ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಕೋವಿಡ್ ಚಿಕಿತ್ಸೆಗೆ ಸಿದ್ಧಗೊಳ್ಳದ ಖಾಸಗಿ ಆಸ್ಪತ್ರೆಗಳು

‘ಪರೀಕ್ಷೆಗೆ ಇಲ್ಲಿ ಬರಲೇಬೇಡಿ, ಜಿಲ್ಲಾಸ್ಪತ್ರೆಗೆ ತೆರಳಿ’ ಎನ್ನುವ ನರ್ಸಿಂಗ್‌ ಹೋಮ್‌ ಸಿಬ್ಬಂದಿ
Last Updated 11 ಆಗಸ್ಟ್ 2020, 20:00 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯಲ್ಲಿ ಕೋವಿಡ್‌–19 ಸಕ್ರಿಯ ಪ್ರಕರಣಗಳು 1.500 ಸಾವಿರ ಗಡಿ ತಲುಪುತ್ತಿವೆ. ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳು ಹಾಗೂ ಕೋವಿಡ್‌ ಕೇರ್‌ ಕೇಂದ್ರಗಳು ರೋಗಿಗಳಿಂದ ತುಂಬಿವೆ. ಆದರೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಲು ಇಲ್ಲಿಯವರೆಗೂ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ.

ಸರ್ಕಾರದ ಮಾರ್ಗಸೂಚಿಯಂತೆ ಎಲ್ಲಾ ಖಾಸಗಿ ಆಸ್ಪತ್ರೆ, ನರ್ಸಿಂಗ್‌ ಹೋಮ್‌ಗಳು ಶೇ 50ರಷ್ಟು ಹಾಸಿಗೆಯನ್ನು ಕೋವಿಡ್‌ ರೋಗಿಗಳಿಗೆ ಮೀಸಲಿಡಬೇಕು. ಜಿಲ್ಲಾಸ್ಪತ್ರೆಯಿಂದ ಶಿಫಾರಸು ಮಾಡುವ ರೋಗಿಗಳಿಗೆ ಖಾಸಗಿ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಬೇಕು. ಸರ್ಕಾರ ನಿಗದಿ ಮಾಡಿರುವ ದರ ಪಡೆದು ನೇರವಾಗಿ ಬರುವ ರೋಗಿಗಳಿಗೂ ಖಾಸಗಿ ಆಸ್ಪತ್ರೆಗಳು ಗಂಟಲು ದ್ರವ ಪರೀಕ್ಷೆ ನಡೆಸಿ, ಚಿಕಿತ್ಸೆ ನೀಡಬೇಕು.

ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ಜಿಲ್ಲಾಸ್ಪತ್ರೆಗೆ ತೆರಳಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಸರ್ಕಾರ ನಿಗದಿ ಮಾಡಿರುವ ಹಣ ನೀಡಲು ಸಿದ್ಧರಿದ್ದಾರೆ. ಆದರೆ ಯಾವುದೇ ಖಾಸಗಿ ಆಸ್ಪತ್ರೆ, ನರ್ಸಿಂಗ್‌ ಹೋಮ್‌ಗಳಿಗೆ ಕರೆ ಮಾಡಿದರೂ ‘ಇಲ್ಲಿಗೆ ಬರಲೇ ಬೇಡಿ, ಜಿಲ್ಲಾಸ್ಪತ್ರೆಗೆ ಹೋಗಿ’ ಎಂದು ಹೇಳುತ್ತಿದ್ದಾರೆ. ಆ ಮೂಲಕ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.

ಆದಿಚುಂಚನಗಿರಿ ಆಸ್ಪತ್ರೆ ಹೊರತುಪಡಿಸಿ ಜಿಲ್ಲೆಯ ಯಾವುದೇ ಖಾಸಗಿ ಆಸ್ಪತ್ರೆ ಗಂಟಲು ದ್ರವ ಪರೀಕ್ಷೆ ಮಾಡುತ್ತಿಲ್ಲ, ಕೋವಿಡ್‌ ರೋಗಿಗಳನ್ನು ದಾಖಲು ಮಾಡಿಕೊಂಡಿಲ್ಲ. ಕೋವಿಡ್‌ ಪ್ರಕರಣಗಳು ಕಡಿಮೆ ಇರುವ ಇತರ ಜಿಲ್ಲೆಗಳಲ್ಲಿ ಕೂಡ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ ಜಿಲ್ಲೆಯ ಖಾಸಗಿ ವೈದ್ಯರು ಪರೀಕ್ಷೆಗೆ ಮುಂದಾಗಿಲ್ಲ. ಜಿಲ್ಲಾಡಳಿತದ ಸೂಚನೆಯಂತೆ ಸ್ಯಾಂಜೊ ಆಸ್ಪತ್ರೆ ವಾರ್ಡ್‌ ಮೀಸಲಿಡಲು ಒಪ್ಪಿಗೆ ನೀಡಿದೆ, ಆದರೆ ಇಲ್ಲಿಯವರೆಗೂ ಒಬ್ಬನೇ ಒಬ್ಬ ರೋಗಿಯನ್ನು ದಾಖಲು ಮಾಡಿಕೊಂಡಿಲ್ಲ.

‘ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌ ಪರೀಕ್ಷೆಗೆ ತೆರಳಲು ಭಯವಾಗುತ್ತದೆ. ಹಣ ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳೋಣವೆಂದರೆ ಯಾವ ಆಸ್ಪತ್ರೆಯಲ್ಲೂ ಪರೀಕ್ಷೆ ಮಾಡುತ್ತಿಲ್ಲ. ತಮಗೆ ಸಂಬಂಧವೇ ಇಲ್ಲ ಎಂಬಂತೆ ಖಾಸಗಿ ಆಸ್ಪತ್ರೆ, ನರ್ಸಿಂಗ್‌ ಹೋಮ್‌ಗಳ ವೈದ್ಯರು ವರ್ತಿಸುತ್ತಿದ್ದಾರೆ’ ಎಂದು ವಿದ್ಯಾನಗರದ ನಿವಾಸಿ ಶಿವಕುಮಾರ್‌ ಹೇಳಿದರು.

ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರನ್ನು ಒಳಗೊಳ್ಳುವ ಬಗ್ಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಜಾರಿಗೊಳಿಸಿಲ್ಲ. ಆರಂಭದಲ್ಲಿ ಒಂದೆರಡು ಸಭೆ ನಡೆಸಿ ವಾರ್ಡ್‌ ಮೀಸಲಿಡಲು ಸೂಚನೆ ನೀಡಿತ್ತು. ಆದರೆ ಮೀಸಲಿಟ್ಟಿರುವ ಬಗ್ಗೆ ಸೂಕ್ತ ಪರಿಶೀಲನೆ ಇಲ್ಲಿಯವರೆಗೂ ಪರಿಶೀಲನೆ ನಡೆಸಿಲ್ಲ.

‘ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ವಾರ್ಡ್‌ ಮಾಡಿದರೆ, ಕೋವಿಡ್‌ ಪರೀಕ್ಷೆ ನಡೆಸಿದರೆ ಇತರ ಆರೋಗ್ಯ ಸಮಸ್ಯೆಯಿಂದ ನರಳುವ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ಬರುವುದಿಲ್ಲ. ಹೀಗಾಗಿ ನರ್ಸಿಂಗ್‌ ಹೋಮ್‌ ಮಾಲೀಕರು ಕೋವಿಡ್‌ಗೆ ಹಾಸಿಗೆ ಮೀಸಲಿಡಲು ಹಿಂದೇಟು ಹಾಕುತ್ತಿದ್ಧಾರೆ. ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ’ ಎಂದು ಕೋವಿಡ್‌ ವಾರ್ಡ್‌ನಲ್ಲಿ ಕೆಲಸ ಮಾಡುವ ವೈದ್ಯರೊಬ್ಬರು ಹೇಳಿದರು.

‘ಸ್ಯಾಂಜೋ ಆಸ್ಪತ್ರೆಗಳಿಗೆ ರೋಗಿಗಳನ್ನು ದಾಖಲು ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮುಂದೆ ರೋಗಿಗಳ ಸಂಖ್ಯೆ ಇನ್ನೂ ಹೆಚ್ಚಾದರೆ ಖಾಸಗಿ ಆಸ್ಪತ್ರೆಗಳಿಗೂ ರೋಗಿಗಳನ್ನು ದಾಖಲು ಮಾಡಲಾಗುವುದು. ಈ ಬಗ್ಗೆ ಈಗಾಗಲೇ ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ಹೇಳಿದರು.

ಗಂಭೀರ ಪರಿಸ್ಥಿತಿ ಇಲ್ಲ

‘ಕೋವಿಡ್‌ ವಿಚಾರದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಗಂಭೀರ ಪರಿಸ್ಥಿತಿ ಇಲ್ಲ. ಸದ್ಯದ ಪ್ರಕರಣಗಳನ್ನು ಗಮನಿಸಿದರೆ ಪರಿಸ್ಥಿತಿ ಸುಧಾರಿಸುತ್ತದೆ. ಗಂಭೀರ ಪರಿಸ್ಥಿತಿ ಬಂದರೆ ಜಿಲ್ಲಾಡಳಿತದ ಜೊತೆ ಖಾಸಗಿ ಆಸ್ಪತ್ರೆಗಳು ನಿಲ್ಲುತ್ತವೆ’ ಎಂದು ನರ್ಸಿಂಗ್‌ ಹೋಮ್‌ ಮಾಲೀಕರ ಸಂಘದ ಅಧ್ಯಕ್ಷ ಡಾ.ಕಕ್ಕಿಲಾಯ ಹೇಳಿದರು.

‘ಕೋವಿಡ್‌ ವಾರ್ಡ್‌ ರೂಪಿಸಿದರೆ ಇತರ ರೋಗಿಗಳ ಚಿಕಿತ್ಸೆಗೆ ತೊಂದರೆಯಾಗುತ್ತದೆ. ಈ ಬಗ್ಗೆ ಜಿಲ್ಲಾಡಳಿತ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಈ ಬಗ್ಗೆ ಗೊಂದಲವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT