ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರಾದ ಬಳಿಕ ರೈತರಿಗೆ ಧ್ವನಿಯಾಗದ ದರ್ಶನ್‌: ರೈತ ಸಂಘ ಆಕ್ರೋಶ

ಸ್ವಾತಂತ್ರ್ಯೋತ್ಸವಕ್ಕೆ ಗೈರು, ರೈತಸಂಘ– ಪಕ್ಷದ ಚಟುವಟಿಕೆಗಳಿಂದಲೂ ದೂರ
Published 16 ಆಗಸ್ಟ್ 2023, 3:56 IST
Last Updated 16 ಆಗಸ್ಟ್ 2023, 3:56 IST
ಅಕ್ಷರ ಗಾತ್ರ

ಮಂಡ್ಯ: ರೈತ ಸಮುದಾಯದ ಏಕೈಕ ಧ್ವನಿಯಾಗಿ ವಿಧಾನಸೌಧದ ಮೆಟ್ಟಿಲು ಏರಿರುವ ದರ್ಶನ್ ಪುಟ್ಟಣ್ಣಯ್ಯ ಅವರ ಕಾರ್ಯವೈಖರಿ ಬಗ್ಗೆ ರೈತರಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ಅವರು ಚುನಾವಣೆಯಲ್ಲಿ ಗೆದ್ದ ನಂತರ ರೈತರ ಸಮಸ್ಯೆಗಳಿಗೆ‌‌ ಸ್ಪಂದಿಸದಿರುವುದು, ಫೋನ್‌ ಕರೆ ಸ್ವೀಕರಿಸದಿರುವುದು, ರೈತಪರ ಚಟುವಟಿಕೆಗಳಲ್ಲಿ, ಹೋರಾಟಗಳಲ್ಲಿ ಪಾಲ್ಗೊಳ್ಳದಿರುವುದು ರೈತರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ.

ಶಾಸಕರಾಗಿ ಆಯ್ಕೆಯಾದ ನಂತರ ನಡೆದ ಮೊದಲ ಸ್ವಾತಂತ್ರ್ಯ ದಿನಾಚರಣೆಗೆ ದರ್ಶನ್ ಗೈರಾಗಿದ್ದಕ್ಕೆ ಸಾರ್ವಜನಿಕರು‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಅವರ ನಡೆಯನ್ನು ವಿರೋಧಿಸಿದ್ದಾರೆ. ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಳ್ಳಬೇಕಾದ ಶಾಸಕರು ಅಮೆರಿಕದಲ್ಲಿ‌ ಏನು ಮಾಡುತ್ತಿದ್ದಾರೆ‌ ಎಂದು ಪ್ರಶ್ನಿಸಿದ್ದಾರೆ.

ಚುನಾವಣೆಯಲ್ಲಿ ಗೆದ್ದ ಕೆಲವೇ ದಿನಗಳಲ್ಲಿ ಅವರು ಅಮೆರಿಕಕ್ಕೆ ತೆರಳಿದ್ದರು. ಆಗ ಜನರು‌ ಪ್ರಶ್ನೆ ಮಾಡಿದ್ದಕ್ಕೆ, ಮಡದಿ, ಮಕ್ಕಳನ್ನು ನೋಡಿ ಬರಲು‌ ತೆರಳಿರುವುದಾಗಿ ತಿಳಿಸಿದ್ದರು. ಸ್ವಾತಂತ್ರ್ಯ ದಿನಾಚರಣೆ ವೇಳೆ‌ ಅಮೆರಿಕಕ್ಕೆ ತೆರಳಿವುದನ್ನೂ ಜನ ಪ್ರಶ್ನಿಸಿದ್ದಾರೆ, ಇದಕ್ಕೆ‌ ದರ್ಶನ್ ಪುಟ್ಟಣ್ಣಯ್ಯ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ಚುವಾವಣೆಗೂ ಮೊದಲು ತಮ್ಮ ಅಮೆರಿಕ‌ ವಾಸ, ಪೌರತ್ವ ಹಾಗೂ ವಹಿವಾಟಿನ ಬಗ್ಗೆ ಹಲವು ಬಾರಿ‌ ಸ್ಪಷ್ಟನೆ ನೀಡಿದ್ದರು. 'ಅಮೆರಿಕದಲ್ಲಿ‌ ಕಂಪನಿ ಮಾರಾಟ‌ ಮಾಡಿದ್ದು ಗೆದ್ದನಂತರ ವಿದೇಶಕ್ಕೆ ತೆರಳುವುದಿಲ್ಲ, ಕ್ಷೇತ್ರದಲ್ಲೇ ಉಳಿಯುತ್ತೇನೆ' ಎಂದು‌ ಮಾತು ಕೊಟ್ಟಿದ್ದರು. ಆದರೆ ದರ್ಶನ್ ಪುಟ್ಟಣ್ಣಯ್ಯ ‌ಮತ್ತೆ ಮತ್ತೆ ಮಾತು‌ ಮುರಿಯುತ್ತಿದ್ದು ಬೆಂಬಲಿಗರಲ್ಲಿ ಅನುಮಾನ ಮೂಡಿಸಿದೆ.

‘ಚುನಾವಣೆ ವೇಳೆ ದರ್ಶನ್‌ಗಾಗಿ ಜೆಡಿಎಸ್‌ ಮುಖಂಡರೊಂದಿಗೆ ಜಗಳ ಮಾಡಿಕೊಂಡಿದ್ದೇವೆ. ಶಾಸಕರು ನಮ್ಮ ಕರೆಯನ್ನೇ ಸ್ವೀಕಾರ ಮಾಡುತ್ತಿಲ್ಲ, ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ. ಕೆ.ಎಸ್‌.ಪುಟ್ಟಣ್ಣಯ್ಯ ನಂತರ ದರ್ಶನ್‌ ಅವರು ತಂದೆ ಹಾದಿಯಲ್ಲೇ ನಡೆಯುತ್ತಾರೆ ಎಂದು ನಿರೀಕ್ಷೆ ಮಾಡಿದ್ದೆವು. ಆದರೆ ಅದು ಸಳ್ಳೇ ಎಂಬ ಪ್ರಶ್ನೆ ಕಾಡುತ್ತಿದೆ’ ಎಂದು ರೈಸಂಘದ ಸದಸ್ಯರೊಬ್ಬರು ಬೇಸರ ವ್ಯಕ್ತಪಡಿಸಿದರು.

ಚಟುವಟಿಕೆಯಿಂದಲೂ ದೂರ: ರೈತಸಂಘ, ಕರ್ನಾಟಕ ಸರ್ವೋದಯ ಪಕ್ಷದ ಚಟುವಟಿಕೆಯಿಂದಲೂ ದರ್ಶನ್‌ ದೂರ ಉಳಿದಿರುವುದಕ್ಕೆ ಹಿರಿಯ ಮುಖಂಡರಿದಲೂ ಅಸಮಾಧಾನ ವ್ಯಕ್ತವಾಗಿದೆ. ಆ.12ರಂದು ಬೆಂಗಳೂರಿನಲ್ಲಿ ನಡೆದ ಸರ್ವೋದಯ ಕರ್ನಾಟಕ ಪಕ್ಷದ ಸಭೆಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಗೈರಾಗಿದ್ದರು. ಇದಕ್ಕೆ ಪಕ್ಷದ ಮುಖಂಡರು ಬೇಸರವ್ಯಕ್ತಪಡಿಸಿದ್ದರು.

ಕಬ್ಬು ಮತ್ತು ಹಾಲಿಗೆ ವೈಜ್ಞಾನಿಕ ದರ ನಿಗದಿಗೆ ಒತ್ತಾಯಿಸಿ ನಗರದಲ್ಲಿ ಈಚೆಗೆ ನಡೆದ ಹೋರಾಟದ ವೇಳೆಯಲ್ಲೂ ದರ್ಶನ್‌ ಗೈರಾಗಿದ್ದರು. ಕ್ಷೇತ್ರದಲ್ಲೇ ಇದ್ದರೂ ಅವರು ಹೋರಾಟಕ್ಕೆ ಬರಲಿಲ್ಲ. ಇದಕ್ಕೆ ರೈತಸಂಘದ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದರು. ದರ್ಶನ್ ಪುಟ್ಟಣ್ಣಯ್ಯ ಶಾಸಕರಾದ ಮೇಲೆ ರೈತ ಸಂಘದ ಹಿರಿಯ ಮುಖಂಡರ ಜೊತೆ ಸರಿಯಾಗಿ ಸಂಪರ್ಕವಿಟ್ಟುಕೊಂಡಿಲ್ಲ. ಅವರ ಮೊಬೈಲ್ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂಬ ಅಸಮಾಧಾನ ಹಲವರಲ್ಲಿದೆ.

‘ದರ್ಶನ್‌ ಪುಟ್ಟಣ್ಣಯ್ಯ ಅವರ ಕಾರ್ಯವೈಖರಿ ಕುರಿತಂತೆ ರೈತ ಮುಖಂಡರಲ್ಲಿ ಅಸಮಾಧಾನ ಇರುವುದು ಸತ್ಯ. ರೈತಸಂಘ, ಕರ್ನಾಟಕ ಸರ್ವೋದಯ ಪಕ್ಷ ತಾಯಿಬೇರು ಇದ್ದಂತೆ, ಸಂಘ, ಪಕ್ಷದ ಚಟುವಟಿಕೆಯಲ್ಲಿ ತಪ್ಪದೇ ಪಾಲ್ಗೊಳ್ಳಬೇಕು. ಕೆ.ಎಸ್‌.ಪುಟ್ಟಣ್ಣಯ್ಯ ಅವರ ಹಾದಿಯಲ್ಲೇ ನಡೆಯಬೇಕು ಎಂಬ ಸಲಹೆಯನ್ನೂ ನೀಡಿದ್ದೇವೆ. ಇನ್ನೂ ಕಾಯುತ್ತೇವೆ, ಶಾಸಕರು ನಮ್ಮ ಜೊತೆ ಹೆಜ್ಜೆ ಹಾಕಬೇಕು’ ಎಂದು ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕೆಂಪೂಗೌಡ ಮನವಿ ಮಾಡಿದರು.

ಚಿಕ್ಕಪ್ಪನ ಮಗನಿಗೆ ಉಸ್ತುವಾರಿ
ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರು ತಮ್ಮ ಚಿಕ್ಕಪ್ಪನ ಮಗನಿಗೆ (ಕೆ.ಎಸ್‌.ಪುಟ್ಟಣ್ಣಯ್ಯ ಅವರ ತಮ್ಮನ ಮಗ) ಕ್ಷೇತ್ರದ ಉಸ್ತುವಾರಿ ನೀಡಿರುವುದು ರೈತಸಂಘದ ಮುಖಂಡರಲ್ಲಿ ಅಸಮಾಧಾನ ತರಿಸಿದೆ. ಅವರ ಚಿಕ್ಕಪ್ಪನ ಮಗ ಕೂಡ ರೈತರಿಗೆ ಸ್ಪಂದಿಸುತ್ತಿಲ್ಲ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಅನಾರೋಗ್ಯ ಸಮಸ್ಯೆಯಿಂದ ದರ್ಶನ್‌ ಅಮೆರಿಕಕ್ಕೆ ತೆರಳಿದ್ದರು. ಸ್ವಾತಂತ್ರ್ಯೋತ್ಸವಕ್ಕೆ ಬರುವುದಕ್ಕೆ ಸಿದ್ಧರಾಗಿದ್ದರು ಆದರೆ ವಿಮಾನ ಸಿಗದ ಕಾರಣ ಬರಲು ಸಾಧ್ಯವಾಗಲಿಲ್ಲ. ಶೀಘ್ರ ಬರುತ್ತಾರೆ ರೈತಸಂಘದ ಮುಖಂಡರ ಅಸಮಾಧಾನದ ಬಗ್ಗೆ ದರ್ಶನ್‌ ಪುಟ್ಟಣ್ಣಯ್ಯ ಅವರನ್ನೇ ಕೇಳಿ’ ಎಂದು ದರ್ಶನ್‌ ತಾಯಿ ಸುನೀತಾ ಪುಟ್ಟಣ್ಣಯ್ಯ ಹೇಳಿದರು. ದರ್ಶನ್‌ ಪುಟ್ಟಣ್ಣಯ್ಯ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT