ಮಂಡ್ಯ: ಮೈಷುಗರ್ ಕಾರ್ಖಾನೆ ವತಿಯಿಂದ ಕಬ್ಬು ಕಟಾವು ಮಾಡಿಸದೆ ತಾಲ್ಲೂಕಿನ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಕೂಡಲೇ ಕಬ್ಬು ಕಟಾವು ಮಾಡುವಂತೆ ಒತ್ತಾಯಿಸಿ ಭಾರತೀಯ ಕಿಸಾನ್ ಸಂಘ, ಕೆ.ಆರ್.ಎಸ್. ಪಕ್ಷದ ಕಾರ್ಯಕರ್ತರು ಹಾಗೂ ಮೈಷುಗರ್ ವ್ಯಾಪ್ತಿಯ ಕಬ್ಬು ಬೆಳೆಗಾರರು ಜಿಲ್ಲಾಧಿಕಾರಿ ಕುಮಾರ ಅವರಿಗೆ ಶನಿವಾರ ಮನವಿ ಪತ್ರ ನೀಡಿದರು.
ಜಿಲ್ಲೆಯನ್ನು ಬರ ಪೀಡಿತವೆಂದು ಘೋಷಣೆ ಮಾಡಲಾಗಿದೆ. ಆದರೆ ಸರಿಯಾಗಿ ಬರ ಪರಿಹಾರವನ್ನು ನೀಡಿಲ್ಲ. ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಜೂನ್ ತಿಂಗಳಿನಲ್ಲಿ ಆರಂಭಿಸುವುದಾಗಿ ಹೇಳಿ, ಎರಡು ತಿಂಗಳು ತಡವಾಗಿ ಪ್ರಾರಂಭ ಮಾಡಿದ್ದಾರೆ, ಇದರಲ್ಲಿ ಪೂರ್ವ ತಯಾರಿ ಇಲ್ಲದೆ ಕೂಲಿಕಾರ್ಮಿಕರನ್ನು ಕರೆಯಿಸಿಕೊಳ್ಳದ ಕಾರಣ 15 ತಿಂಗಳ ಕಬ್ಬು ಗದ್ದೆಯಲ್ಲಿ ಒಣಗುತ್ತಿದೆ ಎಂದು ಆರೋಪಿಸಿದರು.
ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಬಿ.ಪಿ. ಅಪ್ಪಾಜಿ ಮಾತನಾಡಿ, ಬೇಗ ಕಬ್ಬು ಕಟಾವು ಮಾಡಿದರೆ ಹೈನು ಭತ್ತ ಬೆಳೆಯಬಹುದು , ಇಲ್ಲದಿದ್ದರೆ ರೈತರು ವಂಚಿತರಾಗುತ್ತಾರೆ. ಕಬ್ಬನ್ನು ಎಲ್ಲಿಯಾದರೂ ಮಾರಲು ಅವಕಾಶ ನೀಡಬೇಕು. ಜೊತೆಗೆ ಸೂಕ್ತ ಬರ ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.