ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ| ಹಳ್ಳ ಹಿಡಿಯಿತೇ ‘ನಮ್ಮ ಕ್ಲಿನಿಕ್‌’ ಸೇವೆ?

7ರ ಪೈಕಿ 2 ಕಡೆ ಮಾತ್ರ ಕಾರ್ಯಾರಂಭ, ರೋಗಿಗಳ ಸಿಗದ ಸಮರ್ಪಕ ಚಿಕಿತ್ಸೆ
Published 18 ಜೂನ್ 2023, 23:32 IST
Last Updated 18 ಜೂನ್ 2023, 23:32 IST
ಅಕ್ಷರ ಗಾತ್ರ

ಮಂಡ್ಯ: ನಗರ, ಪಟ್ಟಣ ಪ್ರದೇಶದ ಬಡಜನರಿಗೆ ಸಮರ್ಪಕ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಸ್ಥಾಪಿಸಲಾಗಿದ್ದ ‘ನಮ್ಮ ಕ್ಲಿನಿಕ್‌’ ಸೇವೆ ಆರಂಭದಲ್ಲೇ ಹಳ್ಳ ಹಿಡಿದಂತೆ ಕಾಣುತ್ತಿದೆ. ಯೋಜನೆಯಂತೆ ನಡೆದಿದ್ದರೆ ಜಿಲ್ಲೆಯ 8 ಕಡೆ ಕಡೆ ನಮ್ಮ ಕ್ಲಿನಿಕ್‌ ಕಾರ್ಯಾರಂಭ ಮಾಡಬೇಕಾಗಿತ್ತು, ಆದರೆ ಯೋಜನೆ ಸಾಕಾರಗೊಳ್ಳದ ಕಾರಣ ಕೇವಲ 3 ಕ್ಲಿನಿಕ್‌ ಕಾರ್ಯಾರಂಭ ಮಾಡಿವೆ, ಅವೂ ಸೌಲಭ್ಯಗಳ ಕೊರತೆಯಿಂದ ನರಳುತ್ತಿವೆ.

ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಾದರಿಯಲ್ಲಿ ಪಟ್ಟಣ ಪ್ರದೇಶದಲ್ಲಿ ‘ನಮ್ಮ ಕ್ಲಿನಿಕ್‌’ ಸ್ಥಾ‍ಪಿಸಲು ಉದ್ದೇಶಿಸಲಾಗಿತ್ತು. ಬಡಜನರು ಎಲ್ಲದಕ್ಕೂ ತಾಲ್ಲೂಕು ಆಸ್ಪತ್ರೆಗೆ ತೆರಳುವುದನ್ನು ತಪ್ಪಿಸಲು ಈ ಆಸ್ಪತ್ರೆ ರೂಪಿಸಲಾಗಿತ್ತು. ಕಳೆದ ವರ್ಷ ಡಿ.13ರಂದು ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮ ಕ್ಲಿನಿಕ್‌ಗಳಿಗೆ ಚಾಲನೆ ನೀಡಿದ್ದರು.

ಆರಂಭಿಕ ಹಂತದಲ್ಲಿ ಮದ್ದೂರು, ಶ್ರೀರಂಗಪಟ್ಟಣ, ಮಳವಳ್ಳಿ, ಕೆ.ಆರ್‌.ಪೇಟೆಯಲ್ಲಿ ಕ್ಲಿನಿಕ್‌ ಸ್ಥಾಪನೆಯಾಗಬೇಕಾಗಿತ್ತು. ಜಾಗ, ಕಟ್ಟಡದ ಕೊರತೆಯಿಂದಾಗಿ ಕೆ.ಆರ್‌.ಪೇಟೆ, ಶ್ರೀರಂಗಪಟ್ಟಣ ಮತ್ತು ಮದ್ದೂರಿನಲ್ಲಿ ಮಾತ್ರ ಕಾರ್ಯಾರಂಭ ಮಾಡಿವೆ. ಮಂಡ್ಯದಲ್ಲಿ 2 ಕಡೆ ಸೇರಿ ಉಳಿದೆಡೆ ಕ್ಲಿನಿಕ್‌ ಆರಂಭ ಮರೀಚಿಕೆಯಾಗಿಯೇ ಉಳಿದಿದೆ. ಈಗ ಆರಂಭಗೊಂಡಿರುವ ಕೆ.ಆರ್‌.ಪೇಟೆ, ಶ್ರೀರಂಗಪಟ್ಟಣ, ಮದ್ದೂರು ಕ್ಲಿನಿಕ್‌ಗಳು ಹಲವು ಸಮಸ್ಯೆ ಎದುರಿಸುತ್ತಿದ್ದು ಸಮರ್ಪಕ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ.

ಕ್ಲಿನಿಕ್‌ಗಳಲ್ಲಿ ಒಬ್ಬರು ವೈದ್ಯಾಧಿಕಾರಿ, ಒಬ್ಬರು ಶುಶ್ರೂಷಕರು, ಲ್ಯಾಬ್‌ ತಂತ್ರಜ್ಞ, ಡಿ ದರ್ಜೆ ನೌಕರರನ್ನು ನೇಮಕ ಮಾಡಿಕೊಳ್ಳಬೇಕು.  ಸ್ಥಳೀಯ ಪುರಸಭೆ, ನಗರಸಭೆ ಕಟ್ಟಡ ಗುರುತು ಮಾಡಿದರೆ ಲೋಕೋಪಯೋಗಿ ಇಲಾಖೆ ಬಾಡಿಗೆ ನಿಗದಿ ಮಾಡಬೇಕು, ಆರೋಗ್ಯ ಇಲಾಖೆ ಬಾಡಿಗೆ ಪಾವತಿ ಮಾಡಬೇಕು. ಈ ಯಾವುದೇ ಪ್ರಕ್ರಿಯೆ ನಡೆಯದ ಕಾರಣ ನಾಗಮಂಗಲ, ಮಂಡ್ಯ, ಮಳವಳ್ಳಿ, ಪಾಂಡವಪುದಲ್ಲಿ ನಮ್ಮ ಕ್ಲಿನಿಕ್‌ ಸೇವೆ ಜನರಿಗೆ ದೊರೆಯುತ್ತಿಲ್ಲ.

ಹೆಚ್ಚಾಗಿ ಬಡವರು ವಾಸಿಸುವ ಪ್ರದೇಶಗಳಲ್ಲೇ ಕ್ಲಿನಿಕ್‌ ಆರಂಭಿಸಲು ಉದ್ದೇಶಿಸಲಾಗಿತ್ತು. ಕೊಳೆಗೇರಿ, ವಲಸಿಗರು ವಾಸಿಸುವ ಪ್ರದೇಶಗಳನ್ನೇ ಆಯ್ಕೆ ಮಾಡಿಕೊಳ್ಳುವುದು ಉದ್ದೇಶವಾಗಿತ್ತು. ಶ್ರೀರಂಗಟ್ಟಣದಲ್ಲಿ ಹೊಸ ಕೋರ್ಟ್‌ ಹಿಂಭಾಗದ ರಂಗನಾಥನಗರದಲ್ಲಿ, ಮದ್ದೂರು ಪಟ್ಟಣದ ಉರ್ದು ಶಾಲೆ ಬಳಿ, ಮಳವಳ್ಳಿಯ 19ನೇ ವಾರ್ಡ್‌ ಸಮೀಪ ಕ್ಲಿನಿಕ್‌, ಕೆ.ಆರ್‌.ಪೇಟೆ ಪಟ್ಟಣದ ಹೊರವಲಯ ಹೊಸಹೊಳಲು ಬಳಿ ಕ್ಲಿನಿಕ್‌ಗೆ ಕಾರ್ಯಾರಂಭ ಮಾಡಿವೆ.

ನಗರ, ಪಟ್ಟಣ ಪ್ರದೇಶದಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಸಮಗ್ರ ಅನುಷ್ಠಾನ, ತಾಯಿ– ಮಗು– ಬಾಣಂತಿ ಸೇವೆಗಳು ಹಾಗೂ ಶಾಲಾ ಮಕ್ಕಳಿಗೆ ಲಸಿಕೆ, ಗರ್ಭಿಣಿ ಮತ್ತು ಜನನ ಸಮಯದ ಆರೈಕೆ, ನವಜಾತ ಶಿಶುಗಳ ಆರೈಕೆ ಜೊತೆಗೆ ಹದಿಹರೆಯದ ಯುವಜನರಿಗೆ ಆಪ್ತ ಸಮಾಲೋಚನೆ ಮುಂತಾದ ಚಟುವಟಿಕೆ ನಡೆಸಲು ನಮ್ಮ ಕ್ಲಿನಿಕ್‌ ಸ್ಥಾಪನೆಯ ಪ್ರಮುಖ ಉದ್ದೇಶವಾಗಿದೆ. ತಾಲ್ಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬದಲಾಗಿ ಪ್ರತ್ಯೇಕವಾಗಿ ಲಸಿಕೆ ನೀಡುವ ಉದ್ದೇಶದಿಂದ ಕ್ಲಿನಿಕ್‌ ಸ್ಥಾಪಿಸಲು ಉದ್ದೇಶಿಸಲಾಗಿತ್ತು.

ಈಗ ಆರಂಭಗೊಂಡಿರುವ ಕ್ಲಿನಿಕ್‌ಗಳಲ್ಲಿ ಶ್ರೀರಂಗಪಟ್ಟಣ ಕ್ಲಿನಿಕ್‌ ಕೊಂಚ ಪರವಾಗಿಲ್ಲ ಎನ್ನಬಹುದು. ರಂಗನಾಥನಗರದಲ್ಲಿ ಕ್ಲಿನಿಕ್ ನಡೆಯುತ್ತಿದೆ ಪ್ರತಿದಿನ 30ರಿಂದ 35 ಮಂದಿಗೆ ಮಾತ್ರ ತಪಾಸಣೆಗೆ ಬರುತ್ತಿದ್ದಾರೆ. ವೈದ್ಯರು, ಸ್ಟಾಫ್ ನರ್ಸ್, ಪ್ರಯೋಗ ಶಾಲಾ ತಂತ್ರಜ್ಞ ಹಾಗೂ ಒಬ್ಬರು ಡಿ' ಗ್ರೂಪ್ ನೌಕರರನ್ನು ನಮ್ಮ‌ ಕ್ಲಿನಿಕ್'ಗೆ ನಿಯೋಜಿಸಲಾಗಿದೆ.

ಶ್ರೀರಂಗಪಟ್ಟಣದ ನಮ್ಮ ಕ್ಲಿನಿಕ್‌ನಲ್ಲಿ ಸಿಬ್ಬಂದಿ ರೋಗಿಯೊಬ್ಬರಿಗೆ ತಪಾಸಣೆ ನಡೆಸುತ್ತಿರುವುದು
ಶ್ರೀರಂಗಪಟ್ಟಣದ ನಮ್ಮ ಕ್ಲಿನಿಕ್‌ನಲ್ಲಿ ಸಿಬ್ಬಂದಿ ರೋಗಿಯೊಬ್ಬರಿಗೆ ತಪಾಸಣೆ ನಡೆಸುತ್ತಿರುವುದು

ಮದ್ದೂರು ಪಟ್ಟಣದ ರಾಮ್ -ರಹೀಮ್ ನಗರದಲ್ಲಿ ನಮ್ಮ ಕ್ಲಿನಿಕ್ ಕಾರ್ಯನಿರ್ವಹಿಸುತ್ತಿದೆ. ಕ್ಲಿನಿಕ್ ನಲ್ಲಿ ದಿನಕ್ಕೆ ಸರಾಸರಿ 40ರಿಂದ 50 ಮಂದಿ ಸಾರ್ವಜನಿಕರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೌಲಭ್ಯಗಳ ಕೊರತೆಯಿಂದಾಗಿ ಸಮರ್ಪಕ ಚಿಕಿತ್ಸೆ ದೊರೆಯುತ್ತಿಲ್ಲ, ಔಷಧಿ ವಿತರಣೆ ಸರಿಯಾಗಿ ನಡೆಯುತ್ತಿಲ್ಲ ಎಂದು ಸ್ಥಳೀಯರ ಆರೋಪಿಸುತ್ತಾರೆ.

ನಾಗಮಂಗಲ ತಾಲ್ಲೂಕಿನಲ್ಲಿ ಬೆಳ್ಳೂರು ಮತ್ತು ನಾಗಮಂಗಲ ಪಟ್ಟಣಕ್ಕೆ 2 ಕ್ಲಿನಿಕ್‌ ಮಂಜೂರಾತಿ ದೊರೆತಿತ್ತು. ಅಂತಿಮವಾಗಿ ನಾಗಮಂಗಲ ಪಟ್ಟಣದಲ್ಲಿ ಅಂತಿಮಗೊಳಿಸಲಾಯಿತು. ಆದರೆ ಇಲ್ಲಿಯವರೆಗೂ ಜಾಗ ಗುರುತಿಸದ ಕಾರಣ ಕ್ಲಿನಿಕ್‌ ಆರಂಭವಾಗಿಲ್ಲ. ಕೊಳೆಗೇರಿ ಜನರು ವಾಸಿಸುವ ಕಡೆಗಳಲ್ಲಿ ಕ್ಲಿನಿಕ್‌ ಸ್ಥಾಪನೆಗೆ ಯತ್ನಿಸಲಾಗುತ್ತಿದೆ ಎಂದು ವೈದ್ಯರು ತಿಳಿಸಿದರು.

ಮಳವಳ್ಳಿ ಪಟ್ಟಣದಲ್ಲಿ ನಮ್ಮ ಕ್ಲಿನಿಕ್‌ಗಾಗಿ ಗುರುತಿಸಿರುವ ಕಟ್ಟಡ
ಮಳವಳ್ಳಿ ಪಟ್ಟಣದಲ್ಲಿ ನಮ್ಮ ಕ್ಲಿನಿಕ್‌ಗಾಗಿ ಗುರುತಿಸಿರುವ ಕಟ್ಟಡ

ಮಳವಳ್ಳಿಯಲ್ಲಿ ಕಳೆದ ವರ್ಷ ಜಾಗದ ಸಮಸ್ಯೆಯಿಂದಾಗಿ ನಮ್ಮ ಕ್ಲಿನಿಕ್ ಆರಂಭವಾಗಿರಲಿಲ್ಲ, ಇದೀಗ ಪಟ್ಟಣದ 19ನೇ ವಾರ್ಡ್ ನಲ್ಲಿ ಬಾಡಿಗೆ ಕಟ್ಟಡದಲ್ಲಿ ನಮ್ಮ ಕ್ಲಿನಿಕ್ ಆರಂಭಕ್ಕೆ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಶಾಸಕರ ಅನುಮತಿಗಾಗಿ ಅಲ್ಲಿಯ ಸಿಬ್ಬಂದಿ ಕಾಯುತ್ತಿದ್ದಾರೆ.

ಪುರಸಭೆಯ ಸಹಕಾರದೊಂದಿಗೆ ಕಟ್ಟಡದಲ್ಲಿ ಪೀಠೋಪಕರಣಗಳು ಸೇರಿದಂತೆ ಎಲ್ಲವನ್ನೂ ಅಳವಡಿಸಲಾಗಿದೆ. ಒಬ್ಬ ವೈದ್ಯರು, 1 ನರ್ಸ್, ಲ್ಯಾಬ್ ಟೆಕ್ನಿಷಿಯನ್, 1 ಗ್ರೂಪ್ ಡಿ ನೌಕರರನ್ನು ನೇಮಿಸಿಕೊಳ್ಳಲಾಗಿದೆ. ಅವರು ಪ್ರಸ್ತುತ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮದ್ದೂರು ಪಟ್ಟಣದಲ್ಲಿರುವ ನಮ್ಮ ಕ್ಲಿನಿಕ್‌
ಮದ್ದೂರು ಪಟ್ಟಣದಲ್ಲಿರುವ ನಮ್ಮ ಕ್ಲಿನಿಕ್‌
ವೈದ್ಯರ ನೇಮಕಾತಿಗಾಗಿ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. ಸದ್ಯ 3 ಕ್ಲಿನಿಕ್‌ಗಳು ಕಾರ್ಯನಿರ್ವಹಣೆ ಮಾಡುತ್ತಿವೆ 2ನೇ ಹಂತದಲ್ಲಿ 4 ಕ್ಲಿನಿಕ್‌ಗಳು ಆರಂಭವಾಗಲಿವೆ
–ಡಾ.ಟಿ.ಎಸ್‌.ಧನಂಜಯ ಜಿಲ್ಲಾ ಆರೋಗ್ಯಾಧಿಕಾರಿ

ಹೊಸ ಸರ್ಕಾರದ ನಡೆ ಏನು?

ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಾದ್ಯಂತ ನಮ್ಮ ಕ್ಲಿನಿಕ್‌ಗಳು ಆರಂಭವಾಗಿವೆ. ಈಗ ಸರ್ಕಾರ ಬದಲಾಗಿದ್ದು ಸಿದ್ದರಾಮಯ್ಯ ಅವರ ಕಾಂಗ್ರೆಸ್‌ ಸರ್ಕಾರ ಈ ಕ್ಲಿನಿಕ್‌ಗಳ ಮೇಲೆ ಯಾವ ನೀತಿ ಅನುಸರಿಸುತ್ತದೆ ಎಂಬ ಅಂಶದ ಮೇಲೆ ಕ್ಲಿನಿಕ್‌ಗಳ ಭವಿಷ್ಯ ಅಡಗಿದೆ ಎಂದು ಅಲ್ಲಿಯ ಸಿಬ್ಬಂದಿ ಹೇಳುತ್ತಾರೆ. ‘ಹೊಸದಾಗಿ ನಮ್ಮ ಕ್ಲಿನಿಕ್‌ ಸ್ಥಾಪನೆ ಬಗ್ಗೆ ಸರ್ಕಾರದಿಂದ ಯಾವುದೇ ಸೂಚನೆ ಬಂದಿಲ್ಲ. ಈಗಿರುವ ಕ್ಲಿನಿಕ್‌ಗಳಿಗೂ ಸೌಲಭ್ಯ ನೀಡುವಲ್ಲೂ ಸರ್ಕಾರಕ್ಕೆ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ನಮ್ಮ ಕ್ಲಿನಿಕ್‌ಗಳ ಉಳಿವಿನ ಬಗ್ಗೆ ಅನುಮಾನಗಳಿವೆ’ ಎಂದು ವೈದ್ಯರೊಬ್ಬರು ತಿಳಿಸಿದರು.

ವೈದ್ಯರೇ ಇಲ್ಲದ ಕ್ಲಿನಿಕ್‌

ಕೆ.ಆರ್.ಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದಲ್ಲಿ ನಮ್ಮ ಕ್ಲಿನಿಕ್‌ ಕಾರ್ಯಾರಂಭ ಮಾಡಿ ಹಲವು ತಿಂಗಳು ಕಳೆದರೂ ಇಲ್ಲಿಯವರೆಗೆ ವೈದ್ಯರ ನೇಮಕಾತಿ ಆಗಿಲ್ಲ. ನೇಮಕಾತಿಗಾಗಿ ಅರ್ಜಿ ಕರೆದಿದ್ದರೂ ಯಾರೂ ಅರ್ಜಿ ಹಾಕುತ್ತಿಲ್ಲ ಎಂದು ತಾಲ್ಲೂಕು ವೈದ್ಯಾಧಿಕಾರಿ ಹೇಳುತ್ತಾರೆ. ಉಳಿದಂತೆ ಒಬ್ಬ ಸ್ಟಾಫ್‌ ನರ್ಸ್ ಒಬ್ಬ ಡಿ ಗ್ರೂಪ್ ನೌಕರ ಒಬ್ಬ ಪ್ರಯೋಗಾಲಯ ತಂತ್ರಜ್ಞ ಇದ್ದಾರೆ. ‘ಬೇರೆ ಕಡೆಯಿಂದಾದರೂ ವೈದ್ಯರನ್ನು ಕರೆಸಿ ಎಂದು ಮನವಿ ಮಾಡಿದ್ಧೇವೆ. ಆದರೂ ನೇಮಕಾತಿ ಆಗಿಲ್ಲ. ಹೀಗಾಗಿ ನಮ್ಮ ತಾಲ್ಲೂಕಿನಲ್ಲಿ ನಮ್ಮ ಕ್ಲಿನಿಕ್‌ ಇದ್ದರೂ ಇಲ್ಲದಂತಿದೆ. ಮುಂದಾದರೂ ವೈದ್ಯರ ನೇಮಕಾತಿ ಆಗಬೇಕು’ ಎಂದು ಪುರಸಭೆ ಸದಸ್ಯ ಎಚ್.ಆರ್.ಲೋಕೇಶ್ ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT