ಬುಧವಾರ, ಮಾರ್ಚ್ 22, 2023
26 °C
ಸಾಮರಸ್ಯ ಸಹಬಾಳ್ವೆ ಸಂಗಮ ಕಾರ್ಯಕ್ರಮ ಉದ್ಘಾಟಿಸಿದ ತೀಸ್ತಾ ಸಿಟಲ್‌ವಾಡ್‌ ಪ್ರತಿಪಾದನೆ

‘ಈ ಭೂಮಿ ಒಂದು ವರ್ಗದ ಸ್ವತ್ತಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ಈ ಭೂಮಿ ಎಲ್ಲ ಜಾತಿ, ಧರ್ಮ, ಪಂಗಡದ ಜನರಿಗೆ ಸೇರಿದ್ದೇ ಹೊರತು ಒಂದು ವರ್ಗದ ಸ್ವತ್ತಲ್ಲ ಎಂದು ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸಿಟಲ್‌ವಾಡ್‌ ಹೇಳಿದರು.

ಪಟ್ಟಣದಲ್ಲಿ ಸಮಾನ ಮನಸ್ಕರ ವೇದಿಕೆ ಭಾನುವಾರ ಹಮ್ಮಿಕೊಂಡಿದ್ದ ಸಾಮರಸ್ಯ ಸಹಬಾಳ್ವೆ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಹು ಸಂಸ್ಕೃತಿಯ ಜನ ಇಲ್ಲಿದ್ದಾರೆ. ಆದರೆ, ಧರ್ಮದ ಕಾರಣಕ್ಕೆ ಈ ದೇಶವನ್ನು ಒಡೆಯುವ, ಹಂಚುವ ಹುನ್ನಾರ ನಡೆಯುತ್ತಿದೆ. ಛತ್ರಪತಿ ಶಿವಾಜಿಯ ಪ್ರಧಾನಿ, ಹಣಕಾಸು ಮಂತ್ರಿ ಮುಸ್ಲಿಮರೇ ಆಗಿದ್ದರು. ಆದರೂ ಆತನನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಹುಸಿ ಸಮಸ್ಯೆಗಳ ಹೆಸರಿನಲ್ಲಿ ಜನರನ್ನು ವಿಭಜಿಸುವ ಯತ್ನ ನಡೆಯುತ್ತಿದೆ ಎಂದರು.

ಸರ್ಕಾರ ಅಂಬೇಡ್ಕರ್‌ ಅವರ ‘ಜಾತಿ ನಿರ್ಮೂಲನೆ’ ಮತ್ತು ’ಪ್ರಜಾಪ್ರಭುತ್ವ ಮತ್ತು ಅಲ್ಪಸಂಖ್ಯಾತರು’ ಎಂಬ ಕೃತಿಗಳನ್ನು ಹೊರತುಪಡಿಸಿ ಉಳಿದೆಲ್ಲ ಕೃತಿಗಳನ್ನು ಪ್ರಕಟಿಸಿದೆ. ಆ ಮೂಲಕ ಸಂಬೇಡ್ಕರ್‌ ಅವರ ನಿಜವಾದ ಆಶಯಗಳನ್ನು ಬದಿಗೆ ಸರಿಸುತ್ತಿದೆ. ಸಮ ಸಮಾಜದ ಕನಸು ಕಂಡಿದ್ದ ಗೌರಿ ಲಂಕೇಶ್‌ ಅವರನ್ನು ಈ ವ್ಯವಸ್ಥೆ ಬಲಿ ತೆಗೆದು ಕೊಂಡಿದೆ. ಇಂಥ ಘಟನೆ ಮರುಕಳಿಸಲು ಬಿಡಬಾರದು ಎಂದರು.

ನಿವೃತ್ತ ಐಎಎಸ್‌ ಅಧಿಕಾರಿ ಸಸಿಕಾಂತ್‌ ಸೆಂಥಿಲ್‌, ‘ಸ್ವಾತಂತ್ರ್ಯ ಸೇನಾನಿ ಟಿಪ್ಪು ಸುಲ್ತಾನ್‌’ ಕೃತಿಯನ್ನು ಬಿಡುಗಡೆ ಮಾಡಿದರು. ದೇಶದ ಒಳಗೆ ಎರಡು ಚಿಂತನೆಗಳ ನಡುವೆ ಯುದ್ಧ ನಡೆಯುತ್ತಿದೆ. ಜಮ್ಮ– ಕಾಶ್ಮೀರ ಎಂಬ ರಾಜ್ಯವನ್ನೇ ಅಳಿಸಿ ಹಾಕಲಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿ ಆಗದವರು ಸಮಾನತೆಯ ವ್ಯವಸ್ಥೆ ವಿರುದ್ಧ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ. ಸಂವಿಧಾನ ಹೋದರೆ ಸಮಾನತೆ ಇರುವುದಿಲ್ಲ ಎಂಬ ಕಾರಣಕ್ಕೆ ಸಂವಿಧಾನವನ್ನೇ ಬದಲಾಯಿಸುವ ಮಾತನಾಡುತ್ತಿದ್ದಾರೆ ಎಂದರು.

ದೇಶದಲ್ಲಿ ರಾಜಕೀಯ ಕಾರಣಕ್ಕಾಗಿ ಶೇ 80 ಜನರನ್ನು ಶೇ 20ರಷ್ಟು ಜನರ ವಿರುದ್ಧ ಎತ್ತಿ ಕಟ್ಟಲಾಗುತ್ತಿದೆ. ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯ ನಾಥ್‌ ಇದನ್ನು ಬಹಿರಂಗವಾ ಗಿಯೇ ಹೇಳಿದ್ದಾರೆ. ಇದನ್ನು ಪ್ರಶ್ನಿಸುವ ಧೈರ್ಯ ತೋರಿಸಬೇಕು ಎಂದರು.

ಜನಶಕ್ತಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ.ಎಲ್‌.ಅಶೋಕ್‌ ಮಾತನಾಡಿ, ಸರ್ಕಾರದ ಜನ ವಿರೋಧಿ ಕೃತ್ಯಗಳು ಮತ್ತು ನಿರ್ಧಾರಗಳ ವಿರುದ್ಧ ದನಿ ಎತ್ತಿದ ಕಾರಣಕ್ಕೆ ತೀಸ್ತಾ ಸೆಟಲ್‌ವಾಡ್‌, ಆನಂದ್‌ ತೇಲ್ತುಂಬ್ದೆ, ಸ್ಟ್ಯಾನ್‌ ಸ್ವಾಮಿ, ವರವರ ರಾವ್‌ ಇತರರಿಗೆ ಕಿರುಕುಳ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರೊ.ಸಬೀಹಾ ಭೂಮಿಗೌಡ ಮಾತನಾಡಿ, ಸಮಾಜವನ್ನು ವಿಭಜಿಸುವ ಶಕ್ತಿಗಳ ಬಲವನ್ನು ಕುಂದಿಸಬೇಕು ಎಂದು ಹೇಳಿದರು.

ಗಾಂಧಿವಾದಿ ಡಾ.ಬಿ. ಸುಜಯ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು.

ವಕೀಲ ಲಕ್ಷ್ಮಣ ಚೀರನಹಳ್ಳಿ ಪ್ರಾಸ್ತಾವಿಕ ಮಾತನಾಡಿದರು.

ಹುರುಗಲವಾಡಿ ರಾಮಯ್ಯ ಮತ್ತು ತಂಡ ಜಾಗೃತಿ ಗೀತೆಗಳನ್ನು ಹಾಡಿತು.

ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್‌ ಕೆರಗೋಡು, ಸಮಾನಸ ಮನಸ್ಕರ ವೇದಿಕೆಯ ಟಿ.ಡಿ. ನಾಗರಾಜು, ಪ್ರೊ.ಹುಲ್ಕೆರೆ ಮಹದೇವು, ಟಿ.ಎಲ್‌. ಕೃಷ್ಣೇಗೌಡ, ಪ್ರಜ್ಞಾವಂತರ ವೇದಿಕೆಯ ಸಿ.ಎಸ್‌. ವೆಂಕಟೇಶ್‌, ಮಹಮದ್‌ ಖಾಸಿಂ, ಖಲೀಂ, ರೈತ ಮುಖಂಡ ಮಂಜೇಶ್‌ಗೌಡ, ಮಹಮದ್‌ ತಾಹೇರ್‌, ಏಜಾಸ್‌ ಪಾಷ, ಜನವಾದಿ ಮಹಿಳಾ ಸಂಘಟನೆಯ ದೇವಿ,
ಜನಶಕ್ತಿ ಸಂಘಟನೆಯ ಪೂರ್ಣಿಮಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು