ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯವಸ್ಥೆಯ ಆಗರವಾದ ಮಂಡ್ಯ ಜಿಲ್ಲಾ ಕ್ರೀಡಾಂಗಣ

ಜಿಲ್ಲೆಯವರೇ ಕ್ರೀಡಾ ಸಚಿವರಾದರೂ ಅಭಿವೃದ್ಧಿ ಇಲ್ಲ; ಕೆ.ಸಿ.ನಾರಾಯಣಗೌಡ ಮಾತಿಗಷ್ಟೇ ಸೀಮಿತ
Last Updated 21 ಫೆಬ್ರುವರಿ 2022, 2:47 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯ ಕೆ.ಸಿ.ನಾರಾಯಣಗೌಡ ಅವರು ಕ್ರೀಡೆ ಮತ್ತು ಯುವಜನ ಸೇವಾ ಇಲಾಖೆ ಸಚಿವರಾಗಿದ್ದಾರೆ. ‘ಜಿಲ್ಲಾ ಕ್ರೀಡಾಂಗಣವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲಾಗುವುದು’ ಎಂದು ಹಲವು ಬಾರಿ ಘೋಷಿಸಿದ್ದಾರೆ. ಆದರೆ, ಅವರ ಘೋಷಣೆ ಮಾತಿಗಷ್ಟೇ ಸೀಮಿತವಾಗಿದ್ದು, ಕ್ರೀಡಾಂಗಣ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ.

ನಗರದ ಹೃದಯಭಾಗದಲ್ಲಿರುವ ಕ್ರೀಡಾಂಗಣ ಕಿಡಿಗೇಡಿಗಳ ತಾಣವಾಗಿದೆ. ಸಂಜೆಯಾಯಿತೆಂದರೆ ಇಲ್ಲಿ ನಡೆಯವ ಅನೈತಿಕ ಚಟುವಟಿ ಕೆಗಳಿಗೆ ಮಿತಿ ಇಲ್ಲ. ಭದ್ರತಾ ಸಿಬ್ಬಂದಿಯೇ ಇಲ್ಲದೆ ನರಳುತ್ತಿರುವ ಕ್ರೀಡಾಂಗಣ ಅವ್ಯವಸ್ಥೆಯ ಆಗರವಾಗಿದೆ.

ಕ್ರೀಡಾಂಗಣದ ಆವರಣದಲ್ಲಿ ಸುಸಜ್ಜಿತ ಶೌಚಾಲಯವಿದ್ದರೂ ಜನ ಬಳಸುತ್ತಿಲ್ಲ. ಕ್ರೀಡಾಂಗಣದ ಮುಖ್ಯ ಕಟ್ಟಡದ ಮಹಡಿಗೆ ತೆರಳುವ ಮೆಟ್ಟಿಲುಗಳ ಕೆಳಭಾಗವನ್ನು ತಾತ್ಕಾಲಿಕ ಶೌಚಾಲಯವನ್ನಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಹೀಗಾಗಿ ಕ್ರೀಡಾಂಗಣ ಪ್ರವೇಶಿಸುತ್ತಿದ್ದಂತೆ ದುರ್ವಾಸನೆ ಬರುತ್ತಿದೆ.

ಕ್ರೀಡಾಂಗಣದಲ್ಲಿ ಯಾವುದೇ ಸರ್ಕಾರಿ ಕಾರ್ಯಕ್ರಮ ಇದ್ದಾಗ ಮಾತ್ರ ಆವರಣವನ್ನು ಸ್ವಚ್ಛ ಮಾಡಲಾಗುತ್ತದೆ. ಶೌಚ ಮಾಡಿರುವ ಸ್ಥಳಗಳನ್ನು ಪೌಡರ್‌ ಹಾಕಿ ವಾಸನೆಯನ್ನು ಮರೆಮಾಚಲಾಗುತ್ತದೆ. ಮುಂಜಾನೆ ಮತ್ತು ಸಂಜೆ ವಿಹಾರಕ್ಕೆ ಬರುವ ಜನರು ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ. ಕ್ರೀಡಾಂಗಣವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವಂತೆ ಹಲವು ಬಾರಿ ಮನವಿ ಕೊಟ್ಟರೂ ಅಧಿಕಾರಿಗಳ ಕಣ್ಣು ತೆರೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಜಿಲ್ಲಾ ಕ್ರೀಡಾಂಗಣದ ಮೆಟ್ಟಿಲುಗಳ ಮೇಲೆ ಕಿಡಿಗೇಡಿಗಳು ಮಲಗಿ ನಿದ್ದೆ ಮಾಡುವುದು ಸಾಮಾನ್ಯವಾಗಿದೆ. ಅಷ್ಟೇ ಅಲ್ಲದೆ ಪೊಟ್ಟಣದಲ್ಲಿ ಆಹಾರ ತಂದು, ತಿಂದು ಅಲ್ಲೇ ಕವರ್‌ ಬಿಸಾಡುವವರ ಸಂಖ್ಯೆ ಹೆಚ್ಚಿದೆ. ಮೆಟ್ಟಿಲುಗಳ ಮೇಲೆ ಬಾಟಲಿಗಳು ಸದಾ ಬಿದ್ದಿರುತ್ತವೆ. ಕ್ರೀಡಾಂಗಣದ ರಕ್ಷಣೆಗಾಗಿ ಸಿಬ್ಬಂದಿ ನೇಮಕವಾಗದ ಕಾರಣ ಕಿಡಿಗೇಡಿಗಳಿಗೆ ಹೇಳುವವರು, ಕೇಳುವವರು ಇಲ್ಲವಾಗಿದ್ದಾರೆ.

ವಿದ್ಯಾರ್ಥಿಗಳು ಕ್ರೀಡಾಂಗಣದ ಆವರಣಕ್ಕೆ ಬಂದು ಜನ್ಮದಿನ ಪಾರ್ಟಿ ಮಾಡುತ್ತಾರೆ. ಕೇಕ್‌ ಕವರ್‌, ಪೇಪರ್ ಪ್ಲೇಟ್ ಮುಂತಾದ ತ್ಯಾಜ್ಯವನ್ನು ಅಲ್ಲೇ ಬಿಸಾಡಿ ತೆರಳುತ್ತಾರೆ. ಇದಲ್ಲದೆ ಬೀಡಿ, ಸಿಗರೇಟ್‌ ತುಂಡುಗಳು ಎಲ್ಲೆಡೆ ಬಿದ್ದರುವುದನ್ನು ಕಾಣಬಹುದು.

ಭೂತಬಂಗಲೆ: ಕ್ರೀಡಾಂಗಣದ ಆವರಣದಲ್ಲಿರುವ ವ್ಯಾಯಾಮ ಶಾಲೆ ಭೂತಬಂಗಲೆಯಂತಿದೆ. ಹಾಳಾಗಿರುವ ಜಿಮ್‌ ಉಪಕರಣಗಳಲ್ಲಿ ವ್ಯಾಯಾಮ ಮಾಡಲು ಯುವಕರು ಮುಂದಾಗುತ್ತಿಲ್ಲ.

ಜಿಮ್‌ ಎರಡು ಮಹಡಿ ಹೊಂದಿದ್ದು, ಕೆಳ ಮಹಡಿಯಲ್ಲಿ ಜಿಮ್‌ ಇದೆ. ಮೇಲ್ಮಹಡಿಯಲ್ಲಿ ಯೋಗ ತರಗತಿಗಾಗಿ ಜಾಗ ನೀಡಲಾಗಿದೆ. ಅಲ್ಲಿ ಯಾವುದೇ ಸೌಲಭ್ಯಗಳು ಇಲ್ಲದ ಕಾರಣ ಯೋಗಕ್ಕೂ ಜನರು ಬರುತ್ತಿಲ್ಲ. ಜಿಮ್‌ ಬಾಗಿಲು ಸದಾ ತೆರೆದುಕೊಂಡಿರುತ್ತದೆ. ಕೋಚ್‌ಗಳೂ ಇಲ್ಲದ ಕಾರಣ ಅದು ಇದ್ದೂ ಇಲ್ಲದಂತಾಗಿದೆ. ಹಲವು ಉಪಕರಣಗಳು ಕಳ್ಳರ ಪಾಲಾಗಿವೆ.

ಕತ್ತಲಾಗುತ್ತಿದ್ದಂತೆ ಕ್ರೀಡಾಂಗಣ ಮದ್ಯಪಾನ ಮಾಡಲು ಬಳಸುವ ಜಾಗವಾಗಿ ಮಾರ್ಪಟ್ಟಿದ್ದು, ಅಲ್ಲಲ್ಲಿ ಖಾಲಿ ಬಾಟಲಿ, ಪ್ಯಾಕೆಟ್‌ಗಳು ಬಿದ್ದಿರುತ್ತವೆ. ಕ್ರೀಡಾಂಗಣ ಸುತ್ತಿದರೆ ಇಂಥ ಹಲವು ಅವ್ಯವಸ್ಥೆಗಳು ಕಾಣುತ್ತವೆ. ಕ್ರೀಡಾಂಗಣ ನಿರ್ವಹಣೆಗೆ ವಾರ್ಷಿಕವಾಗಿ ಲಕ್ಷ ಲಕ್ಷ ಹಣ ಇದ್ದರೂ, ಸರಿಯಾದ ನಿರ್ವಹಣೆ ಇಲ್ಲದಿರುವುದು ಕಣ್ಣಿಗೆ ರಾಚುತ್ತದೆ. ರಾಷ್ಟ್ರೀಯ ಹಬ್ಬಗಳಾದ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಕರ್ನಾಟಕ ರಾಜ್ಯೋತ್ಸವ ಸಂದರ್ಭಗಳಲ್ಲಿ ಕ್ರೀಡಾಂಗಣ ಸ್ವಚ್ಛತೆ ಮಾಡಲಾಗುತ್ತಿದೆ.ನಂತರದ ದಿನಗಳಲ್ಲಿ ಅದೇ ರಾಗ ಅದೇ ಹಾಡು ಎಂಬಂತಾಗಿದೆ.

ಕೋರ್ಟ್‌ಗಳ ನಿರ್ವಹಣೆ ಇಲ್ಲ: ಎತ್ತರ ಜಿಗಿತ, ಉದ್ದ ಜಿಗಿತ, ಷಾಟ್‌ಪಟ್‌ ಸೇರಿದಂತೆ ವಿವಿಧ ಆಟೋಟಗಳಿಗೆ ಇರುವ ಕೋರ್ಟ್‌ಗಳು ಸರಿಯಾದ ನಿರ್ವಹಣೆ ಇಲ್ಲದೆ ಅಭ್ಯಾಸಕ್ಕೆ ತೊಡಕುಂಟಾಗುತ್ತಿದೆ. ಬೇರೆ ದಾರಿ ಇಲ್ಲದೆ ಕ್ರೀಡಾಪಟುಗಳು ಇರುವ ಜಾಗದಲ್ಲೇ ಅಭ್ಯಾಸ ಮಾಡುತ್ತಿದ್ದಾರೆ. ಇರುವ ಆವರಣದ ಸದ್ಬಳಕೆ ಮಾಡಿಕೊಳ್ಳದ ಕಾರಣ ಕ್ರೀಡಾಪಟುಗಳಿಗೆ ತೊಂದರೆಯಾಗಿದೆ.

‘ಉದ್ಗ ಜಿಗಿತ ಕೋರ್ಟ್‌ ಸಮರ್ಪಕವಾಗಿ ಸರಿಪಡಿಸುವಂತೆ ಕ್ರೀಡಾ ಇಲಾಖೆ ಅಧಿಕಾರಿಗೆ ಮನವಿ ಮಾಡಿ ವರ್ಷವಾಗಿದೆ. ಇಲ್ಲಿಯವರೆಗೂ ಅದನ್ನು ಸರಿಪಡಿಸಿಲ್ಲ. ಉದ್ದ ಜಿಗಿತ ತರಬೇತಿಗೆ ನಮ್ಮ ಮಗಳನ್ನು ಮೈಸೂರಿಗೆ ಸೇರಿಸಿದ್ದೇವೆ. ಇಲ್ಲೇ ಒಂದು ಕೋರ್ಟ್‌ ಇದ್ದರೆ ಅನುಕೂಲವಾಗುತ್ತಿತ್ತು. ಮಂಡ್ಯದ ಕ್ರೀಡಾಧಿಕಾರಿಗೆ ಕ್ರಿಡೆಯ ಮೇಲೆ ಯಾವ ಆಸಕ್ತಿಯೂ ಇಲ್ಲ’ ಎಂದು ಪೋಷಕರಾದ ಮೊಹಮ್ಮದ್‌ ಇಮಾಮ್‌ ಆಕ್ರೋಶ ವ್ಯಕ್ತಪಡಿಸಿದರು.

₹ 10 ಕೋಟಿ ಏನಾಯಿತು: ಕಳೆದ ವರ್ಷ ಬಜೆಟ್‌ನಲ್ಲಿ ಜಿಲ್ಲಾ ಕ್ರೀಡಾಂಗಣದ ಸಮಗ್ರ ಅಭಿವೃದ್ಧಿಗಾಗಿ ₹ 10 ಕೋಟಿ ಹಣ ಘೋಷಣೆ ಮಾಡಲಾಗಿತ್ತು. ಕೊರತೆಗಳ ನಡುವೆ ನರಳುತ್ತಿದ್ದ ಕ್ರೀಡಾಂಗಣಕ್ಕೆ ಹೊಸ ರೂಪ ನೀಡಲಾಗುತ್ತದೆ ಎಂದೇ ನಿರೀಕ್ಷಿಸಲಾಗಿತ್ತು. ಹಣ ಬಿಡುಗಡೆಯಾಗಿ ವರ್ಷ ಕಳೆದರೂ ಕ್ರೀಡಾಂಗಣದ ಅಭಿವೃದ್ಧಿ ಕಾಣುತ್ತಿಲ್ಲ. ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಾಣ, ಕ್ರೀಡಾ ಸಂಕೀರ್ಣ ನಿರ್ಮಿಸಲಾಗುವುದು ಎಂದು ಸಚಿವರು, ಅಧಿಕಾರಿಗಳು ತಿಳಿಸಿದ್ದರು. ಈಗ ಯಾವುದೇ ಕೆಲಸಗಳು ಆಗದಿರುವ ಕಾರಣ ಆ ₹ 10 ಕೋಟಿ ಹಣ ಏನಾಯಿತು ಎಂಬ ಪ್ರಶ್ನೆ ಮೂಡಿದೆ.

‘ಈ ಕುರಿತು ಕ್ರೀಡಾ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು. ಜಿಲ್ಲಾ ಕ್ರೀಡಾಂಗಣಕ್ಕೆ ಸೌಲಭ್ಯ ಒದಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಸ್‌.ಅಶ್ವತಿ ತಿಳಿಸಿದರು.

ಕ್ರೀಡಾ ವಿಜ್ಞಾನ ಕೇಂದ್ರ ಎಲ್ಲಿದೆ?

ಬೆಂಗಳೂರಿನ ಕಂಠೀರವ ಕ್ರೀಡಾಂಗಣದ ಮಾದರಿಯಲ್ಲೇ ಜಿಲ್ಲೆಯಲ್ಲೂ ಕ್ರೀಡಾ ವಿಜ್ಞಾನ ಕೇಂದ್ರವನ್ನು ಸಚಿವ ಕೆ.ಸಿ.ನಾರಾಯಣಗೌಡ ಈಗಾಗಲೇ ಉದ್ಘಾಟನೆ ನೆರವೇರಿಸಿದ್ದಾರೆ. ಆದರೆ, ವಿಜ್ಞಾನ ಕೇಂದ್ರ ಎಲ್ಲಿದೆ ಎಂಬುದು ಹುಡುಕಿದರೂ ಸಿಗುವುದಿಲ್ಲ.

ಕ್ರೀಡಾಪಟುಗಳನ್ನು ಟೂರ್ನಮೆಂಟ್‌ಗಳಿಗೆ ಸಿದ್ಧಗೊಳಿಸಲು ಅವಶ್ಯಕವಾದ ಕೌಶಲ ತರಬೇತಿ ನೀಡುವ ಉದ್ದೇಶದಿಂದ ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಕ್ರೀಡಾಳುಗಳ ದೈಹಿಕ ಸದೃಢತೆಯನ್ನು ಪರೀಕ್ಷಿಸುವ ಹತ್ತಾರು ಯಂತ್ರಗಳನ್ನು ತರಿಸಲಾಗಿದೆ. ಅದಕ್ಕಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ. ಆದರೆ, ಯಾವ ಯಂತ್ರಗಳೂ ಕ್ರೀಡಾಪಟುಗಳ ಬಳಕೆಗೆ ದೊರೆಯದಿರುವುದು ಅನುಮಾನಕ್ಕೆ ಕಾರಣವಾಗಿದೆ.

ತಂದಿರುವ ಯಂತ್ರಗಳನ್ನು ಒಳಾಂಗಣ ಕ್ರೀಡಾಂಗಣದಲ್ಲಿ ಇರಿಸಲಾಗಿದೆ. ಯಂತ್ರಗಳ ಮೇಲಿನ ಕವರ್‌ ಕೂಡ ತರೆದಿಲ್ಲ. ಅದಕ್ಕೆ ಬೇಕಾದ ಕಟ್ಟಡವನ್ನೂ ನಿಗದಿ ಮಾಡಿಲ್ಲ. ಕೇಂದ್ರ ನಡೆಸಲು ಬೇಕಾದ ಮೂಲಸೌಲಭ್ಯವೂ ಇಲ್ಲ. ನಡೆಸಲು ಅವಶ್ಯವಿರುವ ತಾಂತ್ರಿಕ ಸಿಬ್ಬಂದಿ, ತರಬೇತುದಾರರನ್ನೂ ನೇಮಕ ಮಾಡಿಕೊಂಡಿಲ್ಲ. ತರಾತುರಿಯಲ್ಲಿ ಉದ್ಘಾಟನೆ ಮಾಡಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರ ಇಲ್ಲವಾಗಿದೆ.

ಬಾಲಕಿಯರ ಹಾಸ್ಟೆಲ್‌ ಸ್ಥಳ ಬದಲಾವಣೆ

ಜಿಲ್ಲಾ ಕ್ರೀಡಾಂಣದ ಆವರಣದಲ್ಲಿ ಈಗಿರುವ ಹಾಸ್ಟೆಲ್‌ ಪಕ್ಕದಲ್ಲೇ ಬಾಲಕಿಯರಿಗಾಗಿ ಪ್ರತ್ಯೇಕ ಹಾಸ್ಟೆಲ್‌ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಅದಕ್ಕಾಗಿ ಭೂಮಿಪೂಜೆಯನ್ನೂ ನೆರವೇರಿಸಲಾಗಿತ್ತು. ಆದರೆ ಏಕಾಏಕಿ ಅದರ ಸ್ಥಳವನ್ನು ಬದಲಾವಣೆ ಮಾಡಿ ಒಳಾಂಗಣ ಕ್ರೀಡಾಂಗಣದ ಪಕ್ಕಕ್ಕೆ ಬದಲಾವಣೆ ಮಾಡಲಾಗಿದೆ.

ಒಂದೇ ಆವರಣದಲ್ಲಿ ಹಾಸ್ಟೆಲ್‌ ಇದ್ದಿದ್ದರೆ ಒಂದೇ ಮೆಸ್‌ನಲ್ಲಿ ಎರಡೂ ಹಾಸ್ಟೆಲ್‌ಗೆ ಊಟದ ಸೌಲಭ್ಯ ಒದಗಿಸಬಹುದಾಗಿತ್ತು. ಪ್ರತ್ಯೇಕ ಸಿಬ್ಬಂದಿಯ ಅವಶ್ಯಕತೆಯೂ ಇರುತ್ತಿರಲಿಲ್ಲ. ಆದರೆ, ಪ್ರತ್ಯೇಕ ಹಾಸ್ಟೆಲ್‌ ನಿರ್ಮಿಸುತ್ತಿರುವ ಕಾರಣ ಪ್ರತ್ಯೇಕ ಮೆಸ್‌, ಪ್ರತ್ಯೇಕ ಸಿಬ್ಬಂದಿಯ ನೇಮಕಾತಿ ನಡೆಯಬೇಕಾಗಿದೆ. ಇದು ಕ್ರೀಡಾಸಕ್ತರ ವಿರೋಧಕ್ಕೆ ಕಾರಣವಾಗಿದೆ.

ಈಜುಕೊಳ ನಿರ್ಮಾಣ ಯಾವಾಗ?

ಮಂಡ್ಯ ಜಿಲ್ಲೆಯಲ್ಲಿ ಎಲ್ಲೂ ಸುಸಜ್ಜಿತ ಈಜುಕೊಳವಿಲ್ಲ. ಈಜು ಆಸಕ್ತರು ಖಾಸಗಿ ಈಜುಕೊಳಕ್ಕೆ ತೆರಳಿ ಅಪಾರ ಹಣ ನೀಡಿ ತರಬೇತಿ ಪಡೆಯಬೇಕಾಗಿದೆ. ಸರ್ಕಾರದ ವತಿಯಿಂದ ಸುಸಜ್ಜಿತ ಈಜುಕೊಳ ನಿರ್ಮಿಸಬೇಕು ಎಂಬ ಒತ್ತಾಯ ಹಲವು ವರ್ಷಗಳಿಂದ ಇದ್ದರೂ ಅವರ ಬೇಡಿಕೆ ಈಡೇರಿಲ್ಲ.

ಅಭಯಚಂದ್ರ ಜೈನ್‌ ಅವರು ಕ್ರೀಡಾ ಸಚಿವರಾಗಿದ್ದಾಗ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಸುಸಜ್ಜಿತ ಈಜುಕೊಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಅವರೇ ಸ್ವತಃ ಕ್ರೀಡಾಂಗಣಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದರು. ಆದರೆ, ಸರ್ಕಾರ ಬದಲಾದ ಕಾರಣ ಆ ಯೋಜನೆಗೆ ನನೆಗುದಿಗೆ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT