ಮನೆ ತೆರವಿಗೆ ಆಗ್ರಹಿಸಿ ಪ್ರತಿಭಟನೆ

6
ಕಸಾಯಿಖಾನೆ ಜಾಗ ಅತಿಕ್ರಮಣ: ಆಕ್ರೋಶ

ಮನೆ ತೆರವಿಗೆ ಆಗ್ರಹಿಸಿ ಪ್ರತಿಭಟನೆ

Published:
Updated:
Deccan Herald

ಶ್ರೀರಂಗಪಟ್ಟಣ: ಪಟ್ಟಣದ ಕಾವೇರಿಪುರ ಬಡಾವಣೆಯಲ್ಲಿ, ಕಸಾಯಿಖಾನೆ ಇದ್ದ ಜಾಗದಲ್ಲಿ ವ್ಯಕ್ತಿಯೊಬ್ಬರು ಮನೆ ನಿರ್ಮಿಸಿಕೊಂಡಿದ್ದು, ಅದನ್ನು ತೆರವು ಮಾಡಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ನಿವಾಸಿಗಳು ಬುಧವಾರ ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸುಮಾರು ಅರ್ಧ ತಾಸು ಪ್ರತಿಭಟನೆ ನಡೆಯಿತು. ಸಾರ್ವಜನಿಕ ಆಸ್ತಿ ಅತಿಕ್ರಮಕ್ಕೆ ಅಧಿಕಾರಿಗಳು ಬೆಂಬಲ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ನಿರುಪಯುಕ್ತವಾಗಿದ್ದ ಕಸಾಯಿಖಾನೆಯ ಸ್ಥಳದಲ್ಲಿ ಸಮುದಾಯ ಭವನ ನಿರ್ಮಿಸುವಂತೆ 2012ರಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ವಿಷಯ ಪುರಸಭೆಯಲ್ಲಿ ನಡೆದ ಸಭೆಯ ನಡಾವಳಿ ಪುಸ್ತಕದಲ್ಲಿ ಕೂಡ ದಾಖಲಾಗಿದೆ. ಆ ಜಾಗವನ್ನು ಅತಿಕ್ರಮಣಕಾರರಿಂದ ತೆರವು ಮಾಡಿಸಿ ಪುರಸಭೆಯ ಆಸ್ತಿಯಾಗಿ ಉಳಿಸಿಕೊಳ್ಳಬೇಕು ಎಂದು 2016ರಲ್ಲಿ ಪ್ರತಿಭಟನೆಯೂ ನಡೆದಿದೆ. ಆದರೂ ಅಂದಿನ ಪುರಸಭೆ ಅಧಿಕಾರಿ ಮತ್ತು ಸಿಬ್ಬಂದಿ ಸೇರಿ ವ್ಯಕ್ತಿಯೊಬ್ಬರಿಗೆ ಸರ್ಕಾರದ ಜಾಗವನ್ನು ಖಾತೆ ಮಾಡಿಕೊಟ್ಟಿದ್ದಾರೆ ಎಂದು ಮುಖಂಡ ಮಹದೇವನಾಯಕ ದೂರಿದರು.

‘ಹಲವು ಲಕ್ಷ ರೂಪಾಯಿ ಬೆಲೆ ಬಾಳುವ ಕಸಾಯಿಖಾನೆ ಜಾಗ ಅತಿಕ್ರಮದ ಬಗ್ಗೆ ಚಿಂತಿಸದ ಪುರಸಭೆ ಅಧಿಕಾರಿಗಳು ತಮ್ಮ ತಮ್ಮ ಮನೆಗಳ ಪಕ್ಕದಲ್ಲಿ ಶೌಚಾಲಯ ನಿರ್ಮಿಸಿಕೊಂಡಿರುವ ಜನರಿಗೆ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ’ ಎಂದು ಕೆಳದಿ ಚೆನ್ನಮ್ಮ ನಾಯಕರ ಮಹಿಳಾ ಸಂಘದ ಅಧ್ಯಕ್ಷೆ ರೇಣುಕಾ ಅಸಮಾಧಾನ ವ್ಯಕ್ತಪಡಿಸಿದರು.

ಮನವಿ ಸ್ವೀಕರಿಸಿದ ಪುರಸಭೆ ಮುಖ್ಯಾಧಿಕಾರಿ ಕೃಷ್ಣ, ‘ಕಸಾಯಿಖಾನೆಗೆ ಸೇರಿದ್ದ ಜಾಗ ಖಾತೆ ಮಾಡಿದಾಗ ಸುಮ್ಮನಿದ್ದ ಸ್ಥಳೀಯರು ಈಗ ಆ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಮೂಲ ಕಡತಗಳನ್ನು ಪರಿಶೀಲಿಸಿ ಕ್ರಮ ವಹಿಸಲಾಗುವುದು. ರಸ್ತೆ ಮತ್ತು ಚರಂಡಿ ಜಾಗದಲ್ಲಿ ನಿರ್ಮಿಸುತ್ತಿರುವ ಶೌಚಾಲಯಗಳನ್ನು ತೆರವು ಮಾಡಿಸಲಾಗುವುದು’ ಎಂದು ತಿಳಿಸಿದರು.

ಪುರಸಭೆ ಸದಸ್ಯ ಬಿ. ಮಂಜುಸ್ವಾಮಿ, ಮುಖಂಡರಾದ ಜಯಕುಮಾರ್‌, ಲೋಕೇಶ್‌, ನಾರಾಯಣಸ್ವಾಮಿ, ರೂಪಶ್ರೀ, ಪಿ.ಶಶಿಕಲಾ, ವಿ.ಕುಮಾರ್‌, ಎಂ.ರವಿ, ಶಕ್ತಿಪ್ರಸಾದ್‌ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !