ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಪಿಎಂಎವೈ: ಅರ್ಹರಿಗೆ ಸಿಗದ ಸೂರು

ಶೇ 49ರಷ್ಟು ಮನೆಗಳ ಮಂಜೂರಾತಿ ರದ್ದು, ಫಲಾನುಭವಿಗಳ ಆಯ್ಕೆಯಲ್ಲಿ ವಿಫಲ
Last Updated 4 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಮಂಡ್ಯ: ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆ (ಪಿಎಂಎವೈ) ಅಡಿ ಬಡವರಿಗೆ ಸೂರು ಸೌಲಭ್ಯ ಒದಗಿಸುವಲ್ಲಿ ಜಿಲ್ಲೆಯ ಅಧಿಕಾರಿ ವರ್ಗ ಹಿಂದುಳಿದಿದೆ. ಗ್ರಾಮೀಣ ಭಾಗದಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವಲ್ಲಿ ಅಧಿಕಾರಿಗಳು ವಿಫಲವಾಗಿರುವ ಕಾರಣ ಕಳೆದ ಮೂರು ವರ್ಷಗಳಿಂದ ಮಂಜೂರಾದ ಒಟ್ಟು ಮನೆಗಳಲ್ಲಿ ಶೇ 49ರಷ್ಟು ಮನೆಗಳು ರದ್ದಾಗಿವೆ.

‘ಸರ್ವರಿಗೂ ವಸತಿ’ ಘೋಷಣೆ ಯೊಂದಿಗೆ ಬಂದ ವಸತಿ ಯೋಜನೆ ಜಾರಿಯಲ್ಲಿ ಜಿಲ್ಲೆ ಪ್ರಗತಿ ಕಂಡಿಲ್ಲ. ಸಾಮಾಜಿಕ ಸಮೀಕ್ಷೆಯ ಆಧಾರದ ಮೇಲೆ 2016ರಿಂದ 2020ರವರೆಗೆ ಜಿಲ್ಲೆಯ ಒಟ್ಟು ಗ್ರಾ.ಪಂ ವ್ಯಾಪ್ತಿಯಲ್ಲಿ 4,610 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಈ ಪೈಕಿ 1,844 ಮನೆಗಳ ಕಾಮಗಾರಿ ಪೂರ್ಣ ಗೊಂಡಿದೆ. 624 ಮನೆಗಳ ಕಾಮಗಾರಿ ನಿರ್ಮಾಣ ಹಂತದಲ್ಲಿದೆ. 2,142 ಮನೆಗಳ ಮಂಜೂರಾತಿ ರದ್ದಾಗಿದೆ.

ಮನೆ ನಿರ್ಮಿಸಿಕೊಳ್ಳಲು ಸಾರ್ವಜನಿಕರು ಆಸಕ್ತಿ ತೋರಿಸುತ್ತಿಲ್ಲ, ಮನೆ ನಿರ್ಮಾಣ ಕಾರ್ಯಾದೇಶ ನೀಡಿದರೂ ಮನೆ ನಿರ್ಮಿಸಿಕೊಳ್ಳುತ್ತಿಲ್ಲ. ಕೆಲವರು ವಲಸೆ ಹೋಗಿದ್ದು, ಮನೆ ನಿರಾಕರಿಸುತ್ತಿದ್ದಾರೆ. ಹಲವರು ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದು, ಮನೆ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ. ಹೀಗಾಗಿ ಮಂಜೂರಾತಿ ರದ್ದಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಆದರೆ, ಮನೆ ಇಲ್ಲದೆ ಗುಡಿಸಲು, ಬೀದಿ ಬದಿಯಲ್ಲಿ, ಪಾಳು ಕಟ್ಟಡದಲ್ಲಿ ವಾಸಿಸುವವರು ಸಾಕಷ್ಟು ಮಂದಿ ಇದ್ದಾರೆ. ಅಂತಹ ಅರ್ಹರಿಗೆ ಮನೆ ನೀಡುವುದನ್ನು ಬಿಟ್ಟು ಉಳ್ಳವರಿಗೆ, ಮನೆ ನಿರ್ಮಾಣಕ್ಕೆ ಆಸಕ್ತಿ ತೋರ ದವರಿಗೆ ಏಕೆ ಮಂಜೂರಾತಿ ಮಾಡಲಾಗುತ್ತಿದೆ ಎಂಬ ಪ್ರಶ್ನೆ ಜಿಲ್ಲೆಯ ಜನರನ್ನು ಕಾಡುತ್ತಿದೆ.

‘ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ಮನೆ ಇಲ್ಲದವರಿಗೆ ಮನೆ ಕೊಡುತ್ತಿಲ್ಲ. ಪ್ರಭಾವಿಗಳಿಗೆ, ಲಂಚ ಕೊಟ್ಟವರಿಗೆ, ಕಮಿಷನ್‌ ಕೊಟ್ಟವರಿಗೆ, ಗ್ರಾಮ ಪಂಚಾಯಿತಿ ಸದಸ್ಯ, ಅಧ್ಯಕ್ಷರು ಹೇಳಿದವರಿಗೆ, ಅವರ ಸಂಬಂಧಿಕರಿಗೆ ಮನೆ ಮಂಜೂರು ಮಾಡುತ್ತಿದ್ದಾರೆ. ಅವರು ಮನೆ ನಿರ್ಮಿಸಿಕೊಳ್ಳದೆ ಮಂಜೂರಾತಿ ರದ್ದಾಗುತ್ತಿವೆ’ ಎಂದು ರೈತ ಮುಖಂಡ ಬಸವರಾಜು ಆಕ್ರೋಶ ವ್ಯಕ್ತಪಡಿಸಿದರು.

2020–21ನೇ ಸಾಲಿನಲ್ಲಿ 1,05,945 ವಸತಿ ಮತ್ತು ನಿವೇಶನ ರಹಿತರನ್ನು ಗುರುತಿಸಲಾಗಿದೆ. ಹೊಸದಾಗಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಈಗಷ್ಟೇ ಆರಂಭವಾಗಬೇಕಿದೆ. ಈ ವರ್ಷವಾದರೂ ಅರ್ಹರನ್ನು ಆಯ್ಕೆ ಮಾಡಬೇಕು. ಸಮೀಕ್ಷೆಗೆ ನಿಯಮಗಳಿಗೆ ಅನುಗುಣವಾಗಿ ಆಯ್ಕೆ ಪ್ರಕ್ರಿಯೆ ನಡೆಯಬೇಕು. ಪ್ರಭಾವಿಗಳ ಶಿಫಾರಸು ಪರಿಗಣಿಸಬಾರದು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಧಾನ ಮಂತ್ರಿ ಆವಾಸ್ ಯೋಜ ನೆಯಡಿ ಆಯ್ಕೆಯಾಗುವ ಸಾಮಾನ್ಯ ವರ್ಗದ ಫಲಾನುಭವಿಗೆ ₹ 1.20 ಲಕ್ಷ, ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗೆ ₹ 1.75 ಲಕ್ಷ ಅನುದಾನ ಸಿಗುತ್ತದೆ. ನರೇಗಾ ಯೋಜನೆಯಡಿ ₹ 27 ಸಾವಿರ ಪಡೆಯಬಹುದು.

ಶ್ರೀರಂಗಪಟ್ಟಣ ತಾಲ್ಲೂಕಿಗೆ 2016-17ನೇ ಸಾಲಿಗೆ 100 ಮನೆಗಳು ಮಂಜೂರಾಗಿದ್ದು, ಈ ಪೈಕಿ 51 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. 7 ತಳಪಾಯ ಹಂತದಲ್ಲಿ, 4 ಚಾವಣಿ ಹಂತದಲ್ಲಿವೆ. 38 ಮನೆಗಳು ವಾಪಸ್ ಹೋಗಿವೆ.

2019-20ನೇ ಸಾಲಿನಲ್ಲಿ 168 ಮನೆಗಳು ಮಂಜೂರಾಗಿವೆ. 25 ಮನೆಗಳ ನಿರ್ಮಾಣ ಮುಗಿದಿದೆ. 6 ತಳಪಾಯ ಹಂತದಲ್ಲಿ, ಒಂದು ಗೋಡೆ ಹಂತದಲ್ಲಿ, 3 ಚಾವಣಿ ಹಂತದಲ್ಲಿವೆ. 8 ಮನೆಗಳು ಇನ್ನೂ ಪ್ರಾರಂಭ ಆಗಿಲ್ಲ. 125 ಮನೆಗಳು ವಾಪಸ್ ಹೋಗಿವೆ.

ಮಳವಳ್ಳಿ ತಾಲ್ಲೂಕಿನಲ್ಲಿ 2016-17ನೇ ಸಾಲಿನಲ್ಲಿ 540 ಮನೆಗಳು ಮಂಜೂರಾಗಿದ್ದು, ಅವುಗಳಲ್ಲಿ 349 ಮನೆಗಳ ನಿರ್ಮಾಣ ಕಾಮಗಾರಿ ಮುಗಿದಿದೆ. 21 ಮನೆಗಳು ತಳಪಾಯ ಹಂತದಲ್ಲಿದ್ದು, 4 ಗೋಡೆ ಹಂತ ಹಾಗೂ 38 ಚಾವಣಿ ಹಂತದಲ್ಲಿವೆ. 128 ಮನೆಗಳು ವಾಪಸ್ ಹೋಗಿವೆ.

2019-20ನೇ ಸಾಲಿನಲ್ಲಿ 548 ಮನೆಗಳು ಮಂಜೂರಾಗಿವೆ. 76 ಮನೆಗಳನ್ನು ನಿರ್ಮಾಣ ಮಾಡಲಾಗಿದೆ. 33 ಮನೆಗಳು ತಳಪಾಯ ಹಂತದಲ್ಲಿ, 7 ಗೋಡೆ ಹಂತದಲ್ಲಿ ಹಾಗೂ 37 ಚಾವಣಿ ಹಂತದಲ್ಲಿವೆ. ವಿವಿಧ ಕಾರಣಗಳಿಂದ 395 ಮನೆಗಳು ವಾಪಸ್ ಹೋಗಿವೆ.

ಪಾಂಡವಪುರ ತಾಲ್ಲೂಕಿನಲ್ಲಿ 2016-17ನೇ ಸಾಲಿಗೆ 186 ಮನೆ ಗಳು ಮಂಜೂರಾಗಿದ್ದು,ಈ ಪೈಕಿ 124 ಮನೆಗಳ ನಿರ್ಮಾಣ ಕಾರ್ಯ ಪೂರ್ಣ ಗೊಂಡಿದೆ. 6 ತಳಪಾಯ ಹಂತದಲ್ಲಿ, 3 ಗೋಡೆ ಹಂತದಲ್ಲಿ, 4 ಚಾವಣಿ ಹಂತದಲ್ಲಿವೆ. 49 ಮನೆಗಳು ವಾಪಸ್‌ ಹೋಗಿವೆ.

2019-20ನೇ ಸಾಲಿಗೆ 409 ಮನೆಗಳು ಮಂಜೂರಾಗಿದ್ದು, ಈ ಪೈಕಿ 108 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. 46 ತಳಪಾಯ ಹಂತದಲ್ಲಿ, 10 ಗೋಡೆ ಹಂತದಲ್ಲಿ, 34 ಚಾವಣಿ ಹಂತದಲ್ಲಿವೆ. 8 ಮನೆಗಳು ಇನ್ನೂ ಪ್ರಾರಂಭವಾಗಿಲ್ಲ, 206 ಮನೆಗಳು ವಾಪಸ್‌ ಹೋಗಿವೆ.

ನಾಗಮಂಗಲ ತಾಲ್ಲೂಕಿನಲ್ಲಿ 2016-17ನೇ ಸಾಲಿಗೆ 132 ಮನೆ ಗಳು ಮಂಜೂರಾಗಿದ್ದು, ಈ ಪೈಕಿ 94 ಮನೆಗಳ ನಿರ್ಮಾಣ ಕಾರ್ಯ ಪೂರ್ಣ ಗೊಂಡಿವೆ. 7 ತಳಪಾಯ ಹಂತದಲ್ಲಿ, 3 ಗೋಡೆ ಹಂತದಲ್ಲಿ, 5 ಚಾವಣಿ ಹಂತದಲ್ಲಿವೆ. 27 ಮನೆಗಳು ವಾಪಸ್‌ ಹೋಗಿವೆ.

2019-20ನೇ ಸಾಲಿಗೆ 163 ಮನೆಗಳು ಮಂಜೂರಾಗಿದ್ದು, ಈ ಪೈಕಿ 35 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. 29 ತಳಪಾಯ ಹಂತದಲ್ಲಿ, 2 ಗೋಡೆ ಹಂತದಲ್ಲಿ, 4 ಚಾವಣಿ ಹಂತದಲ್ಲಿವೆ. 2 ಮನೆಗಳು ಇನ್ನೂ ಪ್ರಾರಂಭವಾಗಿಲ್ಲ. 91 ಮನೆಗಳು ವಾಪಸ್‌ ಹೋಗಿವೆ.

ಮದ್ದೂರು ತಾಲ್ಲೂಕಿನಲ್ಲಿ 322 ಮನೆಗಳು ಆಯ್ಕೆಯಾಗಿದ್ದವು. ಅವುಗಳ ಪೈಕಿ 75 ಮನೆಗಳು ಪೂರ್ಣಗೊಂಡಿದ್ದು, 55 ಮನೆಗಳು ನಿರ್ಮಾಣ ಹಂತದಲ್ಲಿವೆ. 188 ಮನೆಗಳು ನಿರ್ಮಾಣವಾಗದೇ ಇದ್ದು, 4 ಮನೆ ಪರಿಶೀಲನೆ ಹಂತದಲ್ಲಿವೆ.

ನಗರ ವ್ಯಾಪ್ತಿಯಲ್ಲೂ ಕಳಪೆ ಸಾಧನೆ
ಪ್ರಧಾನಮಂತ್ರಿ ಆವಾಸ್‌ ಯೋಜನೆ ನಗರ ಪ್ರದೇಶದಲ್ಲೂ ಹೆಚ್ಚು ಸಾಧನೆ ಮಾಡಲು ಸಾಧ್ಯವಾಗಿಲ್ಲ. ನಗರದಲ್ಲಿ ಇಲ್ಲಿಯವರೆಗೆ ಒಟ್ಟು 1,283 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಅದಕ್ಕಾಗಿ ₹ 12 ಕೋಟಿ ಹಣ ಬಿಡುಗಡೆ ಮಾಡಲಾಗಿದೆ.

ಒಟ್ಟು ಮಂಜೂರಾದ ಮನೆಗಳಲ್ಲಿ ಇಲ್ಲಿಯವರೆಗೆ 667 ಮನೆಗಳ ಕಾಮಗಾರಿ ಪೂರ್ಣಗೊಂಡಿದೆ. 510 ಮನೆಗಳ ನಿರ್ಮಾಣ ಕಾಮಗಾರಿ ಪ್ರಗತಿ ಹಂತದಲ್ಲಿದೆ.

‘ನಗರ ಪ್ರದೇಶದ ಬಡವರನ್ನು ಗುರುತಿಸುವಲ್ಲಿ ಅಧಿಕಾರಿಗಳು ಸೋತಿದ್ದಾರೆ. ಮಂಜೂರಾದ ಮನೆಗಳನ್ನು ಯಾರಿಗೆ ಕೊಡುತ್ತಾರೆ, ಬಿಡುಗಡೆಯಾದ ಹಣ ಎಲ್ಲಿಗೆ ಹೋಗುತ್ತದೆ ಎಂಬುದೇ ಅರ್ಥವಾಗು ವುದಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಸತೀಶ್‌ ಹೇಳಿದರು.

ಕೊಳೆಗೇರಿ ನಿವಾಸಿಗಳಿಗೆ ಸಿಗದ ಸೂರು
ಕೊಳಚೆ ನಿರ್ಮೂಲನಾ ಮಂಡಳಿಯಿಂದ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಮನೆಗಳ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹಾಲಹಳ್ಳಿಯಲ್ಲಿ ನಿರ್ಮಾಣಗೊಂಡಿರುವ ಮನೆಗಳ ಹಂಚಿಕೆ ಗೊಂದಲದ ಗೂಡಾಗಿದ್ದು, ಅದನ್ನು ಪರಿಹರಿಸುವಲ್ಲಿ ಅಧಿಕಾರಿಗಳೂ ಸೋತಿದ್ದಾರೆ.

ತಮಿಳು ಕಾಲೊನಿ ನಿವಾಸಿಗಳಿಗಾಗಿ ಕೆರೆಯಂಗಳದಲ್ಲಿ ಮನೆ ನಿರ್ಮಿಸಲಾಗುತ್ತಿದೆ. ಕಾಮಗಾರಿ ಆರಂಭಗೊಂಡು 2 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಹೀಗಾಗಿ ತಮಿಳು ಕಾಲೊನಿ ತೆರವು ಮರೀಚಿಕೆಯಾಗಿಯೇ ಉಳಿದಿದೆ.

____________________

ನಿರ್ವಹಣೆ: ಎಂ.ಎನ್‌.ಯೋಗೇಶ್‌

ಪೂರಕ ಮಾಹಿತಿ: ಗಣಂಗೂರು ನಂಜೇಗೌಡ, ಬಲ್ಲೇನಹಳ್ಳಿ ಮಂಜುನಾಥ್‌, ಅಶೋಕ್‌ ಕುಮಾರ್, ಟಿ.ಕೆ.ಲಿಂಗರಾಜು, ಹಾರೋಹಳ್ಳಿ ಪ್ರಕಾಶ್‌, ಯು.ವಿ.ಉಲ್ಲಾಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT