ಭಾನುವಾರ, ಏಪ್ರಿಲ್ 18, 2021
32 °C
ಮೊರಾರ್ಜಿ ವಸತಿ ಶಾಲೆ ಮಕ್ಕಳಿಗೆ ಕೋವಿಡ್‌: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ

ಮನೆಗೆ ತೆರಳಿದ ವಸತಿ ಶಾಲೆ ವಿದ್ಯಾರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಶ್ರೀರಂಗಪಟ್ಟಣ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 22 ವಿದ್ಯಾ ರ್ಥಿಗಳಿಗೆ ಕೋವಿಡ್‌– 19 ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯ ವಸತಿ ಶಾಲೆಗಳ ಅಂಗಳದಲ್ಲಿ ಆತಂಕ ಮನೆ ಮಾಡಿದೆ. 9ನೇ ತರಗತಿವರೆಗೆ ರಾಜ್ಯ ಸರ್ಕಾರ ರಜೆ ಘೋಷಿಸಿರುವ ಕಾರಣ ಎಲ್ಲಾ ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ.

ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ 9ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದೆ. 10ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಮುಗಿಯುವ ವರೆಗೂ ವಸತಿ ಶಾಲೆಗಳಲ್ಲೇ ಉಳಿ ಯಲಿದ್ದು, ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಶ್ರೀರಂಗಪಟ್ಟಣ ವಸತಿ ಶಾಲೆಯಲ್ಲಿ ಕೋವಿಡ್‌ ಪ್ರಕರಣ ಪತ್ತೆಯಾದ ನಂತರ ಇಡೀ ಆವರಣವನ್ನು ಕಂಟೈನ್‌ಮೆಂಟ್‌ ವಲಯ ಎಂದು ಘೋಷಣೆ ಮಾಡಲಾಗಿದೆ.

ಶಾಲೆಯ ಎಲ್ಲಾ ಮಕ್ಕಳ ಕೋವಿಡ್‌ ಪರೀಕ್ಷಾ ವರದಿ ಕೈಸೇರಿದ್ದು 22 ಮಕ್ಕಳನ್ನು ಹೊರತುಪಡಿಸಿ ಎಲ್ಲರಿಗೂ ನೆಗೆಟಿವ್‌ ಬಂದಿದೆ. ಆದರೂ ಮಕ್ಕಳನ್ನು ಶಾಲೆಯಲ್ಲೇ ಉಳಿಸಿಕೊಂಡು ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ನಂತರ 9ನೇ ತರಗತಿವರೆಗಿನ ಮಕ್ಕಳನ್ನು ಮನೆಗೆ ಕಳುಹಿಸಲಾಗುತ್ತದೆ. ತಾಲ್ಲೂಕು ಆಡಳಿತ, ಶಿಕ್ಷಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ.

ಜಿಲ್ಲೆಯಲ್ಲಿ 37 ವಸತಿ ಶಾಲೆಗಳಿವೆ. ಅವುಗಳಲ್ಲಿ ಸಮಾಜ ಕಲ್ಯಾಣ ಇಲಾಖೆ ಯಿಂದ 26, ಹಿಂದುಳಿದ ವರ್ಗಗಳ ಇಲಾಖೆಯಿಂದ 11 ಶಾಲೆಗಳಿವೆ. 2 ಅಲ್ಪಸಂಖ್ಯಾತರ ಶಾಲೆಗಳಿವೆ. ಸರ್ಕಾರದ ನಿರ್ದೇಶನದಂತೆ ಎಸ್ಸೆಸ್ಸೆಲ್ಸಿ ಮಕ್ಕಳ ಸುರಕ್ಷತೆಗೆ ಆದ್ಯತೆ ವಹಿಸಲಾಗಿದೆ. ಶಾಲೆಗೆ ಪೋಷಕರ ಭೇಟಿ, ಮಕ್ಕಳನ್ನು ಹೊರ ಕಳುಹಿಸುವ ಬಗ್ಗೆ ಕಟ್ಟುನಿಟ್ಟಿನ ಕ್ರಮ ಅನುಸರಿಸಲಾಗುತ್ತಿದೆ.

‘ಮಕ್ಕಳು ಪಡಿತರ ಅಕ್ಕಿ ಪಡೆಯಲು ಬೆರಳಚ್ಚು ನೀಡಲು ಊರಿಗೆ ತೆರಳಿದ್ದೇ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಶ್ರೀರಂಗಪಟ್ಟಣ ಶಾಲೆ ಹೊರತುಪಡಿಸಿ ಬೇರೆ ವಸತಿ ಶಾಲೆಗಳಲ್ಲಿ ಮಕ್ಕಳು ಸುರಕ್ಷತೆಯಿಂದ ಇದ್ದಾರೆ. ಸರ್ಕಾರದ ನಿರ್ದೇಶನದಂತೆ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ’ ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಜಿಲ್ಲಾ ಸಂಯೋಜಕ ಸುರೇಶ್‌ ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಅಡಿ ಬರುವ ಶಾಲೆಗಳ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಮಾತ್ರ ಪಾಠ ಬೋಧನೆ ನಡೆಯಲಿದೆ. 6–9ನೇ ತರಗತಿವರೆಗಿನ ಮಕ್ಕಳಿಗೆ ರಜೆ ಘೋಷಣೆ ಮಾಡಲಾಗಿದೆ. ಸರ್ಕಾರದ ನಿರ್ದೇಶನದಂತೆ ‘ವಿದ್ಯಾಗಮ’ವನ್ನೂ ರದ್ದು ಮಾಡಲಾಗಿದೆ.

‘10ನೇ ತರಗತಿ ಮಕ್ಕಳ ಸುರಕ್ಷತೆಗೆ ಸಕಲ ಕ್ರಮ ಕೈಗೊಳ್ಳಲಾಗಿದೆ. ಅಗತ್ಯ ಬಿದ್ದರೆ ಎಲ್ಲಾ ಮಕ್ಕಳಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗುವುದು’ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದರು.

2 ಸಾವು, 36 ಮಂದಿಗೆ ಕೋವಿಡ್‌

ಕೋವಿಡ್‌ನಿಂದ ಬಳಲುತ್ತಿದ್ದ ಮಹಿಳೆ ಹಾಗೂ ವ್ಯಕ್ತಿ ಶನಿವಾರ ಮೃತಪಟ್ಟಿದ್ದಾರೆ. ಮಳವಳ್ಳಿ ತಾಲ್ಲೂಕಿನ 67 ವರ್ಷದ ವ್ಯಕ್ತಿ, ಮಂಡ್ಯ ತಾಲ್ಲೂಕು ಕೆರಗೋಡು ಗ್ರಾಮದ 73 ವರ್ಷದ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಇಬ್ಬರನ್ನೂ ಕೋವಿಡ್ ಕಾರ್ಯಸೂಚಿ ಅನ್ವಯ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಶನಿವಾರ ಒಂದೇ ದಿನ 36 ಮಂದಿಗೆ ಕೋವಿಡ್‌–19 ದೃಢಪಟ್ಟಿದ್ದು ಜಿಲ್ಲೆಯಲ್ಲಿ ಒಟ್ಟು ರೋಗಿಗಳ ಸಂಖ್ಯೆ 20,197ಕ್ಕೆ ಹೆಚ್ಚಾಗಿದೆ.

ಮಂಡ್ಯ 9, ಶ್ರೀರಂಗಪಟ್ಟಣ 8, ಮದ್ದೂರು 7, ಮಳವಳ್ಳಿ, ನಾಗಮಂಗಲ ತಲಾ 4, ಕೆ.ಆರ್‌.ಪೇಟೆ 2, ಪಾಂಡವಪುರ ತಾಲ್ಲೂಕಿನ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಶನಿವಾರ ಕೋವಿಡ್‌ನಿಂದ 26 ಮಂದಿ ಗುಣಮುಖರಾಗಿದ್ದಾರೆ. 327 ಪ್ರಕರಣ ಸಕ್ರಿಯವಾಗಿವೆ. ಇಲ್ಲಿಯವರೆಗೂ ಕೋವಿಡ್‌ನಿಂದ 158 ಮಂದಿ ಮೃತಪಟ್ಟಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.