ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಬ್ದುಲ್‌ ಕಲಾಂ ವಿವಿ ಸ್ಥಾಪನೆಗೆ ಚಿಂತನೆ | CM ಜತೆ ಚರ್ಚೆ; ಶಾಸಕ ಬಂಡಿಸಿದ್ದೇಗೌಡ

Published 17 ಜೂನ್ 2024, 23:30 IST
Last Updated 17 ಜೂನ್ 2024, 23:30 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ‘ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಹೆಸರಿನಲ್ಲಿ ಪಟ್ಟಣದಲ್ಲಿ ವಿಶ್ವವಿದ್ಯಾಲಯ ಮತ್ತು ಟಿಪ್ಪು ಸುಲ್ತಾನ್‌ ಸಂಶೋಧನಾ ಕೇಂದ್ರ ತೆರೆಯುವ ಕುರಿತು ಚಿಂತನೆ ನಡೆದಿದ್ದು, ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರ ಜತೆ ಚರ್ಚೆ ನಡೆಸಿದ್ದೇನೆ’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

ಪಟ್ಟಣದ ಈದ್ಗಾ ಮೈದಾನದಲ್ಲಿ ಸೋಮವಾರ ಮುಸ್ಲಿಂ ಬಾಂಧವರಿಗೆ ಬಕ್ರೀದ್‌ ಹಬ್ಬದ ಶುಭಾಶಯ ಕೋರಿ ಮಾತನಾಡಿದ ಅವರು, ‘ಯುದ್ದ ಭೂಮಿಯಲ್ಲಿ ವಿಶ್ವದಲ್ಲೇ ಮೊದಲು ರಾಕೆಟ್‌ ಬಳಸಿದ್ದು ಟಿಪ್ಪು ಸುಲ್ತಾನ್‌. ಬ್ರಿಟಿಷರ ವಿರುದ್ಧ ನಡೆದ ಯುದ್ದದಲ್ಲಿ ಆತ ಬಳಸಿದ ರಾಕೆಟ್‌ಗಳು ಈಗಲೂ ಬ್ರಿಟಿಷ್‌ ಮ್ಯೂಸಿಯಂನಲ್ಲಿವೆ. ಈ ಕಾರಣಕ್ಕೆ ಅಬ್ದುಲ್‌ ಕಲಾಂ ಅವರಿಗೆ ಟಿಪ್ಪು ಮತ್ತು ಈ ಊರಿನ ಬಗ್ಗೆ ವಿಶೇಷ ಆಸಕ್ತಿ ಇತ್ತು’ ಎಂದರು.

‘ಕಲಾಂ ಅವರು ರಾಷ್ಟ್ರಪತಿಯಾಗಿದ್ದಾಗ ಇಲ್ಲಿಗೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು. ಕಾರಣಾಂತರಗಳಿಂದ ರದ್ದಾಯಿತು. 9ನೇ ಶತಮಾನದಿಂದಲೂ ಈ ಪಟ್ಟಣ ರಾಜರ ಆಳ್ವಿಕೆಗೆ ಒಳಪಟ್ಟಿದ್ದು, ಜಾಗತಿಕ ಭೂ ಪಟದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಈ ಪಾರಂಪರಿಕ ಪಟ್ಟಣದಲ್ಲಿ ಸ್ಥಾಪಿಸುವ ವಿಶ್ವವಿದ್ಯಾಲಯದಲ್ಲಿ ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಪದವಿವರೆಗೆ ಶಿಕ್ಷಣ ಸಿಗುವಂತೆ ಯೋಜಿಸಲಾಗುವುದು’ ಎಂದರು.

‘ಜನಪರ ಆಡಳಿತ ನೀಡಿದ ಮತ್ತು ನಾಡಿನ ರಕ್ಷಣೆಗಾಗಿ ಹೋರಾಡುತ್ತಲೇ ಮಡಿದ ಟಿಪ್ಪುಸುಲ್ತಾನ್ ಈ ನೆಲದ ಹೆಮ್ಮೆ. ಆತ ಜಾರಿಗೆ ತಂದ ಸಾಮಾಜಿಕ, ಆರ್ಥಿಕ ಮತ್ತು ಕೃಷಿ ಕ್ಷೇತ್ರದ ಸುಧಾರಣೆಗಳು ಜನ ಮನ್ನಣೆ ಗಳಿಸಿವೆ. ಹೀಗಾಗಿ, ಆತನ ಹೆಸರಿನಲ್ಲಿ ಸಂಶೋಧನಾ ಕೇಂದ್ರ ತೆರೆಯಲಾಗುವುದು. ಶೀಘ್ರ ಶಿಕ್ಷಣ ತಜ್ಞರು ಮತ್ತು ಉನ್ನತ ಅಧಿಕಾರಿಗಳ ಸಭೆ ನಡೆಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT