ಸೊಳ್ಳೆ ನಿಯಂತ್ರಣ ಮಾಡಿ, ಡೆಂಗಿ ಮುಕ್ತವಾಗಿರಿ

7
ಡೆಂಗಿ ವಿರೋಧಿ ಮಾಸಾಚರಣೆ: ಡಾ.ಭವಾನಿ ಶಂಕರ್ ಸಲಹೆ

ಸೊಳ್ಳೆ ನಿಯಂತ್ರಣ ಮಾಡಿ, ಡೆಂಗಿ ಮುಕ್ತವಾಗಿರಿ

Published:
Updated:
Deccan Herald

ಮಂಡ್ಯ: ಡೆಂಗಿ, ಚಿಕೂನ್‌ಗುನ್ಯಾ ಮಾರಣಾಂತಿಕ ಕಾಯಿಲೆಗಳಲ್ಲ. ಆದರೆ ಚಿಕಿತ್ಸೆ ಪಡೆಯದಿದ್ದರೆ ಮೃತಪಡುವ ಸಂಭವವಿದೆ. ಹೀಗಾಗಿ ಡೆಂಗಿ ಮುಕ್ತವಾಗಲು ಸೊಳ್ಳೆ ನಿಯಂತ್ರಣ ಮಾಡಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಭವಾನಿಶಂಕರ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿಯಿಂದ ನಗರದ ವಾರ್ತಾಭವನದಲ್ಲಿ ನಡೆದ ಡೆಂಗಿ ವಿರೋಧಿ ಮಾಸಾಚರಣೆ ಅಂಗವಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ಕಾರ್ಯಾಗಾರದಲ್ಲಿ ಮಾಹಿತಿ ತಿಳಿಸಿದರು.

ಈಗಾಗಲೆ ಕರಪತ್ರ, ಮಾಹಿತಿ ಕಾರ್ಯಾಗಾರಗಳ ಮೂಲಕ ಡೆಂಗಿ ನಿಯಂತ್ರಣಕ್ಕೆ ಒತ್ತು ನೀಡಲಾಗಿದೆ. ಶೀಘ್ರವಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಂತರ್‌ ಇಲಾಖೆ ಸಭೆ ಮಾಡಿ ಎಲ್ಲ ಇಲಾಖೆಗಳು ಸಹಕಾರ ನೀಡುವಂತೆ ಸೂಚನೆ ನೀಡಲಾಗುತ್ತದೆ ಎಂದರು.

ಡೆಂಗಿ, ಚಿಕೂನ್‌ಗುನ್ಯಾ ವೈರಸ್‌ನಿಂದ ಹರಡುವ ರೋಗವಾಗಿದ್ದು, ಈಡಿಸ್ ಈಜಿಪ್ಟೈ ಎಂಬ ಸೊಳ್ಳೆಯು ಹಗಲು ಹೊತ್ತಲ್ಲಿ ಕಚ್ಚುವುದರಿಂದ ಬರುತ್ತವೆ. ಹೀಗಾಗಿ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು. ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು. ಮೂರು ದಿನಗಳಿಗೊಮ್ಮೆ ಸಂಗ್ರಹಿಸಿದ ನೀರು ಬದಲಾಯಿಸಬೇಕು. ಸೊಳ್ಳೆ ಪರದೆ ಬಳಸುವುದು, ಸೊಳ್ಳೆ ನಿಯಂತ್ರಕಗಳ ಬಳಕೆ ಹಾಗೂ ಬೇವಿನ ಸೊಪ್ಪಿನ ಹೊಗೆ ಹಾಕುವ ಮೂಲಕ ಸೊಳ್ಳೆ ನಿಯಂತ್ರಣ ಹಾಗೂ ಕಚ್ಚುವಿಕೆಯಿಂದ ರಕ್ಷಣೆ ಪಡೆಯಬೇಕು. ತೀವ್ರ ಜ್ವರ, ತಲೆನೋವು, ಕಣ್ಣುಗುಡ್ಡೆ ನೋವು ಹಾಗೂ ಕೆಂಪಾಗುವುದು, ಮಾಂಸಖಂಡ ಹಾಗೂ ಕೀಲು ನೋವು, ರಕ್ತಸ್ರಾವಗಳು ಡೆಂಗಿ ಜ್ವರದ ಲಕ್ಷಣಗಳಾಗಿವೆ. ಇಂತಹ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಚಿಕಿತ್ಸೆ ಪಡೆದುಕೊಳ್ಳಬೇಕು’ ಎಂದು ಸೂಚನೆ ನೀಡಿದರು.

ಇವು ಮಾರಣಾಂತಿಕ ಕಾಯಿಲೆಯಲ್ಲ, ಆದರೆ ಈ ಜ್ವರಕ್ಕೆ ಸೂಕ್ತ ಔಷಧ ಕಂಡುಹಿಡಿಯಲಾಗಿಲ್ಲ. ಹೀಗಾಗಿ ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಚಿಕಿತ್ಸೆ ಪಡೆಯದಿದ್ದರೆ ಸಾವಾಗುವ ಸಂಭವವಿದೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಕಾರಿ ಪಿ.ಶಿವಾನಂದ್, ಸಹಾಯಕ ಕೀಟಶಾಸ್ತ್ರಜ್ಞೆ ಜಾನೆಟ್, ಹಿರಿಯ ಆರೋಗ್ಯ ಸಹಾಯಕರಾದ ಸೋಮಶೇಖರ್, ಆಸ್ಪತ್ರೆ ಸಿಬ್ಬಂದಿ ಬೋರಯ್ಯ, ಸಿ.ಕೆ.ಚಂದ್ರಶೇಖರ್, ಸಂದೀಪ್, ಕೆ.ಚಂದ್ರಶೇಖರ್ ಇದ್ದರು.

ಏಳು ತಿಂಗಳಲ್ಲಿ ಎಂಟು ಪ್ರಕರಣ

2016ನೇ ವರ್ಷದಲ್ಲಿ 882 ಪ್ರಕರಣಗಳು ಕಂಡುಬಂದಿದ್ದು, ನಾಲ್ಕು ಜನ ಸಾವನ್ನಪ್ಪಿದ್ದಾರೆ. 2018 ಆಗಸ್ಟ್‌ವರೆಗೆ 8 ಪ್ರಕರಣಗಳು ಕಂಡು ಬಂದಿದ್ದು, ಸೂಕ್ತ ಚಿಕಿತ್ಸೆ ನೀಡಲಾಗಿದೆ. ಡೆಂಗಿ ರೋಗ ಲಕ್ಷಣಗಳು ಕಂಡು ಬಂದಲ್ಲಿ ಅಂತಹ ಪ್ರಕರಣಗಳ ಪತ್ತೆಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ರಕ್ತ ಪರೀಕ್ಷಾ ಕೇಂದ್ರ ತೆರೆಯಲಾಗುವುದು. ಜಿಲ್ಲೆಯಲ್ಲಿ ಡೆಂಗಿ ನಿಯಂತ್ರಣ ಮಾಡಲು ಸಮರ್ಪಕ ಕ್ರಮ ಕೈಗೊಳ್ಳಲಾಗಿದೆ ಎಂದು ಡಾ.ಭವಾನಿ ಶಂಕರ್ ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !