ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರ್ಯಾಕ್ಟರ್ ಕೂರಿಗೆ ಮೂಲಕ ಭತ್ತದ ಬೀಜ ಬಿತ್ತನೆ

ಸುಧಾರಿತ ತಂತ್ರಜ್ಞಾನದ ಕೃಷಿಗೆ ರೈತರ ಆದ್ಯತೆ, ಕೃಷಿ ವಿಜ್ಞಾನಿಗಳ ಮಾರ್ಗದರ್ಶನ
Last Updated 4 ಆಗಸ್ಟ್ 2018, 14:30 IST
ಅಕ್ಷರ ಗಾತ್ರ

ಮಂಡ್ಯ: ಮುಂಗಾರು ಕೃಷಿ ಈಗಾಗಲೇ ಆರಂಭವಾಗಿದೆ. ರೈತರು ಸಾಂಪ್ರದಾಯಿಕವಾಗಿ ಬಿತ್ತನೆ ಮಾಡುವ ಬದಲು ಸುಧಾರಿತ ತಂತ್ರಜ್ಞಾನದ ಮೂಲಕ ಬಿತ್ತನೆ ಮಾಡಿದರೆ ರೈತರು ಕಡಿಮೆ ಸಮಯದಲ್ಲಿ ಕಡಿಮೆ ನೀರು ಖರ್ಚಿನೊಂದಿಗೆ ಬಿತ್ತನೆ ಪೂರ್ಣಗೊಳಿಸಬಹುದು.

ಭತ್ತದ ಹೊಟ್ಟಲು ಹಾಕಿ, ಅದನ್ನು ಕಿತ್ತು ನಾಟಿ ಮಾಡಲು ಕಡಿಮೆ ಎಂದರೂ ಒಂದು ತಿಂಗಳು ಸಮಯ ಬೇಕು. ಇದಕ್ಕೆ ಬಿತ್ತನೆ ಬೀಜ, ನೀರು ಹೆಚ್ಚು ಖರ್ಚಾಗುತ್ತದೆ. ಆದರೆ ಬಿತ್ತನೆ ಬೀಜವನ್ನು ನೇರವಾಗಿ ಟ್ರ್ಯಾಕ್ಟರ್‌ ಕೂರಿಗೆಯ ಮೂಲಕ ಗದ್ದೆಗೆ ಬಿತ್ತನೆ ಮಾಡಿದರೆ ಇದರಿಂದ ರೈತರಿಗೆ ಆಗುವ ಲಾಭ ದೊಡ್ಡದು. ಇದರಿಂದ ಒಂದೂವರೆ ತಿಂಗಳ ಸಮಯ ಉಳಿತಾಯವಾಗುತ್ತದೆ. ಜೊತೆಗೆ ಹೊಟ್ಟಲು ಹಾಕಿ ಭತ್ತದ ನಾಟಿ ಮಾಡಿದರೆ ಎಕರೆಗೆ 25–30 ಕೆ.ಜಿ ಬಿತ್ತನೆ ಬೀಜ ಬೇಕು. ಆದರೆ ಕೂರಿಗೆ ಬಿತ್ತನೆಯಲ್ಲಿ 12–15 ಕೆ.ಜಿಯಲ್ಲಿ ಬಿತ್ತನೆ ಮುಗಿಸಬಹುದು.

ಜಿಲ್ಲೆಯ ಹಲವೆಡೆ ಪ್ರಗತಿಪರ ರೈತರು ಈಚೆಗೆ ಕೂರಿಗೆ ಮೂಲಕ ಭತ್ತ ಬಿತ್ತನೆ ಮಾಡಲು ಮಂದಾಗಿದ್ದಾರೆ. ಇದಕ್ಕೆ ಕೃಷಿ ಇಲಾಖೆ ಹಾಗೂ ವಿ.ಸಿ ಫಾರಂ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ರೈತರಿಗೆ ಸಹಾಯ ಮಾಡುತ್ತಿದ್ದಾರೆ. ಅಧಿಕಾರಿಗಳು ರೈತರ ಗದ್ದೆಗೆ ಬಂದು ಟ್ರ್ಯಾಕ್ಟರ್‌ ಕೂರಿಗೆ ಬಿತ್ತನೆಯನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಡುತ್ತಿದ್ದಾರೆ.

ನೀರಿನ ಮಿತ ಬಳಕೆ: ಭತ್ತ ಬೆಳೆಯಲು ಹೆಚ್ಚು ನೀರು ಬೇಕು. ಅವಶ್ಯಕತೆಗಿಂತ ಹೆಚ್ಚು ನೀರು ಬಳಸಿ ರೈತರು ಜೀವಜಲವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ಕೃಷಿ ವಿಜ್ಞಾನಿಗಳು ಹೇಳುತ್ತಾರೆ. ಆದರೆ ಕೂರಿಗೆ ಬಿತ್ತನೆಯ ಮೂಲಕ ಕಡಿಮೆ ನೀರಿನ ಸಹಾಯದಿಂದ ಬಿತ್ತನೆ ಮಾಡಬಹುದಾಗಿದೆ. ಗದ್ದೆಯಲ್ಲಿ ನೀರು ನಿಲ್ಲಿಸದೇ ಬಿತ್ತನೆ ಮಾಡಬಹುದು. ಇತರೆ ಬೆಳೆಗಳಂತೆ ವಾರದಲ್ಲಿ ಒಂದು ಬಾರಿ ನೀರುಣಿಸಿದರೂ ಸಾಕು. ಈ ವಿಧಾನದಿಂದ ಶೇ 30–40ರಷ್ಟು ನೀರಿನ ಉಳಿತಾಯವಾಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

‘ಕೇವಲ ಒಂದು ಗಂಟೆ ಅವಧಿಯಲ್ಲಿ ಒಂದು ಎಕರೆ ಬಿತ್ತನೆ ಕಾರ್ಯ ಮಾಡಿ ಮುಗಿಸಬಹುದು. ಗದ್ದೆ ನಾಟಿಗೆ ಹತ್ತಾರು ಆಳುಗಳನ್ನು ಹಿಡಿಯಬೇಕು. ಟ್ರ್ಯಾಕ್ಟರ್‌ ಕೂರಿಗೆ ಬಿತ್ತನೆಗೆ ಹೆಚ್ಚು ಆಳುಗಳ ಅವಶ್ಯವಿಲ್ಲ. ಕೇವಲ ಇಬ್ಬರಿಂದ ಎಕರೆಗಟ್ಟಲೆ ಬಿತ್ತನೆ ಮಾಡಬಹುದು. ಒಂದು ಎಕರೆ ಭತ್ತ ನಾಟಿ ಮಾಡಲು ₹ 3 ಸಾವಿರ ಖರ್ಚಾಗುತ್ತದೆ. ಆದರೆ ಕೂರಿಗೆ ವಿಧಾನದಿಂದ ಅಷ್ಟು ಹಣದ ಅವಶ್ಯಕತೆ ಇಲ್ಲ. ಜೊತೆಗೆ ಸರ್ಕಾರದಿಂದ ಒಂದು ಎಕರೆ ಪ್ರದೇಶದಲ್ಲಿ ತಂತ್ರಜ್ಞಾನ ಆಧಾರಿತವಾಗಿ ಕೂರಿಗೆ ವಿಧಾನದಿಂದ ಬಿತ್ತನೆ ಮಾಡುವ ರೈತರಿಗೆ ₹ 1,800 ಸಹಾಯ ಧನ ನೀಡಲಾಗುತ್ತದೆ’ ಎಂದು ಕೃಷಿ ತಂತ್ರಜ್ಞಾನ ಅಳವಡಿಕೆ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಚಂದ್ರೇಗೌಡ ಹೇಳಿದರು.

ಮಣ್ಣಿನ ಆರೋಗ್ಯ ರಕ್ಷಣೆ: ಕೂರಿಗೆ ಬಿತ್ತನೆಯಲ್ಲಿ ನೀರನ್ನು ಹೆಚ್ಚು ಕಾಲ ನಿಲ್ಲಿಸದ ಕಾರಣ ಮಣ್ಣಿನ ಆರೋಗ್ಯ ರಕ್ಷಣೆಗೆ ಸಹಾಯಕವಾಗುತ್ತದೆ. ಜೊತೆಗೆ ಭತ್ತದ ಗದ್ದೆಯ ಕಳೆ ತೆಗೆಯುವುದೂ ಈ ವಿಧಾನದಲ್ಲಿ ಬಲು ಸುಲಭ. ಇದಕ್ಕೆ ಸೈಕಲ್ ವೀಡರ್‌ ಯಂತ್ರ ಸಂಶೋಧಿಸಲಾಗಿದ್ದು ಕೇವಲ ಒಬ್ಬ ವ್ಯಕ್ತಿ ಕಳೆ ತೆಗೆಯಬಹುದು.

‘ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ರೈತರು ಕಡಿಮೆ ಖರ್ಚಿನ ವಿಧಾನಗಳಿಂದ ಕೃಷಿ ಮಾಡಬೇಕು. ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು’ ಎಂದು ಡಾ.ಚಂದ್ರೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT