ಮಂಗಳವಾರ, ಮೇ 18, 2021
23 °C
ಬಳೇ ಅತ್ತಿಗುಪ್ಪೆ: ಮೂವರು ಮಕ್ಕಳ ಸಾವು ಪ್ರಕರಣ

ಮೂವರು ಮಕ್ಕಳ ಸಾವು ಪ್ರಕರಣ: ರೋದಿಸುತ್ತಲೇ ಇರುವ ಪೋಷಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾಂಡವಪುರ: ತಾಲ್ಲೂಕಿನ ಬಳೇ ಅತ್ತಿಗುಪ್ಪೆ ಗ್ರಾಮದಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿರುವ ಮಕ್ಕಳ ಪೋಷಕರ ರೋದನೆ ಇನ್ನೂ ನಿಂತಿಲ್ಲ. ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ಘಟನೆ ನಡೆದು ಮೂರು ದಿನ ಕಳೆದಿದ್ದು, ಪೋಷಕರಿಗೆ ಸಾಂತ್ವನ ಹೇಳಲು ಜನಪ್ರತಿನಿಧಿಗಳು, ರಾಜಕಾರಣಿಗಳು, ಸಂಘ ಸಂಸ್ಥೆ ಮುಖಂಡರು, ಅಧಿಕಾರಿಗಳು ಬಂದು ಹೋಗುತ್ತಿದ್ದಾರೆ. ಪರಿಹಾರದ ಹಣಕ್ಕಾಗಿ ಸರ್ಕಾರವನ್ನೂ ಒತ್ತಾಯಿಸಿದ್ದಾರೆ.

ಸಾಂತ್ವನ ಹೇ‌ಳಿದರೂ, ಪರಿಹಾರದ ಹಣ ಕೊಡಿಸುವುದಾಗಿ ಭರವಸೆ ನೀಡಿದರೂ ಅದನ್ನು ಕೇಳುವ ಸ್ಥಿತಿಯಲ್ಲಿ ಪೋಷಕರಿಲ್ಲ. ಯಾರೂ ಬಂದರೇನು, ಎಷ್ಟು ಹಣ ಕೊಟ್ಟರೇನು, ನಮ್ಮ ಮಕ್ಕಳನ್ನು ತಂದುಕೊಡುತ್ತಾರೆಯೇ? ಎಂದು ಕಣ್ಣೀರಿಡುತ್ತಿದ್ದಾರೆ.

ಚಂದನ್, ಕಾರ್ತೀಕ್ ಎಂಬ ಇಬ್ಬರು ಮಕ್ಕಳನ್ನೂ ಕಳೆದುಕೊಂಡ ಮಹದೇವಪ್ಪ ಇನ್ನೂ ಅಳು ನಿಲ್ಲಿಸಿಲ್ಲ. ಗ್ರಾಮದ ಜನರು ತಂಡೋಪತಂಡವಾಗಿ ಅವರ ಮನೆಗೆ ಹೋಗಿ ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ. ಊಟ ತಿಂಡಿಗಾಗಿ ಜನರು ಒತ್ತಾಯಿಸಿದರೂ ಮಹದೇವಸ್ವಾಮಿ ಕಣ್ಣೀರು ಸುರಿಸುತ್ತಾರೆಯೇ ಹೊರತು ಊಟ ಮಾಡುತ್ತಿಲ್ಲ. ಮಕ್ಕಳನ್ನು ನೆನೆದು ಅತ್ತು ಸುಸ್ತಾಗಿರುವ ಭಾರತಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅವರೂ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.

ಮೃತ ರಿತೇಶ್‌ನ ತಂದೆ ಮಲ್ಲಿಕಾರ್ಜುನ, ತಾಯಿ ಸುಮಾ ಮನೆಯಿಂದ ಹೊರಬಂದಿಲ್ಲ. ಹಾಸಿಗೆ ಹಿಡಿದಿದ್ದಾರೆ. ಸಹೋದರ ಚೇತನ್‌ಗೆ ಮಂಕು ಬಡಿದಂತಾಗಿದೆ.

ಶಿಕ್ಷಕರ ಅಳಲು: ಮೃತ ಚಂದನ್‌, ಕಾರ್ತೀಕ್ ಪಾಂಡವಪುರ ಪಟ್ಟಣದ ನಿರ್ಮಲಾ ಕಾನ್ವೆಂಟ್‌ನಲ್ಲಿ ಓದುತ್ತಿದ್ದರು. ‘ಚಂದನ್, ಕಾರ್ತೀಕ್ ಒಳ್ಳೆಯ ಮಕ್ಕಳು. ಚಂದನ್ ಬುದ್ಧಿವಂತ, ಚುರುಕು, ಕ್ರಿಯಾಶೀಲನಾಗಿದ್ದ. ಅವರನ್ನು ನೆನೆದು ದು:ಖಪಡುತ್ತಿದ್ದೇವೆ. ಚಂದನ್ ತರಗತಿಯಲ್ಲಿ ಮೊದಲ ಬೆಂಚ್‌ನಲ್ಲಿಯೇ ಕುಳಿತುಕೊಳ್ಳುತ್ತಿದ್ದ. ಪಾಠ ಹೇಗೆ ಮಾಡಲಿ. ತುಂಬ ಸಂಕಟವಾಗುತ್ತದೆ’ ಎಂದು ಶಿಕ್ಷಕರಾದ ಸಿಸ್ಟರ್ ಮೇರಿ ಸೆಲಿನಾ, ಜಾನಕಿ, ಧರಣೇಶ್ ನೋವಿನಿಂದ ಹೇಳುತ್ತಾರೆ.

ಮೃತ ರಿತೇಶ್ ಹಾಗೂ ಆತನ ಸೋದರ ಚೇತನ್‌ ಬಳೇ ಅತ್ತಿಗುಪ್ಪೆ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದವರು. ‘ರಿತೇಶ್, ಚೇತನ್ ಜೊತೆಯಲ್ಲಿಯೇ ಶಾಲೆಗೆ ಬರುತ್ತಿದ್ದರು. ಆತನ ಆಟ–ಪಾಠದ ನೆನಪು ನಮ್ಮನ್ನು ಕಾಡುತ್ತಿದೆ’ ಎಂದು ಶಿಕ್ಷಕ ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು