ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿ 18ರಿಂದ ಎರಡು ದಿನ ಗಗನಚುಕ್ಕಿ ಜಲಪಾತೋತ್ಸವ

Last Updated 17 ಜನವರಿ 2020, 12:18 IST
ಅಕ್ಷರ ಗಾತ್ರ

ಮಂಡ್ಯ: ಮಳವಳ್ಳಿ ತಾಲ್ಲೂಕು ಶಿವನಸಮುದ್ರ ಬಳಿಯ ಗಗನಚುಕ್ಕಿ ಜಲಪಾತದಲ್ಲಿ ಜನವರಿ 18ರಿಂದ ಎರಡು ದಿನ ಜಲಪಾತೋತ್ಸವ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.

ವಾರಾಂತ್ಯದಲ್ಲಿ ನಡೆಯುವ ಉತ್ಸವಕ್ಕೆ ಪ್ರವಾಸಿಗರನ್ನು ಸೆಳೆಯಲು ವಿವಿಧ ಕಾರ್ಯಕ್ರಮಗಳನ್ನುಆಯೋಜಿಸಲಾಗಿದೆ. 300 ಅಡಿ ಎತ್ತರದಿಂದ ಧುಮ್ಮಿಕ್ಕುವ ಕಾವೇರಿ ನದಿ ನೀರನ್ನು ಕಣ್ತುಂಬಿಕೊಳ್ಳಲು ಹೆಲಿಕಾಪ್ಟರ್‌ ಹಾರಾಟ ವ್ಯವಸ್ಥೆ ಮಾಡಲಾಗಿದ್ದು ತಲಾ ₹ 2,800 ನಿಗದಿ ಮಾಡಲಾಗಿದೆ. ರಿವರ್‌ ರ್‍ಯಾಫ್ಟಿಂಗ್‌, ರಾಕ್‌ ಕ್ಲೈಂಬಿಂಗ್‌, ಆಹಾರ ಮೇಳ, ದೋಣಿ ವಿಹಾರ, ವಸ್ತು ಪ್ರದರ್ಶನ, ಉದ್ಯೋಗ ಮೇಳ ಆಯೋಜಿಸಲಾಗಿದೆ.

ಜಲಪಾತದ ಬಳಿ ನಿರ್ಮಿಸಿರುವ ಶಿವ ವೇದಿಕೆಯಲ್ಲಿ ಜನವರಿ 18ರಂದು ಸಂಜೆ 6.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್‌. ಅಶೋಕ್‌ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಅದಕ್ಕೂ ಮೊದಲು ನಡೆಯುವ ಮೆರವಣಿಗೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಚಾಲನೆ ನೀಡಲಿದ್ದಾರೆ. ಪ್ರವಾಸಿಗರಿಗೆ ಅನುಕೂಲವಾಗುವಂತೆ ಮಳವಳ್ಳಿ ಪಟ್ಟಣದಿಂದ ಪ್ರತಿ ಆರ್ಧ ಗಂಟೆಗೊಮ್ಮೆ ಸಾರಿಗೆ ಬಸ್‌ ವ್ಯವಸ್ಥೆ ಮಾಡಲಾಗಿದೆ.

ಜಲಪಾತದ ಕಲ್ಲು ಬಂಡೆಗಳ ಮೇಲೆ ಬಣ್ಣಬಣ್ಣದ ದೀಪ ಅಳವಡಿಸಲಾಗುತ್ತಿದೆ. ಜಲಪಾತ ವೀಕ್ಷಣೆಗೆ ವೀಕ್ಷಣಾ ಬ್ಯಾರಿಕೇಡ್‌ ಹಾಕಲಾಗಿದೆ.

ಸ್ಯಾಂಡಲ್‌ವುಡ್‌ ನೈಟ್‌ ಕಾರ್ಯಕ್ರಮವೂ ನಡೆಯಲಿದ್ದು ನವೀನ್‌ ಸಜ್ಜು ಸೇರಿ ಖ್ಯಾತನಾಮ ಹಿನ್ನೆಲೆ ಗಾಯಕರು ಪಾಲ್ಗೊಳ್ಳಲಿದ್ದಾರೆ. ಎಲ್ಲಾ ಕಾರ್ಯಕ್ರಮವನ್ನು ವೆಬ್‌ ಕಾಸ್ಟಿಂಗ್, ಲೈವ್‌ ಸ್ಟ್ರೀಮಿಂಗ್‌ ವ್ಯವಸ್ಥೇ ಮಾಡಲಾಗುತ್ತಿದೆ.

ರೈತರ ವಿರೋಧ: ತಮಿಳುನಾಡಿಗೆ ನೀರು ಬಿಟ್ಟು, ಜೀವಜಲ ವ್ಯರ್ಥ ಮಾಡಿ ಜಲಪಾತೋತ್ಸವ ಆಚರಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಮಳವಳ್ಳಿ ಹಾಗೂ ಮಂಡ್ಯದಲ್ಲಿ ರೈತ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.

ಕೆಆರ್‌ಎಸ್‌ ಜಲಾಶಯಕ್ಕೆ ಹೊರಹರಿವು ಹೆಚ್ಚಾಗಿದ್ದ ಸಂದರ್ಭದಲ್ಲಿ ಜಲಪಾತೋತ್ಸವ ಆಚರಣೆ ಮಾಡಬೇಕಾಗಿತ್ತು. ಆದರೆ ಬೇಸಿಗೆ ಸಮೀಪಿಸುತ್ತಿರುವ ಸಂದರ್ಭದಲ್ಲಿ, ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗುವ ವೇಳೆ ಉತ್ಸವ ಆಚರಣೆ ಮಾಡುತ್ತಿರುವುದು ಸರಿಯಲ್ಲ. ಬೇಸಿಗೆ ಬೆಳೆಗೆ ನೀರು ಹರಿಸುವ ಬಗ್ಗೆ ಸ್ಪಷ್ಟ ನಿರ್ದೇಶನವಿಲ್ಲ. ಆದರೆ ಜಲಪಾತೋತ್ಸವಕ್ಕೆ ನೀರು ಹರಿಸಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT