ಸೋಮವಾರ, ಜೂನ್ 21, 2021
27 °C
ಮೈಷುಗರ್‌ ಕಾರ್ಖಾನೆ ನಡೆಯುತ್ತಿದ್ದರೆ ಪ್ರಾಣವಾಯುವಿಗೆ ಕೊರತೆ ಎದುರಾಗುತ್ತಿರಲಿಲ್ಲ

ಮುಳ್ಳಿನೊಳಗೆ ಮುಳುಗಿದೆ ಆಮ್ಲಜನಕ ತಯಾರಿಕಾ ಘಟಕ

ಎಂ.ಎನ್‌.ಯೋಗೇಶ್‌‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಕೋವಿಡ್‌ ಪರಿಸ್ಥಿತಿ ನಿಭಾಯಿಸಲು ಮಿಮ್ಸ್‌ ಆಸ್ಪತ್ರೆ ಆವರಣದಲ್ಲಿ ಇನ್ನೊಂದು ಆಮ್ಲಜನಕ ತಯಾರಿಕಾ ಘಟಕ ಸ್ಥಾಪನೆಯ ಕೆಲಸ ಆರಂಭಗೊಂಡಿದೆ. ಆದರೆ ಜಿಲ್ಲೆಯ ಜೀವನಾಡಿ ಮೈಷುಗರ್‌ ಕಾರ್ಖಾನೆ ಆವರಣದಲ್ಲಿ ಹಲವು ವರ್ಷಗಳಿಂದ ಇದ್ದ ಆಮ್ಲಜನಕ ತಯಾರಿಕಾ ಘಟಕ ಮುಳ್ಳು ಗಿಡಗಳ ನಡುವೆ ಮುಳುಗಿ ಹೋಗಿದ್ದು ಯಾರ ಗಮನಕ್ಕೂ ಬಂದಿಲ್ಲ.

ಆಮ್ಲಜನಕದ ಕೊರತೆ ಜಿಲ್ಲೆಯನ್ನು ತೀವ್ರವಾಗಿ ಕಾಡುತ್ತಿದ್ದು ರೋಗಿಗಳಿಗೆ ಪ್ರಾಣಸಂಕಟ ಎದುರಾಗಿದೆ. ಜಿಲ್ಲೆಗೆ ಪ್ರತಿದಿನ ಬೇಕಾಗಿರುವ 23 ಕಿಲೋ ಲೀಟರ್‌ ಆಮ್ಲಜನಕ ಪೂರೈಸಲು ಸರ್ಕಾರಕ್ಕೆ ಈವರೆಗೂ ಸಾಧ್ಯವಾಗಿಲ್ಲ. ಜಂಬೋ ಸಿಲಿಂಡರ್‌ ಮೂಲಕ ಕೋವಿಡ್‌ ರೋಗಿಗಳ ಪ್ರಾಣ ರಕ್ಷಣೆ ಮಾಡಲಾಗುತ್ತಿದೆ.

ಪರಿಸ್ಥಿತಿಯನ್ನು ನಿಭಾಯಿಸಲು ಮಿಮ್ಸ್‌ ಆಸ್ಪತ್ರೆ ಹಾಗೂ ಮಳವಳ್ಳಿ ತಾಲ್ಲೂಕು ಆಸ್ಪತ್ರೆ ಆವರಣದಲ್ಲಿ ಘಟಕ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಆದರೆ ಮೈಷುಗರ್‌ ಕಾರ್ಖಾನೆ ಆವರಣದಲ್ಲಿ ಪಳಿಯುಳಿಕೆ ಸ್ಥಿತಿಯಲ್ಲಿರುವ ಆಮ್ಲಜನಕ ಉತ್ಪಾದನಾ ಘಟಕ ಜಿಲ್ಲಾಡಳಿತದ ಗಮನಕ್ಕೂ ಬಂದಿಲ್ಲ.

ಸರ್ಕಾರ ಮೈಷುಗರ್‌ ಕಾರ್ಖಾನೆಗೆ ಚಾಲನೆ ಕೊಟ್ಟಿದ್ದರೆ ಜಿಲ್ಲೆಯಲ್ಲಿ ಆಮ್ಲಜನಕಕ್ಕೆ ಇಷ್ಟೊಂದು ಕೊರತೆಯಾಗುತ್ತಿರಲಿಲ್ಲ. ಕಾರ್ಖಾನೆ ಸುಸ್ಥಿತಿಯಲ್ಲಿ ಇದ್ದಿದ್ದರೆ  ಆಮ್ಲಜನಕ ಉತ್ಪಾದನಾ ಘಟಕವೂ ನಡೆಯುತ್ತಿತ್ತು. ಹೀಗಾಗಿ ಜಿಲ್ಲೆಯ ಕೋವಿಡ್‌ ರೋಗಿಗಳಿಗೆ ಅವಶ್ಯವಿರುವ ಆಮ್ಲಜನಕವನ್ನು ಬಳಕೆ ಮಾಡಿಕೊಳ್ಳಬಹುದಾಗಿತ್ತು. ಹೆಚ್ಚುವರಿ ಆಮ್ಲಜನಕವನ್ನು ಹೊರ ಜಿಲ್ಲೆಗಳಿಗೂ ಕಳುಹಿಸಬಹುದಾಗಿತ್ತು ಎಂದು ಅಲ್ಲಿಯ ಕೆಲ ಹಿರಿಯ ಕಾರ್ಮಿಕರು ಹೇಳುತ್ತಾರೆ.

2014ರವರೆಗೂ ಕಾರ್ಖಾನೆ ಆವರಣದ ಆಮ್ಲಜನಕ ಉತ್ಪಾದನಾ ಘಟಕ ಕಾರ್ಯ ನಿರ್ವಹಣೆ ಮಾಡಿದೆ. ಇಲ್ಲಿಯ ಮದ್ಯ ತಯಾರಿಕಾ ಘಟಕ (ಡಿಸ್ಟೆಲರಿ) ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿತ್ತು. ಡಿಸ್ಟೆಲರಿಯಿಂದ ದೊರೆಯುತ್ತಿದ್ದ ಸ್ಪಿರಿಟ್‌ ಸೇರಿ ಇತರ ಕಚ್ಛಾಸಾಮಗ್ರಿಗಳನ್ನು ಬಳಸಿಕೊಂಡು ಆಮ್ಲಜನಕ ಉತ್ಪಾದನೆ ಮಾಡಲಾಗುತ್ತಿತ್ತು.

ಆಮ್ಲಜನಕ ಘಟಕ ತಯಾರಿಕಾ ಜವಾಬ್ದಾರಿಯನ್ನು 2 ಖಾಸಗಿ ಕಂಪನಿಗಳಿಗೆ ನೀಡಲಾಗಿತ್ತು. ಮಹಾರಾಜ ಕಾರ್ಬನಿಕ್ಸ್‌, ಪ್ರೈಮ್‌ ಕಾರ್ಬನಿಕ್‌ ಗ್ಯಾಸ್‌ ಕಂಪನಿಗಳು ವರ್ಷಕ್ಕೆ ತಿಂಗಳಿಗೆ 500 ಮೆಟ್ರಿಕ್‌ ಟನ್‌ ಆಮ್ಲಜನಕ ಉತ್ಪಾದನೆ ಮಾಡುತ್ತಿದ್ದವು. ಅದಕ್ಕೆ ಬೇಕಾದ ಜಾಗ ಹಾಗೂ ಕೆಲ ಯಂತ್ರಗಳನ್ನು ಮೈಷುಗರ್‌ ಆಡಳಿತ ಮಂಡಳಿಯೇ ನೀಡಿತ್ತು. ಟ್ಯಾಂಕ್‌ ಹಾಗೂ ಇತರ ಯಂತ್ರಗಳೊಂದಿಗೆ  ಕಂಪನಿಗಳು ಆಮ್ಲಜನಕ ಉತ್ಪಾದನೆ ಮಾಡುತ್ತಿದ್ದವು.

ಇಲ್ಲಿ ಉತ್ಪಾದನೆಯಾಗುತ್ತಿದ್ದ ಆಮ್ಲಜನಕ ಬೆಂಗಳೂರು, ಮೈಸೂರು ಕೈಗಾರಿಕೆ ಹಾಗೂ ಆಸ್ಪತ್ರೆಗಳಿಗೂ ಪೂರೈಕೆಯಾಗುತ್ತಿತ್ತು. ಡಿಸ್ಟೆಲರಿಯಲ್ಲಿ ಪ್ರತಿದಿ ಉತ್ಪಾದನೆಯಾಗುತ್ತಿದ್ದ 35 ಸಾವಿರ ಲೀಟರ್‌ ಸ್ಪಿರಿಟ್‌ ಆಮ್ಲಜನಕ ಉತ್ಪಾದನೆಗೆ ಪ್ರಮುಖ ಕಚ್ಛಾವಸ್ತುವಾಗಿತ್ತು. ಖಾಸಗಿ ಕಂಪನಿಗಳು ₹ 50 ಲಕ್ಷದವರೆಗೆ ಬಂಡವಾಳ ಹಾಕಿ ಚೆನ್ನಾಗಿಯೇ ನಡೆಸುತ್ತಿದ್ದರು. 2014ರ ನಂತರ ಕಾರ್ಖಾನೆ ರೋಗಗ್ರಸ್ತಗೊಂಡು ಡಿಸ್ಟೆಲರಿ ಸ್ಥಗಿತಗೊಂಡಿತು. ನಂತರ ಆಮ್ಲಜನಕ ಉತ್ಪಾಧನಾ ಘಟಕವೂ ನಿಂತು ಹೋಯಿತು.

‘ಡಿಸ್ಟೆಲರಿಯಲ್ಲಿ ಉತ್ಪಾದನೆಯಾಗುತ್ತಿದ್ದ ಹೆಚ್ಚುವರಿ ಸ್ಪಿರಿಟ್‌ ಹಾಗೂ ಇತರ ರಾಸಾಯನಿಕಗಳನ್ನು ಪರಿಸರಕ್ಕೆ ಬಿಡುವಂತಿಲ್ಲ ಎಂಬ ನಿಯಮವಿದೆ. ಇದಕ್ಕಾಗಿ ಆಮ್ಲಜನಕ ಉತ್ಪಾದನಾ ಘಟಕ ನಡೆಸಲು ಅನುಮತಿ ನೀಡಲಾಗಿತ್ತು. ಖಾಸಗಿ ಗುತ್ತಿಗೆದಾರರು ಬಹಳ ಚೆನ್ನಾಗಿಯೇ ನಡೆಸುತ್ತಿದ್ದರು. 2017ರಲ್ಲಿ ಡಿಸ್ಟೆಲರಿಗೆ ಜೀವ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅದು ಆಗಿದ್ದರೆ ಇಂದಿಗೂ ಆಮ್ಲಜನಕ ಘಟಕ ಜೀವಂತವಾಗಿ ಇರುತ್ತಿತ್ತು’ ಎಂದು ಕಾರ್ಖಾನೆಯ ಕಾರ್ಮಿಕರೊಬ್ಬರು ತಿಳಿಸಿದರು.

‘ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ಅಸಿಟೇಟ್‌ ಕಾರ್ಖಾನೆ ನೆಲಸಮವಾಯಿತು. ಈಗ ಮೈಷುಗರ್‌ ಕಾರ್ಖಾನೆಯೂ ಅದೇ ಹಾದಿ ಹಿಡಿಯುತ್ತಿದೆ. ಇದರ ಪರಿಣಾಮವಾಗಿ ಮಂಡ್ಯ ಜಿಲ್ಲೆಯ ಜನರು ಹಲವು ಸಮಸ್ಯೆ ಎದುರಿಸುವಂತಾಗಿದೆ. ಆಮ್ಲಜನಕ ಕೊರತೆಯೂ ಅದರ ಭಾಗವಾಗಿಯೇ ಇದೆ’ ಎಂದು ರೈತಮುಖಂಡ ಕೆ.ಬೋರಯ್ಯ ಬೇಸರ ವ್ಯಕ್ತಪಡಿಸಿದರು.

********

ಮೈಷುಗರ್‌ ಆಸ್ಪತ್ರೆ ಬಳಸಿಕೊಳ್ಳಿ

ಮೈಷುಗರ್‌ ಕಾರ್ಖಾನೆ ಆವರಣದಲ್ಲಿರುವ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಕಟ್ಟಡ ಈಗಲೂ ಸುಸ್ಥಿತಿಯಲ್ಲಿದೆ. ಆದರೆ ಆಸ್ಪತ್ರೆ ಬಂದ್‌ ಆಗಿರುವ ಕಾರಣ ಪಾಳು ಕಟ್ಟಡದ ಸ್ಥಿತಿ ಪಡೆದಿದೆ. ಜಿಲ್ಲಾಡಳಿತ ಈ ಕಟ್ಟಡ ಬಳಕೆ ಮಾಡಿಕೊಂಡು ಕೋವಿಡ್‌ ಕೇರ್‌ ಕೇಂದ್ರ ಸ್ಥಾಪಿಸಬೇಕು ಎಂದು ಇಲ್ಲಿಯ ಕಾರ್ಮಿಕರು ಒತ್ತಾಯಿಸಿದ್ದಾರೆ.

***

ಮೈಷುಗರ್‌ ಕಾರ್ಖಾನೆ ಆವರಣದಲ್ಲಿದ್ದ ಆಮ್ಲಜನಕ ಉತ್ಪಾದನಾ ಘಟಕದ ಈಗಿನ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲಾಗುವುದು

– ಎಸ್‌.ಅಶ್ವತಿ, ಜಿಲ್ಲಾಧಿಕಾರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು