ಶನಿವಾರ, ಜೂನ್ 12, 2021
28 °C
ಮಿಮ್ಸ್‌ ಆಸ್ಪತ್ರೆಯಲ್ಲಿ ಘಟಕ ಸ್ಥಾಪನೆಗೆ ಭೂಮಿ ಪೂಜೆ

ಪ್ರತಿ ತಾಲ್ಲೂಕಿನಲ್ಲೂ ಆಮ್ಲಜನಕ ಘಟಕ ಶೀಘ್ರ: ಸಚಿವ ಕೆ.ಸಿ.ನಾರಾಯಣಗೌಡ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ‘ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ಮಂಡ್ಯದಲ್ಲಿ ಆಮ್ಲಜನಕ ಘಟಕ ಸ್ಥಾಪನೆಗೆ ಸರ್ಕಾರ ಅನುಮತಿ ನೀಡಿದೆ. ಪ್ರತಿ ತಾಲ್ಲೂಕಿನಲ್ಲೂ ಆಮ್ಲಜನಕ ಘಟಕ ಸ್ಥಾಪನೆಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ ನಾರಾಯಣಗೌಡ ಹೇಳಿದರು.

ಮಂಡ್ಯದ ಮಿಮ್ಸ್ ಆಸ್ಪತ್ರೆ ಆವರಣದಲ್ಲಿ ಬುಧವಾರ ಘಟಕ ಸ್ಥಾಪನೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ರಾಜ್ಯ ಸರ್ಕಾರ ಮಂಡ್ಯ ಹಾಗೂ ಮಳವಳ್ಳಿ ಯಲ್ಲಿ ಆಮ್ಲಜನಕ ಘಟಕ ಸ್ಥಾಪನೆಗೆ ಅವಕಾಶ ನೀಡಿದೆ. ಇಷ್ಟು ದಿನ ಬೇರೆ ಕಡೆಯಿಂದ ಆಮ್ಲಜನಕ ತರಿಸಿಕೊಳ್ಳುತ್ತಿದ್ದೆವು. ಮುಂದೆ ಈ ಸಮಸ್ಯೆ ಉದ್ಭವಿಸುವುದಿಲ್ಲ. ಈ ನಿಟ್ಟಿನಲ್ಲಿ ನಮ್ಮ ಪ್ರತಿ ತಾಲ್ಲೂಕಿನಲ್ಲೂ ಆಮ್ಲಜನಕ ಘಟಕ ನಿರ್ಮಾಣವಾಗಬೇಕು. ಅದಕ್ಕಾಗಿ ಸರ್ಕಾರವನ್ನು ಒತ್ತಾಯಿಸಲಾಗುವುದು’ ಎಂದರು.

ಶಾಸಕ ಎಂ.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ನಗರಸಭೆ ಅಧ್ಯಕ್ಷ ಮಂಜು, ಮಿಮ್ಸ್ ನಿರ್ದೇಶಕ ಡಾ.ಹರೀಶ್ ಇದ್ದರು.

ಜಿಲ್ಲಾಧಿಕಾರಿ ಭರವಸೆ: ‘ಜಿಲ್ಲೆಯ ಕೋವಿಡ್ ಸೋಂಕಿತರಿಗೆ ಆಮ್ಲಜನಕ ಅವಶ್ಯಕತೆ ಹೆಚ್ಚಾಗಿದ್ದು ಪ್ರತಿ ತಾಲ್ಲೂಕಿನಲ್ಲಿ ಘಟಕ ಸ್ಥಾಪನೆಯೇ ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಕಾರ್ಖಾನೆ ಮತ್ತು ಏಜೆನ್ಸಿಯವರು ಸಹಕರಿಸಲು ಮುಂದಾಗಿದ್ದಾರೆ’ ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ಹೇಳಿದರು.

ವಿಡಿಯೊ ಸಂವಾದದಲ್ಲಿ ಮಾತನಾಡಿದ ಅವರು ‘ಹೊಂಬಾಳೆ ಸಂಸ್ಥೆಯಿಂದ 500 ಎಲ್‌ಪಿಎಂ ಆಮ್ಲಜನಕ ಘಟಕ ನೀಡಲು ಮುಂದಾಗಿದ್ದು ಅದನ್ನು ಕೆ.ಆರ್ ಪೇಟೆ ಮತ್ತು ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲಾಗುವುದು. ಪಾಂಡವಪುರಕ್ಕೆ 400 ಅಥವಾ 500 ಎಲ್ ಪಿ ಎಂ ಅವಶ್ಯಕತೆ ಇದ್ದು ಈ ನಿಟ್ಟಿನಲ್ಲಿ 1 ಘಟಕ ಸ್ಥಾಪನೆಗೆ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಮುರಗೇಶ್ ನಿರಾಣಿ ಸಕ್ಕರೆ ಕಂಪನಿಯವರ ಜೊತೆ ಚರ್ಚೆ ನಡೆಯುತ್ತಿದೆ’ ಎಂದರು.

‘ಇನ್ನು ಮಂಡ್ಯ ಸಹಕಾರ ಹಾಲು ಒಕ್ಕೂಟದ (ಮನ್‌ಮುಲ್‌) ವತಿಯಿಂದ ಮದ್ದೂರು ತಾಲ್ಲೂಕು ಆಸ್ಪತ್ರೆ ಆವರಣದಲ್ಲಿ ಘಟಕ ಸ್ಥಾಪನೆ ಮಾಡುವ ಚರ್ಚೆ ನೆಡಯುತ್ತಿದೆ. ನಾಗಮಂಗಲದಲ್ಲಿ ಘಟಕ ಸ್ಥಾಪನೆ ಸಂಬಂಧ 7 ಕೈಗಾರಿಕೆಗಳು ಮುಂದೆ ಬಂದಿವೆ’ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು ನಾಗರಾಜು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು