ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಗಮನ ಸೆಳೆದಿದ್ದ ಗಾಂಧೀಜಿಯ ದಂಡಿ ಯಾತ್ರೆ

ಎಸ್‌.ವಿಶ್ವನಾಥ್‌ ಸ್ಮಾರಕ ಪ್ರಶಸ್ತಿ ಪ್ರದಾನ; ಎಸ್‌.ರಾಜೇಂದ್ರಪ್ಪ ಅಭಿಮತ
Last Updated 12 ಮಾರ್ಚ್ 2020, 13:26 IST
ಅಕ್ಷರ ಗಾತ್ರ

ಮಂಡ್ಯ: ‘ಸ್ವಾತಂತ್ರ್ಯ ಚಳವಳಿಯ ಭಾಗವಾಗಿ ಮಹಾತ್ಮಾ ಗಾಂಧೀಜಿ 1930, ಮಾರ್ಚ್‌ 12ರಂದು ಆರಂಭಿಸಿದ ದಂಡಿಯಾತ್ರೆ ಇಡೀ ವಿಶ್ವದ ಗಮನ ಸೆಳೆದಿತ್ತು. ಹಲವು ರಾಷ್ಟ್ರಗಳು ಬೆರಗಾಗಿ ಭಾರತದತ್ತ ತಿರುಗಿ ನೋಡಿದವು’ ಎಂದು ಕರ್ನಾಟಕ ರಾಜ್ಯ ಗೆಜೆಟಿಯರ್‌ನ ನಿವೃತ್ತ ಸಂಪಾದಕ ಎಸ್‌.ರಾಜೇಂದ್ರಪ್ಪ ಹೇಳಿದರು.

ದಿ.ಎಸ್‌.ವಿಶ್ವನಾಥ್‌ ಸಂಸ್ಮರಣಾ ಸಮಿತಿ, ಮಹಾತ್ಮಾ ಗಾಂಧಿ ಸ್ಮಾರಕ ಟ್ರಸ್ಟ್‌ ವತಿಯಿಂದ ಗುರುವಾರ ಗಾಂಧಿಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ದಂಡಿ ಯಾತ್ರೆಯ ಆರಂಭ ಕಾಲದಲ್ಲಿ ಹಲವರಿಗೆ ವಿಶ್ವಾಸ ಇರಲಿಲ್ಲ. ಉಪ್ಪಿನ ಸತ್ಯಾಗ್ರಹ ನಡೆಸುವ ಮೂಲಕ ಸ್ವಾತಂತ್ರ್ಯ ಗಳಿಸಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿತ್ತು. ಬ್ರಿಟಿಷರು ಕೂಡ ಇದರ ವಿರುದ್ಧ ಅಸಡ್ಡೆ ವ್ಯಕ್ತಪಡಿಸಿದ್ದರು. ಆದರೆ ಚಳವಳಿ ಆರಂಭವಾದೊಡನೆ ಅದರ ಮಹತ್ವ ವಿಶ್ವಕ್ಕೆ ಗೊತ್ತಾಯಿತು. ಉಪ್ಪು ಮನುಷ್ಯನ ಬದುಕಿಗೆ ಎಷ್ಟು ಮುಖ್ಯವೋ ಸ್ವಾತಂತ್ರ್ಯವೂ ಅಷ್ಟೇ ಮುಖ್ಯ ಎಂಬ ಭಾವ ಮೂಡಿತು’ ಎಂದು ಹೇಳಿದರು.

‘ಉಪ್ಪಿನ ಸತ್ಯಾಗ್ರಹ ದೇಶದಾದ್ಯಂತ ಪ್ರಸಿದ್ಧಿ ಪಡೆಯಿತು. ಕರ್ನಾಟಕದ ಕಾರವಾರ, ಅಂಕೋಲ ಸೇರಿದಂತೆ ಕರಾವಳಿಯ ನಾಲ್ಕೈದು ಭಾಗದಲ್ಲೂ ಸತ್ಯಾಗ್ರಹ ನಡೆಯಿತು. ಕೊನೆಗೆ ಹಳ್ಳಿಹಳ್ಳಿಗಳಲ್ಲಿ ಚಳವಳಿ ವ್ಯಾಪ್ತಿಸಿತು. ನಂತರ ದಂಡಿಯಾತ್ರೆಯ ಮಹತ್ವ ದೇಶಕ್ಕೆ, ವಿಶ್ವಕ್ಕೆ ತಿಳಿಯಿತು. ಎಂಟು ದಶಕಗಳ ಹಿಂದೆ ನಡೆದ ಈ ಹೋರಾಟ ಸ್ವಾತಂತ್ರ್ಯ ಚಳವಳಿಯ ಮಹತ್ವದ ಘಟ್ಟವಾಗಿ ಇತಿಹಾಸದಲ್ಲಿ ದಾಖಲಾಯಿತು’ ಎಂದರು.

‘ದಂಡಿ ಯಾತ್ರೆಯ ನಡೆದ ದಿನದಂದು ಗಾಂಧಿವಾದಿಯೊಬ್ಬರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಮಹತ್ವದ ವಿಚಾರವಾಗಿದೆ. ಗಾಂಧೀಜಿ ಬದುಕಿದ ರೀತಿ, ಅವರು ಅನುಸರಿಸಿದ ಆದರ್ಶಗಳು ಇಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಬೇಕು. ಅವರೊಬ್ಬ ವ್ಯಕ್ತಿಯಾಗಿ ಹುತಾತ್ಮರಾಗಿದ್ದಾರೆ, ಆದರೆ ಅವರ ಆದರ್ಶಗಳು ಸರ್ವಕಾಲಕ್ಕೂ ಸಲ್ಲುತ್ತವೆ. ಆದರೆ ಇಂದಿನ ಸನ್ನಿವೇಶದಲ್ಲಿ ಗಾಂಧಿ ತತ್ವಗಳ ದಮನ ಮಾಡುವ ಯತ್ನಗಳು ನಡೆಯುತ್ತಿರುವುದು ಅಪಾಯಕಾರಿ ಬೆಳವಣಿಗೆ’ ಎಂದು ವಿಷಾದ ವ್ಯಕ್ತಪಡಿಸಿದರು.

ದಿ.ಎಸ್‌.ವಿಶ್ವನಾಥ್‌ ಕುರಿತು ಮಾತನಾಡಿದ ವಕೀಲ ಎಸ್‌.ಶಿವಶಂಕರ್‌ ‘ಶ್ರೀರಂಗಪಟ್ಟಣ ತಾಲ್ಲೂಕು ಅರಕೆಯಲ್ಲಿ ಜನ್ಮಿಸಿದ ವಿಶ್ವನಾಥ್‌ ಅವರು ಅಪ್ರತಿಮ ಗಾಂಧಿವಾದಿಯಾಗಿದ್ದರು. ರೈತ ಕುಟುಂಬದಿಂದ ಬಂದ ಅವರು ಬಿ.ಇ ವ್ಯಾಸಂಗ ಮಾಡಿ ಸರ್ಕಾರದ ವಿವಿಧ ಹುದ್ದೆ ಅಲಂಕಾರ ಮಾಡಿದ್ದರು. ರಾಜ್ಯ ಸರ್ಕಾರದ ಮುಖ್ಯ ಎಂಜಿನಿಯರ್‌ ಆಗಿ ನಿವೃತ್ತಿ ಹೊಂದಿದರು. ಉನ್ನತ ಅಧಿಕಾರಿಯಾಗಿ ಸರ್ಕಾರದ ಸೌಲಭ್ಯಗಳನ್ನು ಎಂದಿಗೂ ಅವರು ವೈಯಕ್ತಿಕ ಉದ್ದೇಶಕ್ಕೆ ಬಳಸಿಕೊಳ್ಳಲಿಲ್ಲ’ ಎಂದರು.

‘ವೃತ್ತಿಯಲ್ಲಿ ಎಂಜಿನಿಯರ್‌ ಆಗಿದ್ದರೂ ವಿಶ್ವನಾಥ್‌ ಅವರು ಪ್ರವೃತ್ತಿಯಲ್ಲಿ ಉತ್ತಮ ಸಾಹಿತಿಯಾಗಿದ್ದರು. ರಾಜ್ಯದ ಹಲವು ಪತ್ರಿಕೆಗಳಲ್ಲಿ ಅವರ ಚುಟುಕು, ಹಾಸ್ಯ ಲೇಖನಗಳು ಪ್ರಕಟವಾಗಿದೆ. ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ, ಎಚ್‌.ಎಚ್‌.ನಾರಾಯಣ, ಕೃಷ್ಣಪ್ಪಗೌಡ, ಎ.ಜೆ.ಪುಟ್ಟೇಗೌಡ ಅವರ ಸಮಕಾಲೀನರಾಗಿದ್ದರು. ಗಾಂಧಿ ದಂಡಿ ಯಾತ್ರೆಯ ದಿನ ಕನ್ನಡ ಸಾಹಿತ್ಯ ಲೋಕಕ್ಕೆ ದೊಡ್ಡ ಕೊಡುಗೆ ನೀಡಿರುವ ವಿಶ್ವನಾಥ್‌ ಅವರನ್ನು ಸ್ಮರಣೆ ಮಾಡುತ್ತಿರುವುದು ಸಮಯೋಚಿತವಾದುದು’ ಎಂದು ಹೇಳಿದರು.

ಹಿರಿಯ ಲೇಖಕ ಡಾ.ಎನ್‌.ಜಗದೀಶ್‌ ಕೊಪ್ಪ ಅವರಿಗೆ ಎಸ್‌.ವಿಶ್ವನಾಥ್‌ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಲೇಖಕ ಡಿ.ಹೊಸಳ್ಳಿ ಶಿವು, ಜಯಮ್ಮ ವಿಶ್ವನಾಥ್‌, ಜೆ.ವಿ.ಪೂರ್ಣಿಮಾ, ಸೌಮ್ಯಾ ಶಶಿಧರ್‌ ಇದ್ದರು.

*****

ಬಡ ವಿದ್ಯಾರ್ಥಿನಿಗೆ ಪ್ರಶಸ್ತಿ ಹಣ

ಪ್ರಶಸ್ತಿ ಸ್ವೀಕರಿಸಿದ ಡಾ.ಎನ್‌.ಜಗದೀಶ್‌ ಕೊಪ್ಪ, ಪ್ರಶಸ್ತಿಯ ಜೊತೆ ಬಂದ ₹ 5 ಸಾವಿರ ಹಣವನ್ನು ಧಾರವಾಡ ಜಿಲ್ಲೆಯ ಬಡ ವಿದ್ಯಾರ್ಥಿನಿಯ ಓದಿಗೆ ಬಳಸಲಾಗುವುದು ಎಂದು ಪ್ರಕಟಿಸಿದರು.

‘ಮಹಾತ್ಮಾ ಗಾಂಧಿ ಹಾಗೂ ಅವರ ಹಿರಿಯ ಮಗ ಹರಿಲಾಲ್‌ ಗಾಂಧಿ ನಡುವಿನ ಸಂಬಂಧದ ಬಗ್ಗೆ ಹಲವು ಬೇರೆ ಬೇರೆ ಸಲ್ಲದ ವಿಚಾರಗಳು ಹರಿದಾಡುತ್ತಿವೆ. ಆದರೆ ಇಬ್ಬರ ನಡುವೆಯೂ ಆಪ್ತ ಸಂಬಂಧವಿತ್ತು ಎಂಬುದು ವಾಸ್ತವಾಂಶ. ತಂದೆ–ತಾಯಿಯ ಬಗ್ಗೆ ಹರಿಲಾಲ್‌ಗೆ ವಿಶೇಷ ಪ್ರೀತಿ ಇತ್ತು ಎಂಬುದನ್ನು ಎಲ್ಲರೂ ಅರಿಯಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT