ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀರಂಗಪಟ್ಟಣ: ಥಾಮಸ್‌ ಇನ್‌ಮಾನ್‌ ಕಾರಾಗೃಹಕ್ಕೆ ರಸ್ತೆ

ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆಯಿಂದ ನಿರ್ಮಾಣ, ಈಡೇರಿದ ಬೇಡಿಕೆ
Published 5 ಜುಲೈ 2024, 6:40 IST
Last Updated 5 ಜುಲೈ 2024, 6:40 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಪಟ್ಟಣದ ಬಿದ್ದು ಕೋಟೆ ಗಣೇಶ ದೆವಾಲಯ ಬಳಿಯ ಕಂದಕ ಮತ್ತು ಕಾವೇರಿ ನದಿಯ ಮಧ್ಯೆ ಇರುವ ಐತಿಹಾಸಿಕ ಸ್ಮಾರಕ ಥಾಮಸ್‌ ಇನ್‌ಮಾನ್‌ ಡಂಜನ್‌ (ಜೈಲು) ಕಾರಾಗೃಹಕ್ಕೆ ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ (ಎಎಸ್‌ಐ) ಇಲಾಖೆ ರಸ್ತೆ ನಿರ್ಮಿಸಿದ್ದು, ಹಲವು ದಶಕಗಳ ಬೇಡಿಕೆ ಈಡೇರಿದಂತಾಗಿದೆ.

ಪಟ್ಟಣದ ಈಶಾನ್ಯ ದಿಕ್ಕಿನಲ್ಲಿರುವ ಬಿದ್ದು ಕೋಟೆ ಗಣೇಶ ದೇವಾಲಯದ ತುದಿಯಿಂದ ಕಾರಾಗೃಹದವರೆಗೆ, ಕಂದಕದ ಒಳಗೆ ಕಲ್ಲು ಚಪ್ಪಡಿ ಬಳಸಿ 75 ಮೀಟರ್‌ ಉದ್ದದ ರಸ್ತೆ ನಿರ್ಮಿಸಲಾಗಿದೆ. ಈ ರಸ್ತೆ ಒಂದೂವರೆ ಮೀಟರ್‌ ಅಗಲ ಇದ್ದು, ಕೋಟೆಯ ಪಕ್ಕದಿಂದ ಕಾರಾಗೃಹಕ್ಕೆ ನೇರ ಸಂಪರ್ಕ ಕಲ್ಪಿಸುತ್ತದೆ.

ಈ ಕಾರಾಗೃಹ ಕಂದಕ ಮತ್ತು ನದಿಯ ಮಧ್ಯೆ ಇರುವುದರಿಂದ ಪಟ್ಟಣಕ್ಕೆ ಬರುವ ದೇಶ, ವಿದೇಶಗಳ ಪ್ರವಾಸಿಗರು ಇತ್ತ ಬರುವುದೇ ದುಸ್ತರವಾಗಿತ್ತು. ಕಾರಾಗೃಹಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ಕಂದಕದಲ್ಲಿ ಯಾವಾಗಲೂ ಕೊಳಚೆ ನೀರು ತುಂಬಿರುತ್ತಿತ್ತು. ಜೊಂಡು ಇತರ ಗಿಡಗಂಟಿಗಳೂ ಬೆಳೆದಿದ್ದವು. ಹಾಗಾಗಿ ಈ ಸ್ಮಾರಕದ ಬಗ್ಗೆ ಬಹಳಷ್ಟು ಸ್ಥಳೀಯರಿಗೆ ಮಾಹಿತಿ ಇರಲಿಲ್ಲ. ಸ್ಮಾರಕದ ಸುತ್ತಮುತ್ತಲಿನ ಅವ್ಯವಸ್ಥೆಯ ಬಗ್ಗೆ ಮತ್ತು ಪ್ರವಾಸಿಗರು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಗೆ ದೂರು ಸಲ್ಲಿಸಿದ್ದರು.

‘ಥಾಮಸ್‌ ಇನ್‌ಮಾನ್‌ ಡಂಜನ್‌ಗೆ ನೇರ ಸಂಪರ್ಕ ಕಲ್ಪಿಸುವಂತೆ ಕಲ್ಲು ಚಪ್ಪಡಿಗಳಿಂದ 75 ಮೀಟರ್‌ ಉದ್ದ ಮತ್ತು 1.5 ಮೀಟರ್‌ ಅಗಲ ಇರುವ ರಸ್ತೆ ನಿರ್ಮಿಸಲಾಗಿದೆ. ಕಾಮಗಾರಿ ಆರಂಭಿಸಿದ 20 ದಿನಗಳಲ್ಲಿ ಕೆಲಸ ಮುಗಿದಿದೆ. ಕಂದಕದ ನೀರು ಈ ರಸ್ತೆಯ ಕೆಳ ಭಾಗದಿಂದ ನದಿಯ ಕಡೆಗೆ ಸಲೀಸು ಹರಿದು ಹೋಗುವಂತೆ ಕೊಳವೆ ಅಳವಡಿಸಲಾಗಿದೆ. ಹಲವು ದಶಕಗಳ ಬೇಡಿಕೆ ಸಾಕಾರಗೊಂಡಿದೆ’ ಎಂದು ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆಯ ಸಹಾಯಕ ಅಧಿಕಾರಿ ಸುನಿಲ್‌ ತಿಳಿಸಿದ್ದಾರೆ.

ಕಂದಕ ಮತ್ತು ನದಿಯ ಮಧ್ಯೆ ಗೌಪ್ಯ ಸ್ಥಳದಲ್ಲಿದ್ದ ಈ ಕಾರಾಗೃಹವನ್ನು ನಾಲ್ಕನೇ ಆಂಗ್ಲೋ– ಮೈಸೂರು ಯುದ್ದದಲ್ಲಿ ಶ್ರೀರಂಗಪಟ್ಟಣ ಪತನ (ಕ್ರಿ.ಶ 1799, ಮೇ 4) ವಾದ ನಂತರ ಬ್ರಿಟಿಷ್‌ ಇತಿಹಾಸಕಾರ ಥಾಮಸ್‌ ಇನ್‌ಮಾನ್‌ ಎಂಬಾತ ಬೆಳಕಿಗೆ ತಂದನು. ಆ ಕಾರಣಕ್ಕೆ ಈ ಜೈಲು ಆತನ ಹೆಸರಿನಿಂದಲೇ ಕರೆಯಲಾಗುತ್ತಿದೆ.

ಥಾಮಸ್‌ ಇನ್‌ಮಾನ್‌ ಡಂಜನ್‌ ಹೆಸರಿನ ಕಾರಾಗೃಹದ ಮೇಲ್ಭಾಗದ ದೃಶ್ಯ
ಥಾಮಸ್‌ ಇನ್‌ಮಾನ್‌ ಡಂಜನ್‌ ಹೆಸರಿನ ಕಾರಾಗೃಹದ ಮೇಲ್ಭಾಗದ ದೃಶ್ಯ

ಸೆರೆಮನೆಯ ಇತಿಹಾಸ

ಥಾಮಸ್‌ ಇನ್‌ಮಾನ್‌ ಕಾರಾಗೃಹ ಟಿಪ್ಪು ಸುಲ್ತಾನನ ತಂದೆ ನವಾಬ್‌ ಹೈದರ್ ಅಲಿಖಾನ್‌ ಕಾಲದಲ್ಲಿ 18ನೇ ಶತಮಾನದಲ್ಲಿ ನಿರ್ಮಾಣವಾಗಿದೆ. ಈ ಸೆರೆಮನೆಯು 45 ಅಡಿ ಉದ್ದ ಮತ್ತು 32 ಅಡಿ ಅಗಲ ಇದ್ದು ನದಿಯ ಪಕ್ಕದ ತುಸು ಎತ್ತರದ ಪ್ರದೇಶದಲ್ಲಿ ನೆಲಮಾಳಿಗೆ ಮಾದರಿಯಲ್ಲಿ ನಿರ್ಮಾಣವಾಗಿದೆ. ಚಿತ್ರದುರ್ಗದ ಮದಕರಿ ನಾಯಕ ಚನ್ನಗಿರಿಯ ಬಂಡಾಯಗಾರ ದೋಂಡಿಯ ವಾಘ್‌ ಇತರ ಯುದ್ದ ಖೈದಿಗಳನ್ನು ಈ ಸೆರೆಮನೆಯಲ್ಲಿ ಬಂಧನದಲ್ಲಿ ಇರಿಸಲಾಗಿತ್ತು ಎಂದು ಐತಿಹಾಸಿಕ ದಾಖಲೆಗಳು ತಿಳಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT