ ಮಾರುಕಟ್ಟೆಯಲ್ಲಿ ಅಪಾರ ಬದಲಾವಣೆಗಳಾಗಿವೆ. ಕಾಗದದಿಂದ (ಪೇಪರ್‌ ಮೌಲ್ಡಿಂಗ್‌) ತಯಾರಿಸಿದ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಭಕ್ತರನ್ನು ಕೈಬೀಸಿ ಕರೆಯುತ್ತಿವೆ.

ಕಾಗದದ ಮೌಲ್ಡಿಂಗ್‌ನಿಂದ ತಯಾರಿಸಿದ ಗಣೇಶ ಮೂರ್ತಿಗಳು ನಗರಕ್ಕೂ ಬಂದಿವೆ. ಒಳಾಂಗಣ ಕ್ರೀಡಾಂಗಣದ ಆವರಣ, ನೂರು ಅಡಿ ರಸ್ತೆ, ಆನೆಕೆರೆ ಬೀದಿ, ಪೇಟೆ ಬೀದಿ, ಕಾಮಣ್ಣನ ಸರ್ಕಲ್‌ ಮುಂತಾದೆಡೆ ಈ ಮೂರುತಿಗಳು ಸಿಗುತ್ತಿವೆ. ಒಳಾಂಗಣ ಕ್ರೀಡಾಂಗಣ ಆವರಣದಲ್ಲಿ ಮೂರುತಿಗಳ ಜಾತ್ರೆಯೇ ಸೇರಿದ್ದು ವಿವಿಧ ಮಾದರಿಯ ಗಣಪತಿ ಮಾರಾಟಕ್ಕಿದ್ದಾನೆ. ಏಳೆಂಟು ಅಂಗಡಿಗಳು ಬಂದಿದ್ದು ಎತ್ತರದ ಗಣಪತಿ ಬೇಕಾದವರು ಕಾಗದದ ಮೂರ್ತಿಗೆ ಮೊರೆ ಹೋಗುತ್ತಿದ್ದಾರೆ. ಎತ್ತರದ ಮೂರುತಿಗಳನ್ನು ವ್ಯಾಪಾರಿಗಳು ತಮಿಳುನಾಡಿನ ಕೃಷ್ಣಗಿರಿಯಿಂದ ತರಿಸಿದ್ದಾರೆ.

‘ಗಣೇಶ ಮೂರ್ತಿಗಳಿಗೆ ಅಪಾರ ಬೇಡಿಕೆ ಇದೆ. ಪಿಒಪಿ ಗಣಪತಿ ನಿಷೇಧವಾಗಿರುವ ಕಾರಣ ಬೇಡಿಕೆಗೆ ತಕ್ಕಂತೆ ಮೂರುತಿಗಳು ಲಭ್ಯವಿಲ್ಲ. ಹೀಗಾಗಿ ತಮಿಳುನಾಡಿನಿಂದ ಮೂರುತಿಗಳನ್ನು ತರಿಸುತ್ತಿದ್ದೇವೆ. ಆರು ಅಡಿ ಎತ್ತರದವರೆಗಿನ ಮೂರ್ತಿಗಳನ್ನು ಮಣ್ಣಿನಿಂದ ಮಾಡಬಹುದು. ಆದರೆ ಅದಕ್ಕೂ ಎತ್ತರದ ಮೂರ್ತಿಗಳನ್ನು ಮಣ್ಣಿನಿಂದ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಎಲ್ಲರೂ ಕಾಗದದ ಮೂರ್ತಿಯನ್ನೇ ಕೊಳ್ಳಬೇಕಾಗಿದೆ. ವ್ಯಾಪಾರಿಗಳು ಕೃಷ್ಣಗಿರಿಯಿಂದಲೇ ಕಾಗದದ ಮೂರ್ತಿ ತರುತ್ತಿದ್ದಾರೆ’ ಎಂದು ವ್ಯಾಪಾರಿ ಶ್ರೀನಿವಾಸ್‌ ಹೇಳಿದರು.

ಅಲಂಕಾರ ಮಾಯ
ಇದೇ ಮೊದಲ ಬಾರಿಗೆ ಗಣೇಶ ಮೂರ್ತಿ ತನ್ನ ಸೌಂದರ್ಯ ಕಳೆದುಕೊಂಡಿದ್ದಾನೆ. ಗಣಪನಿಗೆ ಕುಶಲಕರ್ಮಿಗಳು ಪಿಒಪಿಯಿಂದ ಥರಾವರಿ ಅಲಂಕಾರ ಮಾಡುತ್ತಿದ್ದರು. ಸೂಕ್ಷ್ಮಾತಿಸೂಕ್ಷ್ಮಗಳನ್ನು ಪಿಒಪಿಯಿಂದ ತಿದ್ದಿ ತೀಡುತ್ತಿದ್ದರು. ಆದರೆ ಈ ಬಾರಿ ಕಾಗದ ಅಥವಾ ಮಣ್ಣಿನಿಂದ ಮಾಡಿದ ಮೂರ್ತಿಗಳಿಗೆ ನೀಡಿರುವ ಅಂತಿಮ ಸ್ಪರ್ಷ ಅಷ್ಟೊಂದು ಸ್ಪಷ್ಟವಾಗಿಲ್ಲ. ದೊಡ್ಡ ಹೊಟ್ಟೆ, ಸೊಂಡಿಲು ಮಾತ್ರ ಸ್ಪಷ್ಟವಾಗಿ ಕಾಣುತ್ತಿವೆ. ಉಳಿದಂತೆ ಗಣೇಶ ಹಾಕಿರುವ ವಸ್ತ್ರ, ಕೈಯಲ್ಲಿ ಹಿಡಿದಿರುವ ಆಯುಧ, ಕೊರಳಲ್ಲಿರುವ ಹಾವು, ಮಣಿ ಸರಗಳು, ಗೆರೆಗಳು ಅಸ್ಪಷ್ಟವಾಗಿವೆ. ಮಾರುಕಟ್ಟೆಗೆ ಬಂದ ಭಕ್ತರೆಲ್ಲರೂ ಇದನ್ನೇ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಗ್ರಾಹಕರಿಗೆ ಬೇರೆ ಆಯ್ಕೆಯೇ ಇಲ್ಲದಾಗಿದೆ. ಇರುವ ಮೂರ್ತಿಗಳನ್ನೇ ಕೊಳ್ಳುವ ಅನಿವಾರ್ಯತೆ ಎದುರಾಗಿದೆ.

‘ಕಳೆದ ವರ್ಷ ಗಣೇಶ ತೊಟ್ಟಿದ್ದ ರೇಷ್ಮೆ ವಸ್ತ್ರ ಥೇಟ್‌ ರೇಷ್ಮೆಯಂತೆಯೇ ಫಳಫಳನೆ ಹೊಳೆಯುತ್ತಿತ್ತು. ಆದರೆ ಈ ಬಾರಿ ಯಾವ ಮೂರ್ತಿ ಹುಡುಕಿದರೂ ಅಷ್ಟೊಂದು ಚೆನ್ನಾಗಿ ಕಾಣುತ್ತಿಲ್ಲ. ಕಿರೀಟ, ಒಡವೆಗಳೂ ಚೆನ್ನಾಗಿ ಮೂಡಿಬಂದಿಲ್ಲ. ಬರೀ ಬಣ್ಣಗಳಿಂದ ವ್ಯತ್ಯಾಸ ಗುರುತಿಸಲಾಗಿದೆ’ ಎಂದು ಗ್ರಾಹಕ ರವಿಕುಮಾರ್‌ ಹೇಳಿದರು.

‘ಈ ಬಾರಿ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಮಣ್ಣು ಹಾಗೂ ಕಾಗದದಿಂದ ತಯಾರಿಸಿದ ಮೂರ್ತಿಗಳನ್ನೇ ಮಾರಾಟ ಮಾಡುತ್ತಿದ್ದಾರೆ. ಪಿಒಪಿಯಿಂದ ಮೂರ್ತಿ ತಯಾರಿಸಿದರೆ ಅದು ನೀರಿನಲ್ಲಿ ಕರಗುವುದಿಲ್ಲ. ಪರಿಸರ ಮಾಲಿನ್ಯ ತಡೆಗಟ್ಟಲು ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡಿದೆ. ಸರ್ಕಾರದ ನಿರ್ಧಾರಕ್ಕೆ ವ್ಯಾಪಾರಿಗಳೂ ಬೆಂಬಲ ನೀಡಿದ್ದಾರೆ’ ಎಂದು ವ್ಯಾಪಾರಿ ಕುಮಾರಚಾರ್‌ ಹೇಳಿದರು.

ಮೂರ್ತಿಗಳ ಕೊರತೆ
ಮಾರುಕಟ್ಟೆಯಲ್ಲಿ ಐದು ಅಡಿವರೆಗಿನ ಮೂರ್ತಿಗಳಿಗೆ ಕೊರತೆ ಇಲ್ಲ. ಮನೆಯಲ್ಲಿ ಕೂರಿಸಬಹುದಾದ ಪುಟಾಣಿ ಮೂರ್ತಿಗಳು ಯಥೇಚ್ಛವಾಗಿವೆ. ಆದರೆ ಐದು ಅಡಿಗೂ ಎತ್ತರದ ಮೂರ್ತಿಗಳಿಗೆ ಮಾರುಕಟ್ಟೆಯಲ್ಲಿ ಕೊರತೆ ಉಂಟಾಗಿದೆ. ಸಾರ್ವಜನಿಕ ಪೆಂಡಾಲ್‌ಗಳಲ್ಲಿ ಎತ್ತರ ಮೂರ್ತಿ ಕೂರಿಸುವವರು ಮೈಸೂರು, ಬೆಂಗಳೂರಿಗೆ ತೆರಳಿ ಮೂರ್ತಿ ತರುವ ಯೋಚನೆಯಲ್ಲಿದ್ದಾರೆ.

‘ನಾವು ಪ್ರತಿ ವರ್ಷ 12 ಅಡಿ ಎತ್ತರದ ಮೂರ್ತಿ ಕೂರಿಸುತ್ತೇವೆ. ಆದರೆ ಮಂಡ್ಯದಲ್ಲಿ ಅಷ್ಟು ಎತ್ತರದ ಮೂರ್ತಿ ಸಿಗುತ್ತಿಲ್ಲ. ಬೆಂಗಳೂರಿನಲ್ಲಿ ಕಾಗದದಿಂದ ತಯಾರಿಸಿದ ಮೂರುತಿಗೆ ಕಾಯ್ದಿರಿಸಿ ಬಂದಿದ್ದೇವೆ’ ಎಂದು ಬಂದೀಗೌಡ ಬಡಾವಣೆಯ ರಮೇಶ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !