ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಸದಸ್ಯರಿಗೆ ಅಧಿಕಾರವಿಲ್ಲ, ಸಮಸ್ಯೆಗೆ ಪರಿಹಾರವಿಲ್ಲ

ಅಧ್ಯಕ್ಷ– ಉಪಾಧ್ಯಕ್ಷರಿಲ್ಲದ ನಗರಸಭೆ, ಅಧಿಕಾರಿಗಳ ಕಾರುಬಾರು, ಕಚೇರಿಗೆ ಜನರ ಅಲೆದಾಟ
Published 14 ಅಕ್ಟೋಬರ್ 2023, 5:18 IST
Last Updated 14 ಅಕ್ಟೋಬರ್ 2023, 5:18 IST
ಅಕ್ಷರ ಗಾತ್ರ

ಮಂಡ್ಯ: ನಗರಸಭೆಯಲ್ಲಿ ಸದಸ್ಯರನ್ನೊಳಗೊಂಡ ಆಡಳಿತ ಮಂಡಳಿ ರಚನೆಯಾಗದ ಪರಿಣಾಮ ನಗರದ ಜನರನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ವಿಳಂಬವಾಗುತ್ತಿದೆ. ನಗರಸಭೆ ಆಡಳಿತದಲ್ಲಿ ಅಧಿಕಾರಿಗಳ ನಿರ್ಧಾರವೇ ಅಂತಿಮವಾಗಿದ್ದು ಸದಸ್ಯರು ಇದ್ದರೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಅಧ್ಯಕ್ಷ– ಉಪಾಧ್ಯಕ್ಷರ ಮೀಸಲಾತಿ ಗೊಂದಲ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದ್ದು ಇಲ್ಲಿಯವರೆಗೂ ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಸದಸ್ಯರನ್ನು ಒಳಗೊಂಡ ಆಡಳಿತ ಮಂಡಳಿ, ವಿವಿಧ ಸಮಿತಿಗಳಿಗೆ ಪದಾಧಿಕಾರಿಗಳ ಆಯ್ಕೆಯಾಗದ ಕಾರಣ ನಗರಸಭೆ ಆಡಳಿತ ಅಧಿಕಾರಿಗಳ ಕೈಯಲ್ಲಿದೆ. ಜಿಲ್ಲಾಧಿಕಾರಿ ಆಡಳಿತಾಧಿಕಾರಿಯಾಗಿದ್ದು ಸದಸ್ಯರಿಗೆ ಯಾವುದೇ ಅಧಿಕಾರ ಇಲ್ಲದಂತಾಗಿದೆ.

ಕಳೆದ 6 ತಿಂಗಳಿಂದೀಚೆಗೆ ನಗರಸಭೆ ಸಾಮಾನ್ಯ ಸಭೆಯೇ ನಡೆದಿಲ್ಲ. ಎಚ್‌.ಎಸ್‌.ಮಂಜು– ಇಶ್ರತ್‌ ಫಾತಿಮಾ ಅವರ ಅಧ್ಯಕ್ಷ– ಉಪಾಧ್ಯಕ್ಷೀಯ ಅವಧಿ ಮೇ 1ಕ್ಕೆ ಮುಕ್ತಾಯವಾಗಿದ್ದು 2ನೇ ಅವಧಿಗೆ ಹೊಸ ಮೀಸಲಾತಿ ಇಲ್ಲಿಯವರೆಗೂ ಪ್ರಕಟಗೊಂಡಿಲ್ಲ. ಕೋರ್ಟ್‌ ಪ್ರಕರಣವನ್ನು ಶೀಘ್ರ ಮುಗಿಸಿ ಮೀಸಲಾತಿ ಪ್ರಕಟಗೊಳಿಸಲು ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ ಎಂದು ನಗರಸಭೆ ಸದಸ್ಯರು ಆರೋಪಿಸುತ್ತಾರೆ.

ಕಚೇರಿಗೆ ಜನರ ಅಲೆದಾಟ: ಸದಸ್ಯರಿಗೆ ಅಧಿಕಾರವಿಲ್ಲದ ಕಾರಣ ನಗರದಲ್ಲಿರುವ ಮೂಲ ಸಮಸ್ಯೆಗಳಿಗೆ ಶೀಘ್ರಗತಿಯಲ್ಲಿ ಪರಿಹಾರ ದೊರೆಯುತ್ತಿಲ್ಲ. ನಗರಸಭೆಯಲ್ಲಿ ದೊರೆಯುವ ವಿವಿಧ ಸೇವೆ ನೀಡಲು ಅಧಿಕಾರಿಗಳು, ಸಿಬ್ಬಂದಿ ತಡ ಮಾಡುತ್ತಿದ್ದಾರೆ, ಕಚೇರಿಗಳಿಗೆ ಅನಾವಶ್ಯಕವಾಗಿ ಅಲೆಸುತ್ತಿದ್ದಾರೆ. ತುರ್ತು ಕಾಮಗಾರಿಗಳೂ ವಿಳಂಬವಾಗುತ್ತಿವೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ನಗರಸಭೆ ವ್ಯಾಪ್ತಿಯಲ್ಲಿ ಬರುವ ಆಸ್ತಿ, ನಿವೇಶನಗಳಿಗೆ ಇ–ಸ್ವತ್ತು ನೀಡುವಲ್ಲಿ ಅಧಿಕಾರಿಗಳು ವಿಳಂಬ ಮಾಡುತ್ತಿರುವ ಆರೋಪವಿದೆ. ಕೆಲವರು ಮಧ್ಯವರ್ತಿಗಳ ಮೊರೆ ಹೋಗುತ್ತಿದ್ದು ಹಣ ಕೊಟ್ಟು ಕಳೆದುಕೊಳ್ಳುತ್ತಿದ್ದಾರೆ. ಕೇವಲ ಇ–ಸ್ವತ್ತು ಪಡೆಯುವುದಕ್ಕಾಗಿ 6 ತಿಂಗಳವರೆಗೆ ಕಚೇರಿಗೆ ಅಲೆಯುತ್ತಿದ್ದಾರೆ. ನಗರಸಭೆ ಕಂದಾಯ ವಿಭಾಗದ ಅಧಿಕಾರಿಗಳನ್ನು ಜಿಲ್ಲಾಡಳಿತ ಅನ್ಯಕಾರ್ಯಗಳಿಗೆ ಬಳಸಿಕೊಳ್ಳುತ್ತಿದ್ದು ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಎದುರಿಸುತ್ತಿದೆ.

‘ನಿವೇಶನದ ಇ–ಸ್ವತ್ತು ಪಡೆಯುವುದಕ್ಕಾಗಿ ಕಳೆದ 6 ತಿಂಗಳಿಂದ ಅಲೆಯುತ್ತಿದ್ದೇನೆ, ಮಧ್ಯವರ್ತಿಯೊಬ್ಬರಿಗೆ ಹಣಕೊಟ್ಟು ಕಳೆದುಕೊಂಡಿದ್ದೇನೆ. ಅಧಿಕಾರಿಗಳನ್ನು ಸಂಪರ್ಕಿಸಿದರೆ ಕಾಯುವಂತೆ ತಿಳಿಸಿದ್ದಾರೆ. ನಗರಸಭೆಯಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ’ ಎಂದು ಗಾಂಧಿನಗರದ ನಿವಾಸಿ ನಾಗರಾಜಯ್ಯ ಆರೋಪಿಸಿದರು.

ನಡೆಯದ ತುರ್ತು ಕಾಮಗಾರಿ: ನಗರದಾದ್ಯಂತ ತುರ್ತು ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯದ ಕಾರಣ ಸಾರ್ವಜನಿಕರು ಪರದಾಡುವಂತಾಗಿದೆ. ಚರಂಡಿ, ಬೀದಿ ದೀಪ, ನೀರಿನ ಸೋರಿಕೆ ಮುಂತಾದ ಸಮಸ್ಯೆಗಳಿಗೆ ಪರಿಹಾರ ದೊರಯುತ್ತಿಲ್ಲ. ಈಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ವಿವಿಧೆಡೆ ಚರಂಡಿಗಳು ಕಟ್ಟಿಕೊಂಡಿವೆ, ರಸ್ತೆಯಲ್ಲೇ ಚರಂಡಿ ನೀರು ಹರಿಯುತ್ತಿದೆ. ಈ ಕೆಲಸಗಳಿಗೆ ನಗರಸಭೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿವೆ.

ಆಡಳಿತ ಮಂಡಳಿ ಇಲ್ಲದ ಕಾರಣ ಹೊಸ ಯೋಜನೆಗಳಿಗೆ ನಗರಸಭೆ ಸದಸ್ಯರ ಅನುಮೋದನೆಯ ಅವಶ್ಯಕತೆ ಇಲ್ಲ. ಹೊಸ ಕಾಮಗಾರಿಗಳಿಗೆ ಜಿಲ್ಲಾಧಿಕಾರಿಯೇ ಅನುಮೋದನೆ ನೀಡುತ್ತಿದ್ದಾರೆ. ಬಹುತೇಕ ಕೆಲಸಗಳು ಸದಸ್ಯರ ಗಮನಕ್ಕೆ ಬಾರದಂತೆಯೇ ನಡೆಯುತ್ತಿರುವುದು ಕೆಲ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ. ನಗರದಾದ್ಯಂತ ಬಹುತೇಕ ಕಾಮಗಾರಿಗಳು ಆಮೆಗತಿಯಲ್ಲಿ ನಡೆಯುತ್ತಿದ್ದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ನಮಗೆ ಅಧಿಕಾರ ಇಲ್ಲದಿದ್ದರೂ ನಮ್ಮ ಸದಸ್ಯತ್ವ ಮುಂದುವರಿದಿದೆ. ವಾರ್ಡ್‌ಗಳಲ್ಲಿ ನಡೆಯುವ ಕಾಮಗಾರಿಗಳ ಪ್ರಗತಿಯ ಬಗ್ಗೆ ಜನರು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ. ನಗರಸಭೆಯಲ್ಲಿ ಒಬ್ಬರೇ ಎಂಜಿನಿಯರ್‌ ಇದ್ದು ಕಾಮಗಾರಿಗಳು ಸರಿಯಾಗಿ ನಡೆಯುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ, ಶಾಸಕರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಸದಸ್ಯರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಸಭೆ ಕರೆಯಲು ಒತ್ತಾಯ

2018ರಲ್ಲಿ ನಗರಸಭೆ ಚುನಾವಣೆ ನಡೆದ ನಂತರ ಆಗಲೂ ಅಧ್ಯಕ್ಷ– ಉಪಾಧ್ಯಕ್ಷರ ಮೀಸಲಾತಿ ಗೊಂದಲದಿಂದಾಗಿ ಸದಸ್ಯರು 2.2 ವರ್ಷ ಅಧಿಕಾರವನ್ನೇ ಸ್ವೀಕಾರ ಮಾಡಿರಲಿಲ್ಲ. ಈಗಲೂ ಇದೇ ಪರಿಸ್ಥಿತಿ ಇದ್ದು ಸದಸ್ಯರು ಗೊಂದಲಕ್ಕೀಡಾಗಿದ್ದಾರೆ. ‘ಜಿಲ್ಲಾಧಿಕಾರಿಗಳು ನಗರಸಭೆ ಕುರಿತಂತೆ ಯಾವುದೇ ನಿರ್ಧಾರ ಕೈಗೊಳ್ಳುವುದಕ್ಕೂ ಮೊದಲು ನಮ್ಮ ಜೊತೆ ಚರ್ಚೆ ನಡೆಸಿದರೆ ಒಳ್ಳೆಯದು. ಮಾರ್ಚ್‌ ನಂತರ ಒಂದೂ ಸಭೆಯೂ ನಡೆದಿಲ್ಲ. ಇದರಿಂದ ಹಲವು ಯೋಜನೆಗಳ ಕಾಮಗಾರಿ ನನೆಗುದಿಗೆ ಬಂದಿದೆ’ ಎಂದು ಸದಸ್ಯರು ಹೇಳಿದರು.

ತ್ವರಿತಗತಿಯಲ್ಲಿ ಸೇವೆ ನೀಡುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಜನರು ಮಧ್ಯವರ್ತಿಗಳಿಗೆ ಹಣ ಕೊಡಬಾರದು ಅಧಿಕಾರಿಗಳನ್ನೇ ಸಂಪರ್ಕ ಮಾಡಬೇಕು
-ಆರ್‌.ಮಂಜುನಾಥ್‌, ನಗರಸಭೆ ಪೌರಾಯುಕ್ತ ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT