ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ಅಡ್ಡಿಯಾದ ಪೇಟೆಬೀದಿ ಮುಖ್ಯರಸ್ತೆ

ಜೈನರಬೀದಿ, ಆನೆಕೆರೆ ಬೀದಿಯಲ್ಲಿ ಉಸಿರುಗಟ್ಟುವ ವಾತಾವರಣ, ಹದಗೆಟ್ಟ ಒಳಚರಂಡಿ ವ್ಯವಸ್ಥೆ
Last Updated 4 ನವೆಂಬರ್ 2019, 10:25 IST
ಅಕ್ಷರ ಗಾತ್ರ

ಮಂಡ್ಯ: ನಗರದ ಪ್ರಮುಖ ವಾಣಿಜ್ಯ ಕೇಂದ್ರ ಪೇಟೆಬೀದಿ ಮುಖ್ಯರಸ್ತೆ ವಿಸ್ತರಣೆಯಾಗದ ಕಾರಣ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಿಂದ ಉತ್ತರಕ್ಕಿರುವ ಪ್ರದೇಶ ಅಭಿವೃದ್ಧಿ ಕಾಣದಾಗಿದೆ. ಹದಗೆಟ್ಟ ಒಳಚರಂಡಿ, ದುರಸ್ತಿ ಕಾಣದ ಒಳರಸ್ತೆಗಳಿಂದಾಗಿ ಇಡೀ ಪ್ರದೇಶ ಕೊಳೆಗೇರಿಯ ರೂಪ ಪಡೆದಿದೆ.

ನಗರಸಭೆ 1ನೇ ವಾರ್ಡ್‌ ವ್ಯಾಪ್ತಿಯಲ್ಲಿ ಬರುವ ಜೈನರ ಬೀದಿ, ಆನೆಕೆರೆ ಬೀದಿ, ತರಕಾರಿ ಮಾರುಕಟ್ಟೆ, ಹೊಳಲು ವೃತ್ತ, ಲಕ್ಷ್ಮಿ ಜನಾರ್ಧನ, ಕಾಳಿಕಾಂಬ ದೇವಾಲಯ ಸುತ್ತಲಿನ ಪ್ರದೇಶಗಳು ದಿನೇದಿನೇ ಕಿಷ್ಕಿಂದೆಯಾಗುತ್ತಿವೆ. ಎಲ್ಲೆಲ್ಲೂ ತೆರೆದ ಚರಂಡಿಗಳ ದರ್ಶನವಾಗುತ್ತಿದ್ದು ದುರ್ವಾಸನೆ ಹರಡಿದೆ. ಈಗಲೂ ಹಳ್ಳಿಯ ವಾತಾವರಣ ನೆಲೆಸಿದ್ದು ಅಭಿವೃದ್ಧಿ ಮರೀಚಿಕೆಯಾಗಿಯೇ ಉಳಿದಿದೆ. ಪೇಟೆಬೀದಿ ರಸ್ತೆ ವಿಸ್ತರಣೆಯಾಗದ ಕಾರಣ ಇಡೀ ಪ್ರದೇಶದ ಅಭಿವೃದ್ಧಿಯಾಗುತ್ತಿಲ್ಲ ಎಂಬ ಆರೋಪ ಮೊದಲಿನಿಂದಲೂ ಇದೆ.

ರಾಷ್ಟ್ರೀಯ ಹೆದ್ದಾರಿಯ ದಕ್ಷಿಣ ಕ್ಕಿರುವ ಬಹುತೇಕ ಬಡಾವಣೆಗಳು ವಿಸ್ತರಣೆಗೊಳ್ಳುತ್ತಲೇ ಇವೆ. ಕಲ್ಲಹಳ್ಳಿ, ಹೊಸಹಳ್ಳಿ, ಮರೀಗೌಡ ಬಡಾವಣೆ ಗಳಲ್ಲಿ ಅಭಿವೃದ್ಧಿ ಎದ್ದು ಕಾಣುತ್ತದೆ. ಕ್ಯಾತುಂಗೆರೆ, ಹನಿಯಂಬಾಡಿವರೆಗೂ ನಗರ ತಲುಪಿದೆ. ಆದರೆ ದಕ್ಷಿಣಭಾಗದ ಪ‍್ರದೇಶ ಚಿಕ್ಕಮಂಡ್ಯವರೆಗೂ ತಲುಪಿಲ್ಲ. ಕಾರೆಮನೆ ಗೇಟ್‌ನಲ್ಲೇ ಸಿಕ್ಕಿಹಾಕಿ ಕೊಂಡಂತಾಗಿದೆ. ಪೇಟೆಬೀದಿಯಲ್ಲಿ ವಾಣಿಜ್ಯ ಚಟುವಟಿಕೆ ಹೆಚ್ಚಳವಾಗುತ್ತಿದೆ. ಆದರೆ ಆ ಪ್ರದೇಶ ಅಭಿವೃದ್ಧಿಗೊಳ್ಳದ ಕಾರಣ ಉಸಿರುಗಟ್ಟುವ ವಾತಾವರಣ ಮನೆಮಾಡದೆ.

ರಸ್ತೆಯನ್ನೇ ಖಾತೆ ಮಾಡಿಕೊಟ್ಟರು: ಕಲ್ಲಹಳ್ಳಿ ರೈಲ್ವೆಗೇಟ್‌ನಿಂದ ಅಸಿಸೇಟ್‌ ಕಾರ್ಖಾನೆವರೆಗಿನ ಹಳೇ ಎಂಸಿ (ಮದ್ರಾಸ್‌–ಕಣ್ಣಾನೂರು) ರಸ್ತೆ ಮೊದಲು ದೊಡ್ಡದಾಗಿಯೇ ಇತ್ತು. ಇದು ಮೈಸೂರು ಮಹಾರಾಜರು ಓಡಾಡುವ ಪ್ರಮುಖ ರಸ್ತೆಯೂ ಆಗಿತ್ತು. ಆ ಭಾಗದಲ್ಲಿ ವಾಣಿಜ್ಯ ಚಟುವಟಿಕೆಗಳು ಆರಂಭಗೊಂಡ ನಂತರ ಪೇಟೆಬೀದಿ ರೂಪ ಪಡೆಯಿತು. ವರ್ತಕರು ಅಪಾರ ಹಣ ಕೊಟ್ಟು ನಿವೇಶನ ಖರೀದಿ ಮಾಡಲು ಆರಂಭಿಸಿದರು. ನಗರಸಭೆ ಅನಧಿಕೃತವಾಗಿ ರಸ್ತೆಯನ್ನೇ ವರ್ತಕರಿಗೆ ಖಾತೆ ಮಾಡಿಕೊಟ್ಟಿತು ಎಂದು ಆ ಭಾಗದ ಹಿರಿಯರು
ಹೇಳುತ್ತಾರೆ.

‘ಗ್ರಾಮ ಠಾಣಾ ವ್ಯಾಪ್ತಿಯಲ್ಲಿದ್ದ ಕಾರಣ ಇಲ್ಲೊಂದು ದೊಡ್ಡ ರಸ್ತೆ ಇತ್ತು ಎಂಬ ಕುರುಹು ಈಗಿಲ್ಲ. ರಸ್ತೆಯ ವಿಸ್ತೀರ್ಣದ ಬಗ್ಗೆಯೂ ಯಾವುದೇ ದಾಖಲಾತಿಗಳು ಇಲ್ಲ. ಹಣ ಚೆಲ್ಲಿ ತಮ್ಮ ಹೆಸರಿಗೆ ನಿವೇಶನ ಖಾತೆ ಮಾಡಿಸಿಕೊಂಡಿರುವ ವರ್ತಕರು ಪೇಟೆಬೀದಿ ರಸ್ತೆ ವಿಸ್ತರಣೆಗೆ ಮೊದಲಿನಿಂದಲೂ ಅಡ್ಡಿ ಮಾಡುತ್ತಲೇ ಬರುತ್ತಿದ್ದಾರೆ. ಅವರು ತಮ್ಮ ಪ್ರಭಾವ ಬಳಸಿ ರಸ್ತೆ ವಿಸ್ತರಣೆಯನ್ನು ನನೆಗುದಿಗೆ ಬೀಳಿಸಿದ್ದಾರೆ. ಇದರ ವಿರುದ್ಧ ಹಲವು ಸಂಘಟನೆಗಳು ಹೋರಾಟ ಮಾಡುತ್ತಿವೆ. ಅವರ ಪ್ರಭಾವದ ಮುಂದೆ ಹೋರಾಟ ಮಂಕಾಗಿವೆ’ ಎಂದು ಕಾರ್ಮಿಕ ಹೋರಾಟಗಾರ ಎಂ.ಬಿ.ನಾಗಣ್ಣಗೌಡ ಹೇಳಿದರು.

ತಡೆಯಾಜ್ಞೆ: 2009–10ರ ಸಮಯದಲ್ಲಿ ರಸ್ತೆ ವಿಸ್ತರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ವರ್ತಕರೆಲ್ಲರೂ ಸೇರಿ ಹೈಕೋರ್ಟ್‌ನಿಂದ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾದರು. ಅಲ್ಲಿಂದ ಇಲ್ಲಿಯವರೆಗೂ ವಿಸ್ತರಣೆ ವಿಚಾರ ಹಿನ್ನೆಲೆಗೆ ಸರಿದಿದೆ. ಈಗ ಪೇಟೆಬೀದಿಯಲ್ಲಿ ಯಾವುದೇ ಹೊಸ ಕಟ್ಟಡಗಳು ತಲೆಎತ್ತುತ್ತಿಲ್ಲ. ಹಳೆಯ ಕಟ್ಟಡಗಳಲ್ಲೇ ವರ್ತಕರು ತಮ್ಮ ವಹಿವಾಟು ನಡೆಸುತ್ತಿದ್ದಾರೆ. ಆದರೆ ಗ್ರಾಹಕರು, ಆ ಭಾಗದಲ್ಲಿ ವಾಸಿಸುವ ಜನರು ಟ್ರಾಫಿಕ್‌, ಕೊಳಚೆ ಕಿರಿಕಿರಿ ಅನುಭವಿಸುತ್ತಿದ್ದಾರೆ.

ಕಿಷ್ಕಿಂದೆಯಾಗಿರುವ ಪೇಟೆ ಬೀದಿಯಿಂದಾಗಿ ಸಮೀಪದಲ್ಲೇ ಇರುವ ತರಕಾರಿ ಮಾರುಕಟ್ಟೆಗೂ ಸಮಸ್ಯೆಯಾಗಿದೆ. ಹಣ್ಣು, ತರಕಾರಿ ತುಂಬಿಕೊಂಡು ಬರುವ ಲಾರಿಗಳು ಮಾರುಕಟ್ಟೆಯೊಳಗೆ ಬರಲು ಸಾಧ್ಯವಿಲ್ಲದಂತಾಗಿದೆ. ಒಮ್ಮೆ ಒಂದು ಲಾರಿ ಬಂದರೆ ಇತರ ವಾಹನಗಳ ಓಡಾಡ ಸ್ಥಗಿತಗೊಳ್ಳುತ್ತದೆ. ಪೇಟೆಬೀದಿಯಿಂದ ಮಾರುಕಟ್ಟೆ ಕಡೆಗೆ ತಿರುವು ಪಡೆದುಕೊಳ್ಳಲು ಚಾಲಕರು ಹರಸಾಹಸ ಮಾಡುತ್ತಾರೆ. ಆ ಸಂದರ್ಭದಲ್ಲಿ ಎರಡೂ ಕಡೆ ಇತರ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ.

‘ಕಲ್ಲಹಳ್ಳಿಯಿಂದ ಹೊಳಲು ವೃತ್ತದವರೆಗೆ, ಕಾಳಿಕಾಂಬ ದೇವಾಲಯದಿಂದ ಅಸಿಟೇಟ್‌ ಫ್ಯಾಕ್ಟರಿವರೆಗೆ ರಸ್ತೆ ವಿಸ್ತರಣೆಯಾಗಿದೆ. ಆದರೆ ಅದರ ನಡುವಿನ ಪೇಟೆಬೀದಿ ಮಾತ್ರ ವಿಸ್ತರಣೆಯಾಗಿಲ್ಲ. ವರ್ತಕರ ಲಾಬಿ ಎಷ್ಟರಮಟ್ಟಿಗೆ ಕೆಲಸ ಮಾಡುತ್ತಿದೆ ಎಂಬುದು ಇದರಿಂದ ತಿಳಿಯುತ್ತದೆ. ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಆ ಇಡೀ ಪ್ರದೇಶ ಅಭಿವೃದ್ಧಿ ಕಾಣುತ್ತಿಲ್ಲ’ ಎಂದು ಆರ್‌ಟಿಐ ಕಾರ್ಯಕರ್ತ ಕೆ.ಆರ್‌.ರವೀಂದ್ರ ಆರೋಪಿಸಿದರು.

‘ಪೇಟೆಬೀದಿ ವಿಸ್ತರಣೆಯಾದರೆ ಹೊಸಹೊಸ ಕಟ್ಟಡಗಳು ಬಂದು ನಗರ ಅಭಿವೃದ್ಧಿಯಾಗುತ್ತದೆ. ಸಿಟಿ ಬಸ್‌ಗಳನ್ನೂ ಬಿಡಬಹುದು. ಪೇಟೆಬೀದಿ ಅಭಿವೃದ್ಧಿಗೆ ನಗರಸಭೆ ಅಧಿಕಾರಿಗಳಲ್ಲಿ ಯಾವುದೇ ಆಸಕ್ತಿ ಇಲ್ಲ’ ಎಂದು 1 ವಾರ್ಡ್‌ ಸದಸ್ಯ ನಾಗೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT