ಅಮಾವಾಸ್ಯೆ:ಕಾವೇರಿ ನದಿಯಲ್ಲಿ ಕಾಸು,ಚಿನ್ನಕ್ಕೆ ಶೋಧ, ತಮಿಳುನಾಡು ಅಲೆಮಾರಿಗಳ ಕಾಯಕ

7

ಅಮಾವಾಸ್ಯೆ:ಕಾವೇರಿ ನದಿಯಲ್ಲಿ ಕಾಸು,ಚಿನ್ನಕ್ಕೆ ಶೋಧ, ತಮಿಳುನಾಡು ಅಲೆಮಾರಿಗಳ ಕಾಯಕ

Published:
Updated:
Deccan Herald

ಶ್ರೀರಂಗಪಟ್ಟಣ: ಪಟ್ಟಣದ ಪಶ್ಚಿಮವಾಹಿನಿ, ವೆಲ್ಲೆಸ್ಲಿ ಸೇತುವೆ, ಕಾವೇರಿ ಸಂಗಮ, ದೊಡ್ಡ ಗೋಸಾಯಿಘಾಟ್‌ ತಾಣಗಳಲ್ಲಿ ಮಂಗಳವಾರ ಅಲೆಮಾರಿ ಜನರು ನದಿಯಲ್ಲಿ ಕಾಸು ಮತ್ತು ಚಿನ್ನದ ವಸ್ತುಗಳಿಗಾಗಿ ಹುಡುಕಾಡಿದರು.

ಕಣ್ಣಿಗೆ ಗಾಜಿನ ಪಟ್ಟಿಗಳನ್ನು ಕಟ್ಟಿಕೊಂಡು ನದಿಯಲ್ಲಿ ಮುಳುಗಿ ಚಿಲ್ಲರೆ ಕಾಸು ಮತ್ತು ಚಿನ್ನ, ಬೆಳ್ಳಿಯ ಚೂರುಗಳಿಗೆ ತಡಕಾಟ ನಡೆಸಿದರು. ಮಹಾಲಯ ಅಮಾವಾಸ್ಯೆಯಂದು ಪಿತೃಗಳಿಗೆ ತರ್ಪಣ ಅರ್ಪಿಸುವ ಜನರು ಕಾಸು, ಚಿನ್ನ ಮತ್ತು ಬೆಳ್ಳಿಯ ವಸ್ತುಗಳನ್ನು ನದಿಗೆ ಎಸೆಯುವ ಸಂಪ್ರದಾಯ ಇದೆ. ಹೀಗೆ ಎಸೆಯುವ ವಸ್ತುಗಳನ್ನು ನೀರಿನಾಳದಿಂದ ಹೆಕ್ಕಿ ತೆಗೆದು ಹೊಟ್ಟೆ ತುಂಬಿಸಿಕೊಳ್ಳುವ ಕಾಯಕವನ್ನು ಈ ಅಲೆಮಾರಿ ಜನರು ಮಾಡುತ್ತಾರೆ.

‘ನಮ್ಮಪ್ಪ ಕೂಡ ನದಿಯಲ್ಲಿ ಕಾಸು ಹುಡುಕುತ್ತಿದ್ದರು. ನದಿಯಲ್ಲಿ ಸಿಗುವ ಚಿನ್ನ ಮತ್ತು ಬೆಳ್ಳಿಯ ಚೂರುಗಳನ್ನು ಮಾರ್ವಾಡಿ ಅಂಗಡಿಯಲ್ಲಿ ಮಾರಾಟ ಮಾಡಿ ಅದರಿಂದ ಅಕ್ಕಿ, ಬೇಳೆ ತಂದು ಉಣ್ಣುತ್ತಿದ್ದರು. ನಮ್ಮಪ್ಪ ಮಾಡುತ್ತಿದ್ದ ಕೆಲಸವನ್ನು ನಾನು ನನ್ನ ಪತ್ನಿ ಮಾಡುತ್ತಿದ್ದೇವೆ. ಕಬ್ಬು ಕಡಿಯುವ ಕೂಲಿ ಕೆಲಸ ಮಾಡುವ ನಮಗೆ ಮಹಾಲಯ ಅಮಾವಾಸ್ಯೆ ನಂತರ ಮೂರ್ನಾಲ್ಕು ದಿನ ನದಿಯಲ್ಲಿ ಕಾಸು ಹುಡುಕುವುದೇ ಕೆಲಸ’ ಎಂದು ತಮಿಳುನಾಡು ಮೂಲದ ಶ್ರೀನಿವಾಸ ಹೇಳಿದರು.

‘ಚಿಲ್ಲರೆ ಕಾಸಿನ ಜತೆಗೆ ಒಂದೊದ್ಸಲ ಚಿನ್ನದ ಮೂಗುತಿ, ಬಳೆ, ಸರಗಳೂ ಸಿಗುತ್ತವೆ, ಆದರೆ ಅದೃಷ್ಟ ಇರಬೇಕು ಅಷ್ಟೇ’ ಎಂದು ಶ್ರೀನಿವಾಸ ಅವರ ಬಂಧು ಲಕ್ಷ್ಮಿ ಹೇಳಿದರು.

‘ಶ್ರೀರಂಗಪಟ್ಟಣದ ಸುತ್ತಲೂ ಹರಿಯವ ಕಾವೇರಿ ನದಿಯಲ್ಲಿ ಮಹಾಲಯ ಅಮಾವಾಸ್ಯೆಯಂದು ರಾಜ್ಯ ಹೊರ ರಾಜ್ಯಗಳಿಂದ ಬರುವ ಸಹಸ್ರಾರು ಮಂದಿ ತಮ್ಮ ಪಿತೃಗಳ ಹೆಸರಿನಲ್ಲಿ ಪಿಂಡ ಪ್ರದಾನ, ತರ್ಪಣ ಅರ್ಪಿಸುತ್ತಾರೆ. ಮಾರನೇ ದಿನ ಎಲ್ಲೆಲ್ಲಿಂದಲೋ ಬರುವ ಅಲೆಮಾರಿಗಳು ನದಿಯಲ್ಲಿ ಬೆಳಗಿನಿಂದ ಸಂಜೆವರೆಗೆ ಏನೇನೋ ಹುಡುಕುತ್ತಾರೆ. ಮಹಿಳೆಯರು ನೀರು ಕೋಳಿಯಂತೆ ಮುಳುಗು ಹಾಕಿ ಹುಡುಕಾಟ ನಡೆಸುವುದು ನೋಡಿದರೆ ಪಾಪ ಎನಿಸುತ್ತದೆ‘ ಎಂದು ಪಶ್ಚಿಮವಾಹಿನಿ ಬಡಾವಣೆ ನಿವಾಸಿ ರವಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !