ಗುರುವಾರ , ನವೆಂಬರ್ 21, 2019
25 °C
ಜಿಲ್ಲಾ ಪಂಚಾಯಿತಿಯಲ್ಲಿ ‘ನೀ ಕೊಡೆ ನಾ ಬಿಡೆ’ ನಾಟಕ, ನನೆಗುದಿಗೆ ಬಿದ್ದ ಅಭಿವೃದ್ಧಿ ಕಾಮಗಾರಿಗಳು

ರಾಜೀನಾಮೆ ಪ್ರಹಸನ: ಸಾಮಾನ್ಯ ಸಭೆ ಮತ್ತೆ ಬಲಿ

Published:
Updated:
Prajavani

ಮಂಡ್ಯ: ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರ ನಡವಳಿಕೆ ಪ್ರಹಸನದ ರೂಪ ತಾಳಿದೆ. ಆಡಳಿತ ಪಕ್ಷವಾದ ಜೆಡಿಎಸ್‌ ಸದಸ್ಯರು ಅಧ್ಯಕ್ಷರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ಆದರೆ ಸ್ವಪಕ್ಷೀಯರ ಒತ್ತಡಕ್ಕೆ ಅಧ್ಯಕ್ಷರು ಸೊಪ್ಪು ಹಾಕುತ್ತಿಲ್ಲ. ಹೀಗಾಗಿ ಪರಿಸ್ಥಿತಿ ‘ನೀ ಕೊಡೆ ನಾ ಬಿಡೆ’ ಎಂಬ ಮಾತಿನಂತಾಗಿದೆ. 

ಗುರುವಾರ ಜಿಪಂ ಕಾವೇರಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯನ್ನು ಕೋರಂ ಕೊರತೆಯಿಂದ ಮುಂದೂಡಲಾಯಿತು. ಅ.25ರಂದು ಕೂಡ ಇದೇ ಕಾರಣಕ್ಕೆ ಮುಂದೂಡಲಾಗಿತ್ತು. ಎರಡನೇ ಬಾರಿಗೆ ಸಭೆ ಮುಂದೂಡಲ್ಪಟ್ಟಿದ್ದು ಅಭಿವೃದ್ಧಿ ಕಾಮಗಾರಿಗಳ ಚರ್ಚೆಯಾಗಲಿಲ್ಲ. ಜೆಡಿಎಸ್‌ ಪಕ್ಷದ ಆಂತರಿಕ ವಿಷಯ ಸಾಮಾನ್ಯ ಸಭೆಯನ್ನು ಬಲಿ ತೆಗೆದುಕೊಂಡಿದ್ದು ಇದರಿಂದ ಜಿಲ್ಲಾ ಪಂಚಾಯಿತಿಯ ಘನತೆಗೆ ಕುಂದುಂಟಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಗುರುವಾರ ಬೆಳಿಗ್ಗೆ ಸಭೆ ಆರಂಭವಾಗುತ್ತಿದ್ದಂತೆ ಜೆಡಿಎಸ್‌ ಸದಸ್ಯರು ಅಧ್ಯಕ್ಷೆ ನಾಗರತ್ನಾ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದರು. ಒಟ್ಟು 28 ಮಂದಿ ಜೆಡಿಎಸ್‌ ಸದಸ್ಯರಲ್ಲಿ ಕೆಲವೇ ಮಂದಿ ಮಾತ್ರ ಹಾಜರಾಗಿದ್ದರು. ಅವರು ಕೂಡ ತೋಳಿಗೆ ಕಪ್ಪು ಪಟ್ಟಿ ಧರಿಸಿ ಸಭೆಗೆ ಹಾಜರಾಗಿದ್ದರು. ಜೆಡಿಎಸ್‌ ವರಿಷ್ಠರ ಸೂಚನೆಯಂತೆ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯ ಮಾಡಿದರು. ಇದಕ್ಕೆ ಅಧ್ಯಕ್ಷೆ, ರಾಜೀನಾಮೆ ನೀಡುವುದಿಲ್ಲ. ಸಭೆ ನಡೆಸಲು ಅವಕಾಶ ಕೊಡಿ ಎಂದು ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್‌ ಸದಸ್ಯ ಸಿ.ಅಶೋಕ್‌ ‘ಯಾರು ಕೂಡ ಅಧಿಕಾರಕ್ಕೆ ಅಂಟಿ ಕುಳಿತುಕೊಳ್ಳಬಾರದು, ಎಲ್ಲರೂ ಒಂದು ದಿನ ಮಾಜಿ ಆಗಲೇಬೇಕು. ಪಕ್ಷದ ಅಂಗಳದಲ್ಲಿ ಮಾತುಕತೆಯಾದಂತೆ ಅಧ್ಯಕ್ಷರು ರಾಜೀನಾಮೆ ನೀಡಬೇಕು. ಪಕ್ಷದ ಸೂಚನೆ ನಿರಾಕರಿಸುತ್ತಿರುವ ಅಧ್ಯಕ್ಷರಿಗೆ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ನೀಡುವುದಿಲ್ಲ’ ಎಂದರು.

ಮತ್ತೊಬ್ಬ ಜೆಡಿಎಸ್‌ ಸದಸ್ಯ ಎಚ್‌.ಎನ್‌.ಯೋಗೇಶ್‌ ಮಾತನಾಡಿ ‘ಅಧ್ಯಕ್ಷರು ಸ್ಥಾಯಿ ಸಮಿತಿಗಳ ಸಭೆ ನಡೆಸಿಲ್ಲ. ಆದರೂ ಕೆಲವು ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಸಮಿತಿ ಅಧ್ಯಕ್ಷರುಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರ ವಿಶ್ವಾಸ ಪಡೆಯದೇ ಪ್ರಮುಖ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಹೀಗಾಗಿ ಅಧ್ಯಕ್ಷರಿಗೆ ನಮ್ಮ ಬೆಂಬಲ ಇಲ್ಲ’ ಎಂದು ಹೇಳಿದರು. ಆದರೆ ಅಧ್ಯಕ್ಷೆ ನಾಗರತ್ನಾ ಸ್ವಾಮಿ ಎಲ್ಲಾ ಆರೋಪಗಳನ್ನು ನಿರಾಕರಿಸಿದರು.

ಪಕ್ಷೇತರ ಸದಸ್ಯ ಎನ್‌.ಶಿವಣ್ಣ ಮಾತನಾಡಿ ‘ಜೆಡಿಎಸ್‌ನ ಆಂತರಿಕ ವಿಚಾರಗಳನ್ನು ಸಾಮಾನ್ಯ ಸಭೆಯಲ್ಲಿ ಪ್ರದರ್ಶನ ಮಾಡುವುದು ಬೇಡ. ಜಿಲ್ಲೆಯ ಜನರು ಹಲವು ಸಮಸ್ಯೆಗಳ ನಡುವೆ ಬದುಕುತ್ತಿದ್ದಾರೆ. ಹಲವು ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಹಲವು ಇಲಾಖೆಗಳ ಅಧಿಕಾರಿಗಳು ಹಾಜರಿದ್ದು ಎಲ್ಲಾ ಸಮಸ್ಯೆಗಳ ಚರ್ಚೆ ನಡೆಸಬೇಕು. ನಿಮ್ಮ ಸಮಸ್ಯೆಯನ್ನು ಸಭೆಯಿಂದ ಹೊರಗೆ ಬಗೆಹರಿಸಿಕೊಳ್ಳಿ’ ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ನ ರಾಜೀವ್‌, ದೇವರಾಜ್‌ ಸಭೆಯಲ್ಲಿ ಮಾತನಾಡಲು ಅವಕಾಶ ಕೋರಿದರು. ಆದರೆ ಅಧ್ಯಕ್ಷರು ‘ಕೋರಂ ಕೊರತೆ ಇರುವ ಕಾರಣ ಸಭೆಯನ್ನು ಮುಂದೂಡಲಾಗಿದೆ. ನ.11ರಿಂದ ವಿಧಾನಸಭಾ ಉಪ‍ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರಲಿದ್ದು ನಂತರ ಸಭೆಯ ಕುರಿತು ಮಾಹಿತಿ ನೀಡಲಾಗುವುದು’ ಎಂದು ಪ್ರಕಟಿಸಿದರು. ಇಸಿಒ ಕೆ.ಯಾಲಕ್ಕಿಗೌಡ ಹಾಜರಿದ್ದರು.

**********

ರಾಜೀನಾಮೆ ಸಲ್ಲಿಸುವೆ: ಶಿವಣ್ಣ

‘ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮೀಣ ಪ್ರದೇಶದ ರಸ್ತೆಗಳು ಕೆರೆಯಂತಾಗಿವೆ. ಕಬ್ಬು ಕಟಾವು ಆಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸದಸ್ಯರು ಮೂರ್ಖತನ ಪ್ರದರ್ಶನ ಮಾಡುತ್ತಿದ್ದಾರೆ. ಜಿಲ್ಲೆಯ ಘನತೆಗೆ ಕುತ್ತು ತಂದಿದ್ದಾರೆ. ಅಧಿಕಾರ ವಿಕೇಂದ್ರೀಕರಣದ ಮೇಲೆ ನಂಬಿಕೆ ಇಲ್ಲದೆ ಸಾಮಾನ್ಯ ಸಭೆಯನ್ನು ಬಲಿ ಕೊಟ್ಟಿದ್ದಾರೆ. ಜನರಿಗೆ ಏನು ಉತ್ತರ ಕೊಡುವುದು ಎಂಬ ನೋವು ನನ್ನನ್ನು ಕಾಡುತ್ತಿದೆ. ಹೀಗಾಗಿ ನಾನು ರಾಜೀನಾಮೆ ನೀಡಲು ಚಿಂತಿಸುತ್ತಿದ್ದೇನೆ’ ಎಂದು ಪಕ್ಷೇತರ ಸದಸ್ಯ ಎನ್‌.ಶಿವಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಬಿಗಿ ಪೊಲೀಸ್‌ ಬಂದೋಬಸ್ತ್‌

ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಗದ್ದಲ ಉಂಟಾಗಬಹುದು ಎಂಬ ಮುನ್ಸೂಚನೆ ಇದ್ದ ಕಾರಣ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಕಾವೇರಿ ಸಭಾಂಗಣದ ಗೇಟ್‌ ಮುಂದೆ ಹಾಗೂ ಸುತ್ತಲೂ ಪೊಲೀಸ್‌ ಸಿಬ್ಬಂದಿ ನಿಂತಿದ್ದರು.

ಪ್ರತಿಕ್ರಿಯಿಸಿ (+)