ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯ ಪೈಪ್‌ಲೈನ್, ವಿದ್ಯುತ್‌ ಕಣ್ಣಾಮುಚ್ಚಾಲೆ

ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ, ಕೈಪಂಪ್‌, ಕೊಳವೆಬಾವಿ, ತೊಂಬೆಗಳ ಮೇಲೆ ಅವಲಂಬನೆ
Last Updated 26 ಏಪ್ರಿಲ್ 2021, 4:34 IST
ಅಕ್ಷರ ಗಾತ್ರ

ಮದ್ದೂರು: ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಕುಡಿಯುವ ನೀರಿನ ಅಗತ್ಯತೆಯೂ ತೀವ್ರಗೊಳ್ಳುತ್ತಿದೆ. ವಿದ್ಯುತ್‌ ಅಡಚಣೆ, ಪೈಪ್‌ಲೈನ್‌ ಸಮಸ್ಯೆ, ಪಂಪ್‌ಹೌಸ್‌ನಲ್ಲಿ ಉಂಟಾಗುತ್ತಿರುವ ತಾಂತ್ರಿಕ ಸಮಸ್ಯೆಗಳಿಂದಾಗಿ ಪಟ್ಟಣಕ್ಕೆ ಕುಡಿಯುವ ನೀರಿನ ಪೂರೈಕೆಯಲ್ಲಿ ತೊಂದರೆ ಉಂಟಾಗುತ್ತಿದೆ.

ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿ ಯಾಗಿದ್ದ ಸಂದರ್ಭದಲ್ಲಿ ಶಿವನಸಮುದ್ರ ಬಳಿಯ ಬಾಚನಹಳ್ಳಿ ಸಮೀಪ ಪಂಪ್‌ಹೌಸ್‌ ನಿರ್ಮಿಸಿ ಕಾವೇರಿ ನದಿಯಿಂದ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು.

ಆದರೆ, ಇತ್ತೀಚಿನ ದಿನಗಳಲ್ಲಿ ಮದ್ದೂರಿನಿಂದ ಸುಮಾರು 45-50 ಕಿ.ಮೀ ದೂರವಿರುವ ಬಾಚನಹಳ್ಳಿ ಪಂಪ್‌ಹೌಸ್‌ನಲ್ಲಿ ಹಲವು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ. ಮಳವಳ್ಳಿ, ಭಾರತೀನಗರ ಕಿರು ಪಂಪ್‌ಹೌಸ್‌ನಲ್ಲಿ ವಿದ್ಯುತ್ ಅಡಚಣೆಯೂ ಉಂಟಾಗುತ್ತಿದೆ. ಇದರ ಪರಿಣಾಮವಾಗಿ ಕುಡಿಯುವ ನೀರಿನ ಪೂರೈಕೆಯಲ್ಲಿ ಅಸಮರ್ಪಕತೆ ಉಂಟಾಗುತ್ತಿದೆ. ಕೆಲವೆಡೆ ವಿದ್ಯುತ್ ಕಂಬಗಳು ಬೀಳುತ್ತಿರುವ ಕಾರಣ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ.

‘ಮುಖ್ಯವಾಗಿ 420 ರಿಂದ 440 ವೋಲ್ಟ್ ವಿದ್ಯುತ್‌ ಅವಶ್ಯಕತೆ ಇರುತ್ತದೆ. ಆದರೆ, ಬಹಳಷ್ಟು ಬಾರಿ ಕೇವಲ 350ರಿಂದ 360 ವೋಲ್ಟ್‌ ಮಾತ್ರ ಇರುವುದರಿಂದ ನೀರಿನ ಸಮರ್ಪಕ ಪೂರೈಕೆಗೆ ಸಮಸ್ಯೆಯಾಗುತ್ತಿದೆ’ ಎಂದು ಪುರಸಭಾಧ್ಯಕ್ಷ ಸುರೇಶ್ ಹಾಗೂ ಪ್ರಭಾರ ಮುಖ್ಯಾಧಿಕಾರಿ ಗಂಗಾಧರ್ ತಿಳಿಸಿದರು.

ಇದರಿಂದಾಗಿ ಪಟ್ಟಣಕ್ಕೆ 7 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗುತ್ತಿದೆ. ಈ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗಾದರೂ ನಿವಾರಿಸುವ ಸಲುವಾಗಿ ಪಟ್ಟಣದ ವ್ಯಾಪ್ತಿಯಲ್ಲಿರುವ 72 ಕೈಪಂಪ್‌ಗಳು ಹಾಗೂ 65 ಕೊಳವೆಬಾವಿಗಳಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ತೀರ ಅಗತ್ಯಬಿದ್ದಾಗ ನೀರಿನ ತೊಂಬೆಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.

ಮದ್ದೂರು ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆ ಆಗಾಗ ಮರುಕಳಿಸುತ್ತಿರುವ ಕಾರಣ ಕಳೆದ ವರ್ಷ ಪಟ್ಟಣಕ್ಕೆ 24x7 ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಯಿತು. ಸುಮಾರು ₹ 65 ಕೋಟಿ ವೆಚ್ಚದಲ್ಲಿ 2ನೇ ಹಂತದ ಕಡಿಯುವ ನೀರಿನ ಪೂರೈಕೆ ಮಾಡುವ ಉನ್ನತೀಕರಣ ಕಾಮಗಾರಿಯು ಕರ್ನಾಟಕ ರಾಜ್ಯ ನಗರ ಕುಡಿಯುವ ನೀರು ಮತ್ತು ಒಳ ಚರಂಡಿ ಮಂಡಳಿಯಿಂದ ಪ್ರಾರಂಭಗೊಂಡಿದೆ.

ಮುಂದಿನ 10 ವರ್ಷಗಳ ಅವಧಿಯನ್ನು ದೃಷ್ಟಿಯಲ್ಲಿಟ್ಟು ಕೊಂಡು ಯೋಜನೆ ಅನುಷ್ಠಾನಗೊಳಿ ಸಲಾಗುತ್ತಿದೆ. ಅದಕ್ಕಾಗಿ ಈಗಿರುವ ಹಳೆಯದಾದ ನೀರಿನ ಪೈಪ್ ಹಾಗೂ ಯಂತ್ರೋಪಕರಣಗಳನ್ನು ತೆಗೆದುಹಾಕಿ ಹೊಸದಾದ ಹಾಗೂ ಅಧಿಕ ಸಾಮರ್ಥ್ಯದ ಪೈಪ್ ಅಳವಡಿಸಲಾಗುತ್ತಿದೆ. ಇದಕ್ಕೆ ಅಗತ್ಯವಾದ 15 ಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ 2 ಬೃಹತ್‌ ಟ್ಯಾಂಕ್‌ಗಳನ್ನು ಪಟ್ಟಣದ ವ್ಯಾಪ್ತಿಯಲ್ಲಿ ನಿರ್ಮಿಸಲಾಗುತ್ತಿದೆ.

‘ಕಾಮಗಾರಿ ಪೂರ್ಣಗೊಂಡ ನಂತರ ಪಟ್ಟಣದ ನಿವಾಸಿಗಳ 24X7 ಕುಡಿಯುವ ನೀರಿನ ಕನಸು ಈಡೇರುತ್ತದೆ. ನೀರಿನ ಸದ್ಬಳಕೆಗೆ ಮತ್ತು ನೀರು ಪೋಲಾಗದಂತೆ ತಡೆಯಲು ಪ್ರತಿ ಸಂಪರ್ಕಕ್ಕೆ ಮೀಟರ್ ಅಳವಡಿಕೆ ಮಾಡಲಾಗುವುದು’ ಎಂದು ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದರು.

ಕೊಪ್ಪ ಹೋಬಳಿಯ ಹಲವು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯನಿರ್ವಹಣೆ ಮಾಡದೆ ಇರುವುದರಿಂದ ಕೆಲವೆಡೆ ಗ್ರಾಮೀಣ ಪ್ರದೇಶದ ಜನರು ಶುದ್ಧದ ಕುಡಿಯುವ ನೀರಿನಿಂದ ವಂಚಿತರಾಗುತ್ತಿದ್ದಾರೆ. ಇನ್ನೂ ಕೆಲವು ಗ್ರಾಮಗಳಲ್ಲಿ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅವಲಂಬಿಸಬೇಕಾದ ಸ್ಥಿತಿ ಇದೆ.

ಹೋಬಳಿಯ ಬೆಸಗರಹಳ್ಳಿ, ಕೊಪ್ಪ, ಆಬಲವಾಡಿ, ಹೊಸಗಾವಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಗಾಗಿ ಕಾಯುತ್ತಿವೆ. ಕೊಪ್ಪ ಹೋಬಳಿಯ ಹಳ್ಳಿಗಳಿಗೆ 2 ದಿನಕ್ಕೊಮ್ಮೆ ನಲ್ಲಿಗಳ ಮೂಲಕ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.

ಕೊಳವೆಬಾವಿಗಳೇ ಜನರಿಗೆ ಆಧಾರ

ಚಿಕ್ಕರಸಿನಕೆರೆ ಹೋಬಳಿಯ ಬಹುತೇಕ ಎಲ್ಲ ಹಳ್ಳಿಗಳಲ್ಲೂ ಕುಡಿಯುವ ನೀರಿಗಾಗಿ ಕೊಳವೆಬಾವಿಗಳೇ ಆಧಾರವಾಗಿವೆ. ಬೇಸಿಗೆ ಬಂತೆಂದರೆ ವಿದ್ಯುತ್ ವಿತರಣೆಯಲ್ಲಿ ವ್ಯತ್ಯಯ ಉಂಟಾಗುವ ಪರಿಣಾಮವಾಗಿ ಕುಡಿಯುವ ನೀರು ವಿತರಣೆಯಲ್ಲೂ ವ್ಯತ್ಯಯ ಉಂಟಾಗುತ್ತಿದೆ. ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಆಧಾರವಾಗಿದ್ದ ಕೊಳವೆಬಾವಿಗಳೂ ಬತ್ತಿ ಹೋಗಿರುವ ಕಾರಣ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ.

ಗ್ರಾಮೀಣ ಭಾಗದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ನೀರಿನ ತೊಂಬೆಗಳು, ಕೈ ಪಂಪುಗಳು ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅವಲಂಬಿಸುವಂತಾಗಿದೆ.

ದೇಶಹಳ್ಳಿ ಕೆರೆ: ಯೋಜನೆ ಅನುಷ್ಠಾನಕ್ಕೆ ಅಡ್ಡಿ

ಬೆಸಗರಹಳ್ಳಿ ಜಿ.ಪಂ.ವ್ಯಾಪ್ತಿಗೆ ಬರುವ ಸುಮಾರು 35ಕ್ಕೂ ಹೆಚ್ಚು ಗ್ರಾಮಗಳಿಗೆ ತಾಲ್ಲೂಕಿನ ದೇಶಹಳ್ಳಿ ಕೆರೆಯಿಂದ ಕುಡಿಯುವ ನೀರನ್ನು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಸರಬರಾಜು ಮಾಡಲು ಯೋಜನೆ ಸಿದ್ಧಗೊಂಡಿತ್ತು. ಆದರೆ, ಕಾಮಗಾರಿ ಆರಂಭಗೊಳ್ಳುವಷ್ಟರಲ್ಲಿ ಸ್ಥಳೀಯರು ಬೇಸಿಗೆಯಲ್ಲಿ ವ್ಯವಸಾಯಕ್ಕೆ ನೀರಿನ ಕೊರತೆ ಉಂಟಾಗುತ್ತದೆ ಎಂಬ ಕಾರಣದಿಂದ ಈ ಯೋಜನೆಗೆ ಅಡ್ಡಿ ಪಡಿಸಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿದೆ.

ಕೊಪ್ಪ ಕೆರೆಯಿಂದ ಕೊಪ್ಪ ಜಿ.ಪಂವ್ಯಾಪ್ತಿಯ 48 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಕಲ್ಪಿಸುವ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಕುಂಟುತ್ತಾ ಸಾಗಿದೆ. ಇದರಿಂದಾಗಿ ನಾಗರಿಕರಿಗೆ ಕಿರಿ ಕಿರಿ ಉಂಟಾಗುತ್ತಿದೆ. ತಕ್ಷಣ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಆದರೆ, ರೈತ ಸಂಘಟನೆಗಳು ಹಾಗೂ ಕೆಲವು ಸ್ಥಳೀಯರ ವಿರೋಧ ಎದುರಾಗಿದೆ.

ಜಾನುವಾರುಗಳಿಗೂ ತೊಂದರೆ

ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ ಕೆರೆ ಕಟ್ಟೆಗಳಲ್ಲಿ ನೀರು ಇಲ್ಲದ ಪರಿಣಾಮವಾಗಿ ದನಕರು ಕುಡಿಯಲು, ಬಟ್ಟೆ ತೊಳೆಯಲು, ಇನ್ನಿತರ ಕಾರ್ಯಕ್ಕಾಗಿ ನಲ್ಲಿಯ ನೀರಿನ ಮೇಲೆಯೇ ಜನ ಅವಲಂಬಿತರಾಗಿದ್ದಾರೆ. ಶುದ್ಧ ಕುಡಿಯುವ ನೀರು ಘಟಕಗಳು ಬಹುತೇಕ ಎಲ್ಲ ಗ್ರಾಮಗಳಲ್ಲಿ ಇದ್ದು, ಕುಡಿಯುವ ನೀರಿನ ಬವಣೆಯನ್ನು ಆದಷ್ಟು ನಿವಾರಿಸಿವೆ.

ಕೊಪ್ಪ ವ್ಯಾಪ್ತಿಯ ಕೀಳಘಟ್ಟದ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು 2 ತಿಂಗಳು ಕಳೆದರೂ ದುರಸ್ತಿ ಮಾಡಿಲ್ಲ. ಇದರಿಂದಾಗಿ ಶುದ್ಧ ನೀರು ಇಲ್ಲದೆ ಗಂಟಲು ಕೆರೆತ, ಕೆಮ್ಮು, ನೆಗಡಿ, ಕಫ ಮೊದಲಾದ ಆರೋಗ್ಯ ಸಮಸ್ಯೆಗಳಿಂದ ಜನ ಬಳಲುತ್ತಿದ್ದಾರೆ. ತಕ್ಷಣ ಅಗತ್ಯ ಕ್ರಮವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಶುದ್ಧ ನೀರಿನ ಘಟಕಗಳ ದುರಸ್ತಿಗೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT