ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಾಂತರದ ಪಿತಾಮಹ ಯಡಿಯೂರಪ್ಪ: ಸಿದ್ದರಾಮಯ್ಯ

ಕಾಂಗ್ರೆಸ್‌ ಸಮಾವೇಶದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ
Last Updated 4 ಡಿಸೆಂಬರ್ 2019, 11:55 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ಸಾರ್ವತ್ರಿಕ ಚುನಾವಣೆ ನಡೆದು ಒಂದೂವರೆ ವರ್ಷವೂ ಕಳೆದಿಲ್ಲ ಅಷ್ಟರಲ್ಲಿ ಉಪಚುನಾವಣೆ ಬಂದಿದೆ. ಯಾರಿಗೂ ಬೇಡವಾದ ಈ ಉಪ ಚುನಾವಣೆಗೆ ಕಾರಣರಾದ ಅನರ್ಹ ಶಾಸಕರನ್ನು ಸೋಲಿಸಿ ಮನೆಗೆ ಕಳುಹಿಸುವ ಮೂಲಕ ಸರಿಯಾದ ಪಾಠ ಕಲಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕರೆನೀಡಿದರು.

ಪಟ್ಟಣದಲ್ಲಿ ಗ್ರಾಮಭಾರತಿ ವಿದ್ಯಾಸಂಸ್ಥೆಯ ಬಳಿ ಇರುವ ಮೈದಾನ ದಲ್ಲಿ ಮಂಗಳವಾರ ಆಯೋಜಿಸಿದ್ದ ಬೃಹತ್ ಕಾಂಗ್ರೆಸ್‌ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‌‌‘ಪಕ್ಷಾಂತರ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಿದ ಅನರ್ಹ ಶಾಸಕರು, ಬಿಜೆಪಿಯೊಂದಿಗೆ ಸೇರಿಕೊಂಡು ಯಡಿಯೂರಪ್ಪ ಅಧಿಕಾರಕ್ಕೆ ಬರಲು ಕಾರಣರಾದರು. ಯಡಿಯೂರಪ್ಪನ ಜಾತಕದಲ್ಲಿ ಸ್ವಂತ ಬಲದಿಂದ ಸರ್ಕಾರ ರಚಿಸುವ ಅದೃಷ್ಟವಿಲ್ಲ. ಹಾಗಾಗಿ 2006ರಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಉಪಮುಖ್ಯಮಂತ್ರಿ, ಮುಖ್ಯಮಂತ್ರಿಯಾದರು. ಜೆಡಿಎಸ್ ಕೈಕೊಟ್ಟಿತೆಂದು ಕಣ್ಣೀರು ಹಾಕಿ ಅಧಿಕಾರಕ್ಕೆ ಬಂದರಾದರೂ 2008ರಲ್ಲೂ ಬಹುಮತವನ್ನು ರಾಜ್ಯದ ಜನ ನೀಡಲಿಲ್ಲ’ ಎಂದರು.

‘ಪಕ್ಷಾಂತದ ಪಿತಾಮಹನಾದ ಯಡಿಯೂರಪ್ಪ ಆಗಲೂ ಈಗಿನಂತೆ ಆಪರೇಷನ್ ಕಮಲ ಮಾಡಿ ಶಾಸಕರಿಂದ ರಾಜೀನಾಮೆ ಕೊಡಿಸಿ ಉಪಚುನಾವಣೆ ಮಾಡಿ ಅಧಿಕಾರ ಗಟ್ಟಿ ಮಾಡಿಕೊಂಡರು. ಈಗ ಮತ್ತೆ ಅದೇ ರೀತಿ ಮಾಡಿ, ಕಾಂಗ್ರೆಸ್‌ ಮತ್ತು ಜೆಡಿಎಸ್ ಪಕ್ಷದ ಶಾಸಕರನ್ನು ಸೆಳೆದು ಉಪ ಚುನಾವಣೆಗೆ ಕಾರಣರಾಗಿದ್ದಾರೆ. ಆದ್ದರಿಂದ ನೀವು ಅನರ್ಹರಿಗೆ ಹಾಕುವ ಮತ ಯಡಿಯೂರಪ್ಪನ ಕೆಟ್ಟ ರಾಜಕೀಯವನ್ನು ಪ್ರೋತ್ಸಾಹಿಸಿ ದಂತಾಗುತ್ತದೆ. ಆದ್ದರಿಂದ ಬಿಜೆಪಿಯನ್ನು ಬೆಂಬಲಿಸಬೇಡಿ. ಯಡಿಯೂರಪ್ಪ ಮುಂಬಾಗಿಲಿಂದ ಯಾವತ್ತೂ ಅಧಿಕಾರಕ್ಕೆ ಬರಲೇ ಇಲ್ಲ’ ಎಂದು ವ್ಯಂಗ್ಯವಾಡಿದರು.

‘ಎರಡು ಕ್ಷೇತ್ರಗಳಲ್ಲಿ ಮಾತ್ರ ಜೆಡಿಎಸ್ ಪೈಪೋಟಿ ನೀಡುತ್ತಿದೆ. ಉಳಿದೆಡೆ ಕಾಂಗ್ರೆಸ್– ಬಿಜೆಪಿ ನಡುವೆ ಫೈಟ್ ಇದೆ. ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಚಂದ್ರಶೇಖರ್‌ 6 ಚುನಾವಣೆ ಗಳನ್ನು ಎದುರಿಸಿ 2 ಬಾರಿ ಶಾಸಕರಾಗಿದ್ದಾರೆ. ನಾರಾಯಣ ಗೌಡ ಇವತ್ತುಡ ತನ್ನನ್ನು ತಾನೇ ಮಾರಾಟ ಮಾಡಿಕೊಂಡು ಹೋಗಿದ್ದಾನೆ. ಕುರಿ– ಕೋಳಿಯಂತೆ ಶಾಸಕರು ಮಾರಾಟ ವಾಗುವ ನೀಚ ಕೃತ್ಯ ಇನ್ನೊಂದಿಲ್ಲ’ ಎಂದರು.

ಸಭೆಯಲ್ಲಿ ಮಾಜಿ ಸಚಿವರಾದ ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಎಐಸಿಸಿ ವಕ್ತಾರ ವಿಶ್ವನಾಥ್, ಕೆ.ಬಿ.ಚಂದ್ರಶೇಖರ್‌ ಅವರ ಪುತ್ರಿ ಅಂಶು ಮಾತನಾಡಿದರು.

ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು.

ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಶಾಸಕ ಬಿ.ಪ್ರಕಾಶ್, ರಮೇಶ್ ಬಂಡಿಸಿದ್ದೇಗೌಡ, ಮಲ್ಲಾಜಮ್ಮ, ರವಿಗಣಿಗ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ಬಾಬು, ಕಿಕ್ಕೇರಿ ಸುರೇಶ್, ಕೆ.ದೇವರಾಜು ಐಪನಹಳ್ಳಿ ನಾಗೇಂದ್ರ ಕುಮಾರ್, ಮಂಜೇಗೌಡ, ಕೆ.ಸಿ.ಮಂಜು ನಾಥ್, ಪ್ರೇಮ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT