ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಎಲ್ಲಾ ಕಾನೂನುಗಳ ತಾಯಿ ಬೇರು

ಪಿಇಎಸ್‌ ಕಾನೂನು ಕಾಲೇಜು, ಕಾಂಗ್ರೆಸ್‌ ಕಚೇರಿ, ಜಿಲ್ಲಾಡಳಿತದಿಂದ ಸಂವಿಧಾನ ದಿನಾಚರಣೆ
Last Updated 26 ನವೆಂಬರ್ 2019, 12:23 IST
ಅಕ್ಷರ ಗಾತ್ರ

ಮಂಡ್ಯ: ‘ಭಾರತೀಯ ಸಂವಿಧಾನ ಎಲ್ಲಾ ಕಾನೂನುಗಳ ತಾಯಿ ಬೇರು. ಅದು ಧರ್ಮ ಗ್ರಂಥವಲ್ಲ, ಸರ್ವರಿಗೂ, ಸರ್ವ ಕಾಲಕ್ಕೂ ಅನ್ವಯವಾಗುವ ಕಾನೂನು ಎಂದರೆ ಅದು ಸಂವಿಧಾನ ಮಾತ್ರ’ ಎಂದು ಜನತಾ ಶಿಕ್ಷಣ ಟ್ರಸ್ಟ್‌ ಉಪಾಧ್ಯಕ್ಷ ಬಸವಯ್ಯ ಹೇಳಿದರು.

ಪಿಇಎಸ್‌ ಕಾನೂನು ಕಾಲೇಜು ವತಿಯಿಂದ ಮಂಗಳವಾರ ಕಾಲೇಜಿನ ಆವರಣದಲ್ಲಿ ನಡೆದ ‘ಸಂವಿಧಾನ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

‘ತಾಯಿಯನ್ನು ಎಂದಿಗೂ ಅಪಮಾನ ಮಾಡಬಾರದು. ಪ್ರತಿಯೊಬ್ಬ ವ್ಯಕ್ತಿಯೂ ಸಂವಿಧಾನದ ತತ್ವಗಳ ವಿರುದ್ಧ ಮಾತನಾಡಬಾರದು. 12ನೇ ಶತಮಾನದಲ್ಲಿ ಕಾಯಕವೇ ಕೈಲಾಸವಾಗಿತ್ತು. ಆದರೆ ಈಗ ಪೂಜೆಯೇ ಕಾಯಕವಾಗಿದೆ. ಕಾಯಕವೇ ಪೂಜೆ ಎನ್ನುವುದಕ್ಕೂ, ಪೂಜೆಯೇ ಕಾಯಕ ಎನ್ನುವುದಕ್ಕೆ ಸಾಕಷ್ಟು ವ್ಯತ್ಯಾಸ ಇದೆ. ಪ್ರತಿಯೊಬ್ಬರೂ ತಮ್ಮ ಇತಿ ಮಿತಿಗಳನ್ನು ಅರಿತು ಜೀವನ ನಡೆಸಬೇಕು’ ಎಂದು ಸಲಹೆ ನೀಡಿದರು.

‘ಸಂವಿಧಾನದಲ್ಲಿ ಸಮಾನತೆ, ಸಾಮಾಜಿಕ, ರಾಜಕೀಯ, ಆರ್ಥಿಕ, ಭ್ರಾತೃತ್ವ ಪದಗಳಿವೆ. ಎಲ್ಲರೂ ಯಾವುದರಿಂದಲೂ ವಂಚಿತರಾಗಬಾರದು ಎಂಬ ಕಾರಣಕ್ಕೆ ದೂರಾಲೋಚನೆಯಿಂದ ಸಮಾನ ಪ್ರಾತಿನಿಧ್ಯ ನೀಡಲಾಗಿದೆ. ಕಾನೂನು ತತ್ವಗಳ ಜೊತೆಗೆ ಮಾನವೀಯ ಗುಣಗಳನ್ನು ಬೆಳೆಸಿಕೊಂಡಾಗ ಸಂವಿಧಾನದ ತತ್ವ ತಿಳಿಯುತ್ತದೆ’ ಎಂದರು.

‘ಜಗತ್ತಿನಲ್ಲಿ ಎಲ್ಲೂ ಇಲ್ಲದ ಅನೇಕ ಉತ್ತಮ ಅಂಶಗಳು ನಮ್ಮ ದೇಶದಲ್ಲಿ ಇವೆ. ಸಾಮಾಜಿಕ ನ್ಯಾಯ ಕಲ್ಪಿಸಲು ಸಂವಿಧಾನದಲ್ಲಿ ಹಲವು ಅರ್ಥಪೂರ್ಣ ಅಂಶಗಳನ್ನು ಸೇರಿಸಲಾಗಿದೆ. ಯಾರೊಬ್ಬರೂ ಕಾನೂನು ಮೀರದಂತೆ ನೀತಿ ನಿಯಮಗಳನ್ನು ರೂಪಿಸಲಾಗಿದೆ. ಅವುಗಳನ್ನು ಅನುಸರಿಸಬೇಕು. ಹಿಂದೆಲ್ಲಾ ಯಾವುದೋ ಒಂದು ವರ್ಗಕ್ಕೆ ಅಧಿಕಾರ ಸೀಮಿತವಾಗಿತ್ತು. ಆದರೆ ಇಂದು ತಳಮಟ್ಟದ ವ್ಯಕ್ತಿಯೂ ಅಧಿಕಾರ ಪಡೆದಿದ್ದಾರೆ ಎಂದರೆ ಅದು ಸಂವಿಧಾನದಿಂದ ಮಾತ್ರ’ ಎಂದರು.

‘ಪ್ರತಿ ಮನೆಯಲ್ಲೂ ಮಕ್ಕಳಿಗೆ ಸಂವಿಧಾನದ ಬಗ್ಗೆ ತಿಳಿಸಿಕೊಡಬೇಕು. ಆಗ ಮಾತ್ರ ಕಾನೂನು ಪಾಲನೆ ಸರಿಯಾದ ರೀತಿಯಲ್ಲಿ ಆಗುತ್ತದೆ. ಸಮಾಜದಲ್ಲಿನ ತಾರತಮ್ಯ ಹೋಗಲಾಡಿಸಲು ಸಹಾಯಕವಾಗುತ್ತದೆ’ ಎಂದರು.

ವಕೀಲ ಶ್ರೀಕಂಠಸ್ವಾಮಿ ಮಾತನಾಡಿ ‘ಇಂದು ಎಲ್ಲರಿಗೂ ನೀಡಿರುವ ಪ್ರಾತಿನಿಧ್ಯ ಮೂಲ 1935ರ ಕಾಯ್ದೆಯಲ್ಲಿದೆ. ಅಲ್ಲದೆ ಹಲವಾರು ಕಾಯ್ದೆಗಳ ನಂತರ ಅನುಮೋದನೆ ಪಡೆದು ಸಂವಿಧಾನ ರೂಪಿಸಲಾಗಿದೆ. ಸಂವಿಧಾನದಕ್ಕೆ ತಂದಿರುವ ತಿದ್ದುಪಡಿಗಳನ್ನು ಅರಿಯಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ವಕೀಲ ಟಿ.ಲೋಕೇಶ್‌ ಸಂವಿಧಾನ ರೂಪು ರೇಷೆಗಳ ಬಗ್ಗೆ ತಿಳಿಸಿಕೊಟ್ಟರು. ಪ್ರಾಂಶುಪಾಲ ಪ್ರೊ.ಜೆ.ಯೋಗೀಶ್‌, ವಕೀಲ ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿ ಪ್ರೊ.ಎಂ.ಪಿ.ಪ್ರಮೋದ್‌ಕುಮಾರ್‌ ಇದ್ದರು.

ಶಂಕರಗೌಡ ಶಿಕ್ಷಣ ವಿದ್ಯಾಲಯ: ಮಂಗಳವಾರ ವಿದ್ಯಾಲಯದಲ್ಲಿ ಸಂವಿಧಾನ ದಿನಾಚರಣೆ ಆಚರಿಸಲಾಯಿತು. ಅಖಿಲ ಭಾರತ ವಕೀಲರ ಸಂಘದ ಅಧ್ಯಕ್ಷ ಬಿ.ಟಿ.ವಿಶ್ವನಾಥ್ ಉಪನ್ಯಾಸ ನೀಡಿದರು. ಪಿಇಟಿ ಕಾರ್ಯದರ್ಶಿ ಎಚ್.ಹೊನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ.ಕೆ.ಚನ್ನಕೃಷ್ಣಯ್ಯ, ಪಿಇಎಸ್ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಕೆ.ಎಸ್.ಜಯಕುಮಾರ್ ಇದ್ದರು.

ಕಾಂಗ್ರೆಸ್‌ ಕಚೇರಿಯಲ್ಲಿ: ಕೆಪಿಸಿಸಿ ಪರಿಶಿಷ್ಟ ಜಾತಿ ಘಟಕದ ವತಿಯಿಂದ ಕಾಂಗ್ರೆಸ್‌ ಜಿಲ್ಲಾ ಕಚೇರಿಯಲ್ಲಿ ಸಂವಿಧಾನ ದಿನಾಚರಣೆ ನಡೆಯಿತು. ‘ವಿಶ್ವದಲ್ಲೇ ಶ್ರೇಷ್ಠ ಸಂವಿಧಾನ ನೀಡಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಸರ್ವರಿಗೂ ಸಮಾನ ಹಕ್ಕುಗಳನ್ನು ಕಲ್ಪಿಸಿದ್ದಾರೆ. ನಾಗರಿಕರ ಸಂರಕ್ಷಣೆಗಾಗಿ ಮೂಲಭೂತ ಹಕ್ಕುಗಳನ್ನು ನೀಡಿದ್ದಾರೆ’ ಎಂದು ಪರಿಶಿಷ್ಟ ಜಾತಿ ಘಟಕದ ಸಂಯೋಜಕ, ವಕೀಲ ಸುಂಡಹಳ್ಳಿ ಮಂಜುನಾಥ್‌ ಹೇಳಿದರು.

ನಗರಸಭಾ ಸದಸ್ಯರಾದ ಶ್ರೀಧರ್‌, ಶಿವಪ್ರಕಾಶ್‌, ಮುಖಂಡರಾದ ಬಿ.ಪಿ.ಪ್ರಕಾಶ್‌, ಕೆ.ಎಚ್‌.ಲವ, ಚಿಕ್ಕಮಂಡ್ಯ ಆನಂದ್‌, ಹನಕೆರೆ ಗಂಗರಾಜ್‌ ಇದ್ದರು.

ಪ್ರತಿಜ್ಞಾ ವಿಧಿ ಸ್ವೀಕರಿಸಿದ ಅಧಿಕಾರಿ ವರ್ಗ

ಸಂವಿಧಾನದ ಪೀಠಿಕೆ ಓದುವ ಮೂಲಕ, ಕರ್ತವ್ಯದಲ್ಲಿ ಸಾಂವಿಧಾನಿಕ ಆಶಯಗಳನ್ನು ಪಾಲಿಸುವುದಾಗಿ ಜಿಲ್ಲಾಧಿಕಾರಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ್‌, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಯಾಲಕ್ಕಿಗೌಡ, ಕೃಷಿ ಜಂಟಿ ನಿರ್ದೇಶಕ ಡಾ.ಬಿ.ಎಸ್‌.ಚಂದ್ರಶೇಖರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT