ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈರಮುಡಿ ಉತ್ಸವ ಮುಂದೂಡಲು ಒತ್ತಾಯ

ಡಿ.ಸಿ.ಗೆ ಮನವಿ ಸಲ್ಲಿಸಿದ ಗ್ರಾಮಸ್ಥರು, ಇಂದಿನಿಂದ ಏಪ್ರಿಲ್ 2ರವರೆಗೆ ಸಾಂಕೇತಿಕ ಆಚರಣೆ
Last Updated 27 ಮಾರ್ಚ್ 2020, 16:49 IST
ಅಕ್ಷರ ಗಾತ್ರ

ಮೇಲುಕೋಟೆ: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಲಾಕ್‌ಡೌನ್‌ ಘೋಷಿಸಿರುವುದರಿಂದ ಮಾರ್ಚ್‌ 28ರಿಂದ ಏಪ್ರಿಲ್ 2ರವರೆಗೆ ನಡೆಯುವ ವೈರಮುಡಿ ಉತ್ಸವವನ್ನು ಮುಂದೂಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ನಕ್ಷತ್ರ ಪ್ರಕಾರ ವೈರಮುಡಿ ಉತ್ಸವವನ್ನು ನಡೆಸಲೇಬೇಕಿರುವುದ ರಿಂದ ಸಾಂಕೇತಿಕವಾಗಿ ಆಚರಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದ್ದಾರೆ. ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಾಗೂ ನಿಷೇಧಾಜ್ಞೆ ವಿಧಿಸಿರುವ ಸಂದರ್ಭದಲ್ಲಿ ಸಾಂಕೇತಿಕವಾಗಿ ಉತ್ಸವ ಆಚರಣೆ ಮಾಡುವುದಕ್ಕಿಂತ ಮುಂದೂಡುವುದು ಒಳ್ಳೆಯದು ಎಂದು ಗ್ರಾಮಸ್ಥರಾದ ಶಶಿಕುಮಾರ್, ಬಲರಾಮೇಗೌಡ, ಜಿ.ರಮೇಶ್ ಅವರು ಮೇಲುಕೋಟೆ ಠಾಣೆ ಎಸ್‌ಐ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಈಶ್ವರ ಸಂಹಿತೆಯ ಪ್ರಕಾರ ದೇವಾಲಯವು ಪೂಜಾ ಪದ್ಧತಿ ಯನ್ನುಅನುಸರಿಸುತ್ತಿದೆ. ಈ ಸಂಹಿತೆ ಪ್ರಕಾರ ಕ್ಷಾಮ, ತೀವ್ರ ಬರಗಾಲ, ಸಂಕಷ್ಟದ ಸಂದರ್ಭದಲ್ಲಿ ನಿಗದಿತ ಬ್ರಹ್ಮೋತ್ಸವವನ್ನು ಮುಂದೂಡಲು ಅವಕಾಶ ನೀಡಲಾಗಿದೆ. ನಕ್ಷತ್ರಕ್ಕೂ ವೈರಮುಡಿ ಉತ್ಸವಕ್ಕೂ ಸಂಬಂಧವಿಲ್ಲ. ಉತ್ಸವವನ್ನು ಮುಂದೂಡಿದ 6 ತಿಂಗಳೊಳಗೆ ಹಸ್ತನಕ್ಷತ್ರದಿಂದ ಹಿಂದಿನ 9 ದಿನಗಳವರೆಗೆ ಬ್ರಹ್ಮೋತ್ಸವ ನಡೆಸಬಹುದು. ಈ ಕುರಿತು ಸೂಕ್ತ ನಿರ್ಧಾರವನ್ನು ಜಿಲ್ಲಾಧಿಕಾರಿ ಕೈಗೊಳ್ಳಬೇಕು ಎಂದು ಮುಜರಾಯಿ ಇಲಾಖೆಯಪಾಂಚರಾತ್ರಾಗಮ ಪಂಡಿತ ವಿಜಯಕುಮಾರ್ ಮನವಿ ಮಾಡಿದ್ದಾರೆ.

ದಲಿತ ಭಕ್ತನಿಗೆ ಚೆಲುವ ಒಲಿದ ಹಸ್ತನಕ್ಷತ್ರದ ಶುಭದಿನವಾದ ನಾರಾಯಣಸ್ವಾಮಿ ಜಯಂತಿಯಂದು ಕಲ್ಯಾಣಿಯಲ್ಲಿ ನಡೆಯಬೇಕಿದ್ದ ಪ್ರಮುಖ ಉತ್ಸವವಾದ ತೀರ್ಥಸ್ನಾನವನ್ನೇ ರದ್ದು ಮಾಡಲಾಗಿದೆ. ಹೀಗಿರುವಾಗ ನಕ್ಷತ್ರದ ಲೆಕ್ಕದಲ್ಲೇ ಆಚರಣೆಯಲ್ಲಿ ಇಲ್ಲದ ವೈರಮುಡಿ ಕಿರೀಟಧಾರಣೆಯನ್ನು ನಾಲ್ಕೈದು ಅರ್ಚಕರು, ಸಿಬ್ಬಂದಿಗಷ್ಟೇ ಸೀಮಿತಗೊಳಿಸಿ ಆಚರಿಸುವ ಪರಂಪಡರೆ ಅರ್ಥಹೀನವಾದದ್ದು. ದೇಗುಲದಲ್ಲಿ ಪೂಜಾ ಕೈಂಕರ್ಯಕ್ಕೆ ಮಾತ್ರ ಅವಕಾಶ ನೀಡಬೇಕು. ಶ್ರೀರಂಗಂ, ತಿರುಪತಿ, ಬೇಲೂರು ಚೆನ್ನಕೇಶವ ದೇವಾಲಯದಲ್ಲಿ ಅನುಸರಿಸಿದ ನಿಯಮದಂತೆ ವೈರಮುಡಿ ಕಿರೀಟಧಾರಣೆ ಮತ್ತು ಬ್ರಹ್ಮೋತ್ಸವವನ್ನು ಮುಂದೂಡಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ವೈರಮುಡಿ ಉತ್ಸವ ಮುಂದೂಡುವ ಪ್ರಶ್ನೆಯೇ ಇಲ್ಲ: ಜಿಲ್ಲಾಧಿಕಾರಿ

‘ಮೇಲುಕೋಟೆ ಚೆಲುವ ನಾರಾಯಣಸ್ವಾಮಿ ವೈರಮುಡಿ ಉತ್ಸವ ಏ.2ರಂದು ನಿರ್ದಿಷ್ಟ ನಕ್ಷತ್ರದಲ್ಲೇ ಸಾಂಕೇತಿಕವಾಗಿ ನಡೆಯಲಿದೆ. ಉತ್ಸವವನ್ನು ಮುಂದೂಡುವ ಪ್ರಶ್ನೆಯೇ ಇಲ್ಲ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಸ್ಪಷ್ಟಪಡಿಸಿದರು.

‘ಸಾರ್ವಜನಿಕ ವೈರಮುಡಿ ಉತ್ಸವವನ್ನು ಈಗಾಗಲೇ ರದ್ದು ಮಾಡಲಾಗಿದೆ. ದೇವಾಲಯದ ಒಳಗೆ ಇಬ್ಬರು ಅಧಿಕಾರಿಗಳು, ನಾಲ್ಕೈದು ಮಂದಿ ಅರ್ಚಕರಷ್ಟೇ ಉತ್ಸವ ಆಚರಣೆ ಮಾಡಲಿದ್ದಾರೆ. ಭಕ್ತರ ‍ಪ್ರವೇಶ ನಿರ್ಬಂಧಿಸಲಾಗಿದೆ. ಮುಖ್ಯದ್ವಾರದಲ್ಲೇ ಪೊಲೀಸ್‌ ಸಿಬ್ಬಂದಿ ನೇಮಕ ಮಾಡಲಾಗಿದ್ದು, ಅರ್ಚಕರನ್ನೂ ಸ್ಕ್ರೀನಿಂಗ್‌ ಮೂಲಕ ಒಳಬಿಡಲಿದ್ದಾರೆ’ ಎಂದರು.

‘ಉತ್ಸವ ಮುಂದೂಡುವಂತೆ ಕೆಲವರು ಒತ್ತಾಯ ಮಾಡುತ್ತಿದ್ದಾರೆ. ಆದರೆ, ಈಗ ಮುಂದೂಡಲು ಸಾಧ್ಯವಿಲ್ಲ. ಸಾಂಕೇತಿಕವಾಗಿ ಉತ್ಸವ ನಡೆಯಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT