ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿ, ಮಗು ನೋಂದಣಿ, ಸಮೀಕ್ಷೆ ಸ್ಮಾರ್ಟ್‌ಫೋನ್‌ನಲ್ಲೇ

ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ ಫೋನ್‌ ವಿತರಣೆ, ಕೆಲಸದ ವಿಧಾನ ಸರಳ, ಕಡಿಮೆ ಒತ್ತಡ
Last Updated 2 ಡಿಸೆಂಬರ್ 2020, 2:33 IST
ಅಕ್ಷರ ಗಾತ್ರ

ಮಂಡ್ಯ: ಅಂಗನವಾಡಿ ಕಾರ್ಯಕರ್ತೆಯರ ಕಾರ್ಯಭಾರ, ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ 2,546 ಅಂಗನವಾಡಿ ಕಾರ್ಯಕರ್ತೆಯರು, 89 ಮೇಲ್ವಿಚಾರಕಿಯರು ಸೇರಿದಂತೆ 2,635 ಸಿಬ್ಬಂದಿಗೆ ಸ್ಮಾರ್ಟ್‌ ಫೋನ್‌ಗಳನ್ನು ವಿತರಿಸಲಾಗಿದ್ದು, ಈ ತಿಂಗಳಿನಿಂದ ಎಲ್ಲಾ ಯೋಜನೆಗಳ ವರದಿಯನ್ನು ಮೊಬೈಲ್‌ನಲ್ಲೇ ಅಪ್‌ಡೇಟ್‌ ಮಾಡಬೇಕಿದೆ.

ಮೊಬೈಲ್‌ ಫೋನ್‌, ಪವರ್‌ ಬ್ಯಾಂಕ್‌ (3000ಎಂಎಎಚ್‌), ಪೌಚ್‌, 32 ಜಿಬಿ ಮೆಮೊರಿ ಕಾರ್ಡ್‌, ಕಾರ್ಯ ಕ್ಷೇತ್ರದಲ್ಲಿ ಸಿಗುವ ನೆಟ್‌ವರ್ಕ್‌ನ ಪೋಸ್ಟ್‌ಪೇಯ್ಡ್‌ ಸಿಮ್‌ಗಳನ್ನು ಈಗಾಗಲೇ ವಿತರಿಸಲಾಗಿದೆ. ಮೊಬೈಲ್‌ನಲ್ಲಿ ಸ್ನೇಹ ಆ್ಯಪ್‌, ಇಐಎಲ್‌ಎ ಸೇರಿದಂತೆ ವಿವಿಧ ಆ್ಯಪ್‌ಗಳನ್ನು ಪ್ರೀ ಇನ್‌ಸ್ಟಾಲ್‌ ಮಾಡಲಾಗಿದೆ.

ತಾಯಿ, ಮಗು ನೋಂದಣಿ, ಇಲಾಖೆಯ ವಿಶೇಷ ಸಮೀಕ್ಷೆ ಸೇರಿದಂತೆ 11 ರಿಜಿಸ್ಟಾರ್‌ಗಳಲ್ಲಿ ಮಾಡುವ ಕೆಲಸಗಳನ್ನು ಒಂದೇ ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸಲಾಗಿದ್ದು, ಕೆಲಸದ ವಿಧಾನವನ್ನು ಸರಳೀಕರಣ ಮಾಡುವುದು ಯೋಜನೆಯ ಉದ್ದೇಶವಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ದಿನವಹಿ ನಿರ್ವಹಿಸುವ ಕೆಲಸಗಳ ಮಾಹಿತಿಗಳನ್ನು ತಾಲ್ಲೂಕು, ಜಿಲ್ಲಾ, ಕೇಂದ್ರ ಮಟ್ಟದಲ್ಲಿ ಕುಳಿತು ವೀಕ್ಷಿಸಬಹುದಾಗಿದೆ.

ಮೊಬೈಲ್‌ನಲ್ಲೇ ಹಾಜರಾತಿ: ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳ ಹಾಜರಾತಿ ಇನ್ನು ಮುಂದೆ ಮೊಬೈಲ್‌ನಲ್ಲೇ ದಾಖಲಿಸಬೇಕಾಗಿದೆ. ಜಿಪಿಎಸ್‌ ಆಧಾರಿತ ಮೊಬೈಲ್‌ ಸೇವೆಯಿಂದ ಅಂಗನವಾಡಿ ಕಾರ್ಯಕರ್ತೆಯರು ಅಂಗನವಾಡಿಯಲ್ಲೇ ನಿಂತು ತಮ್ಮ ಹಾಜರಾತಿಯನ್ನು ದಾಖಲಿಸಿದಾಗ ಹೌದು ಎಂಬ ಹಸಿರು ಚಿಹ್ನೆ ಬರುತ್ತದೆ. ಇದೇ ಮಾದರಿಯಲ್ಲಿ ಮಕ್ಕಳ ದಾಖಲಾತಿಯನ್ನು ಮಾಡಬೇಕಿದ್ದು, ಮಕ್ಕಳು ಕುಳಿತಿರುವ ಫೋಟೋ ತೆಗೆದು ಅಪ್‌ಲೋಡ್‌ ಮಾಡಬೇಕಿದೆ.

ಇದಲ್ಲದೆ ಮಗುವಿಗೆ ವಿತರಿಸುವ ಆಹಾರ ದಾಖಲೆಯನ್ನೂ ಇದೇ ತಂತ್ರಾಂಶದಲ್ಲಿ ದಾಖಲಿಸಬೇಕಿದೆ. ಗರ್ಭಿಣಿಯರಲ್ಲಿನ ಅಪೌಷ್ಟಿಕತೆ, ರಕ್ತದೊತ್ತಡ, ರಕ್ತ ಹೀನತೆ, ಮಧುಮೇಹ ಸೇರಿದಂತೆ ಇತರೆ ಸಮಸ್ಯೆಗಳನ್ನು ಇದೇ ಮಾದರಿಯಲ್ಲಿ ದಾಖಲಿಸಿದಾಗ ಗ್ರಾಫ್‌ ರೂಪುಗೊಳ್ಳುತ್ತದೆ. ಇದರ ಆಧಾರದ ಮೇಲೆ ಅವರಿಗೆ ಪೌಷ್ಟಿಕ ಆಹಾರ, ಉತ್ತಮ ಆರೋಗ್ಯ ಸೇವೆ ನೀಡಲು ಅನುಕೂಲವಾಗುತ್ತದೆ.

ಆಹಾರ ಪದಾರ್ಥಗಳ ವಿತರಣೆ ಇತ್ಯಾದಿಗಳಲ್ಲಿ ಕೆಲವೆಡೆ ಅಕ್ರಮಗಳೂ ನಡೆಯುತ್ತಿವೆ ಎಂಬ ಆರೋಪವಿದೆ. ಇದನ್ನು ತಪ್ಪಿಸಿ, ಫಲಾನುಭವಿಗಳಿಗೆ ಅಗತ್ಯ ಹಾಗೂ ಪ್ರಾಮಾಣಿಕವಾಗಿ ಸೌಲಭ್ಯ ತಲುಪಿಸುವುದು ಸ್ಮಾರ್ಟ್‌ಫೋನ್‌ ಉದ್ದೇಶವಾಗಿದೆ.

ಅಪೌಷ್ಟಿಕತೆ ಪತ್ತೆ: ಮಕ್ಕಳ ಎತ್ತರ, ತೂಕ ಸೇರಿದಂತೆ ಇತರೆ ಮಾಹಿತಿಗಳನ್ನು ದಾಖಲು ಮಾಡಿದಾಗ ಅಪೌಷ್ಟಿಕತೆ ಇದೆಯೇ ಇಲ್ಲ ಮಗು ಆರೋಗ್ಯದಿಂದ ಇದೆಯೇ ಎಂಬುದನ್ನು ತಂತ್ರಾಂಶವೇ ನಿರ್ಧರಿಸಲಿದ್ದು, ಒಂದು ವೇಳೆ ಅಪೌಷ್ಟಿಕತೆ ಕಂಡು ಬಂದಲ್ಲಿ ಎನ್‌ಐಸಿ ಘಟಕಕ್ಕೆ ದಾಖಲಿಸಬೇಕು ಎಂಬ ಸೂಚನೆ ನೀಡುತ್ತದೆ. ಅಲ್ಲದೇ ಎಂಪಿಆರ್‌ (ತಿಂಗಳ ಪ್ರೋಗ್ರೆಸ್‌ ವರದಿ) ಅನ್ನು ಅಧಿಕಾರಿಗಳು ಕುಳಿತಲ್ಲೇ ವೀಕ್ಷಿಸಬಹುದಾಗಿದೆ.

ಸ್ಮಾರ್ಟ್‌ ಫೋನ್‌ ಕೆಲಸಕ್ಕೆ ಹೊಂದಿಕೊಳ್ಳಲು ಕೊರೊನಾ ಪ್ರಾರಂಭಕ್ಕೆ ಮೊದಲು ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗಿದ್ದು, ಕಳೆದೆರಡು ತಿಂಗಳಿನಿಂದ ಎಲ್ಲಾ ತಾಲ್ಲೂಕು ಅಥವಾ ಶಿಶು ಅಭಿವೃದ್ಧಿ ಯೋಜನೆಗಳ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್‌ ಅನ್ನು ವಿತರಿಸಲಾಗಿದೆ.

ಮೊಬೈಲ್ ಬಳಕೆ ಸಂಬಂಧಿಸಿದಂತೆ ಸಂದೇಹಗಳಿದ್ದಲ್ಲಿ ಮತ್ತೊಮ್ಮೆ ತರಬೇತಿ ನೀಡುವ ಸಲುವಾಗಿ ಡಿ. 2 ಮತ್ತು 4ರಂದು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮೇಲ್ವಿಚಾರಕಿಯರು, ಸಿಡಿಪಿಒ, ಎಸಿಡಿಪಿಒ ಅಧಿಕಾರಿಗಳಿ ತರಬೇತಿ ಹಮ್ಮಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT